Wednesday, November 18, 2026

ಪ್ರಾಯೋಗಿಕ ಆವೃತ್ತಿ

ರೋಗ ಲಕ್ಷಣ ಇರುವವರಿಗೆ ಉಚಿತ ಕ್ಷಯರೋಗ ತಪಾಸಣೆ : ಡಾ.ಕುಮಾರ

ಮಂಡ್ಯ ಜಿಲ್ಲೆಯಲ್ಲಿ ಕ್ಷಯ ರೋಗ ನಿರ್ಮೂಲನೆ ಮಾಡಲು ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ ಕುಮಾರ ಅವರು ಸೂಚಿಸಿದರು.

ಸೋಮವಾರ ಮಂಡ್ಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಟಿ.ಬಿ ಪೋರಂ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕ್ಷಯ ರೋಗ ಲಕ್ಷಣಗಳು ಕಂಡು ಬರುವ ಮಧುಮೇಹಿಗಳು, ಧೂಮಪಾನಿಗಳು, ಕ್ಯಾನ್ಸರ್ ಪೀಡಿತರು, ಸಕ್ಕರೆ ಖಾಯಿಲೆ ರೋಗಿಗಳು, ವೃದ್ಧರು, ಮಕ್ಕಳು ಹಾಗೂ ಅಪೌಷ್ಟಿಕತೆಯಿಂದ ಬಳಲುತ್ತಿರುವವರಿಗೆ ಉಚಿತವಾಗಿ ಕ್ಷಯ ರೋಗ ತಪಾಸಣೆ ಮಾಡಲಾಗುತ್ತಿದೆ ಎಂದರು.

ಪ್ರಸ್ತುತ ಜಿಲ್ಲೆಯಲ್ಲಿ 710 ರೋಗಿಗಳು ಕ್ಷಯ ರೋಗ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಕ್ಷಯ ರೋಗಗಳ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.

2015 ರ ಕ್ಷಯ ರೋಗದ ಪ್ರಮಾಣವನ್ನು 2022 ಕ್ಕೆ ಹೋಲಿಸಿದರೆ ಜಿಲ್ಲೆಯಲ್ಲಿ ಶೇ 20 ರಷ್ಟು ಕ್ಷಯ ರೋಗಿಗಳು ಕಡಿಮೆಯಾಗಿದ್ದರೆ. 2022 ರಲ್ಲಿ ಕೇಂದ್ರ ಕ್ಷಯರೋಗ ವಿಭಾಗ ಜಿಲ್ಲೆಗೆ ಕಂಚಿನ ಪದಕ ನೀಡಿ ಗೌರವಿಸಿದೆ. ಜಿಲ್ಲೆಯಲ್ಲಿ 4 CBNAAT (ಕಾರ್ಟ್ರಿಡ್ಜ್-ಆಧಾರಿತ ನ್ಯೂಕ್ಲಿಯಿಕ್ ಆಮ್ಲ ವರ್ಧನೆ ಪರೀಕ್ಷೆ) ಮೆಷೀನ್ ಗಳು ಇದೆ, ಕ್ಷಯ ರೋಗ ಲಕ್ಷಣ ಇರುವ ವ್ಯಕ್ತಿಯ ಎಂಜಲಿನಿಂದ ಕೇವಲ 2 ಗಂಟೆಗಳಲ್ಲಿ ಕ್ಷಯ ರೋಗವನ್ನು ಪತ್ತೆ ಹಚ್ಚಬಲ್ಲದು ಎಂದು ತಿಳಿಸಿದರು.

ಕ್ಷಯ ರೋಗ ದೃಡಪಟ್ಟ ರೋಗಿಗಳಿಗೆ 6 ತಿಂಗಳ ಕಾಲ ಆಶಾ ಕಾರ್ಯಕರ್ತೆಯರಿಂದ ಉಚಿತವಾಗಿ ಔಷಧಿಗಳನ್ನು ಒದಗಿಸಲಾಗುವುದು ಹಾಗೂ ಮಾತ್ರೆಯನ್ನು ಸೇವನೆ ಮಾಡಿಸಲಾಗುವುದು, ಔಷಧಿಗಳು ಕನಿಷ್ಠ 10 ದಿನಗಳ ಸೇವನೆಯಿಂದ ಕ್ಷಯ ರೋಗ ಇತರರಿಗೆ ಹರಡದಂತೆ ತಡೆಯಬಹುದು. ಕ್ಷಯ ರೋಗಿಗಳು ವೆಂಟಿಲೇಷನ್ ನಲ್ಲಿ ಇರಬೇಕು ಹಾಗೂ ಮಾಸ್ಕ್ ಧರಿ‌ಸಬೇಕು. ಕ್ಷಯ ರೋಗಿಗಳು ಪೌಷ್ಟಿಕತೆಗಾಗಿ ಕೇಂದ್ರ ಸರ್ಕಾರದ ನಿಕ್ಷಯ್ ಪೋಷಣಾ ಯೋಜನೆಯಡಿ ಕ್ಷಯ ರೋಗಿಗಳಿಗೆ ಪ್ರತಿ ಮಾಹೆ ರೂ 1000 ನೀಡಲಾಗುವುದು ಎಂದರು.

ಜಿಲ್ಲೆಯಲ್ಲಿ ಪ್ರತಿ ವರ್ಷ ಟಿ.ಬಿ ಮುಕ್ತ ಗ್ರಾಮ ಪಂಚಾಯಿತಿಗಳನ್ನು ಘೋಷಣೆ ಮಾಡಬೇಕು, ಟಿ.ಬಿ ಪ್ರಕರಣಗಳು ಕಡಿಮೆ ಹಾಗೂ ಅರ್ಹ ಮಾನದಂಡ ಇರುವ ಗ್ರಾಮ ಪಂಚಾಯಿತಿಗಳನ್ನು ಟಿ.ಬಿ ಮುಕ್ತ ಗ್ರಾಮ ಪಂಚಾಯಿತಿ ಎಂದು ಘೋಷಿಸಲಾಗುವುದು 2023 ರಲ್ಲಿ 16 ಗ್ರಾಮ ಪಂಚಾಯಿತಿ, 2024 ರಲ್ಲಿ 41 ಗ್ರಾಮ ಪಂಚಾಯಿತಿ ಹಾಗೂ ಸದರಿ ವರ್ಷ ಅಂದಾಜು 67 ಗ್ರಾಮ ಪಂಚಾಯಿತಿಗಳನ್ನು ಕ್ಷಯ ರೋಗ ಮುಕ್ತ ಗ್ರಾಮ ಪಂಚಾಯಿತಿಗಳು ಎಂದು ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕ್ಷಯ ರೋಗ ಚಾಂಪಿಯನ್ಸ್ ಗಳಿಂದ ಕ್ಷಯ ರೋಗದ ಕುರಿತು ಜಾಗೃತಿ ಮೂಡಿಸಿ
ಈಗಾಗಲೇ ಕ್ಷಯ ರೋಗ ಚಿಕಿತ್ಸೆ ಪಡೆದು ಕ್ಷಯ ರೋಗದಿಂದ ಮುಕ್ತಗೊಂಡಿರುವ ವ್ಯಕ್ತಿಗಳ ಮೂಲಕ ಕ್ಷಯ ರೋಗಿಗಳಿಗೆ ಜಾಗೃತಿ ಮೂಡಿಸಿ, ಔಷಧಿಗಳನ್ನು ಎಸೆದಂತೆ ಸೇವನೆ ಮಾಡುವ ಸೂಚಿಸಿ, ಕ್ಷಯ ರೋಗದಿಂದ ಮುಕ್ತಗೊಂಡಿರುವ ವ್ಯಕ್ತಿಗಳಿಂದ ಸಾಮಾಜಿಕ ಜಾಲತಾಣಗಳಲ್ಲೂ ಜಾಗೃತಿ ಮೂಡಿಸಿ ಎಂದರು ಸಲಹೆ ನೀಡಿದರು.

ಟಿ.ಬಿ ಪರೀಕ್ಷೆ ಮಾಡುವ ಸಂದರ್ಭದಲ್ಲಿ ರೋಗಿಗಳ ಸಂಪೂರ್ಣ ಆರೋಗ್ಯವನ್ನು ತಪಾಸಣೆ ಮಾಡಿ, ಶಾಲಾ ಮಕ್ಕಳಿಂದ ಕ್ಷಯ ರೋಗ ಜಾಗೃತಿ ಮೂಡಿಸಿ, ಕೊಳಚೆ ಪ್ರದೇಶಗಳಲ್ಲಿ ಕ್ಷಯ ರೋಗದ ಕುರಿತಾಗಿ ಅರಿವು ಮೂಡಿಸಿ. ಟಿ.ಬಿ ಮುಕ್ತ ತಾಲ್ಲೂಕು ಮಾಡಲು ಕ್ರಮ ವಹಿಸಿ ಎಂದು ಮಾರ್ಗದರ್ಶನ ನೀಡಿದರು.

ಸಭೆಯಲ್ಲಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ ಕೆ ಮೋಹನ್, ಕ್ಷಯ ರೋಗ ನಿರ್ಮೂಲನಾಧಿಕಾರಿ ಡಾ.ಆಶಾಲತ, ಆರ್ ಸಿ ಎಚ್ ಅಧಿಕಾರಿ ಡಾ ಅಶ್ವತ್ಥ್ , ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ಸೋಮಶೇಖರ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ