Thursday, July 25, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಪೊಲೀಸ್ ಠಾಣೆಗೆ ಬರುವ ನಾಗರಿಕರಿಗೆ ಸೂಕ್ತ ಸ್ಪಂದನೆ: ಎಸ್‌ಪಿ ಮಲ್ಲಿಕಾರ್ಜುನ

ಪೊಲೀಸ್ ಠಾಣೆಗೆ ಬರುವ ನಾಗರಿಕರಿಗೆ ಸೂಕ್ತ ಸ್ಪಂದನೆ ಸಿಗಬೇಕು. ಪೊಲೀಸ್ ಠಾಣೆಗೆ ಬಂದವರಿಗೆ ಸರಿಯಾದ ಗೌರವ, ಮಾಹಿತಿ ಸಿಗುತ್ತಿಲ್ಲ. ದೂರು ನೀಡಲು ಬಂದರೆ ದೂರು ದಾಖಲಿಸುವುದಿಲ್ಲ ಎಫ್‌ಐಆರ್ ಮಾಡುವುದಿಲ್ಲ ಎಂಬ ಬಗ್ಗೆ ದೂರುಗಳಿವೆ. ಇದನ್ನು ಹೋಗಲಾಡಿಸಿ ನಾಗರಿಕರಿಗೆ ಸೂಕ್ತ ಸ್ಪಂದನೆ ಸಿಗುವಂತೆ ಪೊಲೀಸ್ ವ್ಯವಸ್ಥೆ ಬಲಪಡಿಸಲಾಗುವುದು ಎಂದು ನೂತನ ಮಂಡ್ಯ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.

ಮಂಡ್ಯ ನಗರದ ಎಸ್‌ಪಿ ಕಚೇರಿಯಲ್ಲಿ ಹೊಸದಾಗಿ ಅಧಿಕಾರ ಸ್ವೀಕರಿಸಿದ ನಂತರ ಪ್ರಥಮ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಹಿಂದೆ ಜಿಲ್ಲೆಯಲ್ಲಿ ಹಲವು ಅಧಿಕಾರಿಗಳು ಉತ್ತಮವಾಗಿ ಕೆಲಸ ಮಾಡಿದ್ದಾರೆ. ಅದರಂತೆ ತಾವು ಮುಂದುವರಿಸಿಕೊಂಡು ಹೋಗುವುದಾಗಿ ತಿಳಿಸಿದರು.

ಇತ್ತೀಚಿಗೆ ಜುಲೈ 1 ರಿಂದ ಹೊಸದಾಗಿ ಜಾರಿಗೆ ಬಂದಿರುವ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಹಾಗೂ ಭಾರತೀಯ ಸಾಕ್ಷ್ಯ ಅಧಿನಿಯಮ ಪ್ರಕಾರ ಕೇಸುಗಳನ್ನು ದಾಖಲಿಸಬೇಕಾದ ಅಗತ್ಯವಿದ್ದು ,ಪೊಲೀಸ್ ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವಂತೆ ಸೂಚಿಸಿದ್ದೇನೆ. ಪ್ರಥಮ ವರ್ತಮಾನ ವರದಿಯನ್ನು (ಎಫ್‌ಆರ್‌ಐ) ಸರಿಯಾದ ಸಮಯಕ್ಕೆ, ಸರಿಯಾದ ಕ್ರಮದಲ್ಲಿ, ಸೂಕ್ತ ಕಲಂಗಳನ್ನು ಅಳವಡಿಸಿ ದಾಖಲು ಮಾಡಬೇಕು ಎಂದರು.

ರೌಡಿಸಂಗೆ ಅವಕಾಶವಿಲ್ಲ

ಜಿಲ್ಲೆಯಲ್ಲಿ ರೌಡಿಸಂ ನಡೆಸುವವರಿಗೆ, ಕಾನೂನು ಬಾಹಿರ ಕೃತ್ಯ ನಡೆಸುವವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಮಾದಕ ವಸ್ತುಗಳ ಸೇವನೆ, ಸಾಗಣೆ, ವಿತರಣೆ, ಜೂಜು, ವೇಶ್ಯಾವಾಟಿಕೆ ಮುಂತಾದ ಚಟುವಟಿಕೆಗಳು ನಡೆಯಲು ಅವಕಾಶ ನೀಡುವುದಿಲ್ಲ. ಇದರ ಜೊತೆಗೆ ಮಾದಕ ವಸ್ತುಗಳ ಸೇವನೆ ಬಹಿಷ್ಕರಿಸುವ ಬಗ್ಗೆ ಶಾಲಾ ಕಾಲೇಜುಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಈ ಪಿಡುಗನ್ನು ಹೋಗಲಾಡಿಸಲು ಕಠಿಣ ಕ್ರಮ ವಹಿಸಲಾಗುವುದು ಎಂದರು.

ಸೈಬರ್ ಅಪರಾಧಗಳು ಸಹ ಹೆಚ್ಚುತ್ತಿದ್ದು, ನಾಗರಿಕರು ಎಚ್ಚರಿಕೆ ವಹಿಸಬೇಕು. ಈ ಬಗ್ಗೆ 1930 ಕ್ಕೆ ಕರೆ ಮಾಡಬಹುದು. ಸಂಚಾರ ವ್ಯವಸ್ಥೆ ಸುಧಾರಣೆಗೆ ಕ್ರಮ, ಜನ ಸಂಚಾರ ಹೆಚ್ಚಿರುವ ಸಮಯವಾದ ಸಂಜೆ 6 ರಿಂದ ರಾತ್ರಿ 9 ರವರೆಗೆ ಪೊಲೀಸ್ ಗಸ್ತು ವ್ಯವಸ್ಥೆ ಹೆಚ್ಚಿಸಲಾಗುವುದು. ರಾತ್ರಿ ವೇಳೆ ಬೀಟ್ ಪದ್ಧತಿಯ ಬಗ್ಗೆಯೂ ಹೆಚ್ಚಿನ ನಿಗಾ ವಹಿಸಲಾಗುವುದು ಎಂದರು.

ಗೋಷ್ಠಿಯಲ್ಲಿ ಪೊಲೀಸ್ ಅಧಿಕಾರಿಗಳಾದ ತಿಮ್ಮಯ್ಯ, ಗಂಗಾಧರಸ್ವಾಮಿ ಹಾಜರಿದ್ದರು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!