Friday, September 20, 2024

ಪ್ರಾಯೋಗಿಕ ಆವೃತ್ತಿ

ಮಳವಳ್ಳಿ| ಟ್ರಸ್ಟ್ ಗೆ ದೇಣಿಗೆ ನೀಡುವ ನೆಪದಲ್ಲಿ ₹1.10 ಕೋಟಿ ಎಗರಿಸಿದ ಅಸಾಮಿ ಬಂಧನ: ತಲೆಮರೆಸಿಕೊಂಡ ಸ್ವಾಮೀಜಿ

ಮಳವಳ್ಳಿ ತಾಲ್ಲೂಕಿನ ಟ್ರಸ್ಟ್ ಒಂದಕ್ಕೆ 25 ಕೋಟಿ ರೂಪಾಯಿ ದೇಣಿಗೆ ನೀಡುವುದಾಗಿ ಟ್ರಸ್ಟ್ ನ ಪದಾಧಿಕಾರಿಗಳನ್ನು ವಂಚಿಸಿ, ಅವರ ಬಳಿ ಇದ್ದ 1 ಕೋಟಿ 10 ಲಕ್ಷ ರೂಪಾಯಿಗಳನ್ನು ಎಗರಿಸಿ ಪರಾರಿಯಾಗಿದ್ದ ಆರೋಪಿಯನ್ನು ಕೇವಲ ಏಳು ದಿನಗಳಲ್ಲಿ ಬೆಳಕವಾಡಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆಂಧ್ರ ಪ್ರದೇಶದ ವೆಲ್ಲೂರು ಜಿಲ್ಲೆಯ ಕುಪ್ಪಂ ಮಂಡಲ್ ಗ್ರಾಮದ ಶಿವ ಉರೂಪ್ ಸೂರಿ, ಉರೂಪ್ ಸೂರ್ಯ ಉರೂಪ್ ಗೋವರ್ಧನ್ ಬಂದಿತ ಆರೋಪಿಯಾಗಿದ್ದು ಈತನ ಬಳಿಯಿದ್ದ 43.88.500.ರೂ.ಗಳನ್ನು ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮತ್ತೊಬ್ಬ ಆರೋಪಿಯಾದ ಮಳವಳ್ಳಿ ತಾಲೂಕಿನ ಹೆಬ್ಬಣಿ ಗ್ರಾಮದಲ್ಲಿರುವ ವಿರಕ್ತಮಠದ ಪೀಠಾಧಕ್ಷ ಶಂಭುಲಿಂಗ ಸ್ವಾಮೀಜಿ ತಲೆ ಮರೆಸಿಕೊಂಡಿದ್ದು, ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಆರೋಪಿ ಶಿವ. ಆಂಧ್ರಪ್ರದೇಶದ ಕುಪ್ಪಂ ಮಂಡಲ್ ಗ್ರಾಮದವನಾಗಿದ್ದು ಚಾಮರಾಜನಗರ ಜಿಲ್ಲೆಯ ಸಿಂಗನಲ್ಲೂರು ಗ್ರಾಮದ ಬಸವನಾಯಕ ಎಂಬುವರ ಪುತ್ರಿಯನ್ನು ಕಳೆದ 2010-11ನೇ ವಿವಾಹವಾಗಿದ್ದ. ಇವರಿಗೆ ಓರ್ವ ಪುತ್ರ ಹಾಗೂ ಓರ್ವ ಪುತ್ರಿ ಇದ್ದು, ಈತ ರಿಯಲ್ ಎಸ್ಟೇಟ್ ವ್ಯವಹಾರದ ಜೊತೆಯಲ್ಲಿ ಬ್ಲಾಕ್ ಮ್ಯಾಜಿಕ್ (ಹಣ ಡಬಲ್ ಮಾಡುವುದು ದಂಧೆ) ವಿದ್ಯೆಯನ್ನು ಕಲಿತುಕೊಂಡು ಜನರಿಗೆ ಮೋಸ ಮಾಡುವುದನ್ನೆ  ಕಾಯಕ ಮಾಡಿಕೊಂಡಿದ್ದ.

ಘಟನೆ ವಿವರ 

ಕಳೆದ 2023ರ ಅಕ್ಟೋಬರ್ ನಲ್ಲಿ ಮಳವಳ್ಳಿ ತಾಲೂಕಿನ ಹೆಬ್ಬಣಿ ಗ್ರಾಮದ ನಿರ್ವಾಣೆಶ್ವರ ವಿರಕ್ತಮಠದ ಶ್ರೀ ಶಂಭುಲಿಂಗ ಸ್ವಾಮೀಜಿಯನ್ನು ಭೇಟಿಯಾಗಿ ನಾನು ಜಮೀನುಗಳನ್ನು ಖರೀದಿಸಲು ಬಂದಿದ್ದೇನೆ, ನಿಮ್ಮ ಕಡೆಯವರ ಜಮೀನುಗಳು ಯಾವುದಾದರೂ ಇದ್ದರೆ ಪರಿಚಯ ಮಾಡಿಕೊಡಿ ಎಂದು ಪರಿಚಯ ಮಾಡಿಕೊಂಡಿದ್ದ. ಆನಂತ ಪರಿಚಯ ಸಲುಗೆಯ ರೂಪಕ್ಕೆ ತಿರುಗಿತ್ತು. ಬಳಿಕ ಬ್ಲಾಕ್ ಮ್ಯಾಜಿಕ್ (ಹಣ ಡಬಲ್ ಮಾಡುವ ವಿದ್ಯೆ)ಯನ್ನು ಸ್ವಾಮೀಜಿಯ ಬಳಿ ಹಂಚಿಕೊಂಡಾಗ ಇಬ್ಬರು ಸಂಚು ರೂಪಿಸಿ, ಮಳವಳ್ಳಿ ತಾಲೂಕಿನ ಶಿಂಷಾಪುರ ಗ್ರಾಮದ ಶ್ಯಾಮೋಲ್ ಎಜುಕೇಷನ್ ಚಾರಿಟೇಬಲ್ ಟ್ರಸ್ಟ್ ಖಜಾಂಚಿ ಎಸ್.ಮೇರಿ ಅವರಿಗೆ ಕಳೆದ ಮೂರು ತಿಂಗಳಗಳ ಹಿಂದೆ ಶಂಭುಲಿಂಗಸ್ವಾಮಿಯು ಆರೋಪಿ ಸೂರ್ಯನನ್ನು ದೊಡ್ಡ ಉದ್ಯಮಿ ಎಂದು ಪರಿಚಯ ಮಾಡಿಕೊಟ್ಟಿದ್ದ.

ಬಳಿಕ ನಿಮ್ಮ ಟ್ರಸ್ಟ್ ಅಭಿವೃದ್ಧಿಗೆ ದೇಣಿಗೆ ನೀಡಲು ಮುಂದಾಗಿದ್ದಾರೆ ಎಂದು ಸ್ವಾಮೀಜಿ ಹೇಳಿದ್ದನ್ನು ನಂಬಿದ್ದ ಎಸ್.ಮೇರಿಯವರು, ಶಂಭುಲಿಂಗಸ್ವಾಮಿ ಮತ್ತು ಸೂರ್ಯನನ್ನು ಆಹ್ವಾನಿಸಿ ಟ್ರಸ್ಟ್ ಅಧ್ಯಕ್ಷ ಮೇರಿನ್ ಪಿಂಟೋ ಅವರ ಜತೆಗೊಡಿ ಆರೋಪಿ ಸೂರ್ಯನನ್ನು ಅಭಿನಂದಿಸಿದ್ದರು.

ಇದೆ ವೇಳೆ ಆರೋಪಿ ಸೂರ್ಯ ನಿಮ್ಮ ಟ್ರಸ್ಟ್ ಗೆ 25 ಕೋಟಿ ರೂಪಾಯಿ ದೇಣಿಗೆ ನೀಡಿದರೆ ಬದಲಿಗೆ 1ಕೋಟಿ 10 ಲಕ್ಷ ರೂಗಳನ್ನು ನಮಗೆ ತೆರಿಗೆ ಕಟ್ಟಲು ನಗದು ರೂಪದಲ್ಲಿ ಹಣ ಕಟ್ಟಬೇಕೆಂದು ನಂಬಿಸಿದ್ದ. ಇದನ್ನು ನಂಬಿದ ಟ್ರಸ್ಟ್ ಪದಾಧಿಕಾರಿಗಳು, ಜ.19ರಂದು ನಗದು ಹಣವನ್ನು ರೆಡಿಮಾಡಿಕೊಂಡು ಆರೋಪಿ ಸೂರ್ಯ ಹಾಗೂ ಶಂಭುಲಿಂಗಸ್ವಾಮೀಜಿಗಳಿಗೆ ವಿಷಯ ತಿಳಿಸಿದ್ದರು.

ಕಳೆದ ಜ.20ರಂದು ಬಿಳಿ ಪೇಪರ್ ನಲ್ಲಿ  160 ನೋಟಿನ ಕಂತೆಯನ್ನು ಚೀಲದಲ್ಲಿ ಹಾಕಿಕೊಂಡು ಅದರ ಮೇಲೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಂಬ ಸ್ಟಿಕರ್ ಕಾಣುವ ಹಾಗೇ ಶಿಂಷಾಪುರ ಗ್ರಾಮದ ಮೇರಿ ಅವರ ಸಹೋದರಿ ಮನೆಗೆ ಆಗಮಿಸಿದ್ದು, ಜೌಪಚಾರಿಕ ವಿಚಾರಗಳನ್ನು ಮಾತನಾಡಿ, ಒಂದು ಕೋಟಿ ಹತ್ತು ಲಕ್ಷ ರೂಪಾಯಿ ತೋರಿಸುವಂತೆ ಹೇಳಿ ಹಣ ನೋಡಿದ ಬಳಿಕ ತನ್ನ ಬಳಿಯಲ್ಲಿದ್ದ ನಕಲಿ ನೋಟುಗಳ ಚೀಲವನ್ನು ಪಕ್ಕದಲ್ಲಿ ಇಟ್ಟು, ತಾನು ತಂದಿದ್ದ ಜ್ಯೂಸನ್ನು ಟ್ರಸ್ಟ್ ಅಧ್ಯಕ್ಷ ಮೇರಿನ್ ಪಿಂಟೋ ಹಾಗೂ ಖಜಾಂಚಿ ಎಸ್. ಮೇರಿ ಅವರಿಗೆ ಕುಡಿಸಿದ್ದು, ಅವರು ಸ್ವಲ್ಪ ಸಮಯದಲ್ಲಿ ಇಬ್ಬರು ಪ್ರಜ್ಞೆ ಕಳೆದುಕೊಂಡ ಬಳಿಕ ಆರೋಪಿ ಸೂರ್ಯ ಹಣದ ಸಮೇತ ಪರಾರಿಯಾಗಿದ್ದ.

ನಂತರ ಎಚ್ಚೆತ್ತ ಎಸ್. ಮೇರಿ ಅವರು ಬೆಳಕವಾಡಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ ಹಿನ್ನೆಲೆಯಲ್ಲಿ ಪಿಎಸ್ಐ ವಿ.ಸಿ.ಅಶೋಕ್ ಪ್ರಕರಣ ದಾಖಲಿಸಿಕೊಂಡಿದ್ದರು.

ಈ ಪ್ರಕರಣದ ಪತ್ತೆಗಾಗಿ ಮಂಡ್ಯ ಜಿಲ್ಲಾ ವರಿಷ್ಠಾಧಿಕಾರಿ ಯತೀಶ್ ಹಾಗೂ ಹೆಚ್ಚುವರಿ ವರಿಷ್ಠಾಧಿಕಾರಿ ತಿಮ್ಮಯ್ಯ ಅವರ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಕೃಷ್ಣಪ್ಪ ಸಿಪಿಐ ಬಿ.ಎಸ್. ಶ್ರೀಧರ್ ನೇತೃತ್ವದಲ್ಲಿ, ಪಿಎಸ್ಐ ವಿಸಿ ಅಶೋಕ್ ಹಾಗೂ ಸಿಬ್ಬಂದಿಗಳ ತಂಡವನ್ನು ರಚಿಸಲಾಗಿತ್ತು, ಈ ತಂಡವು ತನಿಖೆ ಕೈಗೊಂಡ ವೇಳೆ ಆರೋಪಿ ಸೂರ್ಯ ಆಂಧ್ರಪ್ರದೇಶ, ತಮಿಳುನಾಡು ಹಾಗೂ ಕರ್ನಾಟಕ ಎಂದು ಸುತ್ತಾಡುತ್ತ ಜ.28 ರಂದು ಮೈಸೂರಿನ ರಿಂಗ್ ರೋಡ್ ನಲ್ಲಿ ಪತ್ತೆಯಾಗಿದ್ದ ಸಂದರ್ಭದಲ್ಲಿ ಆತನನ್ನು ಬಂಧಿಸಿದ್ದರು.

ಆರೋಪಿಯು ವಿಚಾರಣೆ ವೇಳೆ 1ಕೋಟಿ 10 ಲಕ್ಷ ರೂಪಾಯಿ ಅಲ್ಲ, ಟ್ರಸ್ಟ್ ನವರು ನನಗೆ ನೀಡಿದ್ದು 70 ಲಕ್ಷ ರೂ. ಮಾತ್ರ ಅದರಲ್ಲಿ ಶಂಭುಲಿಂಗಸ್ವಾಮೀಗೆ ₹ 25 ಲಕ್ಷ ನೀಡಿದ್ದೇನೆ ಎಂದು ಬಾಯ್ಬಿಟ್ಟಿದ್ದಾನೆ. ಆತನ ಬಳಿಯಲ್ಲಿದ್ದ ₹ 43,88,500 ನಗದ ಹಾಗೂ ಒಂದು ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಎರಡನೇ ಆರೋಪಿ ಹೆಬ್ಬಣಿ ಗ್ರಾಮದ ವಿರಕ್ತ ಮಠದ ಪೀಠಾಧಿಪತಿ ಶಂಭುಲಿಂಗಸ್ವಾಮಿ ತಲೆಮರೆಸಿಕೊಂಡಿದ್ದು ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ. ಆರೋಪಿ ಸೂರ್ಯನನ್ನು ಮಂಗಳವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, ಹೆಚ್ಚಿನ ವಿಚಾರಣೆಗಾಗಿ ಮತ್ತೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಾರ್ಯಚರಣೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ನಿಂಗರಾಜು, ಅವಿನಾಶ್ , ಹಾಜೀಷಾಷ, ರಿಯಾಜ್ ಪಾಷಾ, ನಾಗೇಂದ್ರ , ಸಿದ್ದರಾಜು, ಎಚ್.ಎಸ್.ಮಹೇಶ್ ಪಾಲ್ಗೊಂಡಿದ್ದರು, ಈ ತಂಡದ ಕಾರ್ಯವನ್ನು ಮಂಡ್ಯ ಎಸ್ಪಿಯವರು ಶ್ಲಾಘಿಸಿ, ಪ್ರಶಂಸಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!