Tuesday, August 27, 2024

ಪ್ರಾಯೋಗಿಕ ಆವೃತ್ತಿ

ಅರುಣಾಚಲ ಪ್ರದೇಶ ಸೇರಿಸಿ ಚೀನಾ ಮ್ಯಾಪ್ ರಿಲೀಸ್| ಮೋದಿ ಪತ್ರಿಕ್ರಿಯಿಸಲಿ ರಾಹುಲ್ ಗಾಂಧಿ ಆಗ್ರಹ

ಅಕ್ಸಾಯ್ ಚಿನ್ ಮತ್ತು ಅರುಣಾಚಲ ಪ್ರದೇಶವನ್ನು ಸೇರಿಸಿ ಚೀನಾ ಬಿಡುಗಡೆ ಮಾಡಿದ ಹೊಸ ಮ್ಯಾಪ್‌ನ ಬಗ್ಗೆ ಪ್ರತಿಕ್ರಿಯಿಸುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಗೆ ಆಗ್ರಹಿಸಿದ್ದಾರೆ.

ಲಡಾಖ್‌ನಲ್ಲಿ ಒಂದು ಇಂಚು ಭೂಮಿಯೂ ನಷ್ಟವಾಗಿಲ್ಲ ಎಂದು ಪ್ರಧಾನಿ ಹೇಳಿದ್ದು ಸುಳ್ಳು ಎಂದು ನಾನು ವರ್ಷಗಳಿಂದ ಹೇಳುತ್ತಿದ್ದೇನೆ. ಚೀನಾ ಭೂಮಿ ಅತಿಕ್ರಮಿಸಿದೆ ಎಂದು ಇಡೀ ಲಡಾಖ್‌ಗೆ ತಿಳಿದಿದೆ. ಈ ನಕ್ಷೆಯ ವಿಷಯವು ತುಂಬಾ ಗಂಭೀರವಾಗಿದೆ. ಅವರು ನಮ್ಮ ಭೂಮಿಯನ್ನು ಕಿತ್ತುಕೊಂಡಿದ್ದಾರೆ. ಈ ಬಗ್ಗೆ ಪ್ರಧಾನಿ ಪ್ರತಿಕ್ರಿಯಿಸಬೇಕು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಅರುಣಾಚಲ ಪ್ರದೇಶ, ಅಕ್ಸಾಯ್ ಚಿನ್ ಪ್ರದೇಶ, ತೈವಾನ್ ಮತ್ತು ವಿವಾದಿತ ದಕ್ಷಿಣ ಚೀನಾ ಸಮುದ್ರವನ್ನು ಒಳಗೊಂಡಿರುವ 2023ರ ಮ್ಯಾಪ್‌ನ್ನು ಚೀನಾ ಸೋಮವಾರ ಬಿಡುಗಡೆ ಮಾಡಿದೆ.

ಗ್ಲೋಬಲ್ ಟೈಮ್ಸ್ ಪ್ರದರ್ಶಿಸಿದ ನಕ್ಷೆಯು ದಕ್ಷಿಣ ಟಿಬೆಟ್ ಎಂದು ಚೀನಾ ಹೇಳಿಕೊಳ್ಳುವ ಅರುಣಾಚಲ ಪ್ರದೇಶ ಮತ್ತು 1962ರ ಯುದ್ಧದಲ್ಲಿ ಆಕ್ರಮಿಸಿಕೊಂಡ ಅಕ್ಸಾಯ್ ಚಿನ್‌ನ್ನು ಚೀನಾದ ಭಾಗವಾಗಿ ತೋರಿಸಿದೆ. ನಕ್ಷೆಯಲ್ಲಿ ಇದಲ್ಲದೆ ಚೀನಾದ ಭೂಪ್ರದೇಶವಾಗಿ ತೈವಾನ್ ದ್ವೀಪ ಮತ್ತು ದಕ್ಷಿಣ ಚೀನಾ ಸಮುದ್ರದ ಹೆಚ್ಚಿನ ಭಾಗವನ್ನು ತೋರಿಸಲಾಗಿದೆ.

ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಎನ್‌ಡಿಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ನಕ್ಷೆಗೆ ಪ್ರಾಮುಖ್ಯತೆ ಕೊಡಬೇಕಾಗಿಲ್ಲ ಮತ್ತು ಚೀನಾವು ಅಂತಹ ನಕ್ಷೆಗಳನ್ನು ಬಿಡುಗಡೆ ಮಾಡುವ  ಕೆಟ್ಟ ಅಭ್ಯಾಸ ಹೊಂದಿದೆ ಎಂದು ಹೇಳಿದರು.

ಚೀನಾವು ತಮ್ಮದಲ್ಲದ ಪ್ರದೇಶಗಳ ನಕ್ಷೆಗಳನ್ನು ಹಾಕಿದೆ. ಇದು ಹಳೆಯ ಅಭ್ಯಾಸ. ಕೇವಲ ಭಾರತದ ಕೆಲವು ಭಾಗಗಳೊಂದಿಗೆ ನಕ್ಷೆಗಳನ್ನು ಹಾಕುವುದರಿಂದ ಏನೂ ಬದಲಾಗುವುದಿಲ್ಲ. ನಮ್ಮ ಭೂಭಾಗದ ಬಗ್ಗೆ ಸರಕಾರಕ್ಕೆ ಸರಿಯಾಗಿ ತಿಳಿದಿದೆ ಎಂದು ಹೇಳಿದ್ದಾರೆ.

ಭಾರತವು  ನಕ್ಷೆಯ  ವಿರುದ್ಧ ರಾಜತಾಂತ್ರಿಕವಾಗಿ  ಪ್ರತಿಭಟನೆಗಳನ್ನು ಪ್ರಾರಂಭಿಸಿದೆ. ನಾವು ಚೀನಾದ ಹಕ್ಕುಸ್ವಾಮ್ಯವನ್ನು ತಿರಸ್ಕರಿಸುತ್ತೇವೆ. ಏಕೆಂದರೆ ಅವುಗಳಿಗೆ ಯಾವುದೇ ಆಧಾರವಿಲ್ಲ. ಚೀನಾದ ಕಡೆಯಿಂದ ಇಂತಹ ಕ್ರಮಗಳು ಗಡಿ ಪ್ರಶ್ನೆಯ ಪರಿಹಾರವನ್ನು ಸಂಕೀರ್ಣಗೊಳಿಸುತ್ತವೆ ಎಂದು ವಿದೇಶಾಗ ವ್ಯವಹಾರಗಳ ಇಲಾಖೆಯ ವಕ್ತಾರ ಅರಿಂದಮ್ ಬಾಗ್ಚಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!