Thursday, September 19, 2024

ಪ್ರಾಯೋಗಿಕ ಆವೃತ್ತಿ

ಅತಿಯಾದ ಯೂರಿಯಾ ಬಳಕೆಯಿಂದ ಇಳುವರಿ ಕುಂಠಿತ: ಅಶೋಕ್

ನಮ್ಮ ಪೂರ್ವಿಕರ ಕೃಷಿ ಪದ್ದತಿಗೆ ಬೆನ್ನು ತೋರಿ ಅತಿಯಾದ ಯೂರಿಯಾ ಹಾಗೂ ನೀರಿನ ಬಳಕೆಯಿಂದ ಮಣ್ಣಿನ ಸವಕಳಿ ಹೆಚ್ಚಾಗಿ ಬೆಳೆಯ ಇಳುವರಿ ಪ್ರಮಾಣ ಕುಂಠಿತವಾಗುತ್ತಿದ್ದು, ರೈತರು ಈ ಬಗ್ಗೆ ಜಾಗೃತರಾಗಬೇಕೆಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಅಶೋಕ ವಿ.ಎಸ್ ಕರೆ ನೀಡಿದರು.

ಶ್ರೀರಂಗಪಟ್ಟಣ ತಾಲ್ಲೂಕಿನ ತಡಗವಾಡಿ ಗ್ರಾಮದಲ್ಲಿ ಸಂಪೂರ್ಣ ಅಂತರ ರಾಷ್ಟ್ರೀಯ ಕೃಷಿ ಮತ್ತು ತೋಟಗಾರಿಕೆ ತಂತ್ರಜ್ಞಾನ ಸಂಸ್ಥೆ, ಕೃಷಿ ಇಲಾಖೆ, ರೈತ ಸಂಪರ್ಕ ಕೇಂದ್ರ ಹಾಗೂ ಗ್ರಾ.ಪಂ.ವತಿಯಿಂದ ಆಯೋಜಿಸಿದ್ದ ಕೃಷಿ ವಸ್ತು ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

ಮಣ್ಣಿನ ಸವಕಳಿ ತಪ್ಪಿಸಲು ರೈತರು ಜಾಗೃತಿ ವಹಿಸಬೇಕು. ಸೂಕ್ಷ್ಮಾಣು ಜೀವಿಗಳನ್ನು ಬೀಜೋಪಚಾರ ಮಾಡಿ, ಅಗತ್ಯ ಸಾರಜನಕ ಉತ್ಪಾದನೆಗೆ ಒತ್ತು ನೀಡಬೇಕು, ಹಸಿರೆಲೆ ಗೊಬ್ಬರ, ಕೊಟ್ಟಿಗೆ ಗೊಬ್ಬರ ಬಳಕೆಗೆ ಆದ್ಯತೆ ನೀಡಬೇಕು ಎಂದು ಕಿವಿಮಾತು ಹೇಳಿದರು.

ಹಣ್ಣು, ತರಕಾರಿ ಹಾಗೂ ಆಹಾರ ಪದಾರ್ಥಗಳಿಗೆ ಅತಿಯಾದ ಔಷಧಿ ಬಳಕೆಯಾಗಿರುವ ಹಿನ್ನೆಲೆಯಲ್ಲಿ ಕ್ಯಾನ್ಸರ್ ಪೀಡಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಪಂಜಾಬ್ ರಾಜ್ಯದಲ್ಲಿ ಹೆಚ್ಚು ಕ್ಯಾನ್ಸರ್ ಪೀಡಿತರು ಪತ್ತೆಯಾಗಿರುವುದು ಆಘಾತಕಾರಿಯಾಗಿದ್ದು, ಈ ಬಗ್ಗೆ ಜಾಗೃತಿ ವಹಿಸಬೇಕೆಂದರು.

ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ವೇಳೆಯಲ್ಲಿ ದೇಶದಲ್ಲಿ 35 ಕೋಟಿ ಜನಸಂಖ್ಯೆ ಇತ್ತು, ಆಹಾರಕ್ಕಾಗಿ ಅನ್ಯ ದೇಶಗಳನ್ನು ಅವಲಂಬಿಸಬೇಕಾದ ಅನಿವಾರ್ಯತೆ ತೊಡೆದು ಹಾಕಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಸಿರು ಕ್ರಾಂತಿ ಯೋಜನೆಯನ್ನು ಜಾರಿಗೊಳಿಸಿದ ಪರಿಣಾಮ ಇಂದು 140 ಕೋಟಿ ಜನರಿಗೆ ಆಹಾರ ಸಮಸ್ಯೆ ಶಮನವಾಗಿ ಮುಂದಿನ 2 ವರ್ಷಗಳ ಅವಧಿಗೆ ಅಗತ್ಯವಿರುವ ಆಹಾರ ಪದಾರ್ಥಗಳು ನಮ್ಮಲ್ಲಿ ದಾಸ್ತಾನಿದ್ದು, ಆಹಾರ ಭದ್ರತೆ ಹೊಂದಲಾಗಿದೆ ಎಂದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತನ ಅಭ್ಯುದಯಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು, ಅವುಗಳ ಸದುಪಯೋಗಕ್ಕೆ ಮುಂದಾಗಬೇಕೆಂದರು.

ಸಂಸ್ಥೆಯ ಉಪಾಧ್ಯಕ್ಷೆ ಡಾ.ಸಂಪೂರ್ಣ ನಾಯ್ದು ಮಾತನಾಡಿ, ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿ ಕೃಷಿ ವಸ್ತು ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆ ಆಯೋಜಿಸಿರುವುದು ಶ್ಲಾಘನೀಯ ಕಾರ್ಯ, ಪ್ರತಿ ಜೀವಿಯ ಪ್ರಾಣ ಉಳಿವಿಗೆ ರೈತರ ಉದಾತ್ತ ಸೇವೆ ನೆರವಾಗಿದ್ದು, ಸಂಕಷ್ಟದಲ್ಲಿರುವ ರೈತರನ್ನು ಉಳಿಸುವ ಕಾಯಕಕ್ಕೆ ನಾವೆಲ್ಲರು ಕೈಜೋಡಿಸಬೇಕಿದೆ ಎಂದರು.

ಸಂಪೂರ್ಣ ಕಾಲೇಜಿನ ಡೀನ್ ಡಾ.ಜ್ಞಾನೇಶ್, ಸಹಾಯಕ ಪ್ರಾಧ್ಯಾಪಕಿ ಡಾ.ಸುಧಾ, ತಡಗವಾಡಿ ಗ್ರಾ.ಪಂ. ಅಧ್ಯಕ್ಷೆ ಶಶಿಕಲಾ, ಉಪಾಧ್ಯಕ್ಷ ರಘು ಇತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!