Friday, September 20, 2024

ಪ್ರಾಯೋಗಿಕ ಆವೃತ್ತಿ

ಜಿಲ್ಲೆಯ ಅಭಿವೃದ್ಧಿಗೆ ಶಿಕ್ಷಣವೇ ಭದ್ರ ಬುನಾದಿ : ಅಶೋಕ್ ಜಯರಾಂ

ಹಿಂದುಳಿದ ಜಿಲ್ಲೆಗಳ ಸಾಲಿನಲ್ಲಿರುವ ಮಂಡ್ಯವನ್ನು ಎಲ್ಲ ರಂಗಗಳಲ್ಲಿಯೂ ಪ್ರಗತಿ ಸಾಧಿಸಿ ಮಾದರಿ ಜಿಲ್ಲೆಯನ್ನಾಗಿ ರೂಪಿಸಲು ಶಿಕ್ಷಣದ ಮೂಲಕವೇ ಭದ್ರ ಬುನಾದಿ ಹಾಕಬೇಕಿದೆ ಎಂದು ರಾಜ್ಯ ಒಕ್ಕಲಿಗರ ಸಂಘ ನಿರ್ದೇಶಕ ಅಶೋಕ್ ಎಸ್.ಡಿ.ಜಯರಾಂ ಹೇಳಿದರು.

ಮಂಡ್ಯ ನಗರದ ಗಾಂಧಿ ಭವನದಲ್ಲಿ ಜ್ಞಾನ ದೀಪಾ ವಿದ್ಯಾಲಯ ಎಜುಕೇಷನಲ್ ಟ್ರಸ್ಟ್ ನ ಅಗಮ್ಯ ಕಿಡ್ಸ್ ಕಾರ್ನರ್ 8ನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಈ ಮೊದಲು ಮಂಡ್ಯ ಅಭಿವೃದ್ಧಿ ಹೊಂದಿದ ಜಿಲ್ಲೆಗಳ ಸಾಲಿನಲ್ಲಿತ್ತು. ಆದರೆ, 25-30 ವರ್ಷಗಳಿಂದ  ಕಲೆ, ಶಿಕ್ಷಣ, ಸಾಹಿತ್ಯ, ಉದ್ಯೋಗಾವಕಾಶ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಹಿನ್ನಡೆ ಸಾಧಿಸುತ್ತಿದೆ. ಒಂದರ್ಥದಲ್ಲಿ ಚಾಮರಾಜನಗರ, ಯಾದಗಿರಿ ಜಿಲ್ಲೆಗಳ ಸಾಲಿನಲ್ಲಿ ಮಂಡ್ಯವೂ ಸೇರಿಕೊಳ್ಳುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ದಶಕಗಳ ಹಿಂದೆ ಶಿಕ್ಷಣದ ಕಾರಣದಿಂದಾಗಿ ಮಂಡ್ಯ ಅಭಿವೃದ್ಧಿ ಹೊಂದಿದ ಜಿಲ್ಲೆಗಳ ಸ್ಥಾನದಲ್ಲಿತ್ತು. ಆದರೀಗ ಬೆಂಗಳೂರು, ಮಂಗಳೂರು, ಮೈಸೂರು ಜಿಲ್ಲೆಗಳ ಎದುರು ಮಂಡ್ಯ ಸೇರಿ ಉಳಿದ ಜಿಲ್ಲೆಗಳ ಪ್ರಗತಿ ನಗಣ್ಯ ಎನಿಸುತ್ತದೆ. ಹಾಗಾಗಿ ಇಲ್ಲಿಯ ಮಕ್ಕಳು ಯಾವುದಾದರು ಕ್ಷೇತ್ರದಲ್ಲಿ ಸಾಧನೆ ಮಾಡಲು ದೊಡ್ಡ ನಗರಗಳನ್ನು ಆಶ್ರಿಯಿಸುವ ಸ್ಥಿತಿ ಬಂದೋದಗಿದೆ ಎಂದು ತಿಳಿಸಿದರು.

ಮಂಡ್ಯ ಜಿಲ್ಲೆಗೆ ತನ್ನ ವೈಭವ ಮರುಕಳಿಸಬೇಕಾದರೆ ಶಿಕ್ಷಣದ ಮೂಲಕ ಭದ್ರ ಬುನಾದಿ ಹಾಕ ಬೇಕಾಗಿದೆ. ನಮ್ಮ ಮಕ್ಕಳಲ್ಲಿ ಪ್ರತಿಭೆಗೆ ಕೊರತೆ ಇಲ್ಲ. ಕೀಳರಿಮೆ ಮತ್ತು ಹಿಂಜರಿಕೆ ಭಾವನೇ ಇದೆ. ಅದನ್ನು ಹೋಗಲಾಡಿಸಿ ಮಕ್ಕಳಿಗೆ ಮಾರ್ಗದರ್ಶನ, ಪ್ರೋತ್ಸಾಹದ ಅಗತ್ಯವಿದೆ. ಆ ಕಾರ್ಯವನ್ನು ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಶಿಕ್ಷಣದ ಮೂಲಕ ಸಾಧಿಸಬೇಕಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕನ್ನಿಕಾ ಶಿಲ್ಪಾ ನವೋದಯ ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷೆ ಎಚ್.ಆರ್.ಕನ್ನಿಕಾ ಅವರನ್ನು ಅಭಿನಂದಿಸಲಾಯಿತು. ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನ ಮಾಡಿದರು. ಅಗಮ್ಯ ಕಿಡ್ಸ್ ಕಾರ್ನರ್ ಅಧ್ಯಕ್ಷ ಬಿ.ಸೋಮಶೇಖರಯ್ಯ, ಕಾರ್ಯದರ್ಶಿ ಗೀತಾ, ಮುಖ್ಯಸ್ಥ ಫುಟ್ ಬಾಲ್ ಮಂಜು, ಶಿಕ್ಷಕರಾದ ಸವಿತಾ, ಶ್ವೇತಾ, ಪವಿತ್ರ, ಬಸವಣ್ಣ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!