Friday, September 20, 2024

ಪ್ರಾಯೋಗಿಕ ಆವೃತ್ತಿ

ಅಷ್ಟಾಂಗ ಮಾರ್ಗಗಳನ್ನು ಅಳವಡಿಸಿಕೊಂಡರೆ ದುಃಖವನ್ನು ಹೋಗಲಾಡಿಸಬಹುದು : ಡಾ.ಪಿ.ನರಸಿಂಹಮೂರ್ತಿ

ಗೌತಮ ಬುದ್ಧನ ಅಷ್ಟಾಂಗ ಮಾರ್ಗಗಳ ಪ್ರತಿಪಾದನೆಯನ್ನು ಪ್ರತಿಯೊಬ್ಬರು ಅಳವಡಿಸಿಕೊಂಡರೆ ದುಃಖವನ್ನು ಹೋಗಲಾಡಿಸಬಹುದು ಎಂದು ಮಿಮ್ಸ್ ನಿರ್ದೇಶಕ ಡಾ.ಪಿ.ನರಸಿಂಹಮೂರ್ತಿ ತಿಳಿಸಿದರು.

ನಗರದ ಮಿಮ್ಸ್ ಹೆರಿಗೆ ವಿಭಾಗದ ಆವರಣದಲ್ಲಿ ಮಮತೆಯ ಮಡಿಲು ನಿತ್ಯ ಅನ್ನದಾಸೋಹ ಕೇಂದ್ರದಲ್ಲಿ ಪರಿಸರ ರೂರಲ್ ಡೆವಲಪ್ ಮೆಂಟ್ ಸೊಸೈಟಿ, ಭೂಮಿ ಬೆಳಗು ಸಾಂಸ್ಕೃತಿಕ ಸಂಘ,ಮಂಗಲ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಬುದ್ಧ ಬೆಳಕು ಕಾರ್ಯಕ್ರಮದಲ್ಲಿ ಬುದ್ಧ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.

ಜಗತ್ತು ದುಃಖದಿಂದ ಕೂಡಿದೆ, ಆಸೆಯೇ ದುಃಖಕ್ಕೆ ಮೂಲ ಕಾರಣವಾಗಿದ್ದು ಈ ನಿಟ್ಟಿನಲ್ಲಿ ಭಗವಾನ್ ಬುದ್ಧರ ಅಷ್ಟಾಂಗ ಮಾರ್ಗಗಳಾದ ಸರಿಯಾದ ನಡತೆ, ಜೀವನ ಕ್ರಮ, ಮನಸ್ಸು,ಚಿಂತನೆ, ಜ್ಞಾನ, ಸರಿಯಾದ ವಿದ್ಯೆಯನ್ನು ಅಳವಡಿಸಿಕೊಂಡರೆ ದುಃಖವನ್ನು ಹೋಗಲಾಡಿಸಿ ಸಂತೋಷದಿಂದ ಬದುಕಬಹುದು ಎಂದು ತಿಳಿಸಿದರು.

ಕವಿ ಕೆ.ಪಿ.ಮೃತ್ಯುಂಜಯ ಅವರು ಬುದ್ಧನಿಗೆ ನುಡಿ ನಮನ ಸಲ್ಲಿಸಿ ಮಾತನಾಡಿ ಗೌತಮ ಬುದ್ಧರ ವಿಚಾರಗಳನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು.ಹೊಟ್ಟೆಯ ಹಸಿವಿಗಿಂತ ಜ್ಞಾನದ ಹಸಿವು ಜಾಸ್ತಿ ಇರಬೇಕು ಎಂದು ಗೌತಮ ಬುದ್ಧರು ತಿಳಿಸಿಕೊಟ್ಟಿದ್ದಾರೆ ಎಂದರು.

ಸರಿಸುಮಾರು 2,600 ವರ್ಷಗಳ ಹಿಂದೆ ಪ್ರಾಚೀನ ಭಾರತಕ್ಕೆ ಸೇರಿದ ನೇಪಾಳ ಗಡಿಯಲ್ಲಿ ಜಗತ್ತಿಗೆ ಜ್ಞಾನದ ಬೆಳಕಿನ ಅರಿವನ್ನು ತೋರಿಸಿದ ಗೌತಮ ಬುದ್ಧರ ಜನನ ಆಗುತ್ತದೆ ಎಂದು ತಿಳಿಸಿದರು.

ಆಸೆಯೇ ದುಃಖಕ್ಕೆ ಮೂಲ ಕಾರಣ ಎಂಬ ಜ್ಞಾನದ ಅರಿವನ್ನು ಗೌತಮ ಬುದ್ಧರು ಬೋಧಿ ವೃಕ್ಷದ ಕೆಳಗೆ ಜ್ಞಾನಕ್ಕೆ ಹಂಬಲಿಸಿ ತಪಸ್ಸು ಮಾಡಿ ಕಂಡುಕೊಳ್ಳುತ್ತಾರೆ ಎಂದು ಹೇಳಿದರು.

ಪರಿಸರ ರೂರಲ್ ಡೆವಲಪ್ಮೆಂಟ್ ಸೊಸೈಟಿ ಅಧ್ಯಕ್ಷ ಮಂಗಲ ಎಂ.ಯೋಗೀಶ್ ಮಾತನಾಡಿ 21ನೇ ಶತಮಾನದಲ್ಲಿ ಭಾವೈಕ್ಯತೆ ನಶಿಸುತ್ತಿರುವ ಸಂದರ್ಭದಲ್ಲಿ ಗೌತಮ ಬುದ್ಧ,ಡಾ.ಬಿ.ಆರ್. ಅಂಬೇಡ್ಕರ್, ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ವಿಚಾರ ದಾರೆಗಳನ್ನು ಕೊಂಡೊಯ್ಯುವ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.

ನೊಂದವರ, ಹಸಿದವರ, ಶ್ರಮಿಕರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಮಮತೆಯ ಮಡಿಲು ಶೀರ್ಷಿಕೆ ಅಡಿಯಲ್ಲಿ ಪ್ರತಿನಿತ್ಯ ದಾಸೋಹ ನೀಡುವ ನಿಟ್ಟಿನಲ್ಲಿ ಕಳೆದ 5 ವರ್ಷಗಳಿಂದ ನಿರಂತರವಾಗಿ ದಾಸೋಹ ನೆರವೇರಿಸಿಕೊಂಡು ಬರುತ್ತಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಗಾಯಕ ಸಂತೆ ಕಸಲಗೆರೆ ಬಸವರಾಜು ಮತ್ತು ತಂಡ ಬುದ್ಧ ಗೀತ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಪರಿಸರ ರೂರಲ್ ಡೆವಲಪ್ಮೆಂಟ್ ಸೊಸೈಟಿ ಕಾರ್ಯದರ್ಶಿ ಕೆ.ಪಿ.ಅರುಣ ಕುಮಾರಿ, ದ್ಯಾಪಸಂದ್ರ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಡಿ.ಎಲ್.ಶಂಕರಲಿಂಗೇಗೌಡ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!