Thursday, September 19, 2024

ಪ್ರಾಯೋಗಿಕ ಆವೃತ್ತಿ

ಉತ್ತರ ಪ್ರದೇಶ| ದಲಿತ ಸಮುದಾಯ ಆಯೋಜಿಸಿದ್ದ ‘ಬೌದ್ಧಕಥಾ’ ಕಾರ್ಯಕ್ರಮದ ಮೇಲೆ ದಾಳಿ

ಉತ್ತರ ಪ್ರದೇಶದ ಕಾನ್ಪುರದಲ್ಲಿ ದಲಿತ ಸಮುದಾಯ ಆಯೋಜಿಸಿದ್ದ ‘ಬೌದ್ಧ ಕಥಾ’ ಕಾರ್ಯಕ್ರಮದಲ್ಲಿ  ಸವರ್ಣೀಯ ಸಮುದಾಯಕ್ಕೆ ಸೇರಿದ  ಗುಂಪು ದಾಳಿ ನಡೆಸಿದ್ದು, ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶ ಪೊಲೀಸರು ಐವರನ್ನು ಬಂಧಿಸಿದ್ದಾರೆ.

ಮಂಗಳವಾರ ನಸುಕಿನ ಜಾವ 2 ಗಂಟೆಗೆ ಈ ಘಟನೆ ನಡೆದಿದೆ. ಈ ಬಗ್ಗೆ 16 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಕಾನ್ಪುರದ ಪಹೇವಾ ಗ್ರಾಮದಲ್ಲಿ ಡಿ.15 ರಿಂದ 9 ದಿನಗಳ ಬುದ್ಧ ಧಮ್ಮ ಮತ್ತು ಅಂಬೇಡ್ಕರ್ ಜ್ಞಾನ ಚರ್ಚೆ ಕಾರ್ಯಕ್ರಮ ನಡೆಯುತ್ತಿತ್ತು. ನಾಲ್ಕನೇ ದಿನದ ಕಾರ್ಯಕ್ರಮದ ವೇಳೆ ದುಷ್ಕರ್ಮಿಗಳು ದಾಳಿ ನಡೆಸಿದ್ದು, ಪಿಂಟು ಕುಶ್ವಾಹ ಸೇರಿ ಇಬ್ಬರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ದಾಳಿ ವೇಳೆ ದುಷ್ಕರ್ಮಿಗಳು ಟೆಂಟ್‌ನ ಪರದೆಗಳನ್ನು ಹರಿದು, ಕುರ್ಚಿಗಳನ್ನು ಒಡೆದು ಹಾಕಿದ್ದಾರೆ ಮತ್ತು ಅಂಬೇಡ್ಕರ್ ಮತ್ತು ಬುದ್ಧನ ಪೋಟೋಗಳನ್ನು ಹರಿದು ಹಾಕಿ  ಸಂತ ರವಿದಾಸರ ಪ್ರತಿಮೆಯನ್ನು ಒಡೆದು ಹಾನಿಗೊಳಿಸಿದ್ದಾರೆ. ಬಳಿಕ ದುಷ್ಕರ್ಮಿಗಳು ಗಾಳಿಯಲ್ಲಿ ಹಲವು ಸುತ್ತಿನ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಘಟನೆಯನ್ನು ಖಂಡಿಸಿದ ಭೀಮ್ ಆರ್ಮಿ ಕಾಥಾ ಸ್ಥಳದಲ್ಲಿ ಪ್ರತಿಭಟನೆ ಆರಂಭಿಸಿದೆ.

‘ಬೌದ್ಧ ಕಥಾ’ ಕಾರ್ಯಕ್ರಮದ ಆಯೋಜಕರಲ್ಲಿ ಒಬ್ಬರಾದ ಪವನ್ ಕುಮಾರ್ ಸಂಖ್ವಾರ್ ಅವರು ಈ ಬಗ್ಗೆ ಮಾತನಾಡುತ್ತಾ, ಕಾರ್ಯಕ್ರಮ ಸೋಮವಾರ ಪ್ರಾರಂಭವಾಯಿತು. ಇದೊಂದು ಯೋಜಿತ ದಾಳಿ. ಡೇರೆಗಳ ಕೆಳಗೆ ಮಲಗಿದ್ದವರನ್ನು ಥಳಿಸಲಾಗಿದೆ ಮತ್ತು ಸಂಪೂರ್ಣ ವೇದಿಕೆಯನ್ನು ಧ್ವಂಸಗೊಳಿಸಲಾಗಿದೆ. ಕಾರ್ಯಕ್ರಮದಲ್ಲಿದ್ದವರ ಮೇಲೆ ಫೈರಿಂಗ್ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಕಾರ್ಯಕ್ರಮ ಮುಂದುವರಿದರೆ ಎಲ್ಲರನ್ನೂ ಹತ್ಯೆ ಮಾಡುವ ಬೆದರಿಕೆಯನ್ನು ಅವರು ಹಾಕಿದ್ದಾರೆ. ಅವರು ಸಂತ ರವಿದಾಸ್‌ ಅವರ ಪ್ರತಿಮೆಯನ್ನು ಧ್ವಂಸ ಮಾಡಿದ್ದಾರೆ ಎಂದು ರಾಮ್‌ ಸಾಗರ್‌ ಪಾಸ್ವಾನ್‌ ಎಂಬುವರು ತಮ್ಮ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದ್ದಾರೆ.

ಕಾನ್ಪುರದ ಜಂಟಿ ಪೊಲೀಸ್‌ ಆಯುಕ್ತರಾದ ಆನಂದ್ ಪ್ರಕಾಶ್ ತಿವಾರಿ ಈ ಕುರಿತು ಪ್ರತಿಕ್ರಿಯಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿ ಐವರನ್ನು ಬಂಧಿಸಲಾಗಿದೆ. 8 ಮಂದಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳು ಸವರ್ಣೀಯ ಜಾತಿಗೆ ಸೇರಿದವರು. ಎಫ್‌ಐಆರ್‌ನಲ್ಲಿ ಹೆಸರಿಸಲಾದ ಎಲ್ಲಾ ಆರೋಪಿಗಳನ್ನು ಬಂಧಿಸಲು ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ  ಎಂದು ಹೇಳಿದ್ದಾರೆ.

ಎಫ್‌ಐಆರ್‌ನಲ್ಲಿ ಅಪ್ನಾ ದಳದ ಶಾಸಕ ಸರೋಜ್ ಕುರೀಲ್ ಅವರ ಸಾರ್ವಜನಿಕ ಸಂಪರ್ಕ ಅಧಿಕಾರಿ ಮನೀಶ್ ತಿವಾರಿಯ ಹೆಸರನ್ನು ಕೂಡ ಉಲ್ಲೇಖಿಸಲಾಗಿದೆ. ಆದರೆ ಈ ಬಗ್ಗೆ ಶಾಸಕರು ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.

ಸಹಾಯಕ ಆಯುಕ್ತರಾದ ದಿನೇಶ್‌ ಕುಮಾರ್‌ ಶುಕ್ಲ ಅವರು ಮಾತನಾಡಿದ್ದು, ಪೊಲೀಸರು ಆಗಮಿಸುವ ಮೊದಲೇ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಆರೋಪಿಗಳ ವಿರುದ್ಧ ಗಲಭೆ, ಕೊಲೆ ಯತ್ನ, ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣ ಮತ್ತು ಎಸ್ಸಿ ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!