Friday, September 20, 2024

ಪ್ರಾಯೋಗಿಕ ಆವೃತ್ತಿ

ಸಂಸತ್ ಮೇಲಿನ ದಾಳಿ ಪ್ರಕರಣ| ವಿಪಕ್ಷಗಳ ಜೊತೆ ನಂಟಿದೆ ಎಂದು ಒಪ್ಪಿಕೊಳ್ಳುವಂತೆ ಆರೋಪಿಗಳಿಗೆ ಪೊಲೀಸರ ಕಿರುಕುಳ !

ಸಂಸತ್‌ ಭವನದ ಮೇಲಿನ ದಾಳಿ  ಘಟನೆಗೆ ಸಂಬಂಧಿಸಿದಂತೆ ಬಂಧಿತರಾಗಿರುವ ಆರೋಪಿಗಳು ದೆಹಲಿ ಪೊಲೀಸರ ವಿಶೇಷ ಘಟಕದ ವಿರುದ್ದ ನ್ಯಾಯಾಲಯದಲ್ಲಿ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಪೊಲೀಸರು ನಮಗೆ ವಿದ್ಯುತ್‌ ಶಾಕ್ ಕೊಟ್ಟು ಹಿಂಸಿಸಿದಿದ್ದಾರೆ. ರಾಜಕೀಯ ಪಕ್ಷ (ವಿಪಕ್ಷ) ಗಳ ಜೊತೆ ನಂಟಿದೆ ಎಂದು ಒಪ್ಪಿಕೊಳ್ಳುವಂತೆ ಒತ್ತಡ ಹೇರಿದ್ದಾರೆ. ಅಲ್ಲದೆ, ಕಾನೂನು ಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ(ಯುಎಪಿಎ)ಯಡಿ  ತಪ್ಪು ಮಾಡಿರುವುದಾಗಿ ಒಪ್ಪಿಕೊಳ್ಳಲು ಒತ್ತಾಯಿಸಿದ್ದಾರೆ ಎಂದು ಹೇಳಿದ್ದಾರೆ.

ಆರೋಪಿಗಳಾದ ಮನೋರಂಜನ್ ಡಿ. ಸಾಗರ್‌ ಶರ್ಮ, ಲಲಿತ್‌ ಝಾ, ಅಮೋಲ್ ಶಿಂದೆ ಮತ್ತು ಮಹೇಶ್ ಕುಮಾವತ್ ಅವರು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಹರದೀಪ್ ಕೌರ್ ಅವರ ಎದುರು ಪೊಲೀಸರ ವಿರುದ್ದ ಆರೋಪಗಳನ್ನು ಹೊರಿಸಿದ್ದಾರೆ.

ಪೊಲೀಸರು ಸುಮಾರು 70ರಷ್ಟು ಖಾಲಿ ಹಾಳೆಗಳಿಗೆ ಸಹಿ ಹಾಕುವಂತೆ ಒತ್ತಾಯಿಸಿದ್ದಾರೆ. ಪಾಲಿಗ್ರಾಫ್, ನಾರ್ಕೊ ಅಥವಾ ಬ್ರೈನ್ ಮ್ಯಾಪಿಂಗ್ ಪರೀಕ್ಷೆಗಳ ಸಮಯದಲ್ಲಿ ನಮ್ಮಲ್ಲಿ ಇಬ್ಬರಿಗೆ ರಾಜಕೀಯ ಪಕ್ಷಗಳು ಅಥವಾ ನಾಯಕರ ಹೆಸರನ್ನು ಹೇಳುವಂತೆ ಒತ್ತಡ ಹೇರಿದ್ದಾರೆ. ಮೊಬೈಲ್ ನಂಬರ್, ಸಾಮಾಜಿಕ ಮಾಧ್ಯಮ ಮತ್ತು ಇಮೇಲ್ ಖಾತೆಗಳ ಪಾಸ್‌ವರ್ಡ್‌ ಹಾಗೂ ಮೊಬೈಲ್‌ ಫೋನ್‌ಗಳ ಬಯೋಮೆಟ್ರಿಕ್ ಡೇಟಾ ಮತ್ತು ಪಾಸ್‌ವರ್ಡ್‌ಗಳನ್ನು ಒದಗಿಸುವಂತೆ ಒತ್ತಾಯಿಸಿದ್ದಾರೆ ಎಂದು ಬಂಧಿತರು ಆರೋಪಿಸಿದ್ದಾರೆ.

ಡಿಸೆಂಬರ್ 2023ರಲ್ಲಿ ಸಂಸತ್‌ನ ಚಳಿಗಾಲದ ಅಧಿವೇಶನದ ವೇಳೆ ನಡೆದ ಭದ್ರತಾ ಲೋಪ ಘಟನೆಗೆ ಸಂಬಂಧಿಸಿದಂತೆ ಆರು ಆರೋಪಿಗಳಾದ ಸಾಗರ್ ಶರ್ಮಾ, ಮನೋರಂಜನ್ ಡಿ, ಅಮೋಲ್ ಶಿಂಧೆ, ನೀಲಂ ಆಝಾದ್, ಲಲಿತ್ ಝಾ ಮತ್ತು ಮಹೇಶ್ ಕುಮಾವತ್ ಅವರನ್ನು ಬಂಧಿಸಲಾಗಿದೆ.

ಈ ಪೈಕಿ ಸಾಗರ್ ಶರ್ಮಾ ಮತ್ತು ಮನೋರಂಜನ್ ಡಿ ಲೋಕಸಭೆಯ ಸಾರ್ವಜನಿಕ ಗ್ಯಾಲರಿಯಿಂದ ಸಂಸದರು ಕುಳಿತುಕೊಳ್ಳುವ ಪ್ರದೇಶಕ್ಕೆ ಜಿಗಿದಿದ್ದರು. ನೀಲಮ್ ಆಝಾದ್ ಮತ್ತು ಅಮೋಲ್ ಶಿಂಧೆ ಸಂಸತ್‌ ಭವನದ ಹೊರಗಡೆ ಬಣ್ಣದ ಅನಿಲ ಕ್ಯಾನಿಸ್ಟರ್‌ಗಳನ್ನು ಎರಚಿ ಘೋಷಣೆಗಳನ್ನು ಕೂಗಿದ್ದರು.

ಬುಧವಾರ ದೆಹಲಿಯ ಪಟಿಯಾಲಾ ಹೌಸ್ ಕೋರ್ಟ್‌ನಲ್ಲಿ ನಡೆದ ವಿಚಾರಣೆಯ ವೇಳೆ, ನೀಲಂ ಆಝಾದ್ ಹೊರತುಪಡಿಸಿ ಉಳಿದ ಎಲ್ಲಾ ಆರೋಪಿಗಳು ಪೊಲೀಸರ ವಿರುದ್ದ ಕಿರುಕುಳ ಮತ್ತು ಒತ್ತಡದ ಆರೋಪ ಹೊರಿಸಿದ್ದಾರೆ. ನ್ಯಾಯಾಲಯವು ದೆಹಲಿ ಪೊಲೀಸ್ ವಿಶೇಷ ಘಟಕದಿಂದ ಈ ಕುರಿತು ಪ್ರತಿಕ್ರಿಯೆ ಕೇಳಿದೆ. ಫೆಬ್ರವರಿ 17 ಕ್ಕೆ ಮುಂದಿನ ವಿಚಾರಣೆಯನ್ನು ನಿಗದಿಪಡಿಸಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!