Friday, September 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಕುರುಬರ ಹಾಸ್ಟೆಲ್ ಮೇಲೆ ದಾಳಿ: ಕಿಡಿಗೇಡಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

ಮಂಡ್ಯ ತಾಲ್ಲೂಕಿನ ಕೆರಗೋಡು ಗ್ರಾಮದಲ್ಲಿ ಧ್ವಜ ಸ್ತಂಭದಲ್ಲಿದ್ದ ಹನುಮಧ್ವಜ ತೆರವು ವಿರೋಧಿಸಿ ನಡೆದ ಪಾದಯಾತ್ರೆ ವೇಳೆ ಕುರುಬರ ಸಂಘದ ಆವರಣದಲ್ಲಿರುವ ವಿದ್ಯಾರ್ಥಿ ನಿಲಯದ ಮೇಲೆ ಕಲ್ಲು ತೂರಾಟ ನಡೆಸಿ ಭಕ್ತ ಕನಕದಾಸ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಫ್ಲೆಕ್ಸ್ ಹರಿದು ಅವಮಾನ ಮಾಡಿರುವ ಕಿಡಿಗೇಡಿಗಳನ್ನು ಬಂಧಿಸುವಂತೆ ಆಗ್ರಹಿಸಿ ಜಿಲ್ಲಾ ಕುರುಬರ ಸಂಘ ಮಂಡ್ಯದಲ್ಲಿ ಪ್ರತಿಭಟನೆ ನಡೆಸಿತು.

ಮಂಡ್ಯ ನಗರದ ಕುರುಬರ ಸಂಘದ ಆವರಣದಿಂದ ಮೆರವಣಿಗೆ ಹೊರಟ ಸಂಘದ ಸದಸ್ಯರು ಕಿಡಿಗೇಡಿಗಳಿಗೆ ಕುಮ್ಮಕ್ಕು ನೀಡಿದ ಬಿಜೆಪಿ ಮತ್ತು ಜೆಡಿಎಸ್ ಮುಖಂಡರ ವಿರುದ್ಧ ಧಿಕ್ಕಾರದ ಘೋಷಣೆ ಕೂಗುತ್ತಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ತೆರಳಿ ದೂರು ಸಲ್ಲಿಸಿದರು.

ಇಂದು ಬೆಳಿಗ್ಗೆ ಕುರುಬರ ಸಂಘದ ಆವರಣದಲ್ಲಿ ಸೇರಿದ ಮುಖಂಡರು ಜಿಲ್ಲಾ ಕುರುಬರ ಸಂಘದ ವಿದ್ಯಾರ್ಥಿ ನಿಲಯದ ಕಿಟಕಿ ಗಾಜುಗಳನ್ನು ಕಲ್ಲು ಮತ್ತು ದೊಣ್ಣೆಯಿಂದ ಹೊಡೆದು ಕಿಡಿಗೇಡಿಗಳು ದೌರ್ಜನ್ಯ ಮಾಡಿದ್ದಾರೆ.ಅಲ್ಲದೆ ದಾಸ ಶ್ರೇಷ್ಠ ಭಕ್ತ ಕನಕದಾಸರು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯರ ಫ್ಲೆಕ್ಸ್ ಗಳಿಗೂ ಸಹ ಅವಮಾನ ಮಾಡುವ ಮೂಲಕ ಹಿಂದುಳಿದ ಸಮುದಾಯದ ವಿರುದ್ಧ ದ್ವೇಷ ಸಾಧಿಸಿದ್ದಾರೆ.ಈ ದೌರ್ಜನ್ಯ, ದಬ್ಬಾಳಿಕೆ ಮಾಡಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಬೇಕು,ಕುಮ್ಮಕ್ಕು ನೀಡಿದವರ ವಿರುದ್ಧ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ಮುಖಂಡ ದಡದಪುರ ಶಿವಣ್ಣ ಮಾತನಾಡಿ, ಜಿಲ್ಲೆಯಲ್ಲಿ ಜನರ ನೆಮ್ಮದಿ ಹಾಳು ಮಾಡಲು ಮುಂದಾಗಿರುವ ಬಿಜೆಪಿ-ಜೆಡಿಎಸ್ ಶಾಂತಿ ಕದಡಿ ಕೋಮು ಗಲಭೆ ನಡೆಸಲು ಹುನ್ನಾರ ಮಾಡಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯರ ಜನಪರ ಯೋಜನೆಗಳನ್ನು ಸಹಿಸದೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಷಡ್ಯಂತ್ರ ಮಾಡುತ್ತಿವೆ ಎಂದು ಆರೋಪಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಗುರಿ ಯಾಗಿಸಿ ದಾಂಧಲೆ ಮಾಡಿದ್ದಾರೆ, ಕಿಡಿಗೇಡಿಗಳ ವಿರುದ್ಧ ಪೊಲೀಸರು ಕಠಿಣ ಕ್ರಮ ವಹಿಸಬೇಕು, ಜಿಲ್ಲೆಯ ಜನತೆ ಕೋಮು ದ್ವೇಷಕ್ಕೆ ಅವಕಾಶ ಮಾಡಿಕೊಡಬಾರದು, ಕೋಮುವಾದಿಗಳು ಸೃಷ್ಟಿಸುವ ಕೋಮು ದಳ್ಳುರಿಯಿಂದ ಜನರ ಬದುಕು ನಾಶವಾಗಲಿದೆ, ಈಗಾಗಲೇ ರಾಜ್ಯದ ಕರಾವಳಿ ಪ್ರದೇಶದಲ್ಲಿ ಕೋಮು ದಳ್ಳುರಿಗೆ ಜನರ ಬದುಕು ಸರ್ವನಾಶವಾಗಿ ಅಭಿವೃದ್ಧಿ ಸಂಪೂರ್ಣವಾಗಿ ಕುಂಠಿತವಾಗಿರುವುದನ್ನು ನೋಡಿದ್ದೇವೆ, ಜಿಲ್ಲೆಯ ಜನತೆ ಇದಕ್ಕೆ ಅವಕಾಶ ಮಾಡಿಕೊಡದೆ ನೆಮ್ಮದಿಯಿಂದ ಬಾಳ್ವೆ ನಡೆಸಲು ಮುಂದಾಗಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕುರುಬರ ಸಂಘದ ಜಿಲ್ಲಾಧ್ಯಕ್ಷ ಎಂ.ಎಲ್ ಸುರೇಶ್, ಪ್ರಧಾನ ಕಾರ್ಯದರ್ಶಿ ಎಂ.ಜೆ ಶಶಿಧರ, ಉಪಾಧ್ಯಕ್ಷ ಶ್ರೀನಿವಾಸ್, ಖಜಾಂಚಿ ಎಸ್.ಎನ್ ರಾಜು, ಕೆ.ಎಚ್ ನಾಗರಾಜು, ಗಾರೆ ಶಿವರಾಮು, ಎಂ.ಮರಿ ಹೆಗಡೆ,ನರಸಪ್ಪ ಹೆಗಡೆ, ಸಾತನೂರು ಮಹೇಶ್, ನಗರಸಭೆ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮಿ ರಘುನಂದನ್, ಮಾಜಿ ಸದಸ್ಯ ಎಂ,ಮಹೇಶ್, ಸತೀಶ, ಪುಟ್ಟಸ್ವಾಮಿ, ಅಮ್ಜದ್ ಪಾಷಾ, ಎಲ್ ಸಂದೇಶ್, ಕೊತ್ತತ್ತಿ ಸಿದ್ದಪ್ಪ ನೇತೃತ್ವ ವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!