ದೆಹಲಿ ಗದ್ದುಗೆಯೇರಲು ಉತ್ತರ ಪ್ರದೇಶ ರಹದಾರಿ ಅನ್ನೋ ಮಾತಿದೆ. ಅದರಂತೆ ಉತ್ತರ ಪ್ರದೇಶದ 80 ಲೋಕಸಭಾ ಕ್ಷೇತ್ರದಲ್ಲಿ ಯಾರು ಹೆಚ್ಚು ಸ್ಥಾನ ಗಳಿಸುವರೋ ಅವರು ದೆಹಲಿ ಗದ್ದುಗೆ ಏರುತ್ತಾರೆ. ಅದರಂತೆ ಈ ಬಾರಿ ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ನಿರ್ಮಾಣ, ಬಾಲರಾಮನ ಪ್ರತಿಷ್ಟಾಪನೆ ಕಾರಣಕ್ಕಾಗಿ ಶ್ರೀರಾಮನ ಆಶೀರ್ವಾದದಿಂದ ಬಿಜೆಪಿ ಉತ್ತರ ಪ್ರದೇಶದಲ್ಲಿ ಕಳೆದ ಎರಡು ಬಾರಿಗಿಂತ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವ ವಿಶ್ವಾಸ ಹೊಂದಿತ್ತು. ಆದರೆ ಫಲಿತಾಂಶದಲ್ಲಿ ಬಿಜೆಪಿಗೆ ಭಾರೀ ಹಿನ್ನಡೆಯಾಗಿದೆ.
ಕಳೆದ ಬಾರಿ 62 ಸ್ಥಾನ ಗಳಿಸಿದ್ದ ಬಿಜೆಪಿ ಈ ಬಾರಿ ಕೇವಲ 33 ಸ್ಥಾನಗಳಲ್ಲಿ ಮಾತ್ರ ಗೆದ್ದಿದೆ. ಕಾಂಗ್ರೆಸ್ ಮತ್ತು ಸಮಾಜವಾದಿ ಮೈತ್ರಿಗೆ ಉತ್ತರ ಪ್ರದೇಶದ ಮತದಾರರು ಮಣೆ ಹಾಕಿದ್ದು, ಸಮಾಜವಾದಿ ಪಕ್ಷಕ್ಕೆ 37 ಹಾಗೂ ಕಾಂಗ್ರೆಸ್ ಪಕ್ಷಕ್ಕೆ 6 ಸ್ಥಾನ ನೀಡುವ ಮೂಲಕ ಕೋಮುವಾದಿ ರಾಜಾಕಾರಣ ಬೆಂಬಲಿಸುವುದಿಲ್ಲ ಎಂಬ ಸಂದೇಶ ನೀಡಿದ್ದಾರೆ.
ಅಯೋಧ್ಯೆಯಲ್ಲಿ ಮುಖಭಂಗ
ಫೈಜಾಬಾದ್ ಲೋಕಸಭಾ ಕ್ಷೇತ್ರದ ಹೆಸರನ್ನು 2018ರಲ್ಲಿ ಅಯೋಧ್ಯೆ ಎಂದು ಬಿಜೆಪಿ ಬದಲಿಸಿತ್ತು. 2024ರ ಜನವರಿ 22ರಂದು ಇನ್ನೂ ಪೂರ್ಣಗೊಳ್ಳದ ರಾಮ ಮಂದಿರವನ್ನು ಪ್ರಧಾನಿ ಮೋದಿ ಉದ್ಘಾಟನೆ ಮಾಡಿದ್ದರು. ಅಲ್ಲದೆ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷ ಗೆದ್ದರೆ ಅಯೋಧ್ಯೆ ರಾಮಮಂದಿರದ ಮೇಲೆ ಬುಲ್ಡೋಜರ್ ಹತ್ತಿಸುತ್ತಾರೆ ಎಂಬ ಭಯ ಹುಟ್ಟಿಸಿದ್ದರು ಪ್ರಧಾನಿ ಮೋದಿ.
ಈ ಎಲ್ಲ ಸರಣಿ ವಿದ್ಯಮಾನಗಳು ಅಯೋಧ್ಯೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಹ್ಯಾಟ್ರಿಕ್ ಗೆಲುವು ತಂದು ಕೊಡಲಿದೆ ಎಂದೇ ಲೆಕ್ಕ ಹಾಕಲಾಗಿತ್ತು. ಆದರೆ ಅಯೋಧ್ಯೆಯ ಶ್ರೀರಾಮ ಕೋಮುವಾದಿ ರಾಜಕಾರಣಕ್ಕಿಂತ ಮಾನವತಾವಾದಿ ರಾಜಕಾರಣ ಮುಖ್ಯ ಎಂಬ ಸಂದೇಶವನ್ನು ಅಯೋಧ್ಯೆ ಮತದಾರರ ಮೂಲಕ ಬಿಜೆಪಿ ಹಾಗೂ ಮೋದಿಯವರಿಗೆ ಮನವರಿಕೆ ಮಾಡಿ ಕೊಟ್ಟಿದ್ದಾನೆ ಎಂಬ ಮಾತು ಉತ್ತರ ಪ್ರದೇಶದಲ್ಲಿ ಕೇಳಿ ಬರುತ್ತಿದೆ.
ಹಾಲಿ ಸಂಸದರಾಗಿದ್ದ ಬಿಜೆಪಿಯ ಲಲ್ಲು ಸಿಂಗ್ 2014 ಹಾಗೂ 2019 ರಲ್ಲಿ ಈ ಕ್ಷೇತ್ರದಿಂದ ಭರ್ಜರಿ ಗೆಲುವು ಸಾಧಿಸಿದ್ದರು. ಅಯೋಧ್ಯೆ ರಾಮಮಂದಿರ ಹಾಗೂ ಶ್ರೀರಾಮನನ್ನು ಚುನಾವಣಾ ದಾಳವಾಗಿ ಬಳಸಿಕೊಂಡ ಮೋದಿಯ ಅನೈತಿಕ ರಾಜಕೀಯಕ್ಕೆ ರಾಮ ಮಂದಿರದ ಬುಡದಲ್ಲೇ ಸರಿಯಾದ ಉತ್ತರ ಲಭಿಸಿದೆ. ಹ್ಯಾಟ್ರಿಕ್ ಕನಸು ಕಾಣುತ್ತಿದ್ದ ಅಯೋಧ್ಯೆಯ ಬಿಜೆಪಿ ಅಭ್ಯರ್ಥಿ ಲಲ್ಲು ಸಿಂಗ್ ಸಮಾಜವಾದಿ ಪಕ್ಷದ ಅಭ್ಯರ್ಥಿ ಅವಧೇಶ್ ಪ್ರಸಾದ್ ಎದುರು 54,352 ಮತಗಳ ದೊಡ್ಡ ಅಂತರದ ಸೋಲು ಕಂಡಿದ್ದಾರೆ.
ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಸಮಾಜವಾದಿ ಪಕ್ಷದ ಅಭ್ಯರ್ಥಿ ಅವಧೇಶ್ ಪ್ರಸಾದ್ 5,52,177 ಮತ ಪಡೆದಿದ್ದರೆ, ಬಿಜೆಪಿಯ ಲಲ್ಲು ಸಿಂಗ್ 4,97,825 ಮತ ಪಡೆದರು. ಬಿಎಸ್ಪಿ ಅಭ್ಯರ್ಥಿ ಸಚ್ಚಿದಾನಂದ ಪಾಂಡೆ 45,993 ಮತ ಪಡೆದಿದಾರೆ. ಸಿ.ಪಿ.ಐ ಅಭ್ಯರ್ಥಿ ಅರವಿಂದ್ 15,347 ಮತ ಪಡೆದಿದ್ದಾರೆ. ಇನ್ನೂ
ಒಟ್ಟಾರೆಯಾಗಿ ಈ ಕ್ಷೇತ್ರದ ಚುನಾವಣೆಯ ಮತ ಹಂಚಿಕೆಯನ್ನು ಗಮನಿಸಿದಾಗ ಬಿಜೆಪಿಗೆ ನೇರ ಎದುರಾಳಿಯಾಗಿದ್ದ ಸಮಾಜವಾದಿ ಪಕ್ಷವನ್ನು ಹೊರತುಪಡಿಸಿಯೂ ಸುಮಾರು 85 ಸಾವಿರದಷ್ಟು ಮತಗಳು ಬಿಜೆಪಿಗೆ ವಿರುದ್ಧವಾಗಿ ಚಲಾವಣೆಯಾಗಿದೆ. ಬಹುಶಃ ಬಿಜೆಪಿ ಮತ್ತು ಮೋದಿಯ ಹುಸಿ ಭಕ್ತಿಯು ರಾಮನಿಗೆ ಅರ್ಥವಾಗಿರಬೇಕು. ಅದೇ ಕಾರಣಕ್ಕೆ ಎಲ್ಲ ಕೋನಗಳಿಂದ ಬಾಣ ಬಿಟ್ಟು ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಸರಿಯಾದ ಪಾಠ ಕಲಿಸಿದ್ದಾನೆಂದೇ ಜನರ ಹೇಳುತ್ತಿದ್ದಾರೆ.




