Thursday, September 19, 2024

ಪ್ರಾಯೋಗಿಕ ಆವೃತ್ತಿ

ಬಿ.ಎಲ್.ಸಂತೋಷ್ ಕಲಿಯುಗದ ಭ‍ಸ್ಮಾಸುರ : ಮಹಾಲಿಂಗೇಗೌಡ

ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ಬಿ.ಎಲ್.ಸಂತೋಷ್‌, ಪ್ರಜಾಸತಾತ್ಮಕವಾಗಿ ಜನರಿಂದ ಆಯ್ಕೆಯಾದ ಸರ್ಕಾರಗಳನ್ನು ‘ಆಪರೇಷನ್ ಕಮಲ’ದ ಮೂಲಕ ಸಂವಿಧಾನ ಬಾಹಿರವಾಗಿ ಕೆಡವಿ ಹಾಕಿ, ನುಂಗಿ ನೀರು ಕುಡಿಯುವ ಕಲಿಯುಗದ ಭ‍ಸ್ಮಾಸುರ ಎಂದು ಜೆಡಿಎಸ್ ಜಿಲ್ಲಾ ವಕ್ತಾರ ಮಹಾಲಿಂಗೇಗೌಡ ಮುದ್ಧನಘಟ್ಟ ಕಿಡಿಕಾರಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿ.ಎಲ್.ಸಂತೋಷ್ ಕುತಂತ್ರದಿಂದ ಕರ್ನಾಟಕದಲ್ಲಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರ ಉರುಳಿತು, ಬಿ.ಎಲ್‌ ಸಂತೋಷ್‌ ಕೇವಲ ಗರ್ಭಗುಡಿ ರಾಜಕಾರಣ ಮಾಡುವುದಕ್ಕೆ ಮಾತ್ರ ಲಾಯಕ್ಕಾಗಿದ್ದಾರೆ. ಅವರು ರಾಜಕಾರಣ ಮಾಡುವುದಾದರೆ  ಜನಸಾಮಾನ್ಯರ ಮಧ್ಯೆ ಬಂದು ರಾಜಕಾರಣ ಮಾಡಲಿ ಎಂದು ತಿರುಗೇಟು ನೀಡಿದರು.

ತೆಲಂಗಾಣದಲ್ಲಿ ಆಪರೇಷನ್ ಕಮಲ ಮಾಡಲು ಹೋಗಿ ಸಿಕ್ಕಿ ಬಿದ್ದಿರುವ ಬಿ.ಎಲ್.ಸಂತೋಷ್ ಅವರ ಪ್ರಕರಣದ ತನಿಖೆಯನ್ನು ಹೈಕೋರ್ಟ್ ಈಗ ಸಿಬಿಐ ವಹಿಸಿದೆ, ಇದರಿಂದ ನ್ಯಾಯ ಸಿಗುವುದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ನೀವೇ ಹೇಳಬೇಕು. ಈಗಾಗಲೇ ಕೇಂದ್ರ ಸರ್ಕಾರವು ತನ್ನ ಅಧೀನದಲ್ಲಿನ ತನಿಖಾ ಸಂಸ್ಥೆಗಳನ್ನು ಹೇಗೆ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಆದ್ದರಿಂದ ಈ ವಿಚಾರಲ್ಲಿ ಏನಾಗುತ್ತದೆ ಎಂಬುದನ್ನು ನೀವೇ ತಿಳಿದುಕೊಳ್ಳಿ ಎಂದು ಸೂಚ್ಯವಾಗಿ ಹೇಳಿದರು.

ಅಶೋಕ್ ಜಯರಾಂ ಹೇಳಿಕೆಗೆ ಖಂಡನೆ 

ಜಿಲ್ಲೆಯ ಧೀಮಂತ ರಾಜಕಾರಣಿಗಳಲ್ಲೊಬ್ಬರಾದ ಎಸ್.ಡಿ.ಜಯರಾಂ ಅವರ ಪುತ್ರ ಅಶೋಕ್ ಜಯರಾಂ ಅವರು ಬಿಜೆಪಿ ನಾಯಕ ಬಿ.ಎಲ್.ಸಂತೋಷ್ ಅವರನ್ನು ಮೆಚ್ಚಿಸಲು ರೈತರ ಕಣ್ಮಣಿ ಕುಮಾರಸ್ವಾಮಿ ಅವರನ್ನು ಟೀಕಿಸುವ ಕೆಲಸ ಮಾಡಿದ್ದಾರೆ. ಹೆಚ್.ಡಿ. ದೇವೇಗೌಡರು, ಕೆ.ವಿ. ಶಂಕರೇಗೌಡರು. ಜಿ. ಮಾದೇಗೌಡರು ಜನರ ನಡುವೆ ಇದ್ದು ಜನ ರಾಜಕಾರಣ ಸೇವೆ ಮಾಡಿದ್ದಾರೆಯೇ ಹೊರತು ಬಿ.ಎಲ್.ಸಂತೋಷ್ ರೀತಿಯಲ್ಲಿ ಗರ್ಭಗುಡಿ ರಾಜಕಾರಣ ಮಾಡಿಕೊಂಡು ಬಂದಿಲ್ಲ ಎಂದು ತಿರುಗೇಟು ನೀಡಿದರು.

ಪಂಚರತ್ನಯಾತ್ರೆ ಅಭೂತ ಪೂರ್ವ ಬೆಂಬಲ 

ಮಂಡ್ಯ ಜಿಲ್ಲೆಯಲ್ಲಿ ಪಂಚರತ್ನ ರಥ ಯಾತ್ರೆಗೆ ಅಭೂತಪೂರ್ವ ಯಶಸ್ಸು ಸಿಕ್ಕಿದೆ. ಇದಕ್ಕೆ ಕಾರಣರಾದ ಜೆಡಿಎಸ್ ಪಕ್ಷದ ಎಲ್ಲಾ ಕಾರ್ಯಕರ್ತರಿಗೆ, ಸ್ಥಳೀಯ ಸಂಸ್ಥೆಗಳ ಜನ ಪ್ರತಿನಿಧಿಗಳಿಗೆ, ಮುಖಂಡರಿಗೆ ಧನ್ಯವಾದ ಅರ್ಪಿಸುತ್ತೇನೆ. ಜಿಲ್ಲೆಯಲ್ಲಿ ಯಾತ್ರೆಗೆ ಪಕ್ಷಾತೀತವಾಗಿ ಜನರು ಸುನಾಮಿ ಅಲೆಯ ರೀತಿಯಲ್ಲಿ ಆಗಮಿಸಿ ಅಭೂತಪೂರ್ವ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಇದನ್ನು ಸಹಿಸದ ಬಿಜೆಪಿ ಕಾಂಗ್ರೆಸ್ ನಾಯಕರು ಹತಾಶರಾಗಿ ಜೆಡಿಎಸ್ ಪಕ್ಷವನ್ನು ಟೀಕಿಸುತ್ತಿದ್ದಾರೆ ಎಂದರು.

ಪಕ್ಷ ಬಿಟ್ಟ ಮೇಲೆ ಶಿವರಾಮೇಗೌಡ ಟೀಕೆ 

ಮಾಜಿ ಸಂಸದರಾದ ಎಲ್.ಆರ್.ಶಿವರಾಮೇಗೌಡ ಅವರು ನಾಗಮಂಗಲಕ್ಕೆ ಹೆಚ್.ಡಿ.ಕುಮಾರಸ್ವಾಮಿ ಅವರ ಕೊಡುಗೆ ಏನು ಎಂದು ಹೇಳಿದ್ಧಾರೆ. ಅವರು ನಮ್ಮ ಪಕ್ಷದಲ್ಲಿದ್ದಾಗ ಕುಮಾರಸ್ವಾಮಿ ಕೊಡುಗೆ ಏನೆಂದು ಗೊತ್ತಿರಲಿಲ್ಲವೇ ? ಎಲ್.ಆರ್.ಶಿವರಾಮೇಗೌಡರೇ, ಈ ಹಿಂದೆ ಕುಮಾರಸ್ವಾಮಿ ಅವರ ಸರ್ಕಾರದಲ್ಲಿ ನಾಗಮಂಗಲ ವಿಧಾನಸಭಾ ಕ್ಷೇತ್ರಕ್ಕೆ ಏನು ಅಭಿವೃದ್ಧಿ ಕೆಲಸಗಳು ಆಗಿದ್ದಾವೆ ಎಂಬುದನ್ನು, ಅಂದಿನ ಮಂತ್ರಿಗಳಾಗಿದ್ದ ಎನ್.ಚಲುವರಾಯಸ್ವಾಮಿ ಅವರನ್ನು ಕೇಳಿ ತಿಳಿದುಕೊಳ್ಳಿ, ಇದಕ್ಕೆ ಅವರೇ ಉತ್ತರವನ್ನು ನೀಡುತ್ತಾರೆ ತಿರುಗೇಟು ನೀಡಿದರು.

ಅಧಿವೇಶನಕ್ಕಿಂತ ಯಾತ್ರೆಯೇ ಅತಿಮುಖ್ಯ

ಜಿಲ್ಲೆಯ ಶಾಸಕರಿಗೆ ಅಧಿವೇಶನಕ್ಕಿಂತ ಯಾತ್ರೆಯೇ ಅತಿಮುಖ್ಯವಾಗಿದೆ. ಪ್ರಸ್ತುತ ಸನ್ನಿವೇಶದಲ್ಲಿ ಸದನದಲ್ಲಿ ಚರ್ಚೆಗೆ ಕಾಂಗ್ರೆಸ್-ಬಿಜೆಪಿ ಎರಡೂ ಪಕ್ಷಗಳ ಕಿತ್ತಾಟದಿಂದ ಜೆಡಿಎಸ್‌ ಶಾಸಕರಿಗೆ ಅವಕಾಶವೇ ಸಿಗುತ್ತಿಲ್ಲ. ಒಂದೆಡೆ ಕಾಂಗ್ರೆಸ್‌ ನಾಯಕರು ಫೋಟೋ ವಿಚಾರವಾಗಿ ಅಧಿವೇಶವನ್ನು ಹಾಳುಗೆಡವಿದರು, ಇತ್ತ ಬಿಜೆಪಿ ಸಚಿವರು ಗಂಡಸ್ತನದ ಸವಾಲು ಹಾಕಿ ಗಲಾಟೆಗೆ ಕರೆಯುತ್ತಾರೆ, ಇಂತಹ ಪರಿಸ್ಥಿತಿಯಲ್ಲಿ ಚರ್ಚೆಗೆ ಅವಕಾಶ ಸಿಗುತ್ತದೆ’ ಎಂದು ನೀವು ಹೇಗೆ ಹೇಳುತ್ತಿರಿ ಎಂದು ಕಾಂಗ್ರೆಸ್ ನಾಯಕ ಚಲುವರಾಯಸ್ವಾಮಿ ಅವರ ಟೀಕೆಗೆ ಪ್ರತಿಕ್ರಿಯಿಸಿದರು.

ಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ವೆಂಕಟೇಶ್, ಮೋಹನ್, ಶಶಿಕುಮಾರ್, ಗೌತಮ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!