Thursday, September 19, 2024

ಪ್ರಾಯೋಗಿಕ ಆವೃತ್ತಿ

ವಿಜಯೇಂದ್ರ ನಿರ್ದೇಶಕರಾಗಿರುವ ಟ್ರಸ್ಟ್ ಗೆ 5.34 ಎಕರೆ ಭೂ ಸ್ವಾಧೀನ : ಆಯನೂರು ಆರೋಪ

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ವಿರುದ್ಧ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಭೂಮಿ ಸ್ವಾಧೀನದ ಆರೋಪವನ್ನು ಮಾಡಿದ್ದಾರೆ. ಮಂಗಳವಾರ ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿ ನಡೆಸಿ ದಾಖಲೆಗಳನ್ನು ಕೂಡಾ ಬಿಡುಗಡೆ ಮಾಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಆಯನೂರು ಮಂಜುನಾಥ್ ಅವರು, “ವಿಜಯೇಂದ್ರ ನಿರ್ದೇಶಕರಾಗಿರುವ ಟ್ರಸ್ಟ್‌ನ ಆಸ್ಪತ್ರೆಗಾಗಿ ಸಂಸದ ಬಿ.ವೈ. ರಾಘವೇಂದ್ರ ಅವರ ಪತ್ನಿಯ ಸಹೋದರನ ಹೆಸರಿನ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ” ಎಂದು ವಿಜಯೇಂದ್ರ ವಿರುದ್ಧ ಆರೋಪಿಸಿದ್ದಾರೆ.

“ಶಿವಮೊಗ್ಗ ತಾಲೂಕಿನ ಸಾಗರದ ಹರಿಗೆ ಗ್ರಾಮದ ಬಳಿ ಇರುವ ಕೈಗಾರಿಕಾ ಪ್ರದೇಶದಿಂದ ಸುಮಾರು ಮೂರು ಕಿ. ಮೀ. ದೂರದಲ್ಲಿ ವಿಜಯೇಂದ್ರ ಅವರು ನಿರ್ದೇಶಕರಾಗಿರುವ ಟ್ರಸ್ಟ್‌ನ ಆಸ್ಪತ್ರೆ ನಿರ್ಮಾಣಕ್ಕಾಗಿ 5.34 ಎಕರೆ ಭೂಮಿಯನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ವಿಜಯೇಂದ್ರ ಅವರಿಗೆ ಸ್ವಾಧೀನಪಡಿಸಿಕೊಟ್ಟಿದೆ” ಎಂದು ಆಯನೂರು ದೂರಿದ್ದಾರೆ.

“ಈ ಭೂಮಿ ಬಿ.ವೈ. ರಾಘವೇಂದ್ರ ಅವರ ಪತ್ನಿಯ ಸಹೋದರ ಸಂಗಮೇಶ ಪರಪ್ಪ ಗದಗ ಅವರ ಹೆಸರಿನಲ್ಲಿತ್ತು. ಆದರೆ ಅದನ್ನು ಈಗ ಬಿ.ವೈ. ವಿಜಯೇಂದ್ರ ಅವರ ಹೆಸರಿಗೆ ಮಾಡಲಾಗಿದೆ” ಎಂದು ಆರೋಪಿಸಿದ್ದಾರೆ.

ಮುಡಾ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿಗೆ ಅವರ ಸಹೋದರ ಜಮೀನು ನೀಡಿರುವುದು ಹಗರಣ ಎಂದಾದರೆ ಹರಿಗೆಯಲ್ಲಿ ಕೆಐಎಡಿಬಿಯಿಂದ ಭೂಮಿ ಸ್ವಾಧೀನವೂ ಹಗರಣ ಆಗುವುದಿಲ್ಲವೇ ಎಂದು ಪ್ರಶ್ನಿಸಿದರು.

ಕೆಐಎಡಿಬಿ ಸ್ವಾಧೀನಪಡಿಸಿಕೊಂಡ ಭೂಮಿಯ ಪಕ್ಕದಲ್ಲೇ ಯಡಿಯೂರಪ್ಪ ಕುಟುಂಬ ಭೂಮಿಯನ್ನು ಖರೀದಿಸಿದೆ. ಅದೇ ರೀತಿ ಸಂಗಮೇಶ ಪರಪ್ಪ ಅವರ ಭೂಮಿಯನ್ನು ಖರೀದಿಸಬಹುದಿತ್ತು. ಆದರೆ ತಮ್ಮ ಕುಟುಂಬದವರ ಭೂಮಿಯನ್ನು ಕೆಐಎಡಿಬಿ ಮೂಲಕ ತಾವೇ ಸ್ವಾಧೀನಪಡಿಸಿಕೊಂಡಿರುವುದು ದೇಶದಲ್ಲಿ ಇದೇ ಮೊದಲು” ಎಂದು ಆಯನೂರು ಲೇವಡಿ ಮಾಡಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!