Thursday, September 19, 2024

ಪ್ರಾಯೋಗಿಕ ಆವೃತ್ತಿ

ಹಿಂದೂ- ಮುಸ್ಲಿಂ ಭಾವೈಕ್ಯತೆ ಸಾರುವ ಬಾಬಯ್ಯನ ಹಬ್ಬ

ಪ್ರಸ್ತುತ ಸಂದರ್ಭದಲ್ಲಿ ಭಾರತದಲ್ಲಿ ಹಿಂದೂ- ಮುಸ್ಲಿಂ ಸಮುದಾಯದ ನಡುವೆ ದ್ವೇಷ ಹುಟ್ಟು ಹಾಕಿ, ಎರಡೂ ಸಮುದಾಯಗಳ ಮಧ್ಯೆ ಬಹು ದೊಡ್ಡ ಕಂದಕ ನಿರ್ಮಾಣ ಮಾಡಲು ಕೋಮುವಾದಿ ಶಕ್ತಿಗಳು ಪ್ರಯತ್ನ ನಡೆಸಿವೆ.

ಕರ್ನಾಟಕದಲ್ಲೂ ಕೂಡ ಸೌಹಾರ್ದತೆಯಿಂದ ಬದುಕುತ್ತಿರುವ ಹಿಂದೂ ಮತ್ತು ಮುಸಲ್ಮಾನರ ನಡುವೆ ಬೆಂಕಿ ಹಚ್ಚುವಲ್ಲಿ ಕೋಮುವಾದಿ ಶಕ್ತಿಗಳು ಮಸಲತ್ತು ನಡೆಸಿ ಹೆಣಗಳ ಮೇಲೆ ರಾಜಕೀಯ ಅಧಿಕಾರ ಹಿಡಿಯಲು ಸಜ್ಜಾಗಿವೆ.

ಇಂತಹ ಪ್ರಕ್ಷುಬ್ಧ ಸಂದರ್ಭದಲ್ಲಿ ಹಿಂದೂ- ಮುಸ್ಲಿಂ ಸಮುದಾಯಗಳ ನಡುವೆ ಸಾಮರಸ್ಯ, ಸೌಹಾರ್ದತೆ ಬೆಸೆಯುವ ಮತ್ತು ಭಾವೈಕ್ಯತೆ ಸಾರುವ ತಡಗವಾಡಿ ಬಾಬಯ್ಯನ ಹಬ್ಬದಂತಹ ಆಚರಣೆಗಳು ದೇಶಾದ್ಯಂತ ಹೆಚ್ಚಾಗಿ ನಡೆಯಬೇಕಿದೆ.

ಬಾಬಯ್ಯನ ಹಬ್ಬ

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕು ಅರಕೆರೆ ಹೋಬಳಿಯ ತಡಗವಾಡಿ ಗ್ರಾಮದಲ್ಲಿ ಧರ್ಮಕ್ಕಾಗಿ ಬಲಿಯಾದ ಹಸೇನ್ ಮತ್ತು ಹುಸೇನ್ ಎಂಬ ಇಬ್ಬರು ಸಹೋದರರ ಸ್ಮರಣಾರ್ಥ ಬಾಬಯ್ಯನ ದೇವಸ್ಥಾನ ನಿರ್ಮಿಸಲಾಗಿದೆ. ಶೇ.100 ರಷ್ಟು ಹಿಂದೂಗಳೇ ಇರುವ ತಡಗವಾಡಿ ಗ್ರಾಮದ ಜನರೆಲ್ಲರೂ ಹೊರ ಊರುಗಳಿಂದ ಬರುವ ಮುಸಲ್ಮಾನರೊಂದಿಗೆ ಸೇರಿ ಆಚರಿಸುವ ಹಬ್ಬವೇ ಭಾವೈಕ್ಯತೆ ಸಾರುವ ಬಾಬಯ್ಯನ ಹಬ್ಬ.

ಮೊಹರಂ ಕಡೇ ದಿನ

ಮೊಹರಂ ಕಡೇ ದಿನದ ಅಂಗವಾಗಿ ಆಚರಿಸುವ ಬಾಬಯ್ಯನ ಹಬ್ಬಕ್ಕೆ ವಾರಕ್ಕೆ ಮೊದಲೇ ಸಿದ್ಧತೆಗಳು ಆರಂಭವಾಗುತ್ತವೆ. ಈ ಆಚರಣೆಗೆ ನೂರಾರು ವರ್ಷಗಳ ಇತಿಹಾಸವಿದೆ. ಹಸೇನ್ ಮತ್ತು ಹುಸೇನ್ ಎಂಬ ಫಕೀರರು ನಮ್ಮ ಜನರನ್ನು ಕಷ್ಟ-ಸುಖಗಳಿಂದ ರಕ್ಷಣೆ ಮಾಡಿ ದನ-ಕರು, ಕುರಿ-ಕೋಣ ಮೊದಲಾದ ಪ್ರಾಣಿಗಳನ್ನು ರೋಗ ರುಜಿನಗಳಿಂದ ಕಾಪಾಡುತ್ತಾರೆ ಎಂಬ ನಂಬಿಕೆಯಿಂದ ನಮ್ಮ ಪೂರ್ವಜರು ಮಾಡಿಕೊಂಡು ಬಂದಿರುವ ಆಚರಣೆಯನ್ನು ನಾವು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ ಎಂದು ಬಾಬಯ್ಯನ ದೇವಸ್ಥಾನ ನೋಡಿಕೊಳ್ಳುವ ಬ್ರಾಹ್ಮಣ ಸಮುದಾಯದ ನಾಗಭೂಷಣ್ ಹೇಳುವ ಮಾತು.

ನಾನು ಬ್ರಾಹ್ಮಣ ಜಾತಿಗೆ ಸೇರಿದ್ದರೂ ಬಾಬಯ್ಯನ ದೇವಸ್ಥಾನದಲ್ಲಿ ಪೂಜೆ, ಪ್ರಸಾದ ಕೊಡುತ್ತಾ ಬಂದಿದ್ದೇನೆ. ಹಿಂದೂ- ಮುಸ್ಲಿಂ ಎಲ್ಲರ ಜೊತೆಯಲ್ಲಿ ಸೇರಿಕೊಂಡು ಹಬ್ಬ ಮಾಡುತ್ತೇನೆ. ಬಾಬಯ್ಯನ ಹಬ್ಬದ ದಿನ ಹೊರಗಿನಿಂದ ಬರುವ ಮುಸ್ಲಿಂ ಸಮುದಾಯದ ಜನರಿಗೆ ಪ್ರಸಾದ ಕೊಡುತ್ತೇನೆ.

ಮೊಹರಂ ಹಿಂದಿನ ದಿನ ಗ್ರಾಮಕ್ಕೆ ಬರುವ ಮುಸ್ಲಿಂ ಗುಡ್ಡಪ್ಪ ದೇವರ ಮೆರವಣಿಗೆ ಮಾಡಿಕೊಂಡು ಗ್ರಾಮದ ಪ್ರತಿ ಬೀದಿಯಲ್ಲಿ ಮೆರವಣಿಗೆ ಹೋಗುತ್ತಾರೆ. ಪ್ರತಿ ಮನೆಯ ಜನರು ತಮ್ಮ ಮನೆ ಬಾಗಿಲಿಗೆ ಬರುವ ಮುಸ್ಲಿಂ ಸಮುದಾಯದ ಗುಡ್ಡಪ್ಪನ ಪಾದಕ್ಕೆ ನೀರು ತಂದು ಹಾಕುತ್ತಾರೆ. ನಂತರ ಕೆರೆಯ ಬಳಿ ಹೋಗಿ ದೇವರನ್ನು ಮಲಗಿಸಿ ಬಾಬಯ್ಯನ ದೇವಸ್ಥಾನದ ಬಳಿ ಬರುತ್ತಾರೆ. ಅಲ್ಲಿ ಹಾಡು ಹೇಳಿಕೊಂಡು ಇರುತ್ತಾರೆ‌.

ಕೊಂಡ ಹಾಯುವ ಹಿಂದೂ ಗುಡ್ಡ

ರಾತ್ರಿ ದೇವಸ್ಥಾನದ ಮುಂದಿರುವ ಜಾಗದಲ್ಲಿ ಕೊಂಡ ಸಿದ್ಧಪಡಿಸಲಾಗಿರುತ್ತದೆ.ಇಲ್ಲಿ ಮುಸ್ಲಿಂಮರು ಯಾರೂ ಕೊಂಡ ಹಾಯುವುದಿಲ್ಲ‌. ಹಿಂದೂಗಳ ಗುಡ್ಡನೇ ಕೊಂಡ ಹಾಯುತ್ತಾನೆ. ಮಧ್ಯ ರಾತ್ರಿ ಎರಡು ಗಂಟೆಯಿಂದ ಬೆಳಗಿನ ಜಾವ ಆರು ಗಂಟೆವರೆಗೆ ಕೋಲಾಟ, ದೊಣ್ಣೆವರಸೆ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಜನರಿಗೆ ಬೆಲ್ಲದ ಅನ್ನವನ್ನು ಪ್ರಸಾದವಾಗಿ ನೀಡಲಾಗುತ್ತದೆ.

ಹಬ್ಬಕ್ಕೆ ತಡಗವಾಡಿ ಸುತ್ತಮುತ್ತಲಿನ ಗ್ರಾಮಗಳ ಜನರು ಬರುತ್ತಾರೆ. ಬೆಂಗಳೂರು, ಮೈಸೂರು, ಮಂಡ್ಯ, ಮದ್ದೂರು, ಕೆ.ಆರ್.ಪೇಟೆ, ಮಳವಳ್ಳಿ ಮೊದಲಾದ ಭಾಗಗಳಿಂದ ಮುಸಲ್ಮಾನ ಬಂಧುಗಳು ಭಾರೀ ಸಂಖ್ಯೆಯಲ್ಲಿ ಬರುತ್ತಾರೆ. ಬಾಬಯ್ಯನ ದೇವಸ್ಥಾನದ ಸುತ್ತ ಮುತ್ತ ಕಾಲಿಡಲು ಜಾಗ ಇರದಷ್ಟು ಜನರು ಸೇರಿರುತ್ತಾರೆ ಎಂದು ಗ್ರಾಮದ ರಾಮೇಗೌಡ ತಿಳಿಸಿದರು.

ಕೋಡಂಗಿ ವೇಷ

ಜನರು ತಮ್ಮ ಸಮಸ್ಯೆಗಳನ್ನು ಬಾಬಯ್ಯ ಬಗೆಹರಿಸುತ್ತಾನೆ ಎಂಬ ನಂಬಿಕೆಯಿಂದ ಹರಕೆ ಮಾಡಿಕೊಂಡು ಕೋಡಂಗಿ ವೇಷ ಹಾಕುತ್ತಾರೆ. ಮೈಗೆಲ್ಲ ಕಪ್ಪು ಬಣ್ಣ ಬಳಿದುಕೊಂಡು ಚಾವಟಿಯಲ್ಲಿ ಹೊಡೆದುಕೊಂಡು ಹರಕೆ ತೀರಿಸುತ್ತಾರೆ. ತಂದೆ-ತಾಯಂದಿರು ತಮ್ಮ ಮಕ್ಕಳಿಗೆ ಒಳ್ಳೆಯದಾಗಲಿ ಎಂಬ ಉದ್ದೇಶದಿಂದ ಮಕ್ಕಳಿಗೂ ಕೋಡಂಗಿ ವೇಷ ಹಾಕಿಸುತ್ತಾರೆ.

ಬಾಬಯ್ಯನ ಹಬ್ಬದಲ್ಲಿ ಮಾಂಸಾಹಾರ ನಿಷಿದ್ಧ. ಇಡೀ ಊರಿನಲ್ಲಿ ಕೊಂಡ ತೆಗೆಯುವ ಮಾರನೇ ದಿನದವರೆಗೆ ಮಾಂಸಾಹಾರ ಮಾಡುವುದಾಗಲಿ, ತಿನ್ನುವುದಾಗಲಿ ನಿಷಿದ್ಧ. ಹಬ್ಬ ಮುಗಿದ ನಂತರ ಮಾಂಸಾಹಾರ ಸೇವಿಸಬಹುದು.

ಬಾಬಯ್ಯನಿಗೆ ತಪ್ಪಾಗಿ ನಡೆದುಕೊಂಡರೆ ದನ-ಕರುಗಳಿಗೆ ತೊಂದರೆ ಆಗುತ್ತದೆ ಎಂಬ ನಂಬಿಕೆ ಇಲ್ಲಿನ ಜನರಲ್ಲಿದೆ. ಸುಮಾರು ವರ್ಷಗಳ ಹಿಂದೆ ಈ ಗ್ರಾಮದಲ್ಲಿ ದನಕರುಗಳಿಗೆ ಚಪ್ಪೆರೋಗ ಬಂದು ಬಹುತೇಕ ಹಸುಗಳು ಸತ್ತುಹೋದವು. ಜನರು ಗ್ರಾಮದ ಹೊರಗೆ ಹೋಗಿ ಹಸುಗಳನ್ನು ಕಟ್ಟಿದರು.

ನಂತರ ಬಾಬಯ್ಯನ ಹಬ್ಬ ಮಾಡಿ ಫಕೀರರು ಬಂದು ಊರಿನ ಒಳಗೆ ಕರೆದುಕೊಂಡು ಬಂದ ದನಕರುಗಳು ಬದುಕಿಕೊಂಡವು. ಹೊರಗೆ ಇದ್ದ ದನಕರುಗಳು ಸತ್ತುಹೋದವು. ಹಾಗಾಗಿ ನಮ್ಮ ಮನೆಯ ದನಕರುಗಳಿಗೆ ಯಾವುದೇ ರೋಗರುಜಿನ ಬರಬಾರದೆಂಬ ಉದ್ದೇಶದಿಂದ ಎಷ್ಟೇ ಖರ್ಚಾದರೂ ಸರಿಯೇ ಬಾಬಯ್ಯನ ಹಬ್ಬ ಮಾಡಿಕೊಂಡು ಬಂದಿದ್ದೇವೆ ಎನ್ನುತ್ತಾರೆ ಅರ್ಚಕ ನಾಗಭೂಷಣ್.

ಎಲ್ಲರೂ ಬರ್ತಾರೆ

ಬಾಬಯ್ಯನ ಹಬ್ಬಕ್ಕೆ ನಮ್ಮ ಊರಿನ ಎಲ್ಲರೂ ಬಂದು ಸೇರುತ್ತಾರೆ. ದೂರದ ಊರಿನಲ್ಲಿ ನೆಲೆಸಿರುವ ಎಲ್ಲರೂ ತಮ್ಮ ಮಕ್ಕಳು, ಮೊಮ್ಮಕ್ಕಳೊಂದಿಗೆ ಹಬ್ಬಕ್ಕೆ ಬರುತ್ತಾರೆ. ಹಲವು ಭಾಗಗಳಿಂದ ಬರುವ ಮುಸಲ್ಮಾನರಿಗೆ ರಾತ್ರಿ ಉಳಿದುಕೊಳ್ಳಲು ವಸತಿ ಹಾಗೂ ಊಟದ ವ್ಯವಸ್ಥೆ ಮಾಡಲಾಗುತ್ತದೆ. ಮುಸ್ಲಿಂ ಫಕೀರರ ಹತ್ತಿರ ನಮ್ಮ ಹಿಂದೂಗಳು ಅವರ ಕಾಲಿಗೆ ಬಿದ್ದು ದಾರ ಕಟ್ಟಿಸಿಕೊಳ್ಳುತ್ತಾರೆ. ಫಕೀರರು ಪ್ರಾರ್ಥನೆ ಮಾಡಿ ವಿಭೂತಿ ಬಳಿದು ದಾರ ಕಟ್ಟಿದರೆ ಕಷ್ಷಗಳು ಬಗೆಹರಿಯುತ್ತವೆ ಎಂಬ ಪ್ರತೀತಿ ಇದರ ಹಿಂದಿದೆ.

ಮುಸ್ಲಿಂಮರಿಲ್ಲ

ಗ್ರಾಮದಲ್ಲಿ ಮುಸಲ್ಮಾನರಿಲ್ಲ. ಆದರೆ ತಡಗವಾಡಿ ಗ್ರಾಮದ ಹಿಂದೂ ಸಮುದಾಯದ ಜನರು ಒಂದು ಮುಸಲ್ಮಾನರ ಕುಟುಂಬವನ್ನು ಕರೆ ತಂದು ಮನೆ ಕೊಟ್ಟು,ಒಂದು ಎಕರೆ ಕೊಡುಗೆ ಜಮೀನು ಕೊಟ್ಟು, ಅವರಿಗೆ ವರ್ಷಕ್ಕೆ ಅಗತ್ಯ ಇರುವುದನ್ನು ಸಂಗ್ರಹಿಸಿ ಕೊಟ್ಟು ಬಾಬಯ್ಯನ ಆರಾಧನೆ ಮಾಡುವ ಕಾಯಕಕ್ಕೆ ನೇಮಿಸಿದ್ದಾರೆ.

ಹಸೇನ್ ಮತ್ತು ಹುಸೇನ್ ಮುಸಲ್ಮಾನ ಆದರೂ ಇಲ್ಲಿ ಬಾಬಯ್ಯನ ಹಬ್ಬದ ಆಚರಣೆ, ಇದರ ಜವಾಬ್ದಾರಿ ಹೊರುವುದು, ಊರಿನ ಮನೆ ಮನೆಯ ಹಬ್ಬವಾಗಿ ಆಚರಿಸುವುದು ಹಿಂದೂಗಳೇ. ಇಲ್ಲಿ ತಲೆತಲಾಂತರಗಳಿಂದ ಬ್ರಾಹ್ಮಣ ಕುಟುಂಬ ಇದೆ. ಅವರ ಮನೆಯಲ್ಲಿ ಬಾಬಯ್ಯ ಅವರ ಬೆಳ್ಳಿ ಹಸ್ತ ಮುದ್ರಿಕೆ, ದೇವರ ಬೆಳ್ಳಿ ಸಾಮಾನು ಇಡುತ್ತಾರೆ ಎಂಬುದು ವಿಶೇಷ.

ಹಬ್ಬ ತಪ್ಪಿಸಲ್ಲ

ಊರಿನ ಜಾನುವಾರುಗಳಿಗೆ ಖಾಯಿಲೆ ಬಂದರೆ ಬಾಬಯ್ಯನಿಗೆ ಹರಕೆ ಕಟ್ಟುವುದು ಇಲ್ಲಿ ರೂಢಿ.ಹರಕೆ ಕಟ್ಟಿದಂತೆ ಜಾನುವಾರುಗಳು ಪವಾಡ ಅನ್ನುವಂತೆ ಗುಣವಾಗುತ್ತವೆ. ಹುಲ್ಲುಗುರು, ಕಾಲಿನ ಉಗುರು ನುರಿಕೆಯಾದರೆ, ಕಾಲಿನ ಹತ್ರ ಗಂಟಿನ ರೀತಿ ನರಗಳು ಉಬ್ಬಿದಂತೆ ಇರುವ ಸಮಸ್ಯೆಗೆ ಇಲ್ಲಿಯ ಜನ ಹರಕೆ ಕಟ್ಟಿ ಹಬ್ಬದ ಸಮಯದಲ್ಲಿ ಕೊಂಡಕ್ಕೆ ಒಂದು ಹಿಡಿ ಹರಳು ಒಪ್ಪಿಸಿದರೆ ಸಾಕು ಅವರ ಸಮಸ್ಯೆ ನಿವಾರಣೆಯಾಗುತ್ತದೆ ಎಂದು ನಂಬಿಕೆ ಹೊಂದಿದ್ದಾರೆ.

ನಮ್ಮ ಊರಿನಲ್ಲಿ ಎಲ್ಲಾ ದೇವಾಲಯಗಳಿವೆ. ಅದರಲ್ಲಿ ಪ್ರಮುಖವಾದದ್ದು ಬಾಬಯ್ಯನ ದೇವಾಲಯ. ಮುಸಲ್ಮಾನ ಬಾಬಯ್ಯನ ಗದ್ದುಗೆಯನ್ನು ದೇವಾಲಯವಾಗಿ ಕರೆದು ಹಿಂದೂಗಳೇ ಸೇರಿ ಸಾಮರಸ್ಯದಿಂದ ಆಚರಿಸುವ ವಿಶೇಷ ಗ್ರಾಮ ತಳಗವಾದಿ. ಇಲ್ಲಿ ಯಾವುದೇ ಭೇದ ಭಾವ ನೋಡಲು ಸಾಧ್ಯವಿಲ್ಲ. ಬಾಬಯ್ಯ ನಮ್ಮ ದೇವರು ನಮಗೆ ಒಳಿತಾಗಿದೆ, ಈಗಲೂ ಆಗುತ್ತಿದೆ. ನಮಗೆ ಬಾಬಯ್ಯ ನೆಮ್ಮದಿ ಕೊಟ್ಟಿದ್ದಾರೆ. ನಾವು ಹಿಂದೆನಿಂದಲೂ ಹಬ್ಬ ಆಚರಿಸಿಕೊಂಡು ಬಂದಿದ್ದೇವೆ. ಮುಂದೆಯೂ ಆಚರಿಸಿಕೊಂಡು ಹೋಗುತ್ತೇವೆ ಅನ್ನುವುದು ಚನ್ನೇಗೌಡರ ಮಾತು.

ಒಟ್ಟಿನಲ್ಲಿ ಬಾಬಯ್ಯನ ಹಬ್ಬ ಹಿಂದೂಗಳ ಊರಿನಲ್ಲಿ ಹಿಂದೂ-ಮುಸಲ್ಮಾನರು ಒಂದಾಗಿ ಸೇರಿ ಆಚರಿಸುವ ಭಾವೈಕ್ಯತೆಯ ಹಬ್ಬ. ಕುವೆಂಪು ಅವರ ಆಶಯದಂತೆ ಸರ್ವಜನಾಂಗದ ಶಾಂತಿಯ ತೋಟ ಎಂಬಂತೆ ಹಿಂದೂ-ಮುಸಲ್ಮಾನರ ಬಾಂಧವ್ಯ ಬೆಸೆಯುವ ಇಂತಹ ಹಬ್ಬಗಳು ಹೆಚ್ಚಾಗಬೇಕು ಎಂಬುದು ಸಾಮರಸ್ಯ, ಸೌಹಾರ್ದತೆ ಬಯಸುವ ಎಲ್ಲರ ಆಶಯ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!