Friday, September 20, 2024

ಪ್ರಾಯೋಗಿಕ ಆವೃತ್ತಿ

ವಿವಿಧ ಅಭಿವೃದ್ಧಿ ಕಾಮಗಾರಿಗಳ ಉಳಿಕೆ ಹಣ ಕೊಡಿಸಲು ಮನವಿ

ಸಚಿವ ಕೆ.ಸಿ. ನಾರಾಯಣಗೌಡರ ಆದೇಶದಂತೆ ಕೆ.ಆರ್.ಪೇಟೆ ತಾಲ್ಲೂಕಿನ ಹಲವೆಡೆ ವಿವಿಧ ಅಭಿವೃದ್ಧಿ ಕಾಮಗಾರಿ ಮಾಡಿಸಿದ್ದು, ಆ ಕಾಮಗಾರಿಗಳ ಬಾಬ್ತು 35 ಲಕ್ಷ ರೂ‌. ಬಾಕಿ ಬಂದಿಲ್ಲ. ಕೂಡಲೇ ಸಚಿವ ಕೆ.ಸಿ. ನಾರಾಯಣ ಗೌಡರು ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಬಾಕಿಯಿರುವ 35 ಲಕ್ಷ ರೂ. ಹಣವನ್ನು ಕೊಡಿಸಿಕೊಡಬೇಕೆಂದು ಪ್ರಥಮ ದರ್ಜೆ ಗುತ್ತಿಗೆದಾರ ಬಂಡಿಹೊಳೆ ಬಿ.ಆರ್‌. ಸುರೇಶ್ ಒತ್ತಾಯಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೆ.ಆರ್.ಪೇಟೆ ತಾಲೂಕಿನ ಅಂಬಿಗರ ಹಳ್ಳಿ ಮತ್ತು ಸಂಗಾಪುರ ಗ್ರಾಮಗಳ ಬಳಿ ಇರುವ ತ್ರಿವೇಣಿ ಸಂಗಮದಲ್ಲಿ 2013 ರಲ್ಲಿ ನಡೆದ ಕುಂಭಮೇಳ ಪ್ರಯುಕ್ತ ಭಕ್ತಾದಿಗಳು ಹಾಗೂ ಯಾತ್ರಾರ್ಥಿಗಳ ಅನುಕೂಲಕ್ಕಾಗಿ 30 ಲಕ್ಷ ರೂ. ವೆಚ್ಚದ ಕಾಮಗಾರಿಯನ್ನು ಆಗ ಶಾಸಕರಾಗಿದ್ದ ಕೆ.ಸಿ‌. ನಾರಾಯಣಗೌಡರ ಆದೇಶದ ಮೇರೆಗೆ ಕಾಮಗಾರಿ ನೆರವೇರಿಸಿದ್ದೇನೆ. ಆ ಕಾಮಗಾರಿಯ ಬಾಬ್ತು ಕೇವಲ 12 ಲಕ್ಷ ರೂ.ಮಾತ್ರ ಪಾವತಿಸಿದ್ದು, ಉಳಿಕೆ18 ಲಕ್ಷ ಹಣವನ್ನು ಇಲ್ಲಿಯವರೆಗೂ ಕೊಟ್ಟಿರುವುದಿಲ್ಲ ಎಂದು ದೂರಿದರು.

ಅಲ್ಲದೆ ಸೊಳ್ಳೇಪುರದ ಗ್ರಾಮದೇವತೆ ಅರೇಕಲ್ಲಮ್ಮ ಹಬ್ಬದ ಹಿನ್ನೆಲೆಯಲ್ಲಿ ಆಗ ಶಾಸಕರಾಗಿದ್ದ ಕೆ.ಸಿ‌.ನಾರಾಯಣಗೌಡ, ಜಿಲ್ಲಾ ಪಂಚಾಯತಿ ಸದಸ್ಯ ಕಿಕ್ಕೇರಿ ಪ್ರಭಾಕರ್, ಗ್ರಾಮ ಪಂಚಾಯತಿ ಸದಸ್ಯ ಕೇಶವ ಅವರ ಮಾತಿಗೆ ಬೆಲೆ ನೀಡಿ, 32 ಲಕ್ಷ ರೂ. ವೆಚ್ಚದ ಕಾಮಗಾರಿಯನ್ನು ಮಾಡಿದ್ದೆ. ಅದರ ಬಾಬ್ತು 15 ಲಕ್ಷ ಹಣವನ್ನು ಬಿಡುಗಡೆ ಮಾಡಿದ್ದು, ಉಳಿಕೆ 17 ಲಕ್ಷ ಬಾಕಿ ಹಣವನ್ನು ಇದುವರೆಗೂ ಕೊಟ್ಟಿರುವುದಿಲ್ಲ ಎಂದರು.

ನನಗೆ ಈ ಎರಡು ಅಭಿವೃದ್ಧಿ ಕಾಮಗಾರಿಗಳಿಂದ ಒಟ್ಟು 35 ಲಕ್ಷ ರೂ. ಬಾಕಿ ಬರಬೇಕಿದೆ. ಈ ಬಗ್ಗೆ ಸಚಿವ ನಾರಾಯಣಗೌಡರ ಬಳಿ ಹಲವಾರು ಬಾರಿ ಮನವಿ ಮಾಡಿದರೂ, ಅವರು ಕೊಡಿಸುತ್ತೇನೆ ಎಂದು ಹೇಳುತ್ತಾರೆ ಹೊರತು ಹತ್ತು ವರ್ಷಗಳಾದರೂ ಇನ್ನೂ ಕೊಡಿಸಿಲ್ಲ. ನನ್ನ ಆರ್ಥಿಕ ಪರಿಸ್ಥಿತಿ ಕೆಟ್ಟಿದ್ದು, ಸಾಲಗಾರರ ಕಾಟ ಹೆಚ್ಚಾಗಿದೆ. ಈ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಸಂದರ್ಭ ಉಂಟಾಗಿದ್ದು, ಒಂದು ವೇಳೆ ನಾನು ಆತ್ಮಹತ್ಯೆಗೆ ಶರಣಾದರೆ, ಇದಕ್ಕೆ ಸಚಿವ ಕೆ.ಸಿ. ನಾರಾಯಣಗೌಡ ಹಾಗೂ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳೇ ಹೊಣೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಬಂಡಿಹೊಳೆ ನಾಗರಾಜು, ಕೆ.ಆರ್.ಪೇಟೆ ಶಿವಣ್ಣ, ಚಂದ್ರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!