Thursday, September 19, 2024

ಪ್ರಾಯೋಗಿಕ ಆವೃತ್ತಿ

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೆಚ್ಚಾದ ದರೋಡೆಕೋರರ ಹಾವಳಿ!

ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯ ದರೋಡೆ ಪ್ರಕರಣಗಳು ನಡೆಯುತ್ತಲೇ ಇದೆ.ಆದರೂ ದರೋಡೆಕೋರರ ಹಾವಳಿ ದಿನ ಕಳೆದಂತೆ ಹೆಚ್ಚಾಗುತ್ತಲೇ ಇದೆ.ದರೋಡೆಕೋರರ ಹಾವಳಿಯಿಂದಾಗಿ ಈ ರಸ್ತೆಯಲ್ಲಿ ಸಂಚರಿಸಲು ಜನರು ಭಯ ಪಡುವಂತಾಗಿದೆ.

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಕಳೆದ ರಾತ್ರಿ ಎರಡು ಕಡೆ ದರೋಡೆ ನಡೆದಿದ್ದು,ಪ್ರಯಾಣಿಕರು ದರೋಡೆಕೋರರ ಬೆದರಿಕೆಗೆ ಮಣಿದು ತಮ್ಮಲ್ಲಿದ್ದ ಚಿನ್ನಾಭರಣ,ನಗದು ಹಣ ಕೊಟ್ಟು ಜೀವ ಉಳಿಸಿಕೊಂಡಿದ್ದಾರೆ.

ಕಳೆದ ರಾತ್ರಿ ಶ್ರೀರಂಗಪಟ್ಟಣ ತಾಲ್ಲೂಕಿನ ನಗುವನಹಳ್ಳಿ ಗೇಟ್ ಮತ್ತು ಗೌರಿಪುರ ಬಳಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರನ್ನು ಬೆದರಿಸಿದ ದರೋಡೆಕೋರರು ಚಿನ್ನಾಭರಣ ದೋಚಿದ್ದಾರೆ.

ಶನಿವಾರ ತಡರಾತ್ರಿ ಹೆಲ್ಮೆಟ್ ಧರಿಸಿದ್ದ ಇಬ್ಬರು ದರೋಡೆಕೋರರು ನಗುವನಹಳ್ಳಿ ಗೇಟ್ ಬಳಿಯ ಭಾರತ್ ಬೆಂಚ್ ಕಂಪೆನಿ ಎದುರು‌ ಉಡುಪಿಯ ಶಿವಪ್ರಸಾದ- ಸುಮಾ ದಂಪತಿಗಳು ಕಾರು ನಿಲ್ಲಿಸಿ ವಿಶ್ರಾಂತಿ ಪಡೆಯುತ್ತಿದ್ದ ಸಮಯದಲ್ಲಿ ಅವರಿಬ್ಬರನ್ನು ಬೆದರಿಸಿ 30 ಗ್ರಾಂ ಚಿನ್ನಾಭರಣ ಹಾಗೂ ನಗದನ್ನು ದೋಚಿದ್ದಾರೆ.

ಇದಾದ ಕೆಲ ಹೊತ್ತಿನಲ್ಲಿಯೇ ಗೌರಿಪುರ ಬಳಿ ದರೋಡೆಕೋರರು ಕೋಲಾರ‌ ಜಿಲ್ಲೆ ಮಾಲೂರಿನ ಡಾ. ರಕ್ಷಿತ್ ರೆಡ್ಡಿ ಮತ್ತು ಡಾ.ಮಾನಸ ದಂಪತಿಗಳಿಗೆ ಬೆದರಿಕೆ ಹಾಕಿ 40 ಗ್ರಾಂ ಚಿನ್ನಾಭರಣ ಕಸಿದು ಪರಾರಿಯಾಗಿದ್ದಾರೆ.
ಮೈಸೂರಿಗೆ ತೆರಳುತ್ತಿದ್ದ ವೇಳೆ ಡಾ.ರಕ್ಷಿತ್ ರೆಡ್ಡಿ ಅವರ ಕಾರು ಪಂಕ್ಚರ್ ಆಗಿದ್ದು, ಚಕ್ರ ಬದಲಿಸುತ್ತಿದ್ದಾಗ ದುಷ್ಕರ್ಮಿಗಳು ದರೋಡೆ ಮಾಡಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು,ಈ ಎರಡು ದರೋಡೆ ಪ್ರಕರಣಗಳ ಬಗ್ಗೆ ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಲ್ಲದ ದರೋಡೆ
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ದರೋಡೆ ಪ್ರಕರಣಗಳ ಸಂಖ್ಯೆ ದಿನ ಕಳೆದಂತೆ ಹೆಚ್ಚಾಗುತ್ತಿದೆ.ಕೆಲ ತಿಂಗಳ ಹಿಂದೆ ಮಲ್ಲಯ್ಯನ ದೊಡ್ಡಿ ಬೋರೆ ಬಳಿ ಮೂತ್ರ ವಿಸರ್ಜನೆಗೆ ಕಾರು ನಿಲ್ಲಿಸಿದ್ದ ಮೈಸೂರಿನ ವ್ಯಕ್ತಿಯೊಬ್ಬರನ್ನು ಅಡ್ಡಗಟ್ಟಿದ್ದ ದರೋಡೆಕೋರರು ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿದ್ದರು.

ಮದ್ದೂರು ಬಳಿಯೂ ದಂಪತಿಗಳಿಬ್ಬರನ್ನು ಬೆದರಿಸಿ ದೋಚಲಾಗಿತ್ತು.ಈಗ ಕಳೆದ ರಾತ್ರಿ ಶ್ರೀರಂಗಪಟ್ಟಣ ಬಳಿ ಎರಡು ದರೋಡೆ ಪ್ರಕರಣ ನಡೆದಿದೆ.ಕೆಲ ತಿಂಗಳ ಹಿಂದೆ ಚನ್ನಪಟ್ಟಣ ಪೋಲಿಸರು ನಾಲ್ಕು ಮಂದಿ ದರೋಡೆಕೋರರನ್ನು ಬಂಧಿಸಿ ಜೈಲಿಗೆ ಅಟ್ಟಿದ್ದರು‌.ಆದರೆ ಮಂಡ್ಯ ವ್ಯಾಪ್ತಿಯಲ್ಲಿ ದರೋಡೆ ಪ್ರಕರಣಗಳು ವ್ಯಾಪಕವಾಗಿ ನಡೆಯುತ್ತಿರುವ‌ ಹಿನ್ನೆಲೆಯಲ್ಲಿ ಎಸ್ಪಿ ಯತೀಶ್ ಅವರು ಈ ಬಗ್ಗೆ ಗಮನ ಹರಿಸಿ ದರೋಡೆಕೋರರ ಬಂಧಿಸಿ ಜನರು ನೆಮ್ಮದಿಯಿಂದ ಪ್ರಯಾಣಿಸಲು ಅನುವು ಮಾಡಿಕೊಡಬೇಕಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!