Thursday, November 19, 2026

ಪ್ರಾಯೋಗಿಕ ಆವೃತ್ತಿ

ನನಸಾಗದ ಐಎಎಸ್ ವ್ಯಾಸಂಗ : ಆತ್ಮಹತ್ಯೆಗೆ ಶರಣಾದ ಬ್ಯಾಂಕ್ ವ್ಯವಸ್ಥಾಪಕಿ

ಐಎಎಸ್ ಓದಬೇಕೆಂಬ ಕನಸು ನನಸಾಗದ ಹಿನ್ನೆಲೆ ಮತ್ತು ಜೀವನದಲ್ಲಿನ ಜಿಗುಪ್ಸೆಯಿಂದ ಬೇಸತ್ತು ಬ್ಯಾಂಕೊಂದರ ಮಹಿಳಾ ಅಧಿಕಾರಿ ನೇಣು ಬಿಗಿದು ಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

ಕಾವೇರಿ ಗ್ರಾಮೀಣ ಬ್ಯಾಂಕ್ ನ ಪ್ರಾದೇಶಿಕ ಕಚೇರಿಯ ವ್ಯವಸ್ಥಾಪಕಿ ಶೃತಿ (30) ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿ.

ಮಂಡ್ಯ ನಗರದ ವಿನಾಯಕ ಬಡಾವಣೆಯ ಬಾಡಿಗೆ ಮನೆಯಲ್ಲಿ ಅವರು ನೇಣು ಬಿಗಿದುಕೊಂಡಿದ್ದು, ಐಎಎಸ್ ಕನಸು ಮತ್ತು ಜೀವನದ ವೈಫಲ್ಯ ಸಾವಿಗೆ ಕಾರಣ ಎಂದು ಡೆತ್ ನೋಟ್ ನಲ್ಲಿ ತಿಳಿಸಿದ್ದಾರೆ.

ಕೊಳ್ಳೇಗಾಲದ ಮಲ್ಲಪ್ಪ ಎಂಬುವರ ಮಗಳಾದ ಶೃತಿ ಕಾವೇರಿ ಗ್ರಾಮೀಣ ಬ್ಯಾಂಕ್ ನ ಉದ್ಯೋಗಿಯಾಗಿ ನೇಮಕ ಗೊಂಡು ಚಿಕ್ಕಮಗಳೂರಿನ ಶಾಖೆಯಲ್ಲಿ ಕಳೆದ ಏಳು ವರ್ಷ ಕಾರ್ಯನಿರ್ವಹಿಸಿ ಮಂಡ್ಯದ ಪ್ರಾದೇಶಿಕ ಕಚೇರಿಗೆ ಎರಡು ತಿಂಗಳ ಹಿಂದೆಯಷ್ಟೇ ಬಂದಿದ್ದರು. ವಿನಾಯಕ ಬಡಾವಣೆಯಲ್ಲಿ ರಾಜಣ್ಣರ ಮನೆಯನ್ನು ಬಾಡಿಗೆಗೆ ಪಡೆದು ವಾಸವಾಗಿದ್ದ ಶೃತಿ ಅವಿವಾಹಿತರಾಗಿದ್ದರು.

ನಿನ್ನೆ ಭಾನುವಾರ ರಾತ್ರಿ ಏಳರ ಸಮಯದಲ್ಲಿ ತಂದೆ ಮಲ್ಲಪ್ಪರಿಗೆ ಕರೆ ಮಾಡಿದ ಶೃತಿ ನಾನು ದೇವರ ಬಳಿ ಹೋಗುತ್ತಿದ್ದೇನೆ, ನನ್ನನ್ನು ಕ್ಷಮಿಸಿ ಅಪ್ಪಾ ಎಂದು ಹೇಳಿ ಕರೆ ಕಡಿತ ಮಾಡಿದ್ದರು. ತಕ್ಷಣ ಮಲ್ಲಪ್ಪ ಅವರು ಮತ್ತೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿದ್ದು,ಮಂಡ್ಯದಲ್ಲಿರುವ ಸಂಬಂಧಿಕರಿಗೆ ಮಲ್ಲಪ್ಪ ವಿಚಾರ ತಿಳಿಸಿದ್ದಾರೆ‌.ಸಂಬಂಧಿಕರು ಮನೆಯ ಬಳಿ ಹೋಗಿ ನೋಡುವಷ್ಟರಲ್ಲಿ ಶ್ರತಿ ನೇಣು ಬಿಗಿದುಕೊಂಡಿದ್ದರು.

ಆತ್ಮಹತ್ಯೆಗೆ ಮುನ್ನ ಡೆತ್ ನೋಟ್ ಬರೆದಿರುವ ಶೃತಿ ಐಎಎಸ್ ಮಾಡಬೇಕೆಂಬ ಕನಸು ನನಸಾಗಲಿಲ್ಲ, ಜೊತೆಗೆ ಜೀವನದಲ್ಲಿಯೂ ವೈಫಲ್ಯ ಕಂಡಿದ್ದೇನೆ ಎಂದು ತಿಳಿಸಿದ್ದಾರೆ. ಮಂಡ್ಯ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಮಹಜರು ನಡೆಸಿ ಮೃತ ದೇಹವನ್ನು ಮಿಮ್ಸ್ ಗೆ ರವಾನಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ