Thursday, November 19, 2026

ಪ್ರಾಯೋಗಿಕ ಆವೃತ್ತಿ

ಮೌಢ್ಯದ ಸಂಕೋಲೆ ಕಿತ್ತೆಸೆದು ಸಮಾನತೆ ಸಾರಿದ ಬಸವಣ್ಣ: ಮಂಜುನಾಥ್

ಹನ್ನೆರಡನೇ ಶತಮಾನದಲ್ಲೇ ಮೌಢ್ಯಾಚರಣೆಯ ಸಂಕೋಲೆಯನ್ನು ಕಿತ್ತೊಗೆದು ಸರ್ವರನ್ನೂ ಸಮಾನವಾಗಿ ಕಂಡ ಮಹಾಮಾನವತಾವಾದಿ ವಿಶ್ವಗುರು ಬಸವಣ್ಣನವರು ವಿಶ್ವ ಸಂವಿಧಾನ ಶಿಲ್ಪಿ ಎಂದು ಲಿಂಗಾಯತ ಮಹಾಸಭಾ ಅಧ್ಯಕ್ಷ ಎಂ.ಎಸ್.ಮಂಜುನಾಥ್ ಬೆಟ್ಟಹಳ್ಳಿ ತಿಳಿಸಿದರು.

ಮಂಡ್ಯ ನಗರದ ಸ್ವರ್ಣಸಂದ್ರ ಬಡಾವಣೆಯ ಪರಮಪೂಜ್ಯ ಡಾ.ಶ್ರೀ ಶಿವಕುಮಾರಮಹಾಸ್ವಾಮೀಜಿ ಉದ್ಯಾನವನದಲ್ಲಿ ಕಾಯಕಯೋಗಿ ಫೌಂಡೇಶನ್, ಲಿಂಗಾಯತಮಹಾಸಭಾ, ಸಿದ್ದಗಂಗಾಮಠದ ಹಳೆಯ ವಿದ್ಯಾರ್ಥಿಗಳು ಮತ್ತು ಹಿತೈಷಿಗಳ ಸಂಘ ಆಯೋಜಿಸಿದ್ದ ಜಗಜ್ಯೋತಿ ಬಸವೇಶ್ವರರ 891ನೇ ಜಯಂತ್ಯೋತ್ಸವದಲ್ಲಿ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ಜಾತಿ, ಧರ್ಮ, ವರ್ಣಾಶ್ರಮಗಳನ್ನು ಕಿತ್ತೊಗೆದು ಸರ್ವರಿಗೂ ಲಿಂಗಧೀಕ್ಷೆಯನ್ನು ನೀಡಿ ಧಾರ್ಮಿಕ, ಸಾಮಾಜಿಕ, ಕಾಯಕತತ್ವದ ಮಹತ್ವವನ್ನು ಸಾರಿದ ಬಸವಣ್ಣನವರ ಆದರ್ಶಗಳು ಸೂರ್ಯಚಂದ್ರರಿರುವವರೆಗೂ ಅಮರವಾಗಿವೆ ಎಂದವರು ಹೇಳಿದರು.

ಕಾಯಕ ಮತ್ತು ದಾಸೋಹ ತತ್ವವನ್ನು ಜನಮಾನಸದಲ್ಲಿ ಬೇರೂರವಂತೆ ಮಾಡಿದ ಕನ್ನಡನಾಡಿನ ಹೆಮ್ಮೆಯ ದಾರ್ಶನಿಕ ಪುರುಷ ಬಸವಣ್ಣನವರನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಸಾಂಸ್ಕೃತಿಕ ನಾಯಕರೆಂದು ಘೋಷಿಸಿರುವುದು ಅಭಿನಂದನೀಯ ಎಂದರು.

ಕಾಯಕಯೋಗಿ ಫೌಂಡೇಶನ್ ಅಧ್ಯಕ್ಷ ಎಂ.ಶಿವಕುಮಾರ್ ಮಾತನಾಡಿ, ಕರ್ನಾಟಕದ ಪಾಲಿಗೆ ಹನ್ನೆರಡನೇ ಶತಮಾನ ಎಂಬುದು ಬಹಳ ಮಹತ್ವದ್ದು. ಸಮಾಜದಲ್ಲಿ ಬಹುದೊಡ್ಡ ಬದಲಾವಣೆಯ ಹೊಸ ಚಿಂತನೆ ರೂಪುಗೊಂಡ ಕಾಲವದು. ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಇತಿಹಾಸದಲ್ಲಿ ವಿಶಿಷ್ಟವಾದ ಕಾಲಘಟ್ಟವಿದು. ಸಾಮಾಜಿಕ ಅಸಮಾನತೆ, ಜಾತಿ ವ್ಯವಸ್ಥೆ ಸೇರಿದಂತೆ ಹಲವು ಅನಿಷ್ಟ ಪದ್ಧತಿಗಳು ಆಚರಣೆಯಲ್ಲಿದ್ದ ಈ ಕಾಲದಲ್ಲಿ ವಚನಕಾರರು ತಮ್ಮ ಸರಳ ವಚನಗಳ ಮೂಲಕ ಸಮಾಜದಲ್ಲಿ ಬದಲಾವಣೆಗೆ ಭದ್ರ ಬುನಾದಿ ಹಾಕಿದರು ಎಂದು ಹೇಳಿದರು.

ನಿವೃತ್ತ ಶಿಕ್ಷಕ ಶಿವರುದ್ರಪ್ಪ ಮಾತನಾಡಿ, ವಚನಗಳ ಮೂಲಕವೇ ಜಗಜ್ಯೋತಿ ಬಸವೇಶ್ವರರು ಜ್ಞಾನದ ಬೆಳಕು ಚೆಲ್ಲಿದ್ದರು. ಕ್ರಾಂತಿಯ ಬೀಜ ಬಿತ್ತಿದ್ದ ಸಮಾಜ ಸುಧಾರಕರಿವರು. ಬಸವಣ್ಣನವರ ಅನುಭವ ಮಂಟಪ ಎಂಬುದೇ ಅದ್ಭುತ ಪರಿಕಲ್ಪನೆ. ಈ ಮೂಲಕ ಎಲ್ಲಾ ವರ್ಗದವರನ್ನೂ ಒಂದೆಡೆ ತರುವ ಪ್ರಯತ್ನವನ್ನು ಬಸವಣ್ಣನವರು ಮಾಡಿದ್ದರು. ಇದನ್ನು ವಿಶ್ವದ ಮೊದಲ ಸಂಸತ್ತು ಎಂದೇ ಕರೆಯಲಾಗುತ್ತದೆ. ತಮ್ಮ ಅದ್ಭುತ ವಚನಗಳ ಮೂಲಕವೇ ಎಲ್ಲರಲ್ಲೂ ಹೊಸ ಚಿಂತನೆಯನ್ನು ಹುಟ್ಟುಹಾಕಿದ ಬಸವಣ್ಣನವರ ಜಯಂತಿ ಒಂದು ದಿನಕ್ಕೆ ಮೀಸಲಾಗಿರದೆ ನಿತ್ಯವೂ ಅಣ್ಣನವರ ಆದರ್ಶವನ್ನು ಪ್ರತಿಯೊಬ್ಬರೂ ಅನುಸರಿಸಬೇಕೆಂದರು.

ಲಿಂಗಾಯತ ಮಹಾಸಭಾ ಪದಾಧಿಕಾರಿಗಳಾದ ನಿಜಗುಣ, ಆಲಕೆರೆ ಮಹೇಶ್, ರುದ್ರೇಶ್, ಬೆಳ್ಳಿಯಪ್ಪ, ಉಮೇಶ್, ಶರಣರ ಸಂಘಟನೆಯ ನಂದೀಶ್ ಕಾಡುಕೊತ್ತನಹಳ್ಳಿ, ಶಿವಲಿಂಗಪ್ಪ ಮೆಣಸಗೆರೆ, ಜಗದೀಶ್, ಮಹದೇವಪ್ಪ, ಕಾಯಕಯೋಗಿ ಫೌಂಡೇಶನ್ ಸಂಸ್ಥೆಯ ತಬ್ರೆöÊಸ್‌ಖಾನ್, ಯೋಗಿಕಿಣಗಿ ಮತ್ತಿತರರು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ