Wednesday, November 18, 2026

ಪ್ರಾಯೋಗಿಕ ಆವೃತ್ತಿ

ವಿಧಾನಸಭೆ ಚುನಾವಣೆ | ”ಮಂಡ್ಯದಗಂಡು” ಪಟ್ಟ ಯಾರಿಗೆ?


  • ಜೆಡಿಎಸ್ ಅಭ್ಯರ್ಥಿಗೆ ಬಿಸಿ ತುಪ್ಪವಾದ ಬಂಡಾಯ

  • ಪ್ರಮುಖ ಪಕ್ಷಗಳ ಯುವ ನಾಯಕರ ಅಬ್ಬರದ ಪ್ರಚಾರ

ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಹೊಸ ಮುಖಗಳೇ ಎದ್ದು ಕಾಣುತ್ತಿದೆ.ಪ್ರಮುಖ ಪಕ್ಷದ ಅಭ್ಯರ್ಥಿಗಳೆಲ್ಲರೂ ಯುವ ನಾಯಕರಾಗಿದ್ದು, ಮಂಡ್ಯ ಕ್ಷೇತ್ರ ಈ ಬಾರಿ ಸಾಕಷ್ಟು ಕುತೂಹಲ ಮೂಡಿಸುತ್ತಿದೆ.

ಈ ಹಿಂದಿನ ಚುನಾವಣೆಗಳಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ನಡೆಯುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಐವರ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಯಾರೂ ಮತ್ತೊಬ್ಬರನ್ನು ನಿರ್ಲಕ್ಷ್ಯ ಮಾಡುವಂತಹ ಪರಿಸ್ಥಿತಿಯಿಲ್ಲ, ಐವರು ಪ್ರಬಲ ಪೈಪೋಟಿ ನಡೆಸುತ್ತಿದ್ದಾರೆ.

ಹಲವು ಘಟಾನುಘಟಿ ನಾಯಕರ ಉದಯಕ್ಕೆ ಕಾರಣವಾಗಿರುವ ಜಿಲ್ಲಾ ಕೇಂದ್ರ ಮಂಡ್ಯ ಕ್ಷೇತ್ರದಲ್ಲಿ ಈ ಬಾರಿ 15 ಜನ ಅಭ್ಯರ್ಥಿಗಳಿದ್ದಾರೆ. ಕಾಂಗ್ರೆಸ್‌ನಿಂದ ರವಿಕುಮಾರ್ ಗಣಿಗ, ಜೆಡಿಎಸ್‌ನಿಂದ ಬಿ.ಆರ್.ರಾಮಚಂದ್ರ, ಬಿಜೆಪಿಯಿಂದ ಅಶೋಕ್ ಜಯರಾಂ, ಸರ್ವೋದಯ ಕರ್ನಾಟಕ ಪಕ್ಷದಿಂದ ಎಸ್.ಸಿ.ಮಧುಚಂದನ್, ಆಪ್‌ನಿಂದ ಬೂದನೂರು ಬೊಮ್ಮಯ್ಯ, ಬಿಎಸ್ಪಿ ಅಭ್ಯರ್ಥಿಯಾಗಿ ಎಸ್.ಶಿವಶಂಕರ್, ಕರ್ನಾಟಕ ರಾಷ್ಟ್ರ ಸಮಿತಿಯಿಂದ ನಾಗರಾಜ್ ಗವಿಗೌಡ, ಆರ್ ಪಿ ಐನಿಂದ ಎಂ.ಪಿ.ವಿಶ್ವ ಪುಟ್ಟಯ್ಯ, ಐರಾ ನ್ಯಾಷನಲ್ ಪಾರ್ಟಿಯಿಂದ ಸುವರ್ಣ, ಪಕ್ಷೇತರ ಅಭ್ಯರ್ಥಿಯಾಗಿ ಕೆ.ಎಸ್.ವಿಜಯಾನಂದ, ಎಂ.ಜೆ.ಚಿಕ್ಕಣ್ಣ, ಸಿ.ಎಂ.ಕೃಷ್ಣ, ಎನ್.ಬಸವರಾಜು, ಲೋಲ ಬೆಳ್ಳುಂಡಗೆರೆ, ಹಸಿರು ಸೇನೆ ಹಲ್ಲೇಗೆರೆ ಶಿವರಾಮು ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

ಹಾಲಿ ಅಭ್ಯರ್ಥಿಗಳ ಪೈಕಿ ಕಾಂಗ್ರೆಸ್ ಪಕ್ಷದ ಗಣಿಗ ರವಿಕುಮಾರ್ ಬಿಟ್ಟರೆ ಪ್ರಮುಖ ಪಕ್ಷಗಳ ಅಭ್ಯರ್ಥಿಗಳಾದ ಬಿ.ಆರ್.ರಾಮಚಂದ್ರ, ಅಶೋಕ್ ಜಯರಾಂ, ಕೆ.ಎಸ್.ವಿಜಯ್ ಆನಂದ್, ಮಧುಚಂದನ್ ಹೊಸ ಮುಖಗಳು. ಐವರ ನಡುವೆ ಪೈಪೋಟಿ ನಡೆಯುತ್ತಿದೆ. ಒಬ್ಬರು ಮತ್ತೊಬ್ಬರ ಗೆಲುವಿಗೆ ಅಗತ್ಯವಿರುವ ಮತಗಳನ್ನು ಕಸಿಯುವ ಶಕ್ತಿ ಹೊಂದಿದ್ದಾರೆ.

ಮಂಡ್ಯ ಕ್ಷೇತ್ರದ ಮತದಾರರು

ಪುರುಷರು 1,09,953
ಮಹಿಳೆಯರು 1,14,243
ಇತರೆ 33
ಒಟ್ಟು 2,24,229

2018ರ ಚುನಾವಣಾ ಫಲಿತಾಂಶ

ಗೆದ್ದವರು
ಎಂ.ಶ್ರೀನಿವಾಸ್ (ಜೆಡಿಎಸ್)
ಪಡೆದ ಮತ 69,421

ಸೋತವರು
ರವಿಕುಮಾರ್ ಗಣಿಗ (ಕಾಂಗ್ರೆಸ್)
ಪಡೆದ ಮತ 47,813
ಗೆಲುವಿನ ಅಂತರ 21,608

2013ರ ಚುನಾವಣಾ ಫಲಿತಾಂಶ

ಗೆದ್ದವರು
ಅಂಬರೀಷ್ (ಕಾಂಗ್ರೆಸ್)
ಪಡೆದ ಮತ 90,329

ಸೋತವರು
ಎಂ.ಶ್ರೀನಿವಾಸ್ (ಜೆಡಿಎಸ್)
ಪಡೆದ ಮತ 47,392
ಗೆಲುವಿನ ಅಂತರ 42,937

ಕೆ‌.ವಿ.ಶಂಕರಗೌಡರ ನಾಮಬಲವೇ ವಿಜಯ್ ಆನಂದ್ ಗೆ ಶ್ರೀರಕ್ಷೆ
ಮಂಡ್ಯದ ಶಿಲ್ಪಿ, ನಿತ್ಯ ಸಚಿವ ಕೆ‌.ವಿ. ಶಂಕರಗೌಡರೇ ನಾಮಬಲವೇ ಸ್ವಾಭಿಮಾನಿ ಪಡೆಯ ಅಭ್ಯರ್ಥಿ ವಿಜಯ್ ಆನಂದನಿಗೆ ಶ್ರೀ ರಕ್ಷೆಯಾಗಿದೆ‌. ಕೆ.ಎಸ್.ವಿಜಯ್ ಆನಂದ್ ಸ್ಪರ್ಧೆಯಿಂದ ಮಂಡ್ಯ ಕ್ಷೇತ್ರದ ಚಿತ್ರಣವೇ ಬದಲಾಗಿದೆ. ಜೆಡಿಎಸ್ ಟಿಕೆಟ್ ಸಿಗದೆ ಮನೆ ಸೇರುತ್ತಾನೆ, ದೇವೇಗೌಡರು, ಕುಮಾರಸ್ವಾಮಿ ಮಾತಿಗೆ ಬೆಲೆ ನೀಡಿ ಕಣದಿಂದ ಹಿಂದೆ ಸರಿಯುತ್ತಾರೆ ಎಂಬ ನಿರೀಕ್ಷೆಗಳನ್ನೆಲ್ಲಾ ತಲೆಕೆಳಗಾಗಿ ಮಾಡಿರುವ ವಿಜಯ್ ಆನಂದ್ ಜೆಡಿಎಸ್ ಅಭ್ಯರ್ಥಿ ರಾಮಚಂದ್ರ ಅವರಿಗೆ ಬಿಸಿ ತುಪ್ಪವಾಗಿದ್ದಾರೆ.

ಈಗಾಗಲೇ ಕ್ಷೇತ್ರದಲ್ಲಿ ಬಿರುಸಿನ ಮಾತಯಾಚನೆ ಮಾಡುತ್ತಾ ಮತದಾರರಿಗೆ ಜಿಲ್ಲೆಗೆ ಕೊಡುಗೆ ನೀಡಿರುವ ಕೆ.ವಿ.ಶಂಕರಗೌಡರ ಕುಟುಂಬದ ಕುಡಿ ರಾಜಕೀಯವಾಗಿ ಬೆಳೆಯಲು ಒಂದು ಅವಕಾಶ ಕೊಡಿ ಎಂದು ಭಾವನಾತ್ಮಕವಾಗಿ ಸೆಳೆಯುತ್ತಿದ್ದಾರೆ. ಶಂಕರಗೌಡರ ಸಮಕಾಲೀನರು, ಕುಟುಂಬದ ಹಿತೈಷಿಗಳು ಬೆಂಬಲಕ್ಕೆ ನಿಂತಿದ್ದಾರೆ.

ಪ್ರಮುಖವಾಗಿ ಮೂರು ಬಾರಿ ಶಾಸಕರಾಗಿ ಕೆಲಸ ಮಾಡಿರುವ ಎಂ.ಶ್ರೀನಿವಾಸ್, ವಿಜಯ್ ಆನಂದ್ ಜೊತೆಗಿದ್ದು ಚುನಾವಣೆಯನ್ನು ಎದುರಿಸುತ್ತಿದ್ದಾರೆ. ಇವರಿಗೆ ಜೆಡಿಎಸ್ ಟಿಕೆಟ್ ಸಿಗದ ಜಿ.ಪಂ.ಮಾಜಿ ಸದಸ್ಯ ಎಚ್.ಎನ್.ಯೋಗೇಶ್, ಮುದ್ದನಘಟ್ಟ ಮಹಾಲಿಂಗೇಗೌಡ ಸಾಥ್ ನೀಡುತ್ತಿರುವುದು ಪ್ಲಸ್ ಪಾಯಿಂಟ್.

ರಾಮಚಂದ್ರಗೆ ಎಚ್‌ಡಿಕೆಯೇ ಶಕ್ತಿ
ಜೆಡಿಎಸ್ ಟಿಕೆಟ್ ನನಗಿಲ್ಲ, ನನಗಿಲ್ಲ ಎನ್ನುತ್ತಲೇ ಟಿಕೆಟ್ ತಂದ ಮನ್ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರ ಅವರಿಗೆ ಕೆ.ಎಸ್.ವಿಜಯ್ ಆನಂದ್ ಬಂಡಾಯ ಬಿಸಿ ತುಪ್ಪವಾಗಿದೆ. ಜೆಡಿಎಸ್ ಪಕ್ಷದ ಮುಖಂಡರು,

ಕಾರ್ಯಕರ್ತರನ್ನು ತನ್ನೆಡೆಗೆ ಸೆಳೆದುಕೊಂಡಿರುವ ರಾಮಚಂದ್ರ ಪರ ಜೆಡಿಎಸ್ ವರಿಷ್ಠರಾದ ದೇವೇಗೌಡ ಹಾಗೂ ಹೆಚ್.ಡಿ.ಕುಮಾರಸ್ವಾಮಿ ಪ್ರಚಾರ ನಡೆಸಿರುವುದು ಸಮಾಧಾನ ತಂದಿದೆ.

ಮಂಡ್ಯದಲ್ಲಿ ಜೆಡಿಎಸ್ ಪಕ್ಷದ ಸಂಘಟನೆ ಗಟ್ಟಿಯಾಗಿರುವುದನ್ನು ರಾಮಚಂದ್ರ ನೆಚ್ಚಿಕೊಂಡಿದ್ದಾರೆ. ಅಲ್ಲದೆ ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರ ಹೆಸರೇ ಅವರಿಗೆ ಶ್ರೀರಕ್ಷೆಯಾಗಿದೆ. ಮೇಲುಕೋಟೆ ಶಾಸಕ ಸಿ.ಎಸ್.ಪುಟ್ಟರಾಜು ಆಪ್ತನಾದ ಅವರಿಗೆ, ಚುನಾವಣೆಗೂ ಮುನ್ನ ಮಾಡಿದ ಸಾಮಾಜಿಕ ಚಟುವಟಿಕೆ ಕೈ ಹಿಡಿಯುವ ವಿಶ್ವಾಸವಿದೆ‌.

ರವಿಕುಮಾರ್ ಗೆ ಅನುಕಂಪದ ಅಲೆಯ ಬಲ
ಕಳೆದ ಚುನಾವಣೆಯಲ್ಲಿ ಸೋಲು ಕಂಡಿದ್ದ ರವಿಕುಮಾರ್ ಗಣಿಗ ಈ ಬಾರಿ ಅನುಕಂಪದ ಅಲೆಯ ಬಲ ನಂಬಿ ಕಣಕ್ಕಿಳಿದಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಕ್ಷೇತ್ರದ ಜನರೊಂದಿಗೆ ಇದ್ದು ಮಾಡಿದ ಸೇವಾ ಕಾರ್ಯಗಳು ತನ್ನ ಕೈ ಹಿಡಿಯುವ ನಂಬಿಕೆಯಿಂದ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದಾರೆ.

ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಹಾಗೂ ಕಳೆದ ಚುನಾವಣೆಯ ಸೋಲಿನ ಅನುಕಂಪದ ಜತೆಗೆ ಕಾಂಗ್ರೆಸ್‌ನ ಸಾಂಪ್ರಾದಾಯಿಕ ಮತಗಳನ್ನು ನೆಚ್ಚಿಕೊಂಡಿರುವ ರವಿಕುಮಾರ್ ಅವರಿಗೆ ಜೆಡಿಎಸ್ ಪಕ್ಷದ ಭಿನ್ನಮತ ಕೂಡಾ ಆಕ್ಸಿಜನ್ ನೀಡಿದಂತಾಗಿದೆ‌. ಕಾಂಗ್ರೆಸ್ ಟಿಕೆಟ್ ಸಿಗದ ಕೆಲವು ಅತೃಪ್ತರು ರವಿಕುಮಾರ್ ಅವರ ಪರ ನಿಲ್ಲದೆ, ಕೊನೆಗಳಿಗೆಯಲ್ಲಿ ಬೇರೆ ಅಭ್ಯರ್ಥಿಗೆ ಸಹಕಾರ ನೀಡುವ ಮಾತುಗಳು ಕ್ಷೇತ್ರದಲ್ಲಿ ಕೇಳಿ ಬರುತ್ತಿದೆ.

ರಾಜ್ಯ ಹಾಗೂ ಜಿಲ್ಲಾ ಕಾಂಗ್ರೆಸ್ ನಾಯಕರ ಸೂಚನೆ ನಂತರ ಮೇಲ್ನೋಟಕ್ಕೆ ಎಲ್ಲವೂ ಸರಿಯಿದೆ ಎನ್ನುವಂತೆ ಕಂಡರೂ ಅತೃಪ್ತಿ ಕರಗಿದಂತಿಲ್ಲ. ಹಾಗಾಗಿ ಒಳೇಟಿನ ಭೀತಿ ಕೂಡ ಇದೆ. ಆದರೆ ರವಿಕುಮಾರ್ ಪರ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ, ಚಿತ್ರನಟಿ ರಮ್ಯಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ‌.ಶಿವಕುಮಾರ್, ಚಲುವರಾಯಸ್ವಾಮಿ ಅವರು ಪ್ರಚಾರ ನಡೆಸಿರುವುದು ಶಕ್ತಿ ತುಂಬಿದೆ.

ಅಶೋಕ್‌ಗೆ ತಂದೆ ಜಯರಾಮ್ ಅವರೇ ಸ್ಫೂರ್ತಿ
ಬಿಜೆಪಿಯಿಂದ ಸ್ಪರ್ಧೆ ಮಾಡಿರುವ ಅಶೋಕ್‌ಗೆ ತಂದೆ ಎಸ್.ಡಿ.ಜಯರಾಂ ಅವರ ಹೆಸರೇ ಸ್ಫೂರ್ತಿಯಾಗಿದೆ. ಮಂಡ್ಯದಿಂದ ಶಾಸಕನಾಗುವ ಕನಸು ಕಟ್ಟಿಕೊಂಡಿರುವ ಅಶೋಕ್ ಜಯರಾಮ್ ಅವರಿಗೆ ಪ್ರಧಾನಮಂತ್ರಿ

ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ, ಯುಪಿ ಸಿಎಂ ಯೋಗಿ ಆದಿತ್ಯನಾಥ ಅವರು ಪ್ರಚಾರ ನಡೆಸಿ ಹೋಗಿರುವುದು ಬಲ ತಂದಿದೆ.

ತಂದೆ ಎಸ್.ಡಿ.ಜಯರಾಮ್ ಅವರು ಮಾಡಿದ್ದ ಅಭಿವೃದ್ಧಿ ಕೆಲಸಗಳ ಕಾರಣಕ್ಕೆ ಇಂದಿಗೂ ಕೂಡ ಕ್ಷೇತ್ರದಲ್ಲಿ ಅವರ ಹೆಸರಿಗೆ ಮಾನ್ಯತೆ ಇರುವುದು ಅವರಿಗೆ ಪ್ಲಸ್ ಆಗಿದೆ. ಪಕ್ಷಾತೀತ ನಾಯಕರಾಗಿದ್ದ ಜಯರಾಂ ಅವರ ಕಾರಣಕ್ಕಾಗಿಯೇ ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಅಶೋಕ್‌ಗೆ ಜಿಲ್ಲೆಯಲ್ಲಿ ಅಭೂತಪೂರ್ವ ಬೆಂಬಲ ಸಿಕ್ಕಿತ್ತು. ಈ ಚುನಾವಣೆಯಲ್ಲಿಯೂ ಅದೇ ರೀತಿಯ ಮ್ಯಾಜಿಕ್ ನಡೆಯಬಹುದೆನ್ನುವ ಲೆಕ್ಕಾಚಾರ ಬಿಜೆಪಿ ನಾಯಕರದ್ದು.

ರೈತರ ಬಲವೇ ಮಧುಚಂದನ್ ಶ್ರೀರಕ್ಷೆ
ಅಮೆರಿಕದಲ್ಲಿ ಕೋಟ್ಯಂತರ ರೂ. ಸಂಪಾದಿಸುತ್ತಿದ್ದ ಸಾಫ್ಟ್‌ವೇರ್ ಉದ್ಯೋಗವನ್ನು ತೊರೆದು ತಾಯ್ನಾಡಿಗೆ ಮರಳಿದ ಎಸ್.ಸಿ.ಮಧುಚಂದನ್ ಹಲವು ವರ್ಷದಿಂದ ರೈತಸಂಘದಲ್ಲಿ ಸಕ್ರಿಯವಾಗಿ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ.

ಆರ್ಗ್ಯಾನಿಕ್ ಸಂಸ್ಥೆ ಸ್ಥಾಪಿಸಿ ದೇಸೀ ಉತ್ಪನ್ನಗಳ ಮೂಲಕ ಜನರ ಮನ ಸೆಳದ ಮಧುಚಂದನ್ ನಂತರ ಮನ್‌ಮುಲ್‌ನಲ್ಲಿ ನಡೆಯುತ್ತಿದೆ ಎನ್ನಲಾದ ಹಗರಣದ ಬಗ್ಗೆ ರಸ್ತೆಗಿಳಿದು ಚಳವಳಿ ನಡೆಸಿದರು. ಕೀರೆಮಡಿ ಮೂಲಕ ರೈತ ಮಹಿಳೆಯರಿಗೆ ಉದ್ಯೋಗ ನೀಡಿರುವ ಅವರ ಸೇವಾ ಕಾರ್ಯಗಳು ಹಾಗೂ ಹೋರಾಟದ ಹಿನ್ನೆಲೆಯಲ್ಲಿ ಜನರು ಬೆಂಬಲಿಸುತ್ತಾರೆ ಎನ್ನುವ ಆಶಯ ವ್ಯಕ್ತಪಡಿಸುತ್ತಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ