ಪೌರಕಾರ್ಮಿಕರ ವಿಶೇಷ ನೇಮಕಾತಿಯಲ್ಲಿ ಅರ್ಹ ಪೌರಕಾರ್ಮಿಕರು ಕನ್ನಡ ಮಾತನಾಡಲು ತಿಳಿದಿರಬೇಕು ಎಂಬ ಮಾನದಂಡವನ್ನು ಕೈಬಿಟ್ಟು ನೇಮಕಾತಿ ನಡೆಸುತ್ತಿರುವ ಬಿಬಿಎಂಪಿಯ ಕನ್ನಡ ವಿರೋಧಿ ಧೋರಣೆಯನ್ನು ಕರುನಾಡ ಸೇವಕರು ಸಂಘಟನೆಯ ರಾಜ್ಯಾಧ್ಯಕ್ಷ ಲೋಕೇಶ್ ಗೌಡ ತೀವ್ರವಾಗಿ ಖಂಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪೌರಕಾರ್ಮಿಕರ ವಿಶೇಷ ನೇಮಕಾತಿಯಡಿ ಬಿಬಿಎಂಪಿ ಪೌರಕಾರ್ಮಿಕರ ನೇಮಕಾತಿಯನ್ನು ನಡೆಸುತ್ತಿದೆ. ಆದರೆ ಇದರ ನೇಮಕಾತಿಯಲ್ಲಿ ಯಾವುದೇ ವಿದ್ಯಾರ್ಹತೆಯನ್ನು ಅದ್ಯತೆಯಾಗಿ ಪರಿಗಣಿಸುವುದಿಲ್ಲ. ಅದರ ಬದಲಿಗೆ ಅರ್ಹ ಪೌರಕಾರ್ಮಿಕರಿಗೆ ಕನ್ನಡ ಮಾತನಾಡಲು ತಿಳಿದಿರಬೇಕು ಎಂಬುದು ಪ್ರಮುಖ ಅರ್ಹತಾ ನಿಯಮವಾಗಿದೆ, ಇದನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿದರು.
ಮುಂದುವರೆದು ಮಾತನಾಡಿದ ಅವರು, ಈ ನೇಮಕಾತಿ ಪ್ರಕ್ರಿಯೆಯ ಸಂಧರ್ಭದಲ್ಲಿ ಈ ಅಂಶವನ್ನು ಪರಿಗಣಿಸಿ ನೇಮಕಾತಿ ನಡೆಸುವಂತೆ ಕನ್ನಡ ಬಲ್ಲವರನ್ನೆ ನೇಮಕಗೊಳಿಸುವಂತೆ ಬಿಬಿಎಂಪಿಗೆ ಕರುನಾಡ ಸೇವಕರು ಸಂಘಟನೆಯು ಈ ಹಿಂದೆ ಮನವಿ ನೀಡಿತ್ತು ಹಾಗೂ ಈ ಸಂಬಂದ ಕನ್ನಡ ಅಭಿವೃದ್ಧಿ ಪ್ರಾಧಿಕಾರವನ್ನು ಸಹ ಎಚ್ಚರಿಸಿತ್ತು. ಈ ಬಗ್ಗೆ ಎಚ್ಚೆತ್ತ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಈ ವಿಚಾರದ ಬಗೆಗೆ ಬಿಬಿಎಂಪಿಗೆ ಪತ್ರವನ್ನು ಸಹ ಬರೆದಿತ್ತು ಎಂದು ತಿಳಿಸಿದರು.
ಆಡಳಿತದಲ್ಲಿ ಕನ್ನಡ ಜಾರಿಗೆ ತರುವ ಭರವಸೆ ನೀಡಿರುವ ಬಿಬಿಎಂಪಿ ಒಂದೆಡೆಯಾದರೆ , ಕರ್ನಾಟಕದ ರಾಜಧಾನಿಯಲ್ಲಿ ಕರ್ತವ್ಯ ನಿರ್ವಹಿಸುವವರು ಕನ್ನಡ ಬಲ್ಲವರಾಗಿರಬೇಕು ಎಂಬುದು ಸಹಜ ನಿರೀಕ್ಷೆಯಾಗಿದೆ. ಆದರೆ ಇದೆಲ್ಲವನ್ನು ಗಾಳಿಗೆ ತೂರಿರುವ ಬಿಬಿಎಂಪಿ ಕನ್ನಡ ಬಾರದ ಪೌರಕಾರ್ಮಿಕರನ್ನು ನೇಮಕಗೊಳಿಸಿ, ಅಂತಿಮ ನೇಮಕಾತಿ ಪಟ್ಟಿ ಪ್ರಕಟಿಸಿದೆ. ಆದರೆ ಅರ್ಹ ಪೌರಕಾರ್ಮಿಕರಿಗೆ ಕನ್ನಡ ಮಾತನಾಡಲು ತಿಳಿದಿರುವ ಬಗೆಗೆ ಯಾವುದೇ ಸಂದರ್ಶನವು ಸೇರಿದಂತೆ ಇತ್ಯಾದಿಗಳನ್ನು ನಡೆಸಿಲ್ಲ. ಬದಲಿಗೆ ಕನ್ನಡ, ಕರ್ನಾಟಕ ಕನ್ನಡಿಗರ ವಿರುದ್ದ ಏನು ಮಾಡಿದರೂ ನಡೆಯುತ್ತದೆಂಬ ಧೋರಣೆಯನ್ನು ಬಿಬಿಎಂಪಿ ಪ್ರದರ್ಶಿಸುತ್ತಿದೆ. ನೇಮಕಾತಿಯಾದ ನಂತರ ಕನ್ನಡ ಕಲಿಸುವುದಾಗಿ ಬಿಬಿಎಂಪಿ ಹೇಳುತ್ತಿದೆ. ಹಾಗಿದ್ದರೆ, ಈ ನೇಮಕಾತಿ ಪ್ರಕ್ರಿಯೆಯಲ್ಲಿ ಅರ್ಹತಾ ನಿಯಮಕ್ಕೆ ಯಾವ ಗೌರವವೂ ಇಲ್ಲವಾದಂತಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಒಂದು ಕಡೆ ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ ನಡೆದರೆ, ಇಲ್ಲಿ ಕನ್ನಡಿಗರ ರಾಜಧಾನಿಯಲ್ಲೇ ಕನ್ನಡವನ್ನು ಕಡೆಗಾಣಿಸಿ ಪರಭಾಷಿಕರಿಗೆ ಮಣೆ ಹಾಕಲಾಗಿದೆ. ಇದರಿಂದಾಗಿ ಅರ್ಹ ಕನ್ನಡಿಗರಿಗೆ ಉದ್ಯೋಗವಕಾಶ ಇಲ್ಲದಂತೆ ಮಾಡಲಾಗಿದೆ. ಕನ್ನಡ ಮಾಧ್ಯಮ ಮತ್ತು ಗ್ರಾಮೀಣ ಅಭ್ಯರ್ಥಿಗಳ ಹುದ್ದೆಗೂ ಕನ್ನಡಿಗರು ಅರ್ಜಿ ಸಲ್ಲಿಸದಂತೆ ಈ ನಿಯಮವನ್ನು ರೂಪಿಸಲಾಗಿದೆ ಎಂದು ಆರೋಪಿಸಿದರು.
ಮಾತಿನಲ್ಲಿ ಕನ್ನಡ ರಾಮಯ್ಯ ಎಂದು ತಮ್ಮನ್ನು ತಾವೇ ಕರೆದುಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕನ್ನಡ ರಾಮಯ್ಯ ಅಲ್ಲ, ತೆಲುಗು ಮತ್ತು ತಮಿಳು ರಾಮಯ್ಯ ಆಗಿದ್ದಾರೆ ಎಂದು ವ್ಯಂಗ್ಯವಾಡಿದರು.
ಕೆಲಸ ಬಿಬಿಎಂಪಿಯಲ್ಲಿ ಆಧಾರ್ ಆಂಧ್ರದಲ್ಲಿ!
ಬಿಬಿಎಂಪಿಯಲ್ಲಿ ನೇರಪಾವತಿಯಡಿ ಕೆಲಸ ಮಾಡುತ್ತಿರುವ ಹಲವು ಪೌರಕಾರ್ಮಿಕರ ಆಧಾರ್ ವಿಳಾಸ ಇಂದಿಗೂ ಆಂಧ್ರಪ್ರದೇಶ ತೆಲಂಗಾಣದ ವಿಳಾಸವನ್ನೆ ತೋರುತ್ತಿದೆ.ಒಂದು ಸಾವಿರಕ್ಕು ಹೆಚ್ಚು ಮಂದಿ ಪೌರಕಾರ್ಮಿಕರ ಆಧಾರ್ ವಿಳಾಸ ತೆಲಂಗಾಣ ಹಾಗೂ ಆಂಧ್ರ ಪ್ರದೇಶದ ವಿಳಾಸ ಹೊಂದಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ.
ಕರ್ನಾಟಕ ರಾಜ್ಯ ವ್ಯಾಪ್ತಿಯಲ್ಲಿರುವ ಆಧಾರ್ ಕಾರ್ಡುಗಳಿಗೆ ಸರಕಾರಿ ಬಸ್ ಉಚಿತ ಪ್ರಯಾಣ ಉಚಿತ ವಿದ್ಯುತ್, ಕುಟುಂಬಕ್ಕೆ ಎರಡು ಸಾವಿರ ಮಾಸಿಕ ಸಿಗುತ್ತಿದೆ. ಆದರೆ ಆಧಾರ್ ವಿಳಾಸ ಅಂಧ್ರ ಸೇರಿದಂತೆ ಇನ್ಯಾವುದೇ ರಾಜ್ಯದ ವಿಳಾಸ ಹೊಂದಿದ್ದರು, ಈ ಯಾವುದೆ ಸೌಲಭ್ಯ ಕರ್ನಾಟಕದಲ್ಲಿ ಸಿಗುವುದಿಲ್ಲ. ಆದಾಗಿಯು ಬಿಬಿಎಂಪಿಯ ಹಲವು ಕಾರ್ಮಿಕರ ವಿಳಾಸಗಳು ಇವತ್ತಿಗೂ ಅನ್ಯರಾಜ್ಯದ ವಿಳಾಸ ಹೊಂದಿರುವ ಕುರಿತು ಗುಮಾನಿಗಳೆದ್ದಿವೆ. ೨೦೧೮ ರಲ್ಲಿ ನೇರಪಾವತಿಗೆ ಒಳಪಡಿಸಿದಾಗ ಇಲ್ಲಿನ ಸೂಪರ್ ವೈಸರುಗಳು ಹೊರರಾಜ್ಯದಲ್ಲಿರುವ ತಮ್ಮ ಸಂಬಂದಿಗಳನ್ನೆಲ್ಲ ನೇರಪಾವತಿ ಪಟ್ಟಿಗೆ ಸೇರ್ಪಡೆಗೊಳಿಸಿದರು. ತಮ್ಮ ಸಂಬಂದಿಗಳು ಆಂಧ್ರದಲ್ಲಿದ್ದರು ಇಲ್ಲಿ ಯಾವುದೆ ಕರ್ತವ್ಯ ನಿರ್ವಹಿಸದಿದ್ದರು ಅವರ ಖಾತೆಗೆ ಪ್ರತಿ ತಿಂಗಳು ಸಂಬಳ ಬೀಳುವಂತೆ ನೋಡಿಕೊಂಡರು. ಹೇಗೂ ಇವರುಗಳೆ ಸೂಪರ್ ವೈಸರುಗಳಾಗಿದ್ದರಲ್ಲ! ಈಗ ಕೆಲವರು ತರಾತುರಿಯಲ್ಲಿ ಆಧಾರ್ ವಿಳಾಸ ಬದಲಿಸಿಕೊಂಡರೆ ಹಲವರ ವಿಳಾಸ ನೆರೆರಾಜ್ಯದಲ್ಲೆ ಇದೆ ಎಂದು ಕರುನಾಡು ಸಂಘಟನೆಯ ಬೆಂಗಳೂರು ನಗರ ಘಟಕದ ಮಂಜು ದ್ರಾವಿಡ ಅನುಮಾನ ವ್ಯಕ್ತಪಡಿಸಿದ್ದಾರೆ.
ಕನ್ನಡ ಬಾರದ ಇವರಿಗೆ ಬಿಬಿಎಂಪಿ ಕನ್ನಡ ತಿಳಿದಿರುವ ಕುರಿತು ಯಾವುದೇ ಸಂದರ್ಶನ ಇತ್ಯಾದಿ ಮಾಡದೆ ನಯವಾಗಿ ಸರಕಾರಿ ಕೆಲಸವನ್ನು ಸಹ ಕೊಡಲು ಸಿದ್ದವಾಗಿದೆ. ಒಟ್ಟಿನಲ್ಲಿ ಕನ್ನಡಿಗರ ತೆರಿಗೆ ದುಡ್ಡಿನಲ್ಲಿ ಬಿಬಿಎಂಪಿ ಅಧಿಕಾರಿಗಳ ನೆರೆ ರಾಜ್ಯದ ಜಾತ್ರೆ ಸಾಗಿದೆ.
ರಾಜ್ಯ ಸರಕಾರ ಈ ಕುರಿತು ನಿಗಾವಹಿಸದಿದ್ದರೆ ಒಂದು ಸಾವಿರಕ್ಕು ಹೆಚ್ಚು ಬೇನಾಮಿ ಪೌರಕಾರ್ಮಿಕರು ಖಾಯಂವಾಗುವುದು ನಿಶ್ಚಿತ ಎನ್ನಲಾಗುತ್ತಿದೆ

ಬಿಬಿಎಂಪಿ ಪ್ರಮುಖ ಅರ್ಹತಾ ಷರತ್ತಾದ ಕನ್ನಡ ತಿಳಿದಿರಬೇಕು ಎಂಬ ನಿಯಮವನ್ನು ಕಡ್ಡಾಯವಾಗಿ ಜಾರಿಗೆ ತರಬೇಕು. ಕನ್ನಡ ಮಾಧ್ಯಮ ಹಾಗೂ ಗ್ರಾಮೀಣಾ ಅಭ್ಯರ್ಥಿ ಹುದ್ದೆಗಳಿಗೆ ಕನ್ನಡಿಗರು ಅರ್ಜಿ ಸಲ್ಲಿಸಲು ಮುಕ್ತ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.
ಈ ಮೇಲ್ಕಂಡ ಅಂಶಗಳು ಜಾರಿಗೆ ಬರುವರೆಗೆ, ಯಾವುದೇ ಕಾರಣಕ್ಕೂ ನೇಮಕಾತಿಯ ಆದೇಶ ಜಾರಿಗೊಳಿಸದಂತೆ ಆಗ್ರಹಿಸುತ್ತೇವೆ ಎಂದು ತಿಳಿಸಿದರು.
ಲೋಕಾಯುಕ್ತದಲ್ಲಿ ಪ್ರಕರಣ ದಾಖಲು:
ಬಿಬಿಎಂಪಿ ಪೌರಕಾರ್ಮಿಕರ ನೇಮಕಾತಿಯಲ್ಲಿ ಸೂಪರ್ ವೈಸರುಗಳನ್ನು ಸಹ ಪೌರಕಾರ್ಮಿಕರೆಂದು ಪರಿಗಣಿಸಿ, ಎಂಟು ನೂರು (800) ಮಂದಿ ಸೂಪರ್ ವೈಸರುಗಳನ್ನು ಪೌರಕಾರ್ಮಿಕರ ಕೋಟಾದಲ್ಲಿ ನೇಮಕಗೊಳಿಸಲಾಗಿದೆ. ಈ ಕುರಿತು ಲೋಕಾಯುಕ್ತದಲ್ಲಿ ಬಿಬಿಎಂಪಿ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಬೆಂಗಳೂರು ಜವಾಬ್ದಾರಿ ಹೊತ್ತಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈ ಕುರಿತು ಗಮನಹರಿಸುವಂತೆ ಆಗ್ರಹಿಸುತ್ತೇವೆ ಎಂದು ತಿಳಿಸಿದರು.
ಪತ್ರಿಕಾಗೋಷ್ಫಿಯಲ್ಲಿ ಕರುನಾಡು ಸೇವಕರು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಮಾದೇಶ್ ಗೌಡ, ರಾಜ್ಯ ಉಪಾಧ್ಯಕ್ಷ ಉದಯ್ ಶಂಕರ್ ಗೌಡನಹಳ್ಳಿ, ಮೈಸೂರು ವಿಭಾಗೀಯ ಅಧ್ಯಕ್ಷ ಎಂ.ಬಿ.ನಾಗಣ್ಣಗೌಡ, ರಾಜ್ಯ ಸಂಘಟನಾ ಕಾರ್ಯದರ್ಶಿ ಕೃಷ್ಣೇಗೌಡ, ರಾಜ್ಯ ಕಾರ್ಯಾಧ್ಯಕ್ಷ ಮಹೇಶ್ ಶಿವಣ್ಣ, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಸಾರಿಕ ವಿನಾಯಕ, ಬೆಂಗಳೂರು ನಗರಾಧ್ಯಕ್ಷ ಶಿವುಗೌಡ, ರಾಜ್ಯ ವಕ್ತಾರರಾದ ಲಿಂಗರಾಜು ಕಾಡಪ್ಪಾಜಿ, ಮಹಿಳಾ ಉಪಾಧ್ಯಕ್ಷೆ ಗಾಯಿತ್ರಿಗೌಡ, ಮಂಡ್ಯ ಘಟಕದ ಜಿಲ್ಲಾಧ್ಯಕ್ಷ ಚಂದ್ರು ಉಪಸ್ಥಿತರಿದ್ದರು.

ಪತ್ರಿಕಾ ಗೋಷ್ಟಿಯ ನಂತರ ಬಿಬಿಎಂಪಿ ವಿಶೇಷ ಆಯುಕ್ತ ಡಾ.ಅವಿನಾಶ್ ರಾಜೇಂದ್ರ ಮೆನನ್ ರನ್ನು ಭೇಟಿ ಮಾಡಿದ ಸಂಘಟನೆಯ ನಿಯೋಗ ಬಿಬಿಎಂಪಿ ಕನ್ನಡ ವಿರೋಧಿ ಧೋರಣೆ ಕೈಬಿಡದಿದ್ದರೆ ಕನ್ನಡಪರ ಸಂಘಟನೆಗಳು ತೀವ್ರ ಹೋರಾಟ ರೂಪಿಸಲಿವೆ ಎಂದು ಎಚ್ಚರಿಸಿದರು.




