Saturday, November 21, 2026

ಪ್ರಾಯೋಗಿಕ ಆವೃತ್ತಿ

ದಳಪತಿಗಳ ಕಿರುಕುಳಕ್ಕೆ ಕೋಡಿಮಠದ ಶ್ರೀಗಳ ಮೊರೆ ಹೋದ್ರ ಸಚಿವ ಚಲುವರಾಯಸ್ವಾಮಿ !

ಜೆಡಿಎಸ್ ಪಕ್ಷದಿಂದ ಜಿಲ್ಲಾ ಪಂಚಾಯತ್ ಸದಸ್ಯನಾಗಿ ರಾಜಕೀಯ ಪ್ರವೇಶ ಆರಂಭಿಸಿ, ಶಾಸಕ, ಸಚಿವ,ಸಂಸದನಾಗಿ ಎಲ್ಲಾ ಅಧಿಕಾರವನ್ನು ಪಡೆದು ಕೊನೆಗೆ ಜೆಡಿಎಸ್ ತ್ಯಜಿಸಿ ಕಾಂಗ್ರೆಸ್ ಸೇರಿ ಕೃಷಿ ಸಚಿವರಾಗಿರುವ ಚಲುವರಾಯಸ್ವಾಮಿ ವಿರುದ್ಧ ದಳಪತಿಗಳು ತೊಡೆ ತಟ್ಟಿ ಅಖಾಡಕ್ಕೆ ಇಳಿದಿದ್ದಾರೆ.

ತನ್ನ ಒಂದಾನೊಂದು ಕಾಲದ ಆಪ್ತ ಮಿತ್ರ ಚಲುವರಾಯಸ್ವಾಮಿ ಮೇಲೆ ಕುಮಾರಸ್ವಾಮಿ ಉರುಳಿಸುತ್ತಿರುವ ದಾಳಗಳಿಗೆ ಸ್ವತಃ ಚಲುವರಾಯಸ್ವಾಮಿಯೇ ಬೆಚ್ಚಿ ಬಿದ್ದಿದ್ದಾರೆ.

ಅಲ್ಲದೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾಲ್ಕು ಸಾವಿರ ಮತಗಳ ಅಂತರದಿಂದ ಚಲುವರಾಯಸ್ವಾಮಿ ವಿರುದ್ಧ ಪರಾಭವಗೊಂಡು ಮಾಜಿ ಶಾಸಕನಾಗಿರುವ ಸುರೇಶ್ ಗೌಡ ಕೂಡ ಆಧಾರವಿಲ್ಲದ ಆರೋಪಗಳನ್ನು ಮಾಡುತ್ತ ಸಚಿವರ ನಿದ್ದೆಗೆಡಿಸುತ್ತಿದ್ದಾರೆ.

ಅಧಿಕಾರಕ್ಕೆ ಬಂದ ಮೂರು ತಿಂಗಳಲ್ಲಿಯೇ 300 ರಿಂದ 400 ಕೋಟಿ ಹಣವನ್ನು ಭ್ರಷ್ಟಾಚಾರದಿಂದ ಸಂಪಾದಿಸಿದ್ದಾರೆ.ಕೃಷಿ ಇಲಾಖೆಯ ಅಧಿಕಾರಿಗಳಿಂದ 150 ಕೋಟಿ, ಜಲಧಾರೆ ಯೋಜನೆಯಿಂದ 100 ಕೋಟಿ, ಅಧಿಕಾರಿಗಳ ವರ್ಗಾವಣೆಯಿಂದ ನೂರಾರು ಕೋಟಿ ಲೂಟಿ ಮಾಡಿದ್ದಾರೆ, ಬ್ಲಾಕ್ ಮನಿಯನ್ನು ವೈಟ್ ಮಾಡಿಕೊಂಡಿದ್ದಾರೆ ಎಂದೆಲ್ಲಾ ದಿನನಿತ್ಯ ಆರೋಪ ಮಾಡುತ್ತಾ ಜನರ ಮಧ್ಯೆ ಚಲುವರಾಯಸ್ವಾಮಿ ಒಬ್ಬ ದೊಡ್ಡ ಭ್ರಷ್ಟ ಎಂದು ಬಿಂಬಿಸಲು ಪಣ ತೊಟ್ಟು ನಿಂತಿದ್ದಾರೆ. ಇದಕ್ಕೆ ಇಂಬು ಕೊಟ್ಟಂತೆ ಮಾಧ್ಯಮಗಳು ಕೂಡ ಸುಳ್ಳು ಆರೋಪಗಳನ್ನು ದೊಡ್ಡದಾಗಿ ತೋರಿಸುತ್ತಾ ಚಲುವರಾಯಸ್ವಾಮಿ ಕಡು ಭ್ರಷ್ಟ ಎಂಬಂತೆ ಬಿಂಬಿಸುತ್ತಿವೆ.

ಕಳೆದ ಮೂರು ತಿಂಗಳಲ್ಲಿಯೇ ಎರಡು ಇಲಾಖಾ ವಿಚಾರಣೆಗಳನ್ನು ಎದುರಿಸಿರುವ ಚಲುವರಾಯಸ್ವಾಮಿ ದಳಪತಿಗಳ ನಿತ್ಯದ ದಾಳಗಳಿಂದ ನಿಜಕ್ಕೂ ಕಂಗೆಟ್ಟಿದ್ದಾರೆ. ಕೆಎಸ್ಆರ್ಟಿಸಿ ಬಸ್ ಚಾಲಕನನ್ನು ವರ್ಗಾವಣೆ ಮಾಡಿದ್ದಕ್ಕೆ ಆತ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಎಂದು ಜೋರಾಗಿ ಕಿರುಚಿಕೊಂಡ ದಳಪತಿಗಳು ಚಲುವರಾಯಸ್ವಾಮಿ ಭ್ರಷ್ಟ ಸಚಿವ ಎಂದು ಬಿಂಬಿಸಿ ಜನತೆಯ ಕಣ್ಣಲ್ಲಿ ವಿಲನ್ ಮಾಡಲು ಹೊಂಚು ಹಾಕಿ ಸ್ವಲ್ಪ ಮಟ್ಟಿಗೆ ಸಫಲರಾಗಿದ್ದವು. ಇದಾಗಿ ಚಲುವರಾಯಸ್ವಾಮಿ ಸುಧಾರಿಸಿಕೊಳ್ಳುವಷ್ಟರಲ್ಲಿಯೇ ಕೃಷಿ ಇಲಾಖೆಯ ಏಳು ತಾಲ್ಲೂಕುಗಳ ಅಧಿಕಾರಿಗಳ ಮೂಲಕ(ನಕಲಿ ಪತ್ರ?)ಚಲುವರಾಯಸ್ವಾಮಿ ನಮ್ಮಿಂದ ಆರರಿಂದ ಎಂಟು ಲಕ್ಷ ಹಣ ಕಮಿಷನ್ ಕೇಳುತ್ತಿದ್ದಾರೆ ಎಂದು ರಾಜ್ಯಪಾಲರಿಗೆ ಪತ್ರ ಬರೆಸಿದ್ದಾರೆ. ಇದರ ಹಿಂದೆ ಜೆಡಿಎಸ್ ನಾಯಕರ ಕೈವಾಡವಿದೆ ಎಂಬುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಚಲುವರಾಯಸ್ವಾಮಿ ಅವರೇ ಮಾಧ್ಯಮಗಳ ಮುಂದೆ ಹೇಳಿದ್ದಾರೆ.

ದಳಪತಿಗಳ ದಾಳಗಳಿಗೆ ಬಿಚ್ಚಿ ಬಿದ್ದಿರುವ ಚಲುವರಾಯಸ್ವಾಮಿ ಇವೆಲ್ಲ ಘಟನೆಗಳ ಹಿನ್ನೆಲೆಯಲ್ಲಿ ಇಂದು ಹಾಸನದಲ್ಲಿ ಕೋಡಿಮಠದ ಶ್ರೀಗಳನ್ನು ಪತ್ನಿ ಧನಲಕ್ಷ್ಮಿ ಅವರೊಂದಿಗೆ ಭೇಟಿಯಾದ ಚೆಲುವರಾಯಸ್ವಾಮಿ ತನ್ನ ರಾಜಕೀಯ ಭವಿಷ್ಯ ಹೇಗಿದೆ.ದಳಪತಿಗಳ ಕಾಟ ಯಾವಾಗ ನಿಲ್ಲುತ್ತೆ ಎಂದು ಭವಿಷ್ಯ ಕೇಳಿದ್ದಾರೆ.

ಶಾಸಕನಾಗಿ,ಸಚಿವರಾದ ನಂತರ ಇಲ್ಲಿಗೆ ಭೇಟಿ ನೀಡಬೇಕೆಂದು ಕೊಂಡಿದ್ದೆ. ಆದರೆ ಆಗಿರಲಿಲ್ಲ ಎಂದು ಚಲುವರಾಯಸ್ವಾಮಿ ಮಾಧ್ಯಮಗಳ ಎದುರು ಏನೇ ಸಮಜಾಯಿಷಿ ಕೊಟ್ಟರೂ ಅವರು ದಳಪತಿಗಳ ದಾಳಗಳಿಗೆ ಬೆಚ್ಚಿಬಿದ್ದಿರುವುದು ಸತ್ಯ.

ಚಲುವರಾಯಸ್ವಾಮಿಯವರನ್ನು ಹೇಗಾದರೂ ಮಾಡಿ ಭ್ರಷ್ಟ ಎಂದು ಬಿಂಬಿಸಿ ಅವರನ್ನು ರಾಜೀನಾಮೆ ನೀಡುವಂತೆ ಮಾಡುವ ಏಕೈಕ ಗುರಿ ಇಟ್ಟುಕೊಂಡು ಎಚ್.ಡಿ.ಕುಮಾರಸ್ವಾಮಿ ನಾನಾ ರೀತಿಯ ಬಾಣ ಹೂಡಿದ್ದಾರೆ. ಇದಕ್ಕೆ ಸುರೇಶ್ ಗೌಡ ಮತ್ತು ಬಿಜೆಪಿ ನಿಷ್ಠ ಮಾಧ್ಯಮಗಳು ಚಲುವರಾಯಸ್ವಾಮಿ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ನಿತ್ಯ ಮಾಡುತ್ತಾ ಜೀವಂತವಾಗಿಟ್ಟಿವೆ. ಇದೆಲ್ಲ ಜಟಾಪಟಿಯಿಂದ ಬೇಸತ್ತಿರುವ ಚಲುವರಾಯಸ್ವಾಮಿ ಪತ್ನಿ ಧನಲಕ್ಷ್ಮಿ ಅವರೊಂದಿಗೆ ಕೋಡಿಮಠದ ಶ್ರೀಗಳನ್ನು ಭೇಟಿಯಾಗಿ, ರಾಜಕೀಯ ಭವಿಷ್ಯ ಏನಾಗಬಹುದೆಂಬುದರ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನುತ್ತಿವೆ ಮೂಲಗಳು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ