Thursday, September 19, 2024

ಪ್ರಾಯೋಗಿಕ ಆವೃತ್ತಿ

ಮತ ಎಣಿಕೆಗೆ ಕ್ಷಣಗಣನೆ | ಎಲ್ಲೆಡೆ ನಡೆಯುತ್ತಿದೆ ಸೋಲು-ಗೆಲುವಿನ ಲೆಕ್ಕಾಚಾರ – ಬೆಟ್ಟಿಂಗ್ ಭರಾಟೆ

ಮಂಡ್ಯ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ನಾಳೆ ನಡೆಯಲಿದ್ದು, ಜಿಲ್ಲೆಯ ಎಲ್ಲೆಡೆ ಸೋಲು-ಗೆಲುವಿನ ಲೆಕ್ಕಾಚಾರ ನಡೆಯುತ್ತಿದೆ. ಪ್ರತಿ ಕ್ಷೇತ್ರದಲ್ಲೂ ಯಾವ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸುತ್ತಾರೆ, ಯಾರು ಸೋಲುತ್ತಾರೆ. ಯಾರ ಗೆಲುವಿಗೆ ಅಥವಾ ಸೋಲಿಗೆ ಯಾವೆಲ್ಲ ಅಂಶಗಳು ಕಾರಣವಾಗುತ್ತವೆ ಎಂಬ ಬಗ್ಗೆಯೂ ಕೂಡ ಚರ್ಚೆ ನಡೆಯುತ್ತಿವೆ.

ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿರುವ ಕಾಫಿ, ಟೀ ಅಂಗಡಿಗಳು, ಹೋಟೆಲ್ ಗಳ ಮುಂದೆ, ಹಳ್ಳಿಗಳ ಅರಳಿಕಟ್ಟೆ ಮುಂಭಾಗ ಸೇರುವ ಜನರು ಚುನಾವಣೆಯಲ್ಲಿ ಆಗಿರುವ ಮತದಾನದ ಪ್ರಮಾಣ, ಅದು ಯಾರಿಗೆ ಅನುಕೂಲ ತರಬಹುದು,ಯಾವ ಅಭ್ಯರ್ಥಿ ಎಷ್ಟು ಪ್ರಮಾಣದಲ್ಲಿ ಮತದಾರರಿಗೆ ನೆರವು ನೀಡಿದ್ದಾರೆ. ಪಕ್ಷದ ವರ್ಚಸ್ಸು, ರಾಜ್ಯ, ರಾಷ್ಟ್ರ ನಾಯಕರ ಭರವಸೆ ಮಾತುಗಳು ಯಾವ ಜಾತಿಯ ಜನರನ್ನು ಮುಟ್ಟಿವೆ. ಭ್ರಷ್ಟಾಚಾರ, ಗ್ಯಾರಂಟಿ ಯೋಜನೆಗಳೂ ಕೂಡ ಚುನಾವಣೆ ಫಲಿತಾಂಶ ನಿರ್ಧರಿಸಲಿವೆ ಎಂಬ ಬಗ್ಗೆ  ವ್ಯಾಪಕವಾಗಿ ಚರ್ಚೆ ನಡೆಯುತ್ತಿದೆ.

nudikarnataka.com

2018ರ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಏಳು ಕ್ಷೇತ್ರದಲ್ಲೂ ಜೆಡಿಎಸ್ ಜಯಭೇರಿ ಬಾರಿಸಿತ್ತು, ಆದರೆ ಈ ಬಾರಿ ಜಿಲ್ಲೆಯಲ್ಲಿ ಜೆಡಿಎಸ್ ಈ ಸಾಧನೆ ಮಾಡುವುದು ಕಷ್ಟ ಎಂಬ ಮಾತುಗಳು ಕೇಳಿ ಬರುತ್ತಿದೆ. ಈ ಬಾರಿ 7 ಕ್ಷೇತ್ರಗಳಲ್ಲಿ ಜೆಡಿಎಸ್ ಪಕ್ಷ 2ರಿಂದ3 ಸ್ಥಾನ ಪಡೆಯಬಹುದು, ಕಾಂಗ್ರೆಸ್ ಉಳಿದ ಕ್ಷೇತ್ರಗಳಲ್ಲಿ ಜಯ ಸಾಧಿಸಬಹುದು ಎಂಬ ಮಾತುಗಳು ದಟ್ಟವಾಗಿ ಕೇಳಿ ಬರುತ್ತಿದೆ.

ಮಂಡ್ಯ ಜಿಲ್ಲೆ ಜೆಡಿಎಸ್ ಭದ್ರಕೋಟೆಯಾಗಿದ್ದು, ಒಕ್ಕಲಿಗರು ಬಹುಸಂಖ್ಯಾತರಾಗಿರುವ ಕಾರಣ ಪ್ರಬಲ ಪೈಪೋಟಿಯನ್ನೇ ನೀಡಿದೆ. ಹಣಬಲ, ತೋಳ್ಬಲದ ಏಟು ನೀಡಿರುವ ಜೆಡಿಎಸ್ ಪಕ್ಷಕ್ಕೆ ಸರಿ ಸಮಾನವಾಗಿ ಕಾಂಗ್ರೆಸ್ ಪಕ್ಷ ಕೂಡ ಎದಿರೇಟು ನೀಡಿದೆ. ಏನೇ ಆಗಲಿ ಕಳೆದ ಬಾರಿಯ ಫಲಿತಾಂಶ ಈ ಬಾರಿ ಬರುವುದಿಲ್ಲ. ಜೆಡಿಎಸ್ ಪಕ್ಷ ಕೂಡ ಹಲವು ಸ್ಥಾನಗಳನ್ನು ಕಳೆದುಕೊಳ್ಳುವ ಆತಂಕ ಕೂಡ ಆ ಪಕ್ಷದ ಮುಖಂಡರಲ್ಲಿ ದಟ್ಟವಾಗಿದೆ.

ಟಿಕೆಟ್ ಹಂಚಿಕೆಯಲ್ಲಿ ಜೆಡಿಎಸ್ ಪಕ್ಷ ಎಡವಿರುವುದು, ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಹವಾ ಸೃಷ್ಟಿಯಾಗಿರುವುದು, ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಮತ್ತು ಗ್ಯಾರಂಟಿ ಭರವಸೆಗಳು ಕ್ಷೇತ್ರದ ಮತದಾರರನ್ನು ಮುಟ್ಟಿದೆ. ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಡಿ.ಕೆ‌.ಶಿವಕುಮಾರ್, ಪ್ರಿಯಾಂಕ ಗಾಂಧಿ ಪ್ರಚಾರ ನಡೆಸಿರುವುದು. ಇವೆಲ್ಲಾ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಕಾರಣವಾಗಲಿದೆ ಎಂಬುದು ಕಾಂಗ್ರೆಸ್ ಕಾರ್ಯಕರ್ತರ ವಾದ.

ಕ್ಷೇತ್ರದಲ್ಲಿರುವ ಬಹು ಸಂಖ್ಯಾತ ಒಕ್ಕಲಿಗರು ಪ್ರಾದೇಶಿಕ ಪಕ್ಷ ಜೆಡಿಎಸ್ ಜೊತೆ ಗುರುತಿಸಿಕೊಂಡಿದ್ದಾರೆ. ವರಿಷ್ಠರಾದ ಎಚ್. ಡಿ.ದೇವೇಗೌಡ ಹಾಗೂ ಕುಮಾರಸ್ವಾಮಿ ಅವರ ಪ್ರಭಾವ, ಅವರಿಬ್ಬರ ಮೇಲೆ ಜಿಲ್ಲೆಯ ಜನರಿಗಿರುವ ಅಭಿಮಾನ, ಇವು ನಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಈ ಬಾರಿಯೂ ಕಾರಣವಾಗಲಿದೆ ಎಂಬುದು ಜೆಡಿಎಸ್ ಕಾರ್ಯಕರ್ತರ ವಾದ.

ಈ ನಡುವೆ ಈ ಬಾರಿ ಜಿಲ್ಲೆಯಲ್ಲಿ ಬಿಜೆಪಿ ಕೂಡ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ಸರಿ ಸಮಾನವಾಗಿ ತಂತ್ರಗಾರಿಕೆ ನಡೆಸಿದೆ. ಪ್ರಧಾನಿ ಮೋದಿ, ಅಮಿತ್ ಷಾ, ಯೋಗಿ ಆದಿತ್ಯನಾಥ್ ಅವರನ್ನು ಕರೆಸಿ ಭರ್ಜರಿ ಪ್ರಚಾರ ನಡೆಸಿದ್ದಲ್ಲದೆ ಹಣಬಲವೂ ಕೆಲಸ ಮಾಡಿದ್ದು, ನಮಗೂ ಈ ಬಾರಿ ಉತ್ತಮ ಫಲಿತಾಂಶ ಸಿಗಲಿದೆ ಎಂದು ಬಿಜೆಪಿ ಕಾರ್ಯಕರ್ತರೂ ಹೇಳುತ್ತಿದ್ದಾರೆ.

nudikarnataka.com

ಬೆಟ್ಟಿಂಗ್ ಭರಾಟೆ
ಜಿಲ್ಲೆಯ ಏಳು ತಾಲೂಕುಗಳಲ್ಲಿಯೂ ಬೆಟ್ಟಿಂಗ್ ಭರಾಟೆ ಜೋರಾಗಿಯೇ ನಡೆಯುತ್ತಿದೆ. ತಮ್ಮ ಪಕ್ಷದ ಅಭ್ಯರ್ಥಿಯೇ ಗೆಲ್ಲುತ್ತಾನೆ ಎಂದು ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ಕಾರ್ಯಕರ್ತರು, ಮುಖಂಡರು ಬೆಟ್ಟಿಂಗ್ ನಲ್ಲಿ ನಿರತರಾಗಿದ್ದಾರೆ.

ಬಹುತೇಕ ಕಡೆ ಹಣದ ಬೆಟ್ಟಿಂಗ್ ನಡೆದಿದೆ. ಮಂಡ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗಣಿಗ ರವಿಕುಮಾರ್ ಹಾಗೂ ಜೆಡಿಎಸ್ ಅಭ್ಯರ್ಥಿ ಮನ್ಮುಲ್ ರಾಮಚಂದ್ರ ಪರ ಬೆಟ್ಟಿಂಗ್ ನಡೆದಿದೆ. ಎರಡೂ ಪಕ್ಷಗಳ ಕಾರ್ಯಕರ್ತರು ನಮ್ಮ ಪಕ್ಷದ ಅಭ್ಯರ್ಥಿಯೇ ಗೆಲುವು ಸಾಧಿಸಲಿದ್ದಾರೆ ಎಂದು ಬೆಟ್ಟಿಂಗ್ ಕಟ್ಟಿದ್ದಾರೆ.

ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ಶಾಸಕ ರವೀಂದ್ರ ಶ್ರೀಕಂಠಯ್ಯ ಪುನರಾಯ್ಕೆ ಆಗುತ್ತಾರೆಂದು ಬೆಟ್ಟಿಂಗ್ ನಡೆದಿದೆ. ಕಾಂಗ್ರೆಸ್ ಅಭ್ಯರ್ಥಿ ರಮೇಶ್ ಬಾಬು ಗೆಲ್ಲುತ್ತಾರೆಂದು ಅವರ ಅಭಿಮಾನಿಗಳು ಬೆಟ್ಟಿಂಗ್ ಕಟ್ಟಿದ್ದರೆ, ಈ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಅಭ್ಯರ್ಥಿ ಸಚ್ಚಿದಾನಂದ ಅವರಿಗೂ ಅವಕಾಶವಿದೆ ಎಂದು ಸಾಕಷ್ಟು ದೊಡ್ಡ ಮಟ್ಟದಲ್ಲಿ ಬೆಟ್ಟಿಂಗ್ ಕಟ್ಟಿದ್ದಾರೆ.

ಭಾರೀ ಕುತೂಹಲ ಕೆರಳಿಸಿರುವ ನಾಗಮಂಗಲ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಚಿವ ಎನ್. ಚೆಲುವರಾಯಸ್ವಾಮಿ ಹಾಗೂ ಜೆಡಿಎಸ್ ಅಭ್ಯರ್ಥಿ ಸುರೇಶ್ ಗೌಡ ಅವರ ನಡುವೆ ನೆಕ್ ಟು ನೆಕ್ ಫೈಟ್ ನಡೆದಿದ್ದು, ಯಾರೇ ಗೆದ್ದರೂ ಮತಗಳ ಅಂತರ ತೀರಾ ಕಡಿಮೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.

ಕೆಪಿಸಿಸಿ ಉಪಾಧ್ಯಕ್ಷರಾಗಿರುವ ಎನ್. ಚಲುವರಾಯಸ್ವಾಮಿಯವರಿಗೆ ಈ ಬಾರಿ ಗೆಲುವು ಶತಸಿದ್ಧ ಎಂದು ಕಾಂಗ್ರೆಸ್ ಕಾರ್ಯಕರ್ತರು ಹೇಳುತ್ತಿದ್ದರೆ, ದೇವೇಗೌಡ ಹಾಗೂ ಕುಮಾರಸ್ವಾಮಿಯವರ ಮೇಲೆ ತಾಲೂಕಿನ ಜನರ ಅಭಿಮಾನ ಇರುವವರೆಗೂ ಇದು ಸಾಧ್ಯವಿಲ್ಲ ಎನ್ನುವ ಜೆಡಿಎಸ್ ಕಾರ್ಯಕರ್ತರು ಸುರೇಶ್ ಗೌಡ ಅವರೇ ಗೆಲ್ಲುತ್ತಾರೆಂದು ಬೆಟ್ಟಿಂಗ್ ಕಟ್ಟಿದ್ದಾರೆ.

ಮಳವಳ್ಳಿ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಪಿ.ಎಂ.ನರೇಂದ್ರ ಸ್ವಾಮಿ ಹಾಗೂ ಜೆಡಿಎಸ್ ಅಭ್ಯರ್ಥಿ ಅನ್ನದಾನಿ ನಡುವೆ ಜಿದ್ದಾಜಿದ್ದಿ ನಡೆದಿದ್ದು, ನರೇಂದ್ರ ಸ್ವಾಮಿ ಅವರ ಪರ ಬೆಟ್ಟಿಂಗ್ ಜೋರಾಗಿ ನಡೆದಿದೆ. ಜೆಡಿಎಸ್ ಕಾರ್ಯಕರ್ತರು ಅನ್ನದಾನಿ ಪರ ಬೆಟ್ಟಿಂಗ್ ಮಾಡಿದ್ದಾರೆ.

ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಬೆಂಬಲಿತ ಸರ್ವೋದಯ ಕರ್ನಾಟಕ ಪಕ್ಷದ ದರ್ಶನ್ ಪುಟ್ಟಣ್ಣಯ್ಯ ನಡುವೆ ನೇರ ಹಣಾಹಣಿ ನಡೆದಿದ್ದು, ಯಾರೇ ಗೆದ್ದರೂ ಗೆಲುವಿನ ಅಂತರ 2-3 ಸಾವಿರವಷ್ಟೇ ಎಂಬ ಚರ್ಚೆ ನಡೆಯುತ್ತಿದ್ದು, ಜೋರಾಗಿಯೇ ಬೆಟ್ಟಿಂಗ್ ನಡೆದಿದೆ. ಹಲವು ಚುನಾವಣೆಗಳನ್ನು ನಡೆಸಿ ಕ್ಷೇತ್ರದ ಮತದಾರರ ಮನವನ್ನು ಜೆಡಿಎಸ್ ಅಭ್ಯರ್ಥಿ ಸಿ.ಎಸ್. ಪುಟ್ಟರಾಜು ಅರಿತಿದ್ದು ಅವರೇ ಗೆಲ್ಲುತ್ತಾರೆಂದು ಬೆಟ್ಟಿಂಗ್ ಜೋರಾಗಿಯೇ ನಡೆದಿದೆ. ಸರ್ವೋದಯ ಪಕ್ಷದ ದರ್ಶನ್ ಪುಟ್ಟಣ್ಣಯ್ಯ ಗೆಲ್ಲುತ್ತಾರೆಂದು ಅವರ ಪಕ್ಷದ ಕಾರ್ಯಕರ್ತರು ಬೆಟ್ಟಿಂಗ್ ಕಟ್ಟಿದ್ದಾರೆ.

ಕೆ.ಆರ್. ಪೇಟೆ ಕ್ಷೇತ್ರದಲ್ಲಿ ಬಿ.ಎಲ್. ದೇವರಾಜು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು, ಅವರು ಅನುಕಂಪದ ಅಲೆಯಲ್ಲಿ ಗೆದ್ದು ಬರುತ್ತಾರೆಂದು ಬೆಟ್ಟಿಂಗ್ ಕಟ್ಟಲಾಗಿದೆ. ಕೆ.ಆರ್.ಪೇಟೆ ಜೆಡಿಎಸ್ ಭದ್ರಕೋಟೆಯಾಗಿದ್ದು, ಜೆಡಿಎಸ್ ಅಭ್ಯರ್ಥಿ ಎಚ್.ಟಿ. ಮಂಜು ಗೆಲ್ಲುತ್ತಾರೆಂದು, ಬಿಜೆಪಿಯ ನಾರಾಯಣಗೌಡ ಕೂಡ ಗೆಲ್ಲುತ್ತಾರೆಂದು ಬೆಟ್ಟಿಂಗ್ ನಡೆದಿದೆ.

ಮದ್ದೂರಿನಲ್ಲಿ ಈ ಬಾರಿ ಹೈ ವೋಲ್ಟೇಜ್ ಕದನ ನಡೆದಿದ್ದು, ಕಾಂಗ್ರೆಸ್ ಅಭ್ಯರ್ಥಿ ಕದಲೂರು ಉದಯ್ ಹಾಗೂ ಶಾಸಕ ಡಿ.ಸಿ ತಮ್ಮಣ್ಣ ನಡುವೆ ಬಿಗ್ ಫೈಟ್ ನಡೆದಿದ್ದು, ಇಲ್ಲೂ ಕೂಡ ಫಲಿತಾಂಶ ಕುತೂಹಲ ಮೂಡಿಸಿದೆ.

ಒಟ್ಟಾರೆ ಮಂಡ್ಯ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲೂ ಈ ಬಾರಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಬಿಗ್ ಫೈಟ್ ನಡೆದಿದ್ದು, ಯಾವ ಪಕ್ಷ ಹೆಚ್ಚು ಸಾಧನೆ ಮಾಡಲಿದೆ ಎಂಬುದು ನಾಳಿನ ಫಲಿತಾಂಶದಿಂದ ಗೊತ್ತಾಗಲಿದೆ. ಅಲ್ಲಿಯವರೆಗೂ ಕುತೂಹಲದಿಂದ ಕಾಯಬೇಕಷ್ಟೇ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!