Thursday, September 19, 2024

ಪ್ರಾಯೋಗಿಕ ಆವೃತ್ತಿ

ಭಾಗ್ಯ ಜ್ಯೋತಿ ವಿದ್ಯುತ್ ಸಂಪರ್ಕ ಕಡಿತ ಖಂಡಿಸಿ ಪ್ರತಿಭಟನೆ


  • ವಿದ್ಯುತ್ ಬಿಲ್ ಬಾಕಿ ಹಿನ್ನೆಲೆಯಲ್ಲಿ ಮನೆಗಳ ವಿದ್ಯುತ್ ಸಂಪರ್ಕ ಕಡಿತ

  • ಚೆಸ್ಕಾಂ ವಿರುದ್ದ ರೈತಸಂಘ-ದಸಂಸ ಪ್ರತಿಭಟನೆ

ಭಾಗ್ಯಜ್ಯೋತಿ ಹಾಗೂ ಕುಟೀರ ಜ್ಯೋತಿಯ ಫಲಾಲಾನುಭವಿಗಳ ವಿದ್ಯುತ್ ಬಿಲ್ ಬಾಕಿ ಹಿನ್ನೆಲೆ ಆ ಮನೆಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಮುಂದಾಗಿರುವ ಚೆಸ್ಕಾಂ ವಿರುದ್ದ ಇಂದು ಪ್ರತಿಭಟನೆ ನಡೆಯಿತು.

ಶ್ರೀರಂಗಪಟ್ಟಣ ಚೆಸ್ಕಾಂ ಕಚೇರಿ ಎದುರು ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜೇಶ್ ಗೌಡ ನೇತೃತ್ವದಲ್ಲಿ ರೈತಸಂಘ ಹಾಗೂ ದಲಿತ ಸಂಘರ್ಷ ಸಮಿತಿ ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಜಮಾಯಿಸಿದ ಸರ್ಕಾರದ ಕ್ರಮವನ್ನು ಖಂಡಿಸಿದರು.

ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಹೋಬಳಿ ಗ್ರಾಮಗಳಲ್ಲಿ  ಭಾಗ್ಯಜ್ಯೋತಿ ಹಾಗೂ ಕುಟೀರ ಜ್ಯೋತಿಯ ಫಲಾನುಭವಿಗಳಿಗೆ ವಿದ್ಯುತ್ ಸಂಪರ್ಕವನ್ನು ಸರ್ಕಾರ ಉಚಿತವಾಗಿ ಕಲ್ಪಿಸಿತ್ತು. ಇದಕ್ಕೆ ಮೀಟರ್ ಅಳವಡಿಸಿ 40 ಯೂನಿಟ್ ವರೆಗೂ ವಿದ್ಯುತ್ ಬಳಕೆ ಮಾಡಿದರೆ ಬಿಲ್ ಹಣವನ್ನು ಕಟ್ಟುವಂತಿಲ್ಲ ಎಂದು ಆದೇಶ ಮಾಡಿತ್ತು. ಆದರೆ ಈಗಿನ ಬಿಜೆಪಿ ಸರ್ಕಾರ ಅಂತಹ ಬಡ ಕುಟುಂಬಗಳಿಂದ ಬಲವಂತವಾಗಿ ಬಾಕಿ ಹಣ ವಸೂಲು ಮಾಡುತ್ತಿದ್ದು, ಬಿಲ್ ಕಟ್ಟದಿದ್ದರೆ ಸಂಪರ್ಕವನ್ನೇ ಕಡಿತ ಮಾಡುತ್ತಿದೆ, ಇದನ್ನು ಕೂಡಲೇ ನಿಲ್ಲಿಸಬೇಕು ಎಂದರು.

ಜೊತೆಗೆ ರೈತರ ಪಂಪ್ ಸೆಟ್‌ಗಳಿಗೆ ಅಳವಡಿಸಿರುವ ಮೀಟರ್ ತೆಗೆದು ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸಬೇಕು, ಬಾಕಿ ಇರುವ ಹಣವನ್ನು ಮನ್ನಾ ಮಾಡಿ, ಇವತ್ತಿನ ದಿನದಿಂದ ಹೊಸ ಮೀಟರ್ ಅಳವಡಿಸಿ 40 ಯೂನಿಟ್ ಬಳಕೆಯಾದ ನಂತರ ಉಳಿದ ಹಣವನ್ನು ಮಾತ್ರ ಬಿಲ್ ಮೂಲಕ ಹಣ ಪಡೆದುಕೊಳ್ಳಬೇಕು ಎಂದು ಮಂಜೇಶ್ ಗೌಡ ಆಗ್ರಹಿಸಿದರು.

ಅರಕೆರೆ ಹೋಬಳಿಯಲ್ಲಿರುವ ಸಹಾಯಕ ಎಂಜಿನಿಯರ್ ಬೇಕಾಬಿಟ್ಟಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಭಾಗ್ಯ ಜ್ಯೋತಿ ಕುಟೀರ ಜ್ಯೋತಿ ಫಲಾನುಭವಿಗಳ ಮೇಲೆ ಹಾಗೂ ರೈತರ ಮೇಲೆ ಮಾತಿನ ದಬ್ಬಾಳಿಕೆ ಮಾಡುವುದನ್ನು ನಿಲ್ಲಿಸಬೇಕು ಅಂತಹ ಎಂಜಿನಿಯರ್‌ಗಳನ್ನು ಬೇರೇಡೆಗೆ ಸ್ಥಳಾಂತರ ಮಾಡಬೇಕು, ಇಲ್ಲದಿದ್ದರೆ ಅಂತಹವರ
ವಿರುದ್ದ ನಾವೇ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ರೈತ ಸಂಘದ ಉಪಾಧ್ಯಕ್ಷ ನಾಗೇಂದ್ರ ಸ್ವಾಮಿ, ಪಿಎಸ್ಎಸ್ಕೆ ನಿರ್ದೇಶಕ ಪಾಂಡು, ದೊಡ್ಡಪಾಳ್ಯ ಜಯರಾಮು, ದಲಿತ ಸಂಘಟನೆಯ ರವಿಚಂದ್ರ, ಕುಬೇರಪ್ಪ, ಮುಂಡದೊರೆ ಮೋಹನ, ಕರವೇ ಶಂಕರ್ ಚಂದಗಾಲು, ಜೈ ಕರ್ನಾಟಕ ಸಂಘಟನೆಯ ಸುಕುಮಾರ್, ರೈತಸಂಘದ ರಮೇಶ್, ಕರವೇ ಸ್ವಾಮೀಗೌಡ, ರುಕ್ಮಾಂಗದ, ಗೌಡಹಳ್ಳಿ ದೇವರಾಜು, ಮಹೇಶ್ ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!