ಬೆಂಗಳೂರಿನಲ್ಲಿ ಏಪ್ರಿಲ್ 24, 25 ಮತ್ತು 26ರಂದು ನಡೆಯಲಿರುವ ಭಾರತ್ ಪ್ರಿಂಟ್ ಎಕ್ಸ್‌ಪೋ(ವಸ್ತುಪ್ರದರ್ಶನ) ೨೦೨೫ರ ಕಾರ್ಯಕ್ರಮದ ಅಂಗವಾಗಿ ಜಾಗೃತಿ ಅಭಿಯಾನ (ರೋಡ್‌ಶೋ) ಕಾರ್ಯಕ್ರಮವು ಮಾರ್ಚ್ 9 ರಂದು ಮಂಡ್ಯದಲ್ಲಿ ನಡೆಯಲಿದೆ ಎಂದು ಮಂಡ್ಯ ಜಿಲ್ಲಾ ಮುದ್ರಣಕಾರರ ಸಂಘದ ಅಧ್ಯಕ್ಷ ಜೆ.ಲಕ್ಷ್ಮಿನಾರಾಯಣ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 25 ವರ್ಷಗಳ ನಂತರ ಬೆಂಗಳೂರಿನಲ್ಲಿ ಮತ್ತೆ ನೂತನ ತಂತ್ರಜ್ಞಾನವುಳ್ಳ ಮುದ್ರಣ ಯಂತ್ರಗಳ ಎಕ್ಸ್‌ಪೋ ಕಾರ್ಯಕ್ರಮವನ್ನು ಆಲ್ ಇಂಡಿಯಾ ಫೆಡರೇಷನ್ ಆಪ್ ಮಾಸ್ಟರ್ ಪ್ರಿಂಟರ್‍ಸ್ ಹಾಗೂ ಕರ್ನಾಟಕ ರಾಜ್ಯ ಪ್ರಿಂಟರ್‍ಸ್ ಅಸೋಸಿಯೇಷನ್ ವತಿಯಿಂದ ನಡೆಸಲಾಗುತ್ತಿದೆ ಎಂದರು.
ನವನವೀನ ತಂತ್ರಜ್ಞಾನವುಳ್ಳ ಮುದ್ರಣ ಯಂತ್ರಗಳ ಬಗ್ಗೆ ಜಾಗೃತಿ ನೀಡಲು ನಡೆಸಲಾಗುತ್ತಿರುವ ಸದರಿ ಜಾಗೃತಿ ಜಾಥಾ ಮಂಡ್ಯ ಪ್ರವೇಶಿಸಲಿದ್ದು, ಮಾರ್ಚ್ 9ರ ಬೆಳಿಗ್ಗೆ 9 ಗಂಟೆಗೆ ನಗರದ ಕರ್ನಾಟಕ ಸಂಘದ ಸಭಾಂಗಣದಲ್ಲಿ ಬೆಂಗಳೂರು ಮತ್ತು ಮುಂಬೈ ಮುದ್ರಣ ಸಂಸ್ಥೆಗಳ ಮುಖ್ಯಸ್ಥರುಗಳು ವಸ್ತು ಪ್ರದರ್ಶನದ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂದು ಹೇಳಿದರು.
ವಸ್ತು ಪ್ರದರ್ಶನದ ಜಾಗೃತಿ ಕಾರ್ಯಕ್ರಮದಲ್ಲಿ ಭಾರತ್ ಪ್ರಿಂಟ್ ಎಕ್ಸ್‌ಪೋ(ವಸ್ತುಪ್ರದರ್ಶನ)ದ ಸಹ ಅಧ್ಯಕ್ಷ ತುಷಾರ್ ವಿ.ದೋಟೆ, ಕರ್ನಾಟಕ ರಾಜ್ಯ ಪ್ರಿಂಟರ್‍ಸ್ ಅಸೋಸಿಯೇಷನ್‌ನ ಅಧ್ಯಕ್ಷ ಅಶೋಕ್ ಕುಮಾರ್, ಸಹಕಾರ ಸಮಿತಿಯ ಅಧ್ಯಕ್ಷ ಮಹೇಶ್ ಕುಮಾರ್, ಸಹಕಾರ ಸಮಿತಿಯ ಸಂಘಟನಾ ಕಾರ್ಯದರ್ಶಿ ಪ್ರವೀಣ್‌ಕುಮಾರ್, ಜಿಲ್ಲಾ ಸಂಯೋಜಕ ಎಂ.ಎಸ್.ಸತೀಶ್, ಮಂಡ್ಯ ಜಿಲ್ಲಾ ಮುದ್ರಣಕಾರರ ಸಂಘದ ಗೌರವ ಅಧ್ಯಕ್ಷ ಎಂ.ಎಸ್.ಶಿವಪ್ರಕಾಶ್, ಮಂಡ್ಯ ಜಿಲ್ಲಾ ಮುದ್ರಣಕಾರರ ಸಂಘದ ಅಧ್ಯಕ್ಷ ಜೆ.ಲಕ್ಷ್ಮಿನಾರಾಯಣ್ ಉಪಸ್ಥಿತರಿರಲಿದ್ದಾರೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಭಾರತ್ ಆಯುಷ್ಮಾನ್ ಕಾರ್ಡ್ ಮತ್ತು ಕಾರ್ಮಿಕ ಇಲಾಖೆಯ ಶ್ರಮಿಕ್ ಕಾರ್ಡ್ ಮಾಡುಸುವ ಕಾರ್ಯವನ್ನು ಎಂದು ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಜಿಲ್ಲಾ ಮುದ್ರಣಕಾರರ ಸಂಘದ ಗೌರವ ಅಧ್ಯಕ್ಷ ಎಂ.ಎಸ್.ಶಿವಪ್ರಕಾಶ್, ಜಿಲ್ಲಾ ಸಂಯೋಜಕ ಎಂ.ಎಸ್.ಸತೀಶ್, ಜಿಲ್ಲಾ ಕಾರ್ಯದರ್ಶಿ ಆರ್.ರವೀಂದ್ರ ಇದ್ದರು.




