Friday, September 20, 2024

ಪ್ರಾಯೋಗಿಕ ಆವೃತ್ತಿ

ಭೀಮಾ ಕೋರೆಗಾಂವ್ ವಿಜಯ ಶೋಷಿತರ ವಿರೋಚಿತ ಚರಿತ್ರೆ: ರಂಗಸ್ವಾಮಿ

1818 ಜನವರಿ 1ರಂದು 2 ನೇ ಬಾಜಿರಾಯಯ ಪೇಶ್ವೆ ಸೇನೆಯ 28,000 ಸೈನಿಕರ ಮೇಲೆ ಕೇವಲ 500 ಮಹರ್ ರೆಜಿಮೆಂಟ್ ನ ಸೈನಿಕರು ಸಾಧಿಸಿದ ಭೀಮಾ ಕೋರೆಗಾಂವ್ ಯುದ್ದದ ವಿಜಯವು ಶೋಷಿತರ ವಿರೋಚಿತ ಚರಿತ್ರೆಯನ್ನು ವಿಶ್ವಕ್ಕೆ ಸಾರಿದೆ ಎಂದು ಅಂಬೇಡ್ಕರ್ ವಿಚಾರವಾದಿ ರಂಗಸ್ವಾಮಿ ತಿಳಿಸಿದರು.

ಮಂಡ್ಯ ಭೀಮಾ ಕೋರೆಗಾಂವ್ ವಿಜಯೋತ್ಸವ ಸಮಿತಿ ವತಿಯಿಂದ ಮಂಡ್ಯನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿ ಜ.1ರ ಸಂಜೆ ನಡೆದ ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಣೆ ಸಾಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಬಾಬಾ ಸಾಹೇಬ ಡಾ.ಬಿ.ಆರ್.ಅಂಬೇಡ್ಕರ್ ಅವರು, ಇಂಗ್ಲೆಂಡ್ ನಿಂದ ಕಾನೂನು ಪದವಿ ಪೂರೈಸಿ ಭಾರತಕ್ಕೆ ಹಿಂದಿರುಗಿದ ನಂತರ ಮೊಟ್ಟ ಮೊದಲ ಬಾರಿಗೆ 1927ರ ಜ.1ರಂದು ಕೋರೇಗಾಂವ್ ತೆರಳಿ ಮಹರ್ ಸೈನಿಕರ ಪರಾಕ್ರಮ ಸ್ಮರಿಸುವುದಕ್ಕಾಗಿ ನಿರ್ಮಿಸಿದ ಭೀಮಾ ಕೋರೇಗಾಂವ್ ವಿಜಯ ಸ್ಥಂಭವನ್ನು ಸಂದರ್ಶನ ಮಾಡುತ್ತಾರೆ, ಆ ಮೂಲಕ ಮನುವಾದಿಗಳು ಮರೆಮಾಚಿದ್ದ ಶೋಷಿತರ, ದಲಿತರ ಇತಿಹಾಸವನ್ನು ಜಗತ್ತಿಗೆ ಸಾರಿ ಹೇಳಿದರು, ಚರಿತ್ರೆಯಲ್ಲಿ ಹೂತು ಹೋಗಿದ್ದ ಇಂತಹ ಒಂದು ವಿರೋಚಿತ ಚರಿತ್ರೆಯನ್ನು ಹೆಕ್ಕಿ ತೆಗೆದು ಜಗತ್ತಿಗೆ ಪರಿಚಯಿಸಿದರು ಎಂದು ಸ್ಮರಿಸಿದರು.

ಶೋಷಿತರು ಶಾಂತಿಗೂ ಸೈ, ಕೆಣಕಿದರೆ ಕ್ರಾಂತಿಗೂ ಸೈ ಎಂಬುದನ್ನು ಮಹರ್ ಸೈನಿಕರು ರಣರಂಗದಲ್ಲಿ ಘರ್ಜಿಸಿ ಗೆಲುವು ಸಾಧಿಸುವ ಮೂಲಕ ಇತಿಹಾಸ ಸೃಷ್ಟಿಸಿ ತೋರಿಸಿ ಕೊಟ್ಟಿದ್ದಾರೆ. ಅಂತಹ ಇತಿಹಾಸವನ್ನು ನಮ್ಮ ಮುಂದಿನ ತಲೆಮಾರಿಗೆ ತಿಳಿಸುವುದು ಅತ್ಯಗತ್ಯವಾಗಿದೆ ಎಂದರು.

ಡಾ.ಬಿ.ಆರ್.ಅಂಬೇಡ್ಕರ್ ಅವರು ಭೀಮಾ ಕೋರೆಗಾಂವ್ ಪರಕ್ರಮವನ್ನು ಪತ್ತೆ ಹಚ್ಚಿದ ನಂತರ ಅವರು ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರೂ ಜ.1ರಂದು ಕೋರೇಗಾಂವ್ ಗೆ ಬಂದು ಮಹರ್ ಸೈನಿಕರಿಗೆ ಗೌರವ ಸಮರ್ಪಣೆ ಮಾಡುತ್ತಿದ್ದರು, ಅವರಂತೆ ನಾವು ಕೂಡ ಪ್ರತಿವರ್ಷ ನಮ್ಮ ಸೈನಿಕರ ಮಹರ್ ಶೌರ್ಯವನ್ನು ನೆನೆಯುವ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.

ಮೈತ್ರಿ ಗೃಹ ನಿರ್ಮಾಣದ ಸಹಕಾರ ಸಂಘದ ಪರಶಿವಮೂರ್ತಿ ಕಾರ್ಯಕ್ರಮ ನಿರೂಪಿಸಿದರು. ಇದೇ ಕಾರ್ಯಕ್ರಮದಲ್ಲಿ ಗಣ್ಯರು ಮೈತ್ರಿ ಗೃಹ ನಿರ್ಮಾಣದ ಸಹಕಾರ ಸಂಘದ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿದರು.

ಕಾರ್ಯಕ್ರಮದಲ್ಲಿ ಬಿಎಸ್ಪಿ ನಾಯಕ ಎಂ.ಕೃಷ್ಣಮೂರ್ತಿ, ಮಿಮ್ಸ್ ವೈದ್ಯ ಡಾ.ಮನೋಹರ್, ಕಾರ್ಯಪಾಲಕ ಅಭಿಯಂತರರಾದ ಚಂದ್ರಹಾಸ್, ಸಮಾಜ ಕಲ್ಯಾಣಧಿಕಾರಿಗಳಾದ ಸಿದ್ದಲಿಂಗೇಶ್, ಕರುನಾಡ ಸೇವಕರು ಸಂಘಟನೆಯ ನಾಗಣ್ಣಗೌಡ, ವಕೀಲರಾದ ಜೆ.ರಾಮಯ್ಯ, ಸುಂಡಹಳ್ಳಿ ಮಂಜುನಾಥ್,  ಬಾರು ಕೋಲು ಪತ್ರಿಕೆ ಸಂಪಾದಕ ರಂಗಸ್ವಾಮಿ ಉಪಸ್ಥಿತರಿದ್ದರು.

ಸಮಾರಂಭಕ್ಕೂ ಮುನ್ನ ನೂರಡಿ ರಸ್ತೆಯ ಅಂಬೇಡ್ಕರ್ ಸರ್ಕಲ್ ನಿಂದ ನೂರಾರು ಶೋಷಿತರು ಮೇಣದ ಬತ್ತಿಗಳನ್ನು ಬೆಳಗಿಸಿ ಮೆರವಣಿಗೆಯಲ್ಲಿ ಸಾಗಿ ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಉದ್ಯಾನವನ ತಲುಪಿದರು. ಅಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಮುಂದೆ ಮೆಣದ ಬತ್ತಿಗಳನ್ನಿರಿಸಿ ನಮನ ಸಲ್ಲಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!