ಮಂಡ್ಯ ತಾಲ್ಲೂಕಿನ ಸಂತೆಕಸಲಗೆರೆ ಭೂಮಿ ಸಿದ್ದೇಶ್ವರಸ್ವಾಮಿ ಜಾತ್ರೆ ಶುಕ್ರವಾರ ಸಾವಿರಾರು ಸಾರ್ವಜನಿಕರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು. ಭೂಮಿ ಸಿದ್ದೇಶ್ವರ ದೇವಾಲಯದ ಸುತ್ತಮುತ್ತಲಿನ ಏಳು ಗ್ರಾಮಗಳ ಜನರು ಸೇರಿ ಭಕ್ತಿಭಾವದಿಂದ ದೇವರಿಗೆ ಪೂಜೆ ಸಲ್ಲಿಸಿದರು.

ಗುರುವಾರ ಸಂಜೆಯಿಂದಲೇ ದೇವರ ಪೂಜಾ ಕಾರ್ಯ ಆರಂಭವಾಗಿತ್ತು. ಸುತ್ತಲಿನ ಗ್ರಾಮಸ್ಥರು ಬಾಯಿಬೀಗ ಹಾಕಿಸಿಕೊಂಡು ದೇವಾಲಯಕ್ಕೆ ಬೆಳಿಗ್ಗೆಯೇ ಬಂದು ಪೂಜೆ ಸಲ್ಲಿಸಿದರು. ಬೆಳಗಿನ ಜಾವ 4 ಗಂಟೆಗೆ ಏಕವಾರ ರುದ್ರಾಭಿಷೇಕ ಪೂಜೆ ನೆರವೇರಿಸಲಾಯಿತು. ನಂತರ ವಿವಿಧ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು, ಸಾವಿರಾರು ಭಕ್ತರು ಬಂದು ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು.

ಅಟ್ಟುಣ್ಣುವ ಜಾತ್ರೆ
ಸಂತಕಸಲಗೆರೆ, ಕಾರಸವಾಡಿ, ಮಂಗಲ, ಹನಿಯಂಬಾಡಿ, ಮೊತ್ತಹಳ್ಳಿ, ಕೊತ್ತತ್ತಿ ಹಾಗೂ ಬೇವಿನಹಳ್ಳಿಯ ಏಳು ಗ್ರಾಮಸ್ಥರು ತಮ್ಮ ಊರಿನಲ್ಲಿ ನಾಲ್ಕು ದಿಕ್ಕಿನಲ್ಲಿ ಮೂಲೆಮರಿ ಬಲಿಯೊಂದಿಗೆ ಪೂಜೆ ಮಾಡುತ್ತಾರೆ. ಮರಿಯ ಮಾಂಸವನ್ನು ಗ್ರಾಮದ ಪ್ರತಿಯೊಂದು ಮನೆಗೂ ಹಂಚಲಾಗುತ್ತದೆ. ಅದನ್ನು ಭೂಮಿಸಿದ್ದೇಶ್ವರನ ಸನ್ನಿಧಿಗೆ ತಂದು ಅಡುಗೆ ಮಾಡಿ ದೇವರಿಗೆ ನೈವೇದ್ಯ ಅರ್ಪಿಸುತ್ತಾರೆ. ಮಾಡಿದ ಅಡುಗೆಯನ್ನು ಕುಟುಂಬಸ್ಥರು ಹಾಗೂ ನೆಂಟರಿಷ್ಟರೊಂದಿಗೆ ಇಲ್ಲಿಯೇ ಊಟ ಮಾಡಿ ಹೋಗುತ್ತಾರೆ. ಈ ಜಾತ್ರೆ ಅಟ್ಟುಣ್ಣುವ ಜಾತ್ರೆ ಎಂತಲೂ ನೂರಾರು ಹಳ್ಳಿಗೆ ಪ್ರಸಿದ್ಧವಾಗಿದೆ.




