ಮಂಡ್ಯ ನಗರದ ಕೆರೆಯಂಗಳದ ವಿವೇಕಾನಂದ ಬಡಾವಣೆಯಲ್ಲಿ ನಡೆದ ವಸತಿ ಮತ್ತು ಕೊಳಗೇರಿ ಅಭಿವೃದ್ಧಿ ಮಂಡಳಿ ಆಯೋಜಿಸಿದ್ದ ಸರ್ಕಾರಿ ಕಾರ್ಯಕ್ರಮದಲ್ಲಿ ಸಂಸದೆ ಸುಮಲತಾ ಅಂಬರೀಶ್ ಜೊತೆ ಅವರ ಹಿಂಬಾಲಕರು ವೇದಿಕೆ ಮೇಲಿದ್ದರು. ಇದನ್ನು ಕಂಡ ವೇದಿಕೆಯ ಮುಂಭಾಗ ಕುಳಿತಿದ್ದ ಸಾರ್ವಜನಿಕರು ಸಂಸದೆಯ ಹಿಂಬಾಲಕರ ಕಾರುಬಾರು ಹೇಗಿದೆ ನೋಡಿ ಎಂದು ಮಾತನಾಡಿಕೊಂಡ ಪ್ರಸಂಗ ಕಂಡು ಬಂತು.

ಸರ್ಕಾರಿ ಕಾರ್ಯಕ್ರಮದಲ್ಲಿ ಪ್ರೋಟೋಕಾಲ್ ಪ್ರಕಾರ ಚುನಾಯಿತ ಜನಪ್ರತಿನಿಧಿಗಳು ಮಾತ್ರ ಇರಬೇಕು. ಆದರೆ ಇಂದು ಮಂಡ್ಯದ ಕೆರೆಯಂಗಳದಲ್ಲಿ ವಸತಿ ಇಲಾಖೆ ಮತ್ತು ಕೊಳಗೇರಿ ಅಭಿವೃದ್ಧಿ ಮಂಡಳಿ ಆಯೋಜಿಸಿದ್ದ ಜಿ ಪ್ಲಸ್ ಮಾದರಿಯ 576 ಮನೆಗಳ ಉದ್ಘಾಟನೆ ಸಮಾರಂಭದ ವೇದಿಕೆಯಲ್ಲಿ ಸಂಸದೆ ಸುಮಲತಾ ಅಂಬರೀಶ್ ಜೊತೆಗೆ ಅವರ ಹಿಂಬಾಲಕರಾದ ಹನಕೆರೆ ಶಶಿಕುಮಾರ್, ಅರವಿಂದ್, ಮದನ್, ಬೇಲೂರು ಸೋಮಶೇಖರ್ ಉಪಸ್ಥಿತರಿದ್ದರು. ಇವರಲ್ಲಿ ಯಾರೊಬ್ಬರ ಹೆಸರು ಸರ್ಕಾರದ ಆಹ್ವಾನ ಪತ್ರಿಕೆಯಲ್ಲಿ ಇರಲಿಲ್ಲ.
ಸರ್ಕಾರಿ ಕಾರ್ಯಕ್ರಮದಲ್ಲಿ ಹೀಗೆ ಸಂಸದೆಯ ಹಿಂಬಾಲಕರು ದರ್ಬಾರ್ ನಡೆಸುತ್ತಿದ್ದರೂ ಅಧಿಕಾರಿಗಳು ಜಾಣ ಮೌನಕ್ಕೆ ಶರಣಾಗಿದ್ದರು.
ದಿಶಾ ಸಭೆಗೆ ಜಿಲ್ಲೆಯ ಶಾಸಕರನ್ನು ಕರೆಯಬೇಕೆಂಬ ಪ್ರೋಟೋಕಾಲ್ ಇಲ್ಲ ಎನ್ನುವ ಸಂಸದರಿಗೆ, ಅವರ ಹಿಂಬಾಲಕರಿಗೆ ಸರ್ಕಾರಿ ಕಾರ್ಯಕ್ರಮದಲ್ಲಿ ವೇದಿಕೆ ಹತ್ತಲು ಪ್ರೋಟೋಕಾಲ್ ಇದೆಯೇ ಎಂಬ ಪ್ರಶ್ನೆಗೆ ಅವರೇ ಉತ್ತರಿಸಬೇಕು.




