Thursday, November 19, 2026

ಪ್ರಾಯೋಗಿಕ ಆವೃತ್ತಿ

ನಮ್ಮ ರಸ್ತೆ ಸಂಚಾರವೂ… ಪಕ್ಕದಲ್ಲಿರುವ ಭೂತಾನ್ ಪುಟ್ಟ ದೇಶವು…

✍️ ಚೇತನ್ ಕಾಗೇಪುರ


  • ಅಲ್ಲಿನ ಪೊಲೀಸರ ವರ್ತನೆಗೂ, ನಮ್ಮ ಪೊಲೀಸರ ವರ್ತನೆಗೂ ಅಜಗಜಾಂತರ ವ್ಯತ್ಯಾಸವಿದೆ
  • ಯಾವೊಬ್ಬ ವಾಹನ ಚಾಲಕನೂ ಅತಿಮುಖ್ಯ ಕಾರಣ ವಿಲ್ಲದೆ ವಾಹನದ ಹಾರ್ನ್ ಒತ್ತುವುದೇ ಇಲ್ಲ
  • ಆಂಬುಲೆನ್ಸ್ ಹೋಗಲು  ಬೇರೆ ವಾಹನಗಳು ಪಕ್ಕಕ್ಕೆ ನಿಂತು ದಾರಿ ಮಾಡಿ ಕೊಡುವ ವಿಧಾನ ನಿಜಕ್ಕೂ ಶ್ಲಾಘನೀಯ ಅಲ್ಲವೇ ?

ಪ್ರತಿ ದಿನ ರಸ್ತೆಯಲ್ಲಿ ಸಂಚರಿಸುವಾಗ ವಾಹನ ಚಾಲನೆ ಮಾಡುವವರು ವರ್ತಿಸುವ ಬಗೆ, ಅವರ ಸಂಚಾರಿ ನಿಯಮಗಳ ಜ್ಞಾನ ಇವು ನನ್ನನ್ನು ಕಾಡುತ್ತಿರುತ್ತವೆ, ತಕ್ಷಣ ಮನಸ್ಸಿನಲ್ಲಿ ಯುರೋಪ್ ಹಾಗೂ ಇತರೆ ಪಾಶ್ಚಾತ್ಯ ದೇಶಗಳ ನಿಯಮಗಳೆಡೆಗೆ ಹೋಲಿಕೆ ಹೊರಳುತ್ತದೆ.

ಸಾಮಾನ್ಯವಾಗಿ ನಮ್ಮ ಎಲ್ಲಾ ಚಾಲಕರಿಗೆ ತಾನು ಮಾತ್ರ ಸರಿಯಾಗಿ ಚಾಲನೆ ಮಾಡುತ್ತಿದ್ದೇನೆ ಮತ್ತೊಬ್ಬ ನ ಚಾಲನೆ ಸರಿಯಿಲ್ಲ ಎಂಬ ಭಾವನೆ ಇರುತ್ತದೆ. ಆದರೆ ಒಬ್ಬರು ಮತ್ತೊಬ್ಬರಿಗೆ ಸಹಕರಿಸಬೇಕು, ಸಹಿಷ್ಞುತೆಯಿಂದ  ನಡೆದುಕೊಂಡು ಮತ್ತೊಂದು ವಾಹನಕ್ಕೆ ಅವಕಾಶಮಾಡಿ ಕೊಡಬೇಕು ಎಂದುಕೊಳ್ಳುವುದೇ ಇಲ್ಲ. ಇಕ್ಕಟ್ಟಾದ ರಸ್ತೆಗಳಲ್ಲೂ ತಾ ಮುಂದು ನಾ ಮುಂದು ಎಂಬಂತೆ ಮುನ್ನುಗ್ಗುತ್ತಾರೆ.

ಇನ್ನು ಪಾದಚಾರಿಗಳ ಪಾಡು ಕೇಳುವಂತೆಯೇ ಇಲ್ಲ, ಪಾದಚಾರಿಗಳು ರಸ್ತೆ ದಾಟುವಾಗ ಇನ್ನೇನು ವಾಹನ ಬಂದೇ ಬಿಡುತ್ತದೆ. ಅಷ್ಟರಲ್ಲಿ ರಸ್ತೆ ದಾಟಿ ಬಿಡಬೇಕೆನ್ನುವ ಆತುರದಲ್ಲಿ ಒಂದು ಕಡೆಯಿಂದ ಬರುವ ವಾಹನ ನೋಡುತ್ತಾ, ಮತ್ತೊಂದು ಕಡೆಯಿಂದ ಬರುವ ವಾಹನವನ್ನು ಗಮನಿಸದೆ, ರಸ್ತೆಯಲ್ಲಿ ನುಗ್ಗಿಬಿಡುತ್ತಾರೆ. ಅಪಘಾತಕ್ಕೂ ಒಳಗಾಗಿ ಕೈ ಕಾಲು ಮುರಿದುಕೊಳ್ಳುತ್ತಾರೆ. ಹಲವು ಸಲ ಸಾವೂ ಸಂಭವಿಸುತ್ತದೆ.

ಈ ಸಂದರ್ಭದಲ್ಲಿ ವಾಹನ ಚಾಲಕರಂತೂ ರಸ್ತೇದಾಟಲು, ಬರುವವರನ್ನು ಯಾಕಾದರೂ ಬರುತ್ತಾರೋ ನನ್ನ ವಾಹನಕ್ಕೆ ಸಿಕ್ಕಿ ಸಾಯಲು ಎಂದು ಗೋಣಗುತ್ತಾರೆ. ಹಲವು ಸಲ ಪಾದಾಚಾರಿಯನ್ನು ಸಾಯಲು ಹೇಳಿ ಬಂದಿದ್ದೀಯ ಮನೆಯಲ್ಲಿ.. ಎಂದು ಪರಾಕ್ರಮದಿಂದ ಜೋರಾಗಿ ಕಿರುಚುತ್ತಾರೆ.

nudikarnataka.com
ಆಡಳಿತ ಕಛೇರಿ

ಇನ್ನು ಒಂದು ವೇಳೆ ಅಲ್ಲಿ ಪೊಲೀಸರಿದ್ದರಂತೂ ಸಂಚಾರಿ ನಿಯಮಗಳು ಅವರಿಗೇ ಗೊತ್ತಿದೆಯೋ ಇಲ್ಲವೋ ಎಂದು ಅನುಮಾನ ಹುಟ್ಟುವಂತೆ ನಡೆದುಕೊಳ್ಳುತ್ತಾರೆ. ಇತ್ತೀಚಿನ ದಿನಗಳಲ್ಲಂತೂ ಸಂಚಾರಿ ಪೊಲೀಸರು ಟ್ರಾಫಿಕ್ ನಿಯಂತ್ರಿಸಿ ಸಾರ್ವಜನಿಕರಿಗೆ ಅನುಕೂಲ ಮಾಡುವುದಕ್ಕಿಂತ, ವಾಹನ ಸವಾರರಿಂದ ವಸೂಲಾತಿಗೆ ನಿಂತಿರುವುದು  ಜಗಜ್ಜಾಹೀರಾಗಿದೆ.

ಇಂತಹ ಸಂದರ್ಭದಲ್ಲಿ ನನಗೆ ನಮ್ಮದೇ ಪಕ್ಕದ ಪುಟ್ಟ ದೇಶ ಭೂತಾನ್ ನೆನಪಾಗುತ್ತಲೇ ಇರುತ್ತದೆ. ಅಲ್ಲಿನ ಪೊಲೀಸರ ವರ್ತನೆಗೂ, ನಮ್ಮ ಪೊಲೀಸರ ವರ್ತನೆಗೂ ಅಜಗಜಾಂತರ ವ್ಯತ್ಯಾಸವಿದೆ. ಅಲ್ಲಿಗೆ ನಾನು ಇತರೆ ಮೂವರು ಸ್ನೇಹಿತರೊಡಗೂಡಿ ಹೋಗಿದ್ದೆ, ಹೋದದ್ದು ಕಾರಿನಲ್ಲಿ ಇಲ್ಲಿಂದ ಅಲ್ಲಿಗೆ ಹೋಗಿ ಬರಲು ಸುಮಾರು 6,500 km ಗಳ ಪಯಣ. ಎರಡೂ ದೇಶಗಳ ಗಡಿಗಳಲ್ಲಿರುವ ಸಿಟಿಗಳಿಗೂ ಅಷ್ಟೇ ವ್ಯತ್ಯಾಸವಿದೆ. ಈ ಎರಡು ನಗರಗಳನ್ನು ಬೇರ್ಪಡಿಸಿರುವುದು ಒಂದು ಕಾಂಪೌಂಡ್ ಗೋಡೆ ಮಾತ್ರ. ಇತ್ತಲ ನಮ್ಮ ದೇಶದ ನಗರ ಜೈಗಾಂವ್ ಮತ್ತು ಭೂತಾನ್ ಗಡಿಯೊಳಗಿನ ನಗರ ಫ್ಯೂಸಲಿಂಗ್.

nudikarnataka.com
ಅಲ್ಲಿನ ಸಾರಿಗೆ ಕಛೇರಿ ಬೋರ್ಡ್.

ಕಾಂಪೌಂಡ್ ಗೋಡೆ ದಾಟಿದರೆ, ಅತ್ತಲ ವ್ಯವಸ್ಥೆಯೇ ಬೇರೆ ಎನ್ನುವುದು ತತ್ ಕ್ಷಣ ಅರಿವಿಗೆ ಬಾರದೆ ಇರದು. ಕಾರಿನಲ್ಲಿ ಗಡಿದಾಟಿದ ನಾವು. ಆ ದೇಶದೊಳಗೆ ಪ್ರಯಾಣಿಸಲು ನಮಗೆ ಮತ್ತು ನಮ್ಮ ವಾಹನಕ್ಕೆ ಅನುಮತಿ ಪಡೆಯಬೇಕಿತ್ತು. ಅದಕ್ಕಾಗಿ ಅಲ್ಲಿಯ ಪಾರ್ಕಿಂಗ್ ಜಾಗದಲ್ಲಿ ಕಾರನ್ನೂ ನಿಲ್ಲಿಸಿ ಅನುಮತಿ ಪಡೆಯುವ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದೆವು. ಹೀಗಿದ್ದರೂ ಜೊತೆಗಿದ್ದವರು, ಅದನ್ನು ಮಾಡುತ್ತಾರೆ ಅಷ್ಟರಲ್ಲಿ ಒಂದಷ್ಟು ಹೊತ್ತು ನಗರವನ್ನು ಸುತ್ತಾಡಿ ಬರಲೆಂದು ಒಬ್ಬನೇ ಹೊರಟೆ.

ಒಂದು ಕಡೆ ರಸ್ತೆ ದಾಟಲೆಂದು ಇಲ್ಲಿ ಭಾರತದಲ್ಲಿ ದಾಟುವಂತೆ ವಾಹನ ಯಾವುದಾದರು ಬರುತ್ತಿದೆಯೇ ಅಂದಾಜು ಎಷ್ಟು ದೂರದಲ್ಲಿದೆ ,ಅದು ಬರುವುದರೊಳಗೆ ದಾಟಿಬಿಡುವ ಎಂದು ಲೆಕ್ಕ ಹಾಕಿಕೊಂಡು ರಸ್ತೆ ದಾಟಲು ಆರಂಭಿಸಿ, ಅರ್ಧ ರಸ್ತೆ ದಾಟಿ, ರಸ್ತೆ ಮಧ್ಯದಲ್ಲಿರುವ  ವಿಭಜಕದ ಮೇಲೆ ಹತ್ತಿ ನಿಂತು, ಇನ್ನರ್ಧ ದಾಟಲು ಅಣಿಯಾಗುತ್ತಿದೆ. ಅಷ್ಟರಲ್ಲಿ ವಿಷಲ್ ಊದುತ್ತಿರುವ ಸದ್ದು ಕೇಳಿಸಿತು. ಅದು ಬಂದಕಡೆಗೆ ತಿರುಗಿದೆ. ಪೊಲೀಸ್ ಒಬ್ಬ ನನ್ನಕಡೆಗೆ ನಿಲ್ಲುವಂತೆ ಕೈತೋರಿಸಿ ಬರುತ್ತಿದ್ದ. ಅದನ್ನು ನೋಡಿ ನಾನು ಅಲ್ಲಿಯೇ ನಿಂತೆ. ಬಂದವನೇ ನನ್ನ ಹೆಗಲುಮೇಲೆ ಕೈಹಾಕಿ, ಭುಜವನ್ನು ಬಳಸಿ ಹಿಡಿದು ಹಾಯ್ ಹೇಳಿ ನಂತರ ARE YOU COMING FROM INDIA ಎಂದು ನಗುತ್ತಾ ಕೇಳಿದ. ನಾನು YES ಎಂದೆ. ನಂತರ ನನ್ನ ಹೆಸರು ಕೇಳಿ ನೀವಿಲ್ಲಿ ರಸ್ತೆ  ದಾಟುವಾಗ, ಎಲ್ಲೆಂದರಲ್ಲಿ ದಾಟಬೇಡಿ. ಝೀಬ್ರಾ ಕ್ರಾಸ್ ನಲ್ಲಿಯೇ ದಾಟಬೇಕು. ಮತ್ತೊಮ್ಮೆ ಈ ತಪ್ಪನ್ನು ಮಾಡಬೇಡಿ ಎಂದು ನನ್ನ ಹೆಗಲು ಮೇಲೆ ಕೈ ಹಾಕಿಕೊಂಡೆ ಪುನಃ ನಾನು ಮೊದಲು ರಸ್ತೆ ದಾಟಿದ್ದಲ್ಲಿಗೆ ವಾಪಸ್ಸು ಕರೆದುಕೊಂಡು ಬಂದು, ಪ್ರವಾಸಕ್ಕೆ ಬಂದಿರುವಿರಾ ಎಂದ. ನಾನು ಹೌದೆಂದೇ ಅದಕ್ಕವ Happy journey, enjoy your trip, ಎಂದು ಹೊರಟು ಹೋದ. ನಾನು ಪೊಲೀಸನ ನಡವಳಿಕೆಗೆ ಅಚ್ಚರಿ ಮತ್ತು ಬೇರೆ ದೇಶದ ನಿಯಮ ಅರಿಯದೆ ಮಾಡಿದ ತಪ್ಪಿಗೆ ಮುಜುಗರಪಡುತ್ತಾ, ಮತ್ತೆ ರಸ್ತೆ ದಾಟಲು ಜೀಬ್ರಾ ಕ್ರಾಸ್ ಬಳಿ ಬಂದು ಬರುತ್ತಿರುವ ಎಲ್ಲಾ ಕಾರುಗಳು ಹೋಗಿಬಿಡಲು ಎಂದು ನಿಂತಿದ್ದೆ. ಆಗ ಅಲ್ಲಿ ರಸ್ತೆಯಲ್ಲಿ ಬರುತ್ತಿದ್ದ ಕಾರುಗಳೆಲ್ಲವೂ ನಿಂತುಬಿಟ್ಟವು. ಮುಂದಿನ ಕಾರಿನಲ್ಲಿದ್ದ ಚಾಲಕ ನಗುಮುಖದಿಂದ ನನ್ನನ್ನು ನೋಡಿದ. ನಾನು ರಸ್ತೆದಾಟಿ ಹಿಂತಿರುಗಿ ನೋಡಿದೆ. ಚಾಲಕ ಕೈ ಎತ್ತಿ ವಿಶ್ ಮಾಡಿ ಹೊರಟ, ನನಗೋ ಅಚ್ಚರಿ ಮತ್ತು ಅಲ್ಲಿಯ ನಿಯಮ ಕಂಡು ಸಂತೋಷ .

ಇಷ್ಟು ಪಕ್ಕದಲ್ಲಿಯೇ ಇರುವ ನಮ್ಮ ದೇಶದಲ್ಲಿ ಏಕೆ ಹೀಗಿಲ್ಲ ಎನ್ನಿಸಿತು. ನಂತರ ಅಲ್ಲಿ ನನಗಂತೂ ರಸ್ತೆ ದಾಟುವುದೇ ಒಂದು ಸಂತೋಷದ ವಿಷಯವಾಗಿತ್ತು, ಪದೇ ಪದೇ ಬೇಕೆಂದೇ ರಸ್ತೆ ದಾಟಿದ್ದು ಉಂಟು.

ಅಷ್ಟರಲ್ಲಿ ಭೂತಾನ್ ಒಳಗೆ ಸುತ್ತಲೂ ಅನುಮತಿ ಪಡೆವ ಬಗ್ಗೆ ಮಾಹಿತಿ ಸಂಗ್ರಹಿಸಿದ್ದ ಸ್ನೇಹಿತರು ಅಲ್ಲಿಯೇ ಹತ್ತಿರವಿದ್ದ ಇಮಿಗ್ರೇಸನ್ ಕಛೇರಿಗೆ ಹೋದೆವು. ನಾವು ನಾಲ್ಕೂ ಜನರಿಗೆ ಒಂದು ವಾರದ ಮಟ್ಟಿಗೆ ದೇಶ ಸುತ್ತಲು ಅನುಮತಿ ದೊರಕಿತು. ಇನ್ನು ಉಳಿದದ್ದು ನಮ್ಮ ಕಾರಿನ ಅನುಮತಿ. ಇಮಿಗ್ರೇಷನ್ ಕಛೇರಿಯಿಂದ ಸ್ವಲ್ಪ ದೂರದಲ್ಲಿದ್ದ RTO ಕಛೇರಿಗೆ ಹೋದೆವು. ಅಲ್ಲಿನ ಕಛೇರಿ ಸಮಯ ಬೆಳಿಗ್ಗೆ 9 ಘಂಟೆಯಿಂದ 3:30 ರ ವರೆಗೆ. ನಾವು ಅಲ್ಲ8 ಗಂಟೆಗೆ ಹೋದಾಗ ಸರಿಯಾಗಿ 3:30 ಆಗಿತ್ತು. ಅಲ್ಲಿನ ಅಧಿಕಾರಿಯ ಕೊಠಡಿಗೆ ಹೋದ ನಾವು ಅನುಮತಿಯ ಕುರಿತು ಹೇಳಿದೆವು.  ಅಧಿಕಾರಿಯು ಪಕ್ಕದಲ್ಲಿದ್ದ ಗಡಿಯಾರ ನೋಡಿ ಈಗ ಸಮಯ ಮುಗಿದಿದೆ, ನೀವು ನಾಳೆ ಬೆಳಿಗ್ಗೆ ಬನ್ನಿ ಎಂದರು. ನಾವು ನಾಳೆಯ ವರೆಗೆ ಕಾಯಲು ಆಗದು, ಹೇಗಾದರೂ ಇಂದೇ ಅನುಮತಿ ಪಡೆದು, ಇಲ್ಲಿಂದ ಹೊರಟು ರಾತ್ರಿಯೊಳಗೆ ರಾಜಧಾನಿ (ತಿಮ್ಫು)Thimphu ತಲುಪಿಬಿಡುವ ಯೋಜನೆಯಲ್ಲಿದ್ದೆವು.  ಹಾಗಾಗಿ ನಮ್ಮ ಇಲ್ಲಿಯ ಅಡ್ಜಸ್ಟ್ ಮೆಂಟ್ ಟ್ರಿಕ್ ಉಪಯೋಗಿಸಲು ಮುಂದಾದೆವು. ಅದನ್ನು ಅರಿತ ಅಧಿಕಾರಿ ಸಿಟ್ಟಿನಿಂದ ಇಂಗ್ಲಿಷ್ ನಲ್ಲಿ ನಿಮಗೆ ಅರ್ಥವಾಗುವುದಿಲ್ಲವೇ, ಇದೆಲ್ಲಾ ಇಲ್ಲಿ ನಡೆಯುವುದಿಲ್ಲ, ಹೊರಡಿ ನಾಳೆ ಬನ್ನಿ ಎಂದು ಗದರಿ ಕಳಿಸಿದರು.

ಮತ್ತೆ ಭಾರತದ ಗಡಿಯೊಳಗೆ ಬಂದ ನಾವು ಒಂದು ಹೋಟೆಲ್ ಬಳಿ ಊಟಮಾಡಿ ಪಕ್ಕದ ಖಾಲಿ ಜಾಗದಲ್ಲಿ ನಮ್ಮ ಟೆಂಟ್ ಹಾಕಿ ಮಲಗಿದೆವು. ನಮ್ಮ ಪ್ರಯಾಣದಲ್ಲಿ ಯಾವಾಗಲೂ ನಾವು ಉಳಿಯುತ್ತಿದ್ದದ್ದು ಟೆಂಟ್ ನಲ್ಲಿಯೇ.

nudikarnataka.com

ಮತ್ತೆ ಮರುದಿನ ಬೆಳಿಗ್ಗೆ ಬೇಗ ಎದ್ದು ತಯಾರಾಗಿ ನಮ್ಮ ವಾಹನ ಅನುಮತಿಗೆಂದು RTO ಕಚೇರಿಗೆ ಹೋದಾಗ ನಮಗೆ ಆ ಅಧಿಕಾರಿಯನ್ನು ಫೇಸ್ ಮಾಡುವುದು ಹೇಗೆಂಬ ಅಳುಕು ಕಾಡುತ್ತಿತ್ತು, ಆದರೆ ಆ ಅಧಿಕಾರಿಯನ್ನು ಭೇಟಿಮಾಡಿದಾಗ ಆದ ಅನುಭವವೇ ಬೇರೆ. ನಮ್ಮನ್ನು ಕಂಡ ಅವರು Good morning everybody, welcome to Bhutan ಎಂದರು. ನಮ್ಮ ದಾಖಲಾತಿಗಳನ್ನು ಪರೀಕ್ಷಿಸಿ, ತಕ್ಷಣವೇ ವಾಹನದ ಅನುಮತಿ ನೀಡಿದರು ಹಾಗೂ enjoy your days in bhutan ಎಂದರು.

ಹಾಗೆಯೇ ಭೂತಾನ್ ದೇಶದೊಳಗೆ ನಮ್ಮ ಪಯಣ ನಡೆಯುತ್ತಿದ್ದಾಗ ಇನ್ನೊಂದು ಸಂಚಾರಿ ನಿಯಮದ ಅನುಭವ ವಾಯಿತು. ನಾವು ಹೋಗುತ್ತಿದ್ದ ದಾರಿ ಯಾವುದೇ ನಗರ ಟ್ರಾಫಿಕ್ ಇಲ್ಲದ ಹೊರ ಪ್ರದೇಶವಾಗಿತ್ತು, ಆಗ ಎದುರು ದಿಕ್ಕಿನಿಂದ ಒಂದು ಅಂಬ್ಯುಲೆನ್ಸ್  ವಾಹನ ಶಬ್ದಮಾಡುತ್ತಾ ಬರುತ್ತಿತ್ತು. ಅದನ್ನು ಕಂಡೊಡನೆ ನಮ್ಮ ಮುಂದೆ ಹೋಗುತ್ತಿದ್ದ ಕಾರೊಂದು ರಸ್ತೆಯಿಂದ  ಕೆಳಕೆ ಇಳಿದು ಪಕ್ಕಕ್ಕೆ ನಿಂತಿತು. ಅದನ್ನು ನೋಡಿ ನಾವು ನಮ್ಮ ಕಾರನ್ನು ಪಕ್ಕಕ್ಕೆ ನಿಲ್ಲಿಸಿದೆವು. ಅಷ್ಟಕ್ಕೂ ಆಂಬುಲೆನ್ಸ್ ಬರುತ್ತಿದ್ದದ್ದು ನಮ್ಮ ಎದುರು ದಿಕ್ಕಿನಲ್ಲಿ. ನಾವು ನಮ್ಮ ಪಾಡಿಗೆ ಎಡಬಾಗದಿಂದ ಹೋಗಬಹುದಿತ್ತು ಆಂಬುಲೆನ್ಸ್ ಹೋಗಲು ಸಾಕಷ್ಟು ಸ್ಥಳವಿತ್ತು, ಆದರೂ ಬೇರೆ ವಾಹನಗಳು ಪಕ್ಕಕ್ಕೆ ನಿಂತು ದಾರಿ ಮಾಡಿ ಕೊಡುವ ವಿಧಾನ ನಿಜಕ್ಕೂ ಶ್ಲಾಘನೀಯ ಅಲ್ಲವೇ ?

ಆದರೆ ನಮ್ಮಲ್ಲಿ ಆಂಬುಲೆನ್ಸ್ ನಮ್ಮ ಗಾಡಿಯ ಹಿಂಬದಿಯಿಂದ ಬರುತ್ತಿದ್ದರೂ ರಸ್ತೆಯಲ್ಲಿ ಇನ್ನೂ ಅಷ್ಟು ಜಾಗವಿದೆ ಹೋಗುತ್ತಾನೆ ಎಂದುಕೊಂಡು ಸುಮ್ಮನಿರುತ್ತೇವೆ. ಒಳಗಿರುವ ಜೀವ ನಮ್ಮವರದೆ ಆಗಿದ್ದರೆ ಎಂಬ ಆಲೋಚನೆ ಮಾಡಬೇಕಲ್ಲವೇ ?

ಹಾಗೆಯೇ ಯಾವೊಬ್ಬ ವಾಹನ ಚಾಲಕನೂ ಅತಿಮುಖ್ಯ ಕಾರಣ ವಿಲ್ಲದೆ ವಾಹನದ ಹಾರ್ನ್ ಒತ್ತುವುದೇ ಇಲ್ಲ, ಹಾಗೇನಾದರೂ ಹಾರ್ನ್ ಮಾಡಿದರೆ ಅದಕ್ಕೆ ಅಲ್ಲಿನ ಜನ ಏನೋ ತುರ್ತು ಕಾರಣ ಇರಬೇಕೆಂದು ತಕ್ಷಣ ಪ್ರತಿಕ್ರಿಯಿಸುತ್ತಾರೆ. ಅದು ಒಂದು ಸಣ್ಣ ಮತ್ತು ಒಂದೇ ಸಲದ ಹಾರ್ನ್ ಶಬ್ದ. ಹಾರ್ನ್ ಮಾಡಿದ ವಾಹನ ಹಿಂಬದಿಯಲ್ಲಿದ್ದರೆ ಮುಂದೆ ಹೋಗುತ್ತಿರುವ ವಾಹನ ಆ ಕ್ಷಣವೇ ಪಕ್ಕಕ್ಕೆ ಸರಿದು ದಾರಿ ಬಿಟ್ಟುಬಿಡುತ್ತಾರೆ.

ಈಗ ಯೋಚಿಸೋಣ ನಮ್ಮ ಆಡಳಿತಾಡಿಕಾರಿಗಳಿಗೂ ಅಲ್ಲಿನ ಅಧಿಕಾರಿಗೂ, ನಮ್ಮ ಪೊಲೀಸ್ ಮತ್ತು ಅಲ್ಲಿಯ ಪೊಲೀಸ್ ನಡವಳಿಕೆ, ನಮ್ಮ ಜನಗಳು ಹಾಗೂ ಅಲ್ಲಿಯ ಜನರ ನಡವಳಿಕೆಗಳಿಗೆ ಎಷ್ಟು ವ್ಯತ್ಯಾಸವಿದೆಯಲ್ಲವೇ.

ಭ್ರಷ್ಟಾಚಾರವನ್ನು ಸಮಾಜದ ಪ್ರತಿಯೊಬ್ಬರು ಪ್ರತಿಭಟಿಸಿ ಉತ್ತಮವಾದ ಅಂತಹ ವ್ಯವಸ್ಥೆ ಕಟ್ಟುವುದು ಈ ದೇಶದ ನಾಗರಿಕರಾದ ನಮ್ಮೆಲ್ಲರ ಹೊಣೆ ಎನ್ನುವುದನ್ನು ಒಪ್ಪಲೇಬೇಕು. ನಾವು ನಿರ್ಲಕ್ಷಿಸಿರುವ ಅದೆಷ್ಟು ಸಣ್ಣ ಸಣ್ಣ ವಿಚಾರಗಳನ್ನೂ ಅದ್ಯತೆಯ ಮೇರೆಗೆ ಪರಿವರ್ತಿಸಿಕೊಳ್ಳಬೇಕಿದೆ.

ಇಲ್ಲಿಯ ನಮ್ಮ ಪೊಲೀಸ್ ವ್ಯವಸ್ಥೆ, ಚಾಲನಾ ಪರವಾನಿಗೆ ನೀಡುವ ಅಧಿಕಾರಿಗಳ ಭ್ರಷ್ಟತೆ ಇವು ಬದಲಾಗದೆ ಉತ್ತಮ ಸಂಚಾರಿ ವ್ಯವಸ್ಥೆ ನಿರೀಕ್ಷಿಸುವುದಾದರೂ ಹೇಗೆ? ನಮ್ಮ ಪಕ್ಕದಲ್ಲೇ ಇರುವ ಪುಟ್ಟ ದೇಶದಿಂದ ಕಲಿಯಬೇಕಾದ ಉತ್ತಮ ಪಾಠ ಅನ್ನಿಸುತ್ತದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ