Thursday, September 19, 2024

ಪ್ರಾಯೋಗಿಕ ಆವೃತ್ತಿ

” ಬಿಜಾಪುರ ಹಾಗೂ ಕೊಳ್ಳೇಗಾಲದಲ್ಲಿ ಗೆದ್ದ “ತಳಮಟ್ಟದ ಹಿಂದುತ್ವ ” ದ ಅಪಾಯಗಳನ್ನು ಸೆಕ್ಯುಲಾರ್ ರಾಜಕಾರಣ ಅರಿಯಬಲ್ಲದೇ?

✍️ ಶಿವಸುಂದರ್

ಬಿಜಾಪುರ ನಗರಪಾಲಿಕೆಯ ಹಾಗೂ ಕೊಳ್ಳೇಗಾಲ ಪುರಸಭೆಯ ಏಳು ವಾರ್ಡ್ ಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಆಸಾಧಾರಣ ಗೆಲುವನ್ನು ಸಾಧಿಸಿದೆ…ಕೆಲವು ಪ್ರಗತಿಪರ ವಲಯಗಳಲ್ಲಿ ಭಾರತ್ ಜೋಡೋ ಯಾತ್ರೆ ಸೃಷ್ಟಿಸಿದ್ದ ಸಮಾಧಾನಕರ ನಿರಾಳವನ್ನು ಈ ಫಲಿತಾಂಶ ಕಿತ್ತುಕೊಂಡಿದೆ… ಹಾಗೂ ತಳಮಟ್ಟದ ವಾಸ್ತವಗಳನ್ನು ಮುಂದಿಟ್ಟಿದೆ…

ಬಿಜಾಪುರ ಇಡೀ ಕರ್ನಾಟಕದಲ್ಲೇ ಅತೀ ಹೆಚ್ಚು ಮುಸ್ಲಿಂ ಬಾಹುಳ್ಯ ವಿರುವ ಕ್ಷೇತ್ರ…. ಆದರೆ ಇಲ್ಲಿನ ನಗರಪಾಲಿಕೆಯ 35 ಸ್ಥಾನಗಳಲ್ಲಿ ಬಿಜೆಪಿ 17 ಸ್ಥಾನಗಳಲ್ಲಿ ಗೆದ್ದಿದ್ದರೇ, ಕಾಂಗ್ರೆಸ್ 10 ಸ್ಥಾನಗಳನ್ನು ಗೆದ್ದಿದೆ. ಬಿಜಾಪುರದ ಚುನಾವಣೆಯ ಇತಿಹಾಸದಲ್ಲೇ ಬಿಜೆಪಿಗೆ ಇಷ್ಟು ಸ್ಥಾನಗಳು ದಕ್ಕಿರಲಿಲ್ಲ.

ಕೊಳ್ಳೇಗಾಲ ಕ್ಷೇತ್ರವು BSP ರಾಜಕೀಯವು ಆಳವಾಗಿ ಬೇರು ಬಿಟ್ಟಿದ್ದ ಕ್ಷೇತ್ರ…. ಶಾಸಕ ಎನ್. ಮಹೇಶ್ ಬಿಎಸ್ಪಿ ಬಿಟ್ಟು ಬಿಜೆಪಿ ಸೇರಿದ ಮೇಲೆ ಅವರನ್ನು ಅನುಸರಿಸಿ ಬಿಎಸ್ಪಿಯಿಂದ ಆಯ್ಕೆಯಾದ 7 ಸದಸ್ಯರು ಪಕ್ಷದ ವಿಪ್ ಉಲ್ಲಂಘಸಿದ್ದರಿಂದ ಅವರ ಸದಸ್ಯತ್ವ ರದ್ದಾಗಿತ್ತು. ಹೀಗಾಗಿ ಇಲ್ಲಿನ ಪುರಸಭೆಗೆ ನಡೆದ ಉಪಚುನಾವಣೆಯ 7 ಸ್ಥಾನಗಳಲ್ಲಿ 6 ಬಿಜೆಪಿಯ ಪಾಲಾಗಿದೆ. ಕಳೆದ ಭಾರಿ ಇದೇ ಚುನಾವಣೆಯಲ್ಲಿ ಮೂರು ವಾರ್ಡ್ ಗಳಲ್ಲಿ ಸ್ಪರ್ಧಿಸಿದ್ದ BSP ಅಭ್ಯರ್ಥಿಗಳು 4, 8 ಹಾಗೂ 13 ಓಟುಗಳನ್ನು ಗಳಿಸಿ ಹೀನಾಯವಾಗಿ ಸೋತಿದ್ದಾರೆ.

ಎರಡು ಕಡೆ ಬಿಜೆಪಿಯ ವಿರುದ್ಧವಾಗಿದ್ದ ಕಾಂಗ್ರೆಸ್ ಮತ್ತು ಬಿಎಸ್ಪಿಗಳು ಬಿಜೆಪಿಯ ಜಾತಿ ಸಮೀಕರಣವನ್ನು ಹಾಗೂ ತಳಮಟ್ಟದ ಹಿಂದುತ್ವ ರಾಜಕಾರಣವನ್ನು ಅರ್ಥಮಾಡಿಕೊಳ್ಳುವಲ್ಲಿ ಮತ್ತು ಹಿಮ್ಮೆಟ್ಟಿಸುವಲ್ಲಿ ಘೋರವಾಗಿ ವಿಫಲವಾಗಿವೆ. ಇದು ಕೇವಲ ಬಿಜೆಪಿಯ ಹಣಬಲದ ಗೆಲುವು ಮಾತ್ರ ಅಲ್ಲ, ಅಥವಾ ಕೇವಲ ಕಾಂಗ್ರೆಸ್- ಬಿಎಸ್ಪಿಗಳ ಸೋಲೂ ಅಲ್ಲ.

ರಾಜಕೀಯ ಗುಸುಗುಸುಗಳು ಹೇಳುವಂತೆ ಒಂದೇ ಪಕ್ಷದ ವಿರೋಧಿ ಬಣಗಳ ಕಚ್ಚಾಟಗಳು, ವಿರೋಧಿ ನಾಯಕರ ನಡುವೆ ರಾಜಿ-ಒಪ್ಪಂದಗಳು, ಪ್ರತಿಷ್ಠಿತರ ಕಾಲೆಳೆದಾಟಗಳು, ಬಿಜೆಪಿ ಸುರಿಸಿರಬಹುದಾದ ಹಣವೂ.. ಈ ಗೆಲುವಿನ ಹಲವಾರು ಕಾರಣಗಳಲ್ಲಿ ಇರಬಹುದು. ಆದರೆ, ಈ ಗೆಲುವು ದೂರಗಾಮಿ ದೃಷ್ಟಿಯಲ್ಲಿ ಅಪಾಯಕಾರಿಯಾಗಿರುವುದು ಸಂಘ ಪರಿವಾರ ಪ್ರಯೋಗಿಸುತ್ತಿರುವ ” Subaltern Hindutva” – ತಳಮಟ್ಟದ ಹಿಂದುತ್ವದ ವ್ಯೂಹತಂತ್ರ ಗೆದ್ದಿರುವುದಕ್ಕೆ…

ಉದಾಹರಣೆಗೆ ಕರ್ನಾಟಕದಲ್ಲೇ ಅತಿ ಹೆಚ್ಚು ಮುಸ್ಲಿಂ ಮತದಾರರ ಸಾಂದ್ರತೆ ಇರುವ ಬಿಜಾಪುರ ನಗರಸಭೆಯಲ್ಲಿ ಬಿಜೆಪಿಯ ಗೆಲುವು ಮತ್ತು ಕಾಂಗ್ರೆಸ್ಸಿನ ಸೋಲು ಬರಲಿರುವ ದಿನಗಳ ರಾಜಕೀಯ ಮುನ್ಸೂಚನೆಯೂ ಆಗಿರಬಹುದು .ಬಿಜಾಪುರ ನಗರಪಾಲಿಕೆಯ 35 ಸೀಟುಗಳ ಪೈಕಿ, ಬಿಜೆಪಿ 33 ಸೀಟುಗಳಿಗೆ ಮತ್ತು ಕಾಂಗ್ರೆಸ್ 35 ಸೀಟುಗಳಲ್ಲೂ ಸ್ಪರ್ಧಿಸಿತ್ತು. ಕಾಂಗ್ರೆಸ್ 17 ಮುಸ್ಲಿಂ ಅಭ್ಯರ್ಥಿಗಳಿಗೆ ಸೀಟು ಕೊಟ್ಟಿತ್ತು. ಆದರೆ AIMIM ಮತ್ತು SDPI ಕೂಡ ಕಾಂಗ್ರೆಸ್ಸಿನ ಜೊತೆ ಪೈಪೋಟಿಯಲ್ಲಿ ಮುಸ್ಲಿಂ ಒಟ್ಟಿಗೆ ಸೆಣಸಿದೆ. AIMIM ಯಶಸ್ವಿಯೂ ಆಗಿದೆ. ಕಾಂಗ್ರೆಸ್ ಆ ಕಡೆ ದೊಡ್ಡ ಮಟ್ಟದಲ್ಲಿ ಬಲವಾದ ಹಿಂದೂ ಓಟು ನೆಲೆಯೂ ಇಲ್ಲದೆ, ಮತ್ತೊಂದು ಕಡೆ ಮುಸ್ಲಿ ಓಟುಗಳು ಕುಸಿದು ಬಸವಳಿದಿದೆ.

ಮತ್ತೊಂದು ಕಡೆ, ಬಿಜೆಪಿಯು ತನ್ನ ಎಲ್ಲಾ ಸೀಟುಗಳನ್ನು ಹಿಂದುಗಳಿಗೆ ಮಾತ್ರ ಕೊಟ್ಟಿದೆ. ಪ್ರಧಾನವಾಗಿ ಬಲಿಷ್ಠ ಜಾತಿಗಳಿಗೆ ಸೀಟು ಕೊಟ್ಟಿದ್ದರೂ ಅದರ ಜೊತೆಗೆ ಈವರೆಗೆ ಕಾಂಗ್ರೆಸ್ ಹಾಗೂ ಇತರ ಪಕ್ಷಗಳು ಅಲಕ್ಷಿಸಿದ್ದ ಅದರಲ್ಲಿ ಮಾದಿಗ, ಹರಿಣಶಿಕಾರಿ , ಮಾಂಗಗರೋಡಿ, ಗಾಣಿಗ, ಆದಿ ಬಣಜಿಗ, ಹಂಡೆವಜೀರ  -ಇನ್ನಿತರ ಜಾತಿಗಳಿಗೆ ಸೀಟು ಕೊಟ್ಟಿದೆ. ಮೀಸಲಾತಿ ಕ್ಷೇತ್ರಗಳಲ್ಲಿ ಬಿಜೆಪಿ ಮಾದಿಗ ಸಮುದಾಯದಲ್ಲಿ ಒಬ್ಬರಿಗೆ ಸೀಟು ಕೊಟ್ಟಿದ್ದರೆ , ಕಾಂಗ್ರೆಸ್ ಮಾದಿಗ ಸಮುದಾಯಕ್ಕೆ ಸೀಟು ಕೊಟ್ಟಿರಲಿಲ್ಲ. ಉಳಿದ ಮೀಸಲು ಕ್ಷೇತ್ರಗಳಲ್ಲಿ ಬಿಜೆಪಿ ಸ್ಪೃಶ್ಯ ಸಮುದಾಯದ ಅಭ್ಯರ್ಥಿಗಳನ್ನೇ ನಿಲ್ಲಿಸಿತ್ತು. ಅವರಲ್ಲಿ ಹಲವರು ಗೆದ್ದಿದ್ದಾರೆ.

ಮೊದಲ ಬಾರಿ ಅಧಿಕೃತ ಮಾನ್ಯತೆ ಹಾಗೂ ಸ್ಥಾನಮಾನ ಪಡೆದುಕೊಂಡಿರುವ ಆ ಸಮುದಾಯಗಳು ಸ್ವ ಸಂತೋಷದಿಂದಲೇ ಬಿಜೆಪಿಯಿಂದ ಗೆದ್ದಿರುವ ಪ್ರಬಲ ಜಾತಿಗಳ ಜಾತಿ ರಾಜಕಾರಣಕ್ಕೆ ಮತ್ತು ಹಿಂದುತ್ವ ರಾಜಕಾರಣಕ್ಕೆ ಬೆಂಬಲ ನೀಡಬಹುದು… ಮತ್ತು ಬರಲಿರುವ ಶಾಸನ ಸಭೆ ಮತ್ತು ಲೋಕಸಭಾ ಚುನಾವಣೆಗಳಲ್ಲಿ ತಮ್ಮ ಇಡೀ ಸಮುದಾಯ ಬಿಜೆಪಿ ಪರವಾಗಿ ತೆತ್ತುಕೊಳ್ಳಲು ಮಧ್ಯವರ್ತಿಗಳೂ ಆಗಬಹುದು ……ಇದರ ಜೊತೆಗೆ ಸಂಘಪರಿವಾರ ಅಷ್ಟಕ್ಕೇ ಸುಮ್ಮನಾಗುವುದಿಲ್ಲ.

ಉತ್ತರ ಭಾರತದ ಅನುಭವವಾದ ಹಿನ್ನೆಲೆಯಲ್ಲಿ ನೋಡಿದರೆ, ಅದಕ್ಕೆ ಈ ಸಮುದಾಯಗಳನ್ನು ಹಿಂದುತ್ವದ ಕಾಲಾಳುಗಳನ್ನಾಗಿ ಮಾಡಿಕೊಳ್ಳುವ ದೀರ್ಘ ಯೋಜನೆಯೇ ಇರುತ್ತದೆ. ಸಂಘಪರಿವಾರ-ಬಿಜೆಪಿ ಸರ್ಕಾರಗಳು ಈ ಅಲಕ್ಷಿತ ಸಮುದಾಯಗಳಲ್ಲಿ ಒಂದು ಸಣ್ಣ ಗುಂಪನ್ನು ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಪೋಷಿಸಿ ಅದನ್ನು ಮಾದರಿಯಾಗಿ ಸಮುದಾಯದ ಮುಂದಿಡುತ್ತದೆ. ಈವರೆಗಿನ ರಾಜಕಾರಣ ಈ ಸಮುದಾಯಕ್ಕೆದೊಡ್ಡ ಕನಸನ್ನು ಕೂಡ ಕಾಣದಂತೆ ಮಾಡಿರುವಾಗ, ಈ ಸಣ್ಣ ಸ್ತರವನ್ನು ಹಾಗೆಯೇ ಉಳಿಸಿಕೊಂಡು ಪೋಷಿಸುವುದು ಸದ್ಯ ಭವಿಷ್ಯದಲ್ಲಿ ಬಿಜೆಪಿಗೂ ದೊಡ್ಡ ಸವಾಲಾಗದು.

ಈ ಉಪಕೃತ ಸ್ಥರ ಬ್ರಾಹ್ಮಣ್ಯದ ಶ್ರೇಣೀಕೃತ ಚೌಕಟ್ಟನ್ನು ವಿರೋಧಿಸದೆ, ಅದನ್ನು ಆರಾಧಿಸುವಂತೆ ಮಾಡುವ ಪುರಾಣಿಕ ಹಾಗೂ ಐತಿಹಾಸಿಕ ಚೌಕಟ್ಟನ್ನು ಸಂಘಪರಿವಾರ ಒದಗಿಸುತ್ತದೆ. ಬಿಜಾಪುರದಂಥ ಮುಸ್ಲಿಂ ರಾಜರು ಆಳಿದ ಪ್ರದೇಶದಲ್ಲಿ ಆ ಕುಲ ಇತಿಹಾಸದಲ್ಲಿ ಸಾಕಷ್ಟು ಮುಸ್ಲಿಂ ವಿರೋಧಿ ಸರಕನ್ನು ತುಂಬಿ ಅವರನ್ನು ಹಿಂದುತ್ವದ ಸೈನಿಕರನ್ನಾಗಿ ಮಾಡಿಕೊಳ್ಳುತ್ತದೆ. ಇವರಲ್ಲಿ ಅತ್ಯಂತ ಅಲಕ್ಷಿತ ಸಮುದಾಯಗಳಿಗೆ ಕಾಂಗ್ರೆಸ್ ಈವರೆಗೆ ಸೀಟು ಕೊಡುವುದಿರಲಿ, ಅವರನ್ನು Taken for granted ಮಾಡಿಕೊಂಡು ಸಂಪೂರ್ಣವಾಗಿ ನಿರ್ಲಕ್ಷಿಸಿತ್ತು.

ಇಂಥಾ ರಾಜಕೀಯ ಸನ್ನಿವೇಶದಲ್ಲಿ:- ಈ ಅಲಕ್ಷಿತ ಸಮುದಾಯಗಳ ಎದುರು ಅವರಿಗೆ ರಾಜಕೀಯ ಏಜೆನ್ಸಿ ಕೊಡುವ, ಪರ್ಯಾಯ ರಾಜಕೀಯ- ಸಾಂಸ್ಕೃತಿಕ ಕಾರ್ಯಕ್ರಮವನ್ನು ಬದ್ಧತೆಯಿಂದ ಮುಂದಿಡದೆ , ತೊಡಗಿಸಿಕೊಳ್ಳದೆ , ನಾಯಕತ್ವ ನೀಡದೆ … ಕಾಂಗ್ರೆಸ್ಸೋ ಅಥವಾ ಅದರ ಜೊತೆ ಮೈತ್ರಿಯಲ್ಲಿರುವ ಸಾಮಾಜಿಕ ಸಂಘಟನೆಗಳೋ, ಕೇವಲ ಕೋಮುವಾದ ವಿರೋಧವನ್ನು ಮಾತಾಡಿದರೆ… ಅಥವಾ ಈವರೆಗೆ ತಮ್ಮನ್ನು ಅಲಕ್ಷಿಸಿಕೊಂಡು ಬಂದಿರುವ ಪಕ್ಷಗಳಿಗೆ ಓಟು ಹಾಕಬೇಕೆಂದು ಕೇಳಿದರೆ..ಅವರಿಗೆ, ಇವರೆಲ್ಲರಿಗಿಂತ ಬಿಜೆಪಿ ಮತ್ತು ಆರೆಸ್ಸೆಸೇ ಬೆಟರ್ ಎನಿಸಿಬಿಡಬಹುದು.

ಉತ್ತರಪ್ರದೇಶ ಹಾಗೂ ಉತ್ತರ ಭಾರತದಲ್ಲಿ ಈ “ತಳಮಟ್ಟದ ಹಿಂದುತ್ವ” ರಾಜಕಾರಣವೇ, ಬಿಜೆಪಿಗೆ ಓಟುಗಳನ್ನು ಹಾಗೂ ಹಿಂದುತ್ವ ಫ್ಯಾಸಿಸಂಗೆ ತಳಸಮುದಾಯದಲ್ಲಿ ಬಲವಾದ ನೆಲೆಯನ್ನು ಒದಗಿಸಿಕೊಟ್ಟಿದೆ. ಅದು ಈಗ ಕರ್ನಾಟಕದಲೂ ಫಲಿತಾಂಶ ನೀಡುತ್ತಿದೆ.

ಇದು ಹಿಂದುತ್ವದ ರಾಜಕಾರಣದ ಯಶಸ್ಸು ಮಾತ್ರವಲ್ಲ, ಕಾಂಗ್ರೆಸ್ ಹಾಗೂ ಇತರ ಪಕ್ಷಗಳ ಸಂಸದೀಯ ರಾಜಕಾರಣದ ಹಾಗೂ ಪ್ರಗತಿಪರ ಚಳವಳಿಗಳ ವೈಫಲ್ಯವೂ ಆಗಿದೆ. ತಳಮಟ್ಟದ ಹಿಂದುತ್ವ ರಾಜಕಾರಣದ ಸವಾಲನ್ನು ಮೇಲು ಸ್ಥರದ ಕಾಂಗ್ರೆಸ್ ಅಥವಾ ಇನ್ನಿತರ ಪಕ್ಷಗಳ ಮೇಲು ಸ್ಥರದ ಚುನಾವಣಾ ಸೆಕ್ಯುಲಾರ್ ರಾಜಕಾರಣ ಸೋಲಿಸಲಾಗದು ..ಅದನ್ನು ತಳಮಟ್ಟದಲ್ಲಿ ಜನರನ್ನು ಅವರ ಸಮಾನ ಸಂಕಷ್ಟಗಳ ಆಧಾರದಲ್ಲಿ ಒಟ್ಟುಗೂಡಿಸುತ್ತಾ ಕಟ್ಟುವ ಸಮತೆ-ಮಮತೆಯ, ಸಮಾನತೆಯ ಚಳವಳಿ, ರಾಜಕಾರಣ ಮಾತ್ರ ಎದುರಿಸಬಲ್ಲದು.. ಅಲ್ಲವೇ?

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!