Saturday, November 21, 2026

ಪ್ರಾಯೋಗಿಕ ಆವೃತ್ತಿ

ಬೀರ್ಬಲ್ -ತೆನಾಲಿ ಮತ್ತು ಕುನಾಲ್ ಕಾಮ್ರ….

~ಹರೀಶ್ ಗಂಗಾಧರ್ನ

ನನ್ನ ಬಾಲ್ಯದಲ್ಲಿ ಅಕ್ಬರ್ ಬೀರ್ಬಲ್ ಮತ್ತು ಶ್ರೀ ಕೃಷ್ಣದೇವರಾಯ ತೆನಾಲಿರಾಮನ ಕಥೆಗಳು ನನಗೆ ಬಹಳ ಇಷ್ಟವಾಗುತ್ತಿದ್ದವು. ಒಗಟು, ಗಾಢ ಪ್ರಶ್ನೆಗಳನ್ನು ಕೇಳುತ್ತಾ ರಾಜನ ದ್ವಂದ್ವ ನೀತಿಗಳನ್ನು, ಕಪಟ ನೀತಿಗಳನ್ನು ಅತ್ಯಂತ ತೀಕ್ಷ್ಣ ವಾಗಿ ಟೀಕಿಸುತ್ತಿದ್ದವರು ಬೀರ್ಬಾಲ್ ಮತ್ತು ತೆನಾಲಿ. ರಾಜನನ್ನು ಗೇಲಿ ಮಾಡುತ್ತಾ ಅವರು ಹೇಳುತ್ತಿದ್ದ ಕಥೆಗಳು, ಘಟನಾ ವಿವರಗಳು ಹಾಸ್ಯಭರಿತ ಜಾಣ್ನುಡಿಗಳಲ್ಲಿ ಸಾಮಾಜಿಕ ಕಾಳಜಿ, ನೈತಿಕ ಪ್ರಜ್ಞೆಯಿದ್ದರೂ ನನಗೆ ಅವರ ನಿರ್ಭೀತಿ, ನೇರ ನುಡಿ ನಡೆ ಇಷ್ಟವಾಗುತ್ತಿದ್ದವು. ಯಾವುದೇ ಅಳುಕಿಲ್ಲದೆ ರಾಜನ ಮೂರ್ಖತನವನ್ನು ಎಲ್ಲರ ಸಮೂಹದಲ್ಲೇ ಅವರು ತೆರೆದಿಡುತ್ತಿದ್ದರು.

ಆ ದಿನಗಳಲ್ಲಿ ಇಷ್ಟೊಂದು ನಿರ್ಭೀತಿಯಿಂದ ರಾಜನಿಗೆ ಅವನ ತಪ್ಪಿನ ದರ್ಶನ ಮಾಡಿಸುತ್ತಿದ್ದ ಇವರ ಕೆಲಸ ಸುಲಭದ್ದೇನು ಆಗಿರಲಿಲ್ಲ. ರಾಜಾಡಳಿತದ ಆ ದಿನಗಳಲ್ಲಿ ರಾಜನ ಮಾತೆ ಕಾನೂನು. ಅವ ನಿಂತಲ್ಲೇ ಅಪರಿಮಿತ ಕೊಡುಗೆಗಳನ್ನು ಘೋಷಿಸುತ್ತಿದ್ದ ಅಷ್ಟೇ ನಿರ್ದಯಿಯಾಗಿ ಮರಣ ದಂಡನೆಯನ್ನು ವಿಧಿಸಿಬಿಡುತ್ತಿದ್ದ. ರಾಜನ ಸುತ್ತಲೂ ಇದ್ದವರು ಹೊಗಳುಭಟ್ಟರಾಗಿರುವುದೇ ಲೇಸೆಂಬ ನಿರ್ಧಾರಕ್ಕೆ ಬಂದು ಹಣ ಸಂಪತ್ತು ಮಾಡಿಕೊಂಡಿದ್ದರು. ನಿಜ ಹೇಳಿ ರಾಜನ ಕೆಂಗಣ್ಣಿಗೆ ಗುರಿಯಾಗುವುದಕ್ಕಿಂತ ಹೊಗಳಿ ಹಣ ಮಾಡಿಕೊಳ್ಳುವುದು ಸುಲಭ ಮಾರ್ಗವಲ್ಲವೇ? ಹೀಗಿರುವಾಗ ಬೀರ್ಬಲ್, ತೆನಾಲಿರಾಮ ಮಾಡುತ್ತಿದ್ದ ಕೆಲಸ ಎಂತದ್ದು! ಅಕ್ಬರ್, ಕೃಷ್ಣದೇವರಾಯರು ಕೂಡ ಸದಾ ಸತ್ಯದರ್ಶನ ಮಾಡಿಸುವ, ಮುಖಕ್ಕೆ ಕನ್ನಡಿ ಹಿಡಿಯುವ ಬೀರ್ಬಲ್ ತೆನಾಲಿರಾಮರನ್ನು ಅತ್ಯಂತ ಪ್ರೀತಿ ಗೌರವದಿಂದ ಕಾಣುತ್ತಿದ್ದರು. ಅಂತಹ ರಾಜಧಿರಾಜರಿಗೂ ತಮ್ಮ ಭ್ರಮಾಲೋಕದಿಂದ, ದಂತಗೋಪುರಗಳಿಂದ ಕೆಳಗಿಳಿದು ವಾಸ್ತವ ಅರಿಯುವ ಹಂಬಲವಿತ್ತು… ಅವರಿಗೆ ಈ ಹಂಬಲವಿದ್ದುದ್ದರಿಂದಲೇ ನಾವಿಂದು ಅಕ್ಬರ್ ಮತ್ತು ದೇವರಾಯರನ್ನು ನೆನೆಯುತ್ತೇವೆ.

ಹೀಗೊಂದು ಕಥೆಯಿದೆ. ಗಾಳಿಯಲ್ಲಿ ತೇಲುತ್ತಿರುವ ಬೃಹತ್ ಅರಮನೆಯನ್ನು ಕನಸಿನಲ್ಲಿ ಕೃಷ್ಣದೇವರಾಯ ಕಂಡನಂತೆ. ಅದು ಚಿನ್ನದಿಂದ ಮಾಡಿದ್ದಾಗಿತ್ತಂತೆ. ಕನಸು ಮುಗಿದು ರಾಜ ಎದ್ದಮೇಲು ಆ ಅರಮನೆಯ ಕುರಿತೇ ಯೋಚಿಸುತ್ತಿದ್ದನಂತೆ. ತನ್ನ ಕನಸನ್ನು ಆಸ್ಥಾನದ ಮಂತ್ರಿಗಳೊಡನೆ ಹಂಚಿಕೊಂಡನಂತೆ. ಹಲವರು ಕನಸನ್ನು ಶುಭಷಕುನವೆಂದು ರಾಜನನ್ನು ಹುರಿದುಂಬಿಸಿದರಂತೆ. ಹರ್ಷಿತನಾದ ರಾಜ ಗಾಳಿಯಲ್ಲಿ ತೇಲುವ ಅರಮನೆಯನ್ನು ಕಟ್ಟಿಯೇ ಬಿಡಬೇಕೆಂದ ತೀರ್ಮಾನಿಸಿದ್ದನಂತೆ. ಇದು ಮೂರ್ಖತನದ ಪರಮಾವಧಿ ಎಂದು ರಾಜನಿಗೆ ಅರಿವು ಮೂಡಿಸುವ ಕಾಯಕ ತೆನಾಲಿ ರಾಮನ ಕೊರಳಿಗೆ ತಗಲಾಕಿಕೊಂಡಿತಂತೆ.

ಮಾರನೇ ದಿನ ಆಸ್ಥಾನಕೊಬ್ಬ ಮುದುಕ ಬಂದ. “ಸ್ವಾಮಿ, ನನ್ನ ಜೀವಮಾನದ ಉಳಿತಾಯವನ್ನೆಲ್ಲಾ ಕಳ್ಳನೊಬ್ಬ ಕದ್ದಿದ್ದಾನೆ” ಎಂದನಂತೆ . “ಯಾರಾ ಕಳ್ಳ… ಆತನನ್ನು ಈಗಲೇ ಬಂಧಿಸಿ ಶಿಕ್ಷಿಸುವೆ” ಎಂದು ರಾಜ ಅಬ್ಬರಿಸತೊಡಗಿದನಂತೆ . “ಸ್ವಾಮಿ, ಆತನ ವಿವರ ನೀಡುವೆ. ಆದರೆ ವಿವರ ತಿಳಿದೊಡನೆ ನೀವು ನನ್ನನ್ನು ಶಿಕ್ಷಿಸಬಾರದು” ಎಂಬ ಷರತ್ತನ್ನು ಮುದುಕ ಹಾಕಿದನಂತೆ. ರಾಜ ಷರತ್ತಿಗೆ ಒಪ್ಪಿದ ಕೂಡಲೇ ಮುದುಕ ಮುಂದುವರೆದು ” ರಾಜ. ನಿನ್ನೆ ನನ್ನ ಕನಸಲ್ಲಿ ನೀವು ಸೈನ್ಯ ಸಮೇತವಾಗಿ ಬಂದು ನಮ್ಮ ಮನೆ ಲೂಟಿ ಮಾಡಿದಿರಿ” ಎಂದನಂತೆ! ಉಗ್ರ ರೂಪ ತಾಳಿದ ರಾಜ ” ಎಲವೋ ಮೂರ್ಖ ಕನಸಲ್ಲಿ ಕಂಡದ್ದು ವಾಸ್ತವವಾದೀತೆ. ನಿನಗೆಷ್ಟ ಅಹಂಕಾರವೇಳು ಇಂತಹ ದೂರನ್ನು ನನ್ನ ಬಳಿ ತರುವುದಕ್ಕೆ?” ಎಂದು ಗದರಿಸ ತೊಡಗುವ ಹೊತ್ತಿಗೆ ಮುದುಕನ ಮಾರುವೇಶದಿಂದ ತೆನಾಲಿ ಪ್ರತ್ಯಕ್ಷನಾದ. ಅಧಿಕಾರ, ಸಂಪತ್ತನ್ನು ದುರ್ಬಳಕೆ ಮಾಡ ಹೊರಟ ರಾಜನಿಗೆ ಎಂತಹ ಪಾಠ ಕಲಿಸಿದ್ದ ತೆನಾಲಿ! ಇಂತಹ ಕಥೆಗಳನ್ನು ನಿಜವಾಗಿ ಘಟಿಸಿದ್ದರ ಕುರಿತು ನನಗೆ ನನ್ನದೇ ಅನುಮಾನಗಳಿದೆ ಆದರೆ ಸತ್ಯದ ದರ್ಶನ ಮಾಡಿಸುತ್ತಿದ್ದ ತೆನಾಲಿ, ಬೀರ್ಬಲ್ ನಂತಹ ವರ ಮೇಲೆ ಎಫ್ಐಆರ್ ಅಂತು ದಾಖಲಿಸುತ್ತಿರಲಿಲ್ಲ, ಅಥವಾ ತನ್ನ ಸಮರ್ಥಕರನ್ನು ಛೂ ಬಿಡುತ್ತಿರಲಿಲ್ಲ ಎಂಬುದರ ಬಗ್ಗೆ ಖಾತರಿಯಿದೆ.

ಇವತ್ತಿನ ವರುಣ್ ಗ್ರವರ್, ಕುನಾಲ್ ಕಾಮ್ರ, ಮುನಾವರ್ ಫಾರೂಖೀ ಅಥವಾ ತುರ್ತು ಪರಿಸ್ಥಿತಿ ದಿನಗಳ ಆರ್ ಕೆ ಲಕ್ಷ್ಮಣ್ ಬೀರ್ಬಲ್ ಮತ್ತು ತೆನಾಲಿರಾಮ ಮಾಡಿದ ಕೆಲಸವನ್ನೇ ಇಂದು ಮಾಡುತ್ತಿದ್ದಾರೆ ಆದ್ರೆ ಇಂದು ನಕ್ಕು ಸುಮ್ಮನಾಗುವ ಅಥವಾ ಆತ್ಮಾವಲೋಕನ ಮಾಡಿಕೊಳ್ಳುವ ನಾಯಕರಿಲ್ಲ. ಈ ಅಸಹನೆ ಬರೀ ದೇಶವನ್ನಾಳುವ ನಾಯಕರಲ್ಲಿದೆ ಅಂತ ಅಂದುಕೊಳ್ಳಬೇಡಿ. ಈ ಅಸಹನೆ ಎಲ್ಲಾ ಹಂತಗಳಿಗೂ ಟ್ರಿಕಲ್ ಆಗಿದೆ. ಎಲ್ಲರಿಗೂ ಸುತ್ತಲೂ ಹೊಗಳುಭಟ್ಟರೇ ಬೇಕು!

ಕೆಲ ವರುಷಗಳ ಕೆಳಗೆ ಅಕಾಡೆಮಿಯೊಂದು ಪ್ರತಿಷ್ಠಿತ ಪ್ರಶಸ್ತಿಗಳನ್ನು ಘೋಷಿಸಿತು. ಪಟ್ಟಿಯಲ್ಲಿದ್ದ ಹೆಸರುಗಳ ಬಗ್ಗೆ ಹಲವರಿಗೆ ತಕರಾರುಗಳಿದ್ದವು. ಈ ತಕರಾರುಗಳ ಬಗ್ಗೆ ಮಾಹಿತಿ ಪಡೆದ ಅಧ್ಯಕ್ಷರು ಕೆಂಡಾಮಂಡಲವಾದರು. ತಕರಾರು ತೆಗೆದವ ನೀಚ, ದುರಾಳ ಎಂದು ಅಬ್ಬರಿಸಿದರು, ಉರಿಯುವ ಬೆಂಕಿಗೆ ಪೆಟ್ರೋಲ್ ಸುರಿಯುವಂತೆ ಸುತ್ತಲಿದ್ದ ಹೊಗಳುಭಟ್ಟರು “ಹೂ ಸಾ ನೀವೇಳಿದ್ದೆ ಸರಿ, ಅವ ದುರುಳನೇ” ಎಂದರು. ಅಚ್ಚರಿಯ ವಿಷಯವೆಂದರೆ ತಕರಾರು ತೆಗೆದ ವ್ಯಕ್ತಿಯನ್ನು ಒಮ್ಮೆಯೂ ಭೇಟಿಯಾಗಿರದ ಅಧ್ಯಕ್ಷರು ಆತ ತೆಗೆದ ತಕರಾರುಗಳ ಆಧಾರದ ಮೇಲೆಯೇ ಆತ ದುರಳನೆಂಬ ನಿರ್ಧಾರಕ್ಕೆ ಬಂದಿದ್ದರು. ತಕರಾರಿನ validity ಕುರಿತು ಅಧ್ಯಕ್ಷರು ಒಂದು ಕ್ಷಣವೂ ಯೋಚಿಸಲಿಲ್ಲ! ಡಿಸೆಂಟ್ ಕುರಿತು ಆ ಅಧ್ಯಕ್ಷರು ಈಗಲೂ ಭಾಷಣ ಕೊಡುತ್ತಲೇ ಇರುತ್ತಾರೆ. ಅಸಹನೆ ಎಲ್ಲಾ ವಲಯಗಳಿಗೂ ಹರಡಿರುವುದು ನನಗೆ ಆತಂಕಾರಿ ವಿಷಯ.

ಕಳೆದ ವಾರ ಪೋಸ್ಟ್ ಮಾಡಿದ “ನಯಾ ಭಾರತ್” ಎಂಬ ವಿಡಿಯೋದಲ್ಲಿ ಕುನಾಲ್ ಕೇವಲ ರಾಜಕಾರಣಿಗಳನ್ನಷ್ಟೇ ಟೀಕೆ ಮಾಡದೆ ಉದ್ಯಮಿಗಳನ್ನೂ ಟೀಕೆ ಮಾಡಿದ್ದೆ ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಿರಬಹುದು. ಕಡಲಲ್ಲಿ ತೇಲುವ ಮಂಜುಗಡ್ಡೆ ಕಾಲು ಭಾಗದಷ್ಟು ಮಾತ್ರ ನಮಗೆ ಕಾಣುತ್ತದೆ ಉಳಿದ ಮುಕ್ಕಾಲು ಭಾಗ ನೀರಿನಲ್ಲಿ ಮುಳುಗಿರುತ್ತದೆ ಎಂಬ ಮಾತಿದೆ ಹಾಗೆಯೇ ರಾಜಕಾರಣ ಅನೋದನ್ನು ಇಂದು ಬಹುಪಾಲು ನಿಯಂತ್ರಿಸಿ, ನಡೆಸುತ್ತಿರುವುದು ಉದ್ಯಮಿಗಳು. ಈ ಕಹಿ ಸತ್ಯವನ್ನು ಬಲು ಸರಳವಾಗಿ ಜನರ ಮುಂದಿಟ್ಟರು. ಉದ್ಯಮಿಗಳ ಕುರಿತು ಕುನಾಲ್ ಮಾಡಿದ ಹಾಸ್ಯ ಅರಗಿಸಿಕೊಳ್ಳಲು ಬಹಳಷ್ಟು ಮಂದಿಗೆ ಆಗಿರಲಾರದು. ಈ ದೇಶದ ಉದ್ಯಮಿ- ರಾಜಕಾರಣಿ – ಸಂತರ ಅಪವಿತ್ರ ಮೈತ್ರಿ, ಮೂವರು ಸೇರಿ ಹೆಣೆವ ಜೇಡರ ಬಲೆಯ ಕುರಿತು ಜನ ಸಾಮಾನ್ಯರಿಗೆ ತಿಳಿದೆ ಇಲ್ಲ. ಕುನಾಲ್ ಮಾಡಿದ ಎಕ್ಸ್ ಪೋಸೆ ಅವನನ್ನು ಸಂಕಷ್ಟಕ್ಕೆ ಸಿಲುಕಿಸಿದೆ ಎಂದರೆ ತಪ್ಪಲ್ಲ.

ನಾನಾಗ ಎಂಟು ವರ್ಷದ ಬಾಲಕ. ನಮ್ಮ ಮನೆಗೊಂದು ಕನ್ನಡ ಮ್ಯಾಗಝೀನ್ ಬರೋದು. ಅದರಲ್ಲಿ ಹಿರಿಯ ಮಹಿಳೆಯೊಬ್ಬರ ಹಿತವಚನ ಪಬ್ಲಿಶ್ ಆಗೋದು. ಆ ಮಹಿಳೆ ಪವಿತ್ರ ಸ್ಥಳವೊಂದರ ಅಧಿಕಾರಿಗಳ ತಾಯಿಯಾಗಿದ್ದರು. ಅವರ ಹಿತವಚನಗಳನ್ನು ತಪ್ಪದೆ ನಮ್ಮಮ್ಮ ಓದಿ ನನಗೇಳುತ್ತಿದ್ದರು. ಬೆಳೆದು ಇಷ್ಟು ವರ್ಷಗಳಾದ ಮೇಲೆ ನನಗೆ ತಿಳಿದ ವಿಷಯವೇನೆಂದರೆ, ಆ ಮಹಾತಾಯಿ ಈ ಹಿತವಚನಗಳನ್ನು ಬರೆಯು ದಿನಗಳಲ್ಲೇ ಆ ಪವಿತ್ರಸ್ಥಳದಲ್ಲಿ ಅತ್ಯಾಚಾರ, ಕೊಲೆ, ಭೂಕಬಳಿಗೆಯಾಗುತ್ತಿತ್ತು ಎಂಬುದು! ಮತ್ತೊಬ್ಬ ಉದ್ಯಮಿಯ ಪುಸ್ತಕಗಳು ಎಲ್ಲೆಡೆ ಕಾಣಸಿಗುತ್ತವೆ, ಅವರ ಕಥೆಗಳು ಎಲ್ಲಾ ಪಠ್ಯ ಪುಸ್ತಕಗಳ ಒಳಗೆಯು ನುಸುಳಿಬಿಟ್ಟಿವೆ. ಕಾಫ್ಕ, ಸಾಕಿ, ಓ ಹೆನ್ರಿ, ಕಮೂ, ವೂಲ್ಫ್, ಮಾರ್ಕ್ವೆಜ್ , ಬೋರ್ಗೆಸ್ ಅವರಂತಹ ದಿಗ್ಗಜರನ್ನು ಹಿಂದಿಕ್ಕಿ ಅವರದ್ದೇ ವಿಶೇಷ ಸೆಕ್ಷನ್ ಅನ್ನು ಪ್ರತಿ ಪುಸ್ತಕದಂಗಡಿಯಲ್ಲೂ ಇವರು ಪಡೆಯುತ್ತಾರೆ. ಸಮಾಜದ ನಿಜರೂಪ ಮರೆಮಾಚಲು ಹೇಗೆಲ್ಲಾ ಸಾಹಿತ್ಯವನ್ನು ದುಡಿಸಿಕೊಳ್ಳಬಹುದು ಎಂಬುದನ್ನು ಕುನಾಲ್ ಸೂಕ್ಷ್ಮವಾಗಿ ನಮ್ಮ ಮುಂದಿಟ್ಟಿದ್ದಾರೆ.

ಭಾರತದ ಜನ ಎಲ್ಲಿಯವರೆಗೆ netflix ಸರಣಿಗಳನ್ನು, ಐಪಿಎಲ್, ಇನ್ಸ್ಟ ರೀಲ್ಸ್ ನೋಡುತ್ತಾ ಕುಳಿತಿರುತ್ತದೋ ಇಲ್ಲಿಯವರೆಗೆ ಉದ್ಯಮ – ರಾಜಕಾರಣ – ಧರ್ಮದ ತ್ರಿವಳಿಗಳು ಸರಾಗವಾಗಿ, ಸುರಕ್ಷಿತವಾಗಿ ಎಲ್ಲವನ್ನೂ ನಿಯಂತ್ರಿಸಬಹುದು, ತಮ್ಮ ಸಂಪತ್ತನ್ನು ವೃದ್ಧಿಸಿಕೊಳ್ಳುತ್ತಲೇ ಸಾಗಬಹುದು. ಸಾಮಾನ್ಯವಾಗಿ ಭಾರತದ ಜನ ಎಲ್ಲದಕ್ಕೂ ರಾಜಕಾರಣಿಗಳನ್ನು ದೂಷಿಸುತ್ತಾರೆ. ಈ ವ್ಯವಸ್ಥಿತ ಲೂಟಿ, ಭ್ರಷ್ಟಚಾರವೆಲ್ಲಕ್ಕೂ ರಾಜಕಾರಣಿಗಳು ಮಾತ್ರ ಕಾರಣವೆಂಬ ಭ್ರಮೆಯಲ್ಲಿದ್ದಾರೆ. ಇಂತಹ ಸರಳೀಕೃತ ನಿರ್ಧಾರಕ್ಕೆ ಬರುವುದು ಬಲು ಸುಲಭ ಕೂಡ. ಚಲನಚಿತ್ರಗಳು, ಮುಖ್ಯವಾಹಿನಿಗಳು ನಮ್ಮಲ್ಲಿ ಇಂತಹದೊಂದು ನಂಬಿಕೆಯನ್ನು ಆಳವಾಗಿ ಬೇರೂರುವಂತೆ ಮಾಡಿವೆ. ಆದರೆ ಕುನಾಲ್ ನಂತಹ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಗಳು ತೆರೆಯ ಮರೆಯಿಂದ ಇಡೀ ವ್ಯವಸ್ಥೆಯನ್ನು ರೂಪಿಸುವ, ನಿಯಂತ್ರಿಸುವ ಉದ್ಯಮಿಗಳನ್ನು, ಧರ್ಮಗುರುಗಳನ್ನು ಬಯಲಿಗೆಳೆಯುವುದು ತ್ರಿವಳಿಗಳಿಗೆ ರುಚಿಸದ ವಿಷಯ. ದಾಬೋಲ್ಕರ್, ಗೌರಿ, ಪನೆಸರ್, ಕಲಬುರ್ಗಿಯವರು ಕಂಡ ಹಂತ್ಯವನ್ನೇ ಕುನಾಲ್ ಕಾಣದಿರಲಿ. ಇದು ಕುನಾಲ್ ರವರ ಸುರಕ್ಷತೆಯ ಕುರಿತಾದ ನನ್ನ ಭೀತಿಯಲ್ಲ, ಆರೋಗ್ಯಕರ ಸಮಾಜ, ಪ್ರಜಾಪ್ರಭತ್ವದ ಅಳಿವಿನ ಭೀತಿ… Yes ದೊಡ್ಡವರು ಹೇಳಿದಂತೆ… criticism is the soul of democracy.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ