ಕರ್ನಾಟಕ ದಕ್ಷಿಣ ಪದವೀದರರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ನಡೆಯುವ ದ್ವೈವಾರ್ಷಿಕ ಚುನಾವಣೆಗೆ ಚುನಾವಣಾ ಆಯೋಗ ವೇಳಾ ಪಟ್ಟಿ ಪ್ರಕಟಿಸಿದೆ. ಆಯೋಗದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಎಸ್.ಅಶ್ವತಿ ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ರಾಜಕೀಯ ಪಕ್ಷಗಳ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಾದ್ಯಂತ ಜೂನ್ 17 ರವರೆಗೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದರೆ ಚುನಾವಣಾ ಆಯೋಗದ ನಿರ್ದೇಶನದಂತೆ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದರು.
ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಸಂಬಂಧ ಸಂಚಾರಿ ದಳ, ವಿಡಿಯೋ ಸರ್ವೇಕ್ಷಣಾ ತಂಡ ಮತ್ತು ಕಂಟ್ರೋಲ್ ರೂಂ ತೆರೆದು ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಜಿಲ್ಲೆಯಲ್ಲಿ ನ್ಯಾಯಸಮ್ಮತ, ಮುಕ್ತ, ಪಾರದರ್ಶಕ ಚುನಾವಣೆ ನಡೆಸಲು ಎಲ್ಲರೂ ಸಹಕರಿಸಬೇಕು ಎಂದರು.
ಅಪರ ಜಿಲ್ಲಾಧಿಕಾರಿ ವಿ ಆರ್. ಶೈಲಜ ಅವರು ಮಾತನಾಡಿ ನಾಮಪತ್ರ ಸಲ್ಲಿಕೆಗೆ ಮೇ 26 ಕೊನೆಯ ದಿನವಾಗಿದೆ. 27 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ನಾಮಪತ್ರ ಹಿಂಪಡೆಯಲು ಮೇ 30 ಕಡೆಯ ದಿನವಾಗಿದೆ. ಮತದಾನ ಜೂನ್ 13 ರಂದು ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆವರೆಗೆ ನಡೆಯಲಿದೆ. ಮತ ಏಣಿಕೆ ಜೂನ್ 15 ರಂದು ನಡೆಯಲಿದೆ ಎಂದರು.
ಜನವರಿ 17 ರಂದು ಪ್ರಕಟಿಸಲಾಗಿರುವ ಮತದಾರರ ಪಟ್ಟಿಯ ಪ್ರಕಾರ ಕೆ.ಆರ್.ಪೇಟೆ-3160, ನಾಗಮಂಗಲ-2852, ಪಾಂಡವಪುರ-3490, ಮಂಡ್ಯ-14690, ಮದ್ದೂರು-9662, ಶ್ರೀರಂಗಪಟ್ಟಣ-3187 ಮತ್ತು ಮಳವಳ್ಳಿ-7329 ಒಟ್ಟು 44370 ಮತದಾರರಿದ್ದಾರೆ. ಇವರಲ್ಲಿ ಪುರುಷರು-24824, ಮಹಿಳೆಯರು-19534 ಹಾಗೂ ಇತರರು- 12 ಇದ್ದಾರೆ ಎಂದರು.
ಮೇ 16 ರವರೆಗೆ ಮತದಾರರ ಪಟ್ಟಿಗೆ ಅರ್ಜಿ ಸಲ್ಲಿಸಿರುವವರ ಅರ್ಜಿಗಳ ಪರಿಶೀಲನೆ ನಡೆಸಲಾಗುತ್ತಿದೆ. ಮತದಾನಕ್ಕಾಗಿ 17 ಮೂಲ ಮತಗಟ್ಟೆಗಳಿದ್ದು, ಚುನಾವಣಾ ಆಯೋಗದ ನಿರ್ದೇಶನದಂತೆ 27 ಆಕ್ಸಿಲರಿ ಸೇರಿದಂತೆ ಒಟ್ಟು 44 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಮತದಾರರ ಸಂಖ್ಯೆ ಗೆ ಅನುಗುಣವಾಗಿ ಅವಶ್ಯಕವಿದ್ದಲ್ಲಿ ಹೆಚ್ಚುವರಿ ಅಕ್ಸಿಲರಿ ಮತಗಟ್ಟೆಯನ್ನು ಸ್ಥಾಪಿಸಲಾಗುವುದು ಎಂದರು.
ಸರ್ಕಾರಿ ಅತಿಥಿಗೃಹ ಮತ್ತು ಪ್ರವಾಸಿ ಮಂದಿರಗಳಲ್ಲಿ ರಾಜಕೀಯ ಚಟುವಟಿಕೆಗಳಿಗೆ ಅವಕಾಶವಿರುವುದಿಲ್ಲ. ಯಾವುದೇ ರಾಜಕೀಯ ಪಕ್ಷಗಳು,ಕಾರ್ಯಕರ್ತರು ಅಭ್ಯರ್ಥಿಗಳು, ಸಂಘ ಸಂಸ್ಥೆಗಳು ಹಾಗೂ ಇತರರು ಭಿತ್ತಿ ಪತ್ರಗಳನ್ನು ಅಂಟಿಸುವುದು, ಘೋಷಗಳನ್ನು ಬರೆಯುವುದು, ಚಿಹ್ನೆಗಳನ್ನು ಬರೆಯುವುದರ ಮೂಲಕ ಸಾರ್ವಜನಿಕ ಹಾಗೂ ಖಾಸಗಿ ಸ್ವತ್ತುಗಳನ್ನು ವಿರೂಪಗೊಳಿಸುವುದಕ್ಕೆ ಅವಕಾಶವಿರುವುದಿಲ್ಲ ಎಂದು ಸದಾಚಾರ ಸಂಹಿತೆಯನ್ನು ವಿವರಿಸಿದರು.
ಸಭೆಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ನಿರ್ಮಲ ಎಸ್.ಎಚ್, ವಿವಿಧ ರಾಜಕೀಯ ಪಕ್ಷಗಳ ಮುಖಂಡರಾದ ರಮೇಶ್, ದಿನೇಶ್, ನವೀನ್, ಮಂಜುನಾಥ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.