ಜಿಲ್ಲೆಯಲ್ಲಿ ಮರಣ ನೋಂದಣಿ ಅಧಿನಿಯಮ 1969 ರ ಪ್ರಕಾರ ನೋಂದಣಾಧಿಕಾರಿಗಳು, ಉಪನೋಂಧಣಾಧಿಕಾರಿಗಳು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ವರದಿಯಾಗುವ ಜನನ ಮತ್ತು ಮರಣ ಘಟನೆಗಳನ್ನು ನಿಗಧಿತ ಅವಧಿಯಲ್ಲಿ ನೊಂದಾಯಿಸಿ ಶೇ.100ರ ಗುರಿ ಸಾಧಿಸಬೇಕು ಜಿಲ್ಲಾಧಿಕಾರಿ ಡಾ.ಎಚ್.ಎನ್ ಗೋಪಾಲ ಕೃಷ್ಣ ತಿಳಿಸಿದರು.
ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜನನ-ಮರಣ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಗುವಿನ ಜನನದ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ತಯಿಯ ಅಧಾರ್ ಕಾರ್ಡ್ ಸೇರಿದಂತೆ ಪೂರಕ ದಾಖಲಾತಿಗಳನ್ನು ಪಡೆದುಕೊಂಡು ವಿಳಂಬ ಮಾಡದೇ ಜನನದ ನೊಂದಣಿ ಮಾಡಬೇಕು ಎಂದರು.
ಜಿಲ್ಲೆಯಲ್ಲಿ ಜನನ ಪ್ರಮಾಣ ಪತ್ರ ಇಲ್ಲದ ಮಕ್ಕಳ ಪ್ರಮಾಣ ಬಹಳ ಕಡಿಮೆ ಇದೆ. ಶಾಲೆಗಳಿಗೆ ಮಕ್ಕಳನ್ನು ದಾಖಲು ಮಾಡುವಾಗ ಆಧಾರ್ ಸಂಖ್ಯೆಯನ್ನು ಕಡ್ಡಾಯ ಪಡೆಯಲಾಗುತ್ತದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ತಮ್ಮ ವ್ಯಾಪ್ತಿಯಲ್ಲಿ ಬರುವ ಮಕ್ಕಳ ಬಳಿ ಜನನ ಪ್ರಮಾಣ ಪತ್ರ ಇಲ್ಲದಿದ್ದಾರೆ ಪರಿಶೀಲಿಸಿ ವರದಿ ನೀಡಬೇಕು ಎಂದರು.
ಇ-ಜನ್ಮ ತಂತ್ರಾಂಶದಲ್ಲಿ ವಿಳಂಬ ಹಾಗೂ ಒಂದು ವರ್ಷದೊಳಗೆ ಘಟಿಸಿದ ಘಟನೆಗಳನ್ನು ನೋಂದಣಿ ಮಾಡುವಾಗ ಗ್ರಾಮಾಂತರ ಪ್ರದೇಶದಲ್ಲಿ ತಹಶೀಲ್ದಾರ್, ನಗರ ಪ್ರದೇಶದಲ್ಲಿ ಆಯುಕ್ತರು, ಮುಖ್ಯಾಧಿಕಾರಿಗಳ ಅದೇಶ ಪಡೆಯಬೇಕಿರುತ್ತದೆ. ಒಂದು ವರ್ಷದ ನಂತರ ಘಟನೆಗಳಿಗೆ ಜೆ.ಎಂ.ಎಫ್.ಸಿ ಮುಖಾಂತರ ಆದೇಶ ಪಡೆದು ನೋಂದಣಿ ಮಾಡಬೇಕಿರುತ್ತದೆ. ಕಡ್ಡಾಯವಾಗಿ ನಾಗರೀಕ ನೋಂದಣಿ ನಿಯಮದ ಸಂಖ್ಯೆ ನಮೂದಿಸಬೇಕಿರುತ್ತದೆ. ಇದನ್ನು ಪಾಲಿಸುವಂತೆ ಸೂಚನೆ ನೀಡಿದರು.
2015 ನೇ ಸಾಲಿಗಿಂದ ಹಿಂದೆ ಘಟಿಸಲಾದ ಜನನ, ಮರಣದ ನೋಂದಣಿಗಳನ್ನು ಡಿಜಿಟಲೈಸ್ ಮಾಡಿ ಇ- ಜನ್ಮ ತಂತ್ರಾಂಶದಲ್ಲಿ ಅಳವಡಿಸಲಾಗುತ್ತಿದ್ದು, ಇದಕ್ಕೆ ಬೇಕಿರುವ ಅಗತ್ಯ ಸಹಕಾರವನ್ನು ತಾಲ್ಲೂಕು ಮಟ್ಟದಲ್ಲಿ ಒದಗಿಸುವಂತೆ ತಿಳಿಸಿದರು.
ಬೆಳೆ ವಿಮಾ ಯೋಜನೆಯಡಿ ಅಧಿಸೂಚಿತ ಬೆಳೆಗಳಿಗೆ ಹೋಬಳಿವಾರು, ಗ್ರಾಮ ಪಂಚಾಯಿತಿ ವಾರು ಬೆಳೆ ಕಟಾವು ಪ್ರಯೋಗಗಳನ್ನು ನಡೆಸಿ, ಅದರ ವಿವರವನ್ನು ಅಪ್‌ಲೋಡ್ ಮಾಡುವ ಸಂದರ್ಭದಲ್ಲಿ ಛಾಯಚಿತ್ರ ಹಾಗೂ ವಿವರಗಳನ್ನು ಅಧಿಕಾರಿಗಳು ಸರಿಯಾಗಿ ಪರಿಶೀಲಿಸಬೇಕು ಎಂದು ತಿಳಿಸಿದರು.
11 ನೇ ಕೃಷಿ ಗಣತಿ
ಜಿಲ್ಲೆಯಲ್ಲಿ 11 ನೇ ಕೃಷಿ ಗಣತಿ ನಡೆಸಲು ವೇಳಪಟ್ಟಿಯನ್ನು ನಿಗಧಿಪಡಿಸಿ, ಸರ್ಕಾರ ನೀಡಿರುವ ಸೂಚನೆಗಳನ್ವಯ ಪೂರ್ಣಗೊಳಿಸಬೇಕು. ಈ ಕೆಲಸ ತ್ವರಿತಗತಿಯಲ್ಲಿ ಆಗಬೇಕು ಎಂದರು. ಇದೇ ಸಂದರ್ಭದಲ್ಲಿ ಕೃಷಿ ಗಣತಿ 2021-22 ಕೈಪಿಡಿಯನ್ನು ಬಿಡುಗಡೆ ಮಾಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಧನಂಜಯ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ನಾಗರಾಜು, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಶಿವಮ್ಮ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.