Friday, September 20, 2024

ಪ್ರಾಯೋಗಿಕ ಆವೃತ್ತಿ

ಚಿತ್ತಾಪುರ ಬಿಜೆಪಿ ಅಭ್ಯರ್ಥಿ ಮಣಿಕಂಠ ಕೈಯಲ್ಲಿ ಪಿಸ್ತೂಲ್ – ವಿಡಿಯೋ ವೈರಲ್‌

ಚಿತ್ತಾಪುರ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ರೌಡಿಶೀಟರ್‌ ಮಣಿಕಂಠ ರಾಠೋಡ ಅವರು ಪಿಸ್ತೂಲ್ ಹಿಡಿದು ಪ್ರದರ್ಶಿಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್‌ ಖರ್ಗೆಯವರ ವಿರುದ್ಧ ರೌಡಿ ಶೀಟರ್‌ ಮಣಿಕಂಠ ಅವರನ್ನು ಬಿಜೆಪಿ ಕಣಕ್ಕಿಳಿಸಿರುವ ಬೆನ್ನಲ್ಲೇ ವಿಡಿಯೊ ಮುನ್ನೆಲೆಗೆ ಬಂದಿದೆ.

ಕುರ್ಚಿಯಲ್ಲಿ ಕೂತಿರುವ ಮಣಿಕಂಠ ತಮ್ಮ ಬಲಗೈ ತೋರುಬೆರಳಿನಿಂದ ಪಿಸ್ತೂಲ್ ತಿರುಗಿಸುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ಇದು ಹಳೆಯ ವಿಡಿಯೊ ಎನ್ನಲಾಗಿದ್ದು, ಮಣಿಕಂಠ ಬಿಜೆಪಿ ಅಭ್ಯರ್ಥಿಯಾಗಿರುವ ಕಾರಣ ಇದು ಚರ್ಚೆಗೆ ಗ್ರಾಸವಾಗಿದೆ. ಇತ್ತೀಚೆಗೆ ಯಾದಗಿರಿ ಜಿಲ್ಲಾ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗಿರುವ ರಾಠೋಡ ಅವರನ್ನು ಬಿಜೆಪಿ ಕಣಕ್ಕಿಳಿಸಿರುವುದು ಅಚ್ಚರಿಯ ಬೆಳವಣಿಗೆಯಾಗಿದೆ.

ಬಿಜೆಪಿ ಅಭ್ಯರ್ಥಿ ಮಣಿಕಂಠ ವಿರುದ್ದ ರಾಜ್ಯ ಮತ್ತು ಹೊರ ರಾಜ್ಯಗಳ ವಿವಿಧ ಪೊಲೀಸ್ ಠಾಣೆಗಳಲ್ಲಿ 40 ಪ್ರಕರಣಗಳು ದಾಖಲಾಗಿವೆ. ಅನ್ನಭಾಗ್ಯ ಅಕ್ಕಿಯನ್ನು ಕದ್ದ ಪ್ರಕರಣದಲ್ಲಿ ಒಂದು ವರ್ಷ ಶಿಕ್ಷೆಯೂ ಆಗಿದ್ದು ನ್ಯಾಯಾಲಯದಿಂದ ತಡೆಯಾಜ್ಞೆ ಪಡೆದಿದ್ದಾರೆ.

ಯಾದಗಿರಿ, ವಿಜಯಪುರ, ಕಲಬುರಗಿ ಮೂರು ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಪ್ರಕರಣಗಳನ್ನು ಎದುರಿಸುತ್ತಿರುವ ಬಿಜೆಪಿ ಮುಖಂಡ ಮಣಿಕಂಠ ರಾಥೋಡನನ್ನು ಒಂದು ವರ್ಷಗಳ ಕಾಲ ಗಡಿಪಾರು ಮಾಡಿ ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ. ವೈ. ಎಸ್. ರವಿಕುಮಾರ ಆದೇಶ ಹೊರಡಿಸಿದ್ದರು. ಇದಕ್ಕೆ ಮಣಿಕಂಠ, ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದರು.

ಚುನಾವಣೆ ಪ್ರಚಾರಕ್ಕೆಂದು ಶುಕ್ರವಾರ ಚಿತ್ತಾಪುರಕ್ಕೆ ಬಂದಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, “ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಮತ್ತು ರಾಜ್ಯ ನಾಯಕರ ಮೇಲೂ ಪ್ರಕರಣಗಳಿದ್ದು ಜಾಮೀನಿನ ಮೇಲಿದ್ದಾರೆ. ಮಣಿಕಂಠ ಸಹ ಜಾಮೀನು ಪಡೆದಿದ್ದಾರೆ” ಎಂದು ಬಿಜೆಪಿ ಅಭ್ಯರ್ಥಿಯಾಗಿ ಮಣಿಕಂಠ ಅವರನ್ನು ಸಮರ್ಥಿಸಿಕೊಂಡ ದಿನವೇ ವಿಡಿಯೊ ವೈರಲ್ ಆಗಿದೆ.

ಈ ವಿಡಿಯೊ ಮಣಿಕಂಠ ಅವರದ್ದಲ್ಲ ಎಂದು ಆತನ ಆಪ್ತರು ಹೇಳಿಕೊಂಡಿದ್ದಾರೆ. ಆದರೆ ಪೊಲೀಸ್ ಮೂಲಗಳು ಇದು ಮಣಿಕಂಠ ಅವರದ್ದೇ ವಿಡಿಯೊ ಎಂದು ಖಚಿತಪಡಿಸಿರುವುದಾಗಿ ‘ಪ್ರಜಾವಾಣಿ’ ವರದಿ ಮಾಡಿದೆ.

ರೌಡಿ ಶೀಟರ್‌ ಪರ ಮೋದಿ ಪ್ರಚಾರ!

“ಚಿತ್ತಾಪುರ ವಿಧಾನಸಭಾ ಕ್ರೇತ್ರದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ ಪರ ಪ್ರಚಾರ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಕ್ಷೇತ್ರಕ್ಕೆ ಬರಲಿದ್ದಾರೆ” ಎಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಇತ್ತೀಚೆಗೆ ಹೇಳಿದ್ದಾರೆ.

“ಪ್ರಧಾನಿ ಮೋದಿ ಅವರು ಮೇ 2ರಂದು ಕಲಬುರಗಿ ನಗರದಲ್ಲಿ ರೋಡ್ ಶೋ ನಡೆಸಿ ವಾಪಸ್‌ ತೆರಳುವರು. ಮೇ 6ರಂದು ಚಿತ್ತಾಪುರ ಕ್ಷೇತ್ರದ ರಾವೂರ ಗ್ರಾಮ ಸಮೀಪದ ಕಲಬುರಗಿ–ಯಾದಗಿರಿ ರಾಷ್ಟ್ರೀಯ ಹೆದ್ದಾರಿ–150ರ ಬದಿಯ ಖಾಸಗಿ ಜಮೀನಿನಲ್ಲಿ ಸಮಾವೇಶ ನಡೆಸಲಾಗುವುದು. ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಂದ ಸುಮಾರು 5 ಲಕ್ಷ ಜನ ಸೇರುವ ನಿರೀಕ್ಷೆಯಿದೆ” ಎಂದು ತಿಳಿಸಿದ್ದಾರೆ.

ರೌಡಿಶೀಟರ್‌ ಮಣಿಕಂಠನನ್ನು ಕಣಕ್ಕಿಳಿಸಿರುವುದು ಬಿಜೆಪಿಯೊಳಗೆಯೇ ಟೀಕೆಗೆ ಒಳಗಾಗಿತ್ತು. ಚಿತ್ತಾಪುರ ಅಭ್ಯರ್ಥಿ ಬದಲಾವಣೆ ಮಾಡಬೇಕೆಂದು ಪಟ್ಟು ಹಿಡಿದಿದ್ದ ಮಾಜಿ ಶಾಸಕ ವಿಶ್ವನಾಥ ಪಾಟೀಲ ಹೆಬ್ಬಾಳ, ಟಿಕೆಟ್ ಆಕಾಂಕ್ಷಿ ಅರವಿಂದ ಚವ್ಹಾಣ ಸೇರಿ ಹಲವರು ಪಕ್ಷದಿಂದ ಹೊರ ಬಂದು ಕಾಂಗ್ರೆಸ್ ಸೇರಿಕೊಂಡಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!