ಸಾಮಾನ್ಯ ರೈತ ಕುಟುಂಬದ ವ್ಯಕ್ತಿಯಾದ ತಮ್ಮನ್ನು ಎರಡು ಪ್ರತಿಷ್ಠಿತ ರಾಜಕೀಯ ಕುಟುಂಬಗಳ ವ್ಯಕ್ತಿಗಳ ನಡುವೆ ಶಾಸಕರನ್ನಾಗಿ ಬಾರಿ ಅಂತರದಿಂದ ಚುನಾಯಿಸಿದ ಮದ್ದೂರು ಕ್ಷೇತ್ರದ ಜನತೆಗೆ ಹೃದಯ ಪೂರ್ವಕ ಅಭಿನಂದನೆ ಸಲ್ಲಿಸುವುದಾಗಿ ನೂತನ ಶಾಸಕ ಕೆ.ಎಂ. ಉದಯ್ ಬಾವುಕರಾಗಿ ನುಡಿದರು.
ಚುನಾವಣಾ ಫಲಿತಾಂಶದ ಬಳಿಕ ಸುದ್ಧಿಗಾರರೊಡನೆ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯದ ಕಾಂಗ್ರೆಸ್ ಪಕ್ಷದ ವರಿಷ್ಠರು, ತಾಲೂಕಿನ ಹಿರಿಯ ಮುಖಂಡರು, ಪಕ್ಷದ ಕಾರ್ಯಕರ್ತರು ಅದರಲ್ಲೂ ಮಹಿಳಾ ಮತದಾರರ ಋಣ ನಮ್ಮ ಮೇಲಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಸೇವಾ ಕೈಂಕರ್ಯಗಳೊಟ್ಟಿಗೆ ಕ್ಷೇತ್ರ ಅಭಿವೃದ್ಧಿಗೆ ದುಡಿಯುವುದಾಗಿ ಹೇಳಿದರು.
ರಾಜ ಮಹಾರಾಜರ ಮನೆತನವೆಂದು ತಮ್ಮನ್ನು ತಾವೇ ಬಣ್ಣಿಸಿಕೊಂಡ ಕೆಲ ವ್ಯಕ್ತಿಗಳು ಅಧಿಕಾರದ ಮದದಿಂದ ತಮ್ಮನ್ನೂ ಸೇರಿದಂತೆ ಪಕ್ಷದ ಹಿರಿಯ ಮುಖಂಡರನ್ನು ಮನಸೋ ಇಚ್ಚೆ ನಿಂದಿಸುವ ಮೂಲಕ ಕೀಳುಮಟ್ಟದ ಅಭಿರುಚಿ ತೋರಿದ್ದು, ಇದಕ್ಕೆ ಕ್ಷೇತ್ರದ ಮತದಾರರು ತಕ್ಕ ಉತ್ತರ ನೀಡಿದ್ದಾರೆಂದು ಮಾಜಿ ಶಾಸಕ ಡಿ.ಸಿ. ತಮ್ಮಣ್ಣ, ಜಿ.ಪಂ. ಮಾಜಿ ಅಧ್ಯಕ್ಷ ಎಸ್. ಗುರುಚರಣ್ ಹೆಸರೇಳದೆ ಕಿಡಿಕಾರಿದರು.
ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ಆರಂಭದ ಎರಡು ವರ್ಷಗಳ ಹಿಂದಿನಿಂದಲೂ ಎಲ್ಲಾ ಸೇವಾ ಕಾರ್ಯಕ್ರಮಗಳ ವೇಳೆ ತಮ್ಮೊಟ್ಟಿಗಿದ್ದ ಅಭಿಮಾನಿಗಳು, ಕಾರ್ಯಕರ್ತರನ್ನು ನೆನೆದ ಅವರು ಇಂದಿನ ಗೆಲುವಿಗೆ ಅಂದಿನಿಂದಲೂ ಹೆಗಲು ಕೊಟ್ಟು ದುಡಿದ ಟ್ರಸ್ಟ್ ಪದಾಧಿಕಾರಿಗಳು, ಕಾರ್ಯಕರ್ತರು ಮುಖಂಡರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ಕಾಂಗ್ರೆಸ್ ಪಕ್ಷದ ಟಿಕೆಟ್ ನೀಡುವ ಮೂಲಕ ಹರಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಒಳಗೊಂಡಂತೆ ಪಕ್ಷದ ಹಿರಿಯ ಮುಖಂಡರು ಹಾಗೂ ಮದ್ದೂರು ಕ್ಷೇತ್ರದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರನ್ನು ನೆನೆಯುವುದಾಗಿ ಬಣ್ಣಿಸಿದರು.
ಮದ್ದೂರು ತಾಲೂಕು ಕಚೇರಿ ಸೇರಿದಂತೆ ಎಲ್ಲಾ ಇಲಾಖೆಗಳಲ್ಲೂ ಭ್ರಷ್ಟಾಚಾರ ತುಂಬಿ ತುಳುಕುತ್ತಿದ್ದು ಹಿಡಿತ ತಪ್ಪಿರುವ ಆಡಳಿತ ವ್ಯವಸ್ಥೆಗೆ ಚುರುಕು ಮುಟ್ಟಿಸುವ ಜತೆಗೆ ಸಾರ್ವಜನಿಕರ ತ್ವರಿತ ಕೆಲಸ ಕಾರ್ಯಗಳಿಗೆ ಒತ್ತು ನೀಡುವುದಾಗಿ ಸರಕಾರದ ಸಹಬಾಗಿತ್ವದಲ್ಲಿ ಒಂದು ಭಾಗ, ತಮ್ಮದೇ ಟ್ರಸ್ಟ್ ವತಿಯಿಂದ ಮತ್ತೊಂದು ಭಾಗದೊಟ್ಟಿಗೆ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವ ಭರವಸೆ ನೀಡಿದರು.
ಸರಕಾರಿ ಶಾಲೆಗಳ ಉನ್ನತೀಕರಣ, ಕ್ಷೇತ್ರದಾದ್ಯಂತ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಕೃಷಿ ಮತ್ತು ನೀರಾವರಿಗೆ ಹೆಚ್ಚಿನ ಒತ್ತು, ಆರೋಗ್ಯ ಸೇವೆ ಮೇಲ್ದರ್ಜೆಗೇರಿಸುವ ಕಾರ್ಯಕ್ಕೆ ಪ್ರಥಮ ಆದ್ಯತೆ ನೀಡುವ ಗುರಿ ತಮ್ಮದೆಂದರು.
ನಿರಂತರ ಪ್ರಚಾರದ ಹಿನ್ನೆಲೆಯಲ್ಲಿ ಅನಾರೋಗ್ಯ ಪರಿಣಾಮ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆಗೆ ದಾಖಲಾಗುತ್ತಿದ್ದು ಮುಂದಿನ ಮೂರು ದಿನಗಳ ಬಳಿಕ ವಿಧಾನಸಭಾ ಕ್ಷೇತ್ರದಾದ್ಯಂತ ಸಂಚರಿಸಿ ಮತದಾರರು, ಸಾರ್ವಜನಿಕರಿಗೆ ಕೃತಜ್ಞತೆ ಅರ್ಪಿಸುವುದಾಗಿ ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದಿರುವುದು ಉತ್ತಮ ಬೆಳವಣಿಗೆ ಎಂದು ಬಣ್ಣಿಸಿದರು.
ಕೆಪಿಸಿಸಿ ಸದಸ್ಯ ಕದಲೂರು ರಾಮಕೃಷ್ಣ, ತಾ.ಪಂ. ಮಾಜಿ ಸದಸ್ಯ ಚಲುವರಾಜು, ಕೆಪಿಸಿಸಿ ವಕ್ತಾರ ಸತ್ಯಾನಂದ, ತೈಲೂರು ರಘು, ಸೋಮನಹಳ್ಳಿ ಗ್ರಾ.ಪಂ. ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಸಿ.ಟಿ. ಶಂಕರ್, ಆರ್.ಸಿ. ಮಹೇಶ್, ಶಿವು, ಯತೀಶ್, ಬಿ.ಸಿ. ಜಯಪ್ರಕಾಶ್, ಹರೀಶ್, ಗೊರವನಹಳ್ಳಿ ಗ್ರಾ.ಪಂ. ಮಾಜಿ ಅಧ್ಯಕ್ಷ ಮಧು, ನೂತನ ಶಾಸಕ ಕೆ.ಎಂ. ಉದಯ್ ಅವರನ್ನು ಅಭಿನಂದಿಸಿದರು.




