Thursday, September 19, 2024

ಪ್ರಾಯೋಗಿಕ ಆವೃತ್ತಿ

ಬಿಜೆಪಿ ಸರ್ಕಾರದಿಂದ ದೇಶಕ್ಕೆ ಅನ್ನ ಕೊಡುವ ರೈತರ ನಿರ್ಲಕ್ಷ್ಯ : ಜನಶಕ್ತಿಯ ಸಿದ್ಧರಾಜು

ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರಗಳು ದೇಶಕ್ಕೆ ಅನ್ನ ನೀಡುವ ರೈತರನ್ನು ಅವರ ಬೇಡಿಕೆಗಳನ್ನು ನಿರ್ಲಕ್ಷಿಸುತ್ತಿದೆ, ಇದಕ್ಕೆ ಹೋರಾಟದ ಮೂಲಕವೇ ಉತ್ತರ ಕೊಡಬೇಕಾಗಿದೆ ಎಂದು ಕರ್ನಾಟಕ ಜನಶಕ್ತಿ ಸಂಘಟನೆಯ ಕಾರ್ಯದರ್ಶಿ ಸಿದ್ದರಾಜು ಹೇಳಿದರು.

ಹಲವು ಬೇಡಿಕೆಗಳನ್ನು ಮುಂದಿರಿಸಿ ಮಂಡ್ಯದ ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಕಳೆದ 6 ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿರುವ ರೈತರಿಗೆ ಶನಿವಾರ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ ಅವರು, ನಾವು ಪ್ರಧಾನಿ ನರೇಂದ್ರ ಮೋದಿಯಂತೆ 10 ಲಕ್ಷ ರೂ. ಬೆಲೆ ಬಾಳುವ ಸೂಟು, ಬೂಟು, ವಾಚುಗಳನ್ನು ಹಾಕಿಕೊಂಡು ಓಡಾಡಲು ಬೆಂಬಲ ಬೆಲೆಯನ್ನು ಕೇಳುತ್ತಿಲ್ಲ, ಅಲ್ಲದೇ ಲಕ್ಷಾಂತರ ರೂ. ಬೆಲೆ ಬಾಳವು ಅಣಬೆಯನ್ನು ನಾವು ತಿನ್ನುವುದಿಲ್ಲ, ಹಸನಾದ ಬದುಕು ಅಲ್ಲದಿದ್ದರೂ ನೆಮ್ಮದಿಯ ಬದುಕಿಕಾಗಿ ಕೇಳುತ್ತಿದ್ದೇವೆ ಎಂದರು.

2014-15ರ ಅವಧಿಯಲ್ಲಿ ದೇಶಾದಾದ್ಯಂತ ರೈತರ ಸರಣಿ ಆತ್ಮಹತ್ಯೆಗಳು ನಡೆದವು, ಆಗ ಮಂಡ್ಯದಲ್ಲಿ ಮಾಡಿದ ಸಾಲಕ್ಕಾಗಿ ರೈತರು ಆತ್ಮಹತ್ಯೆ ಮಾಡಿಕೊಂಡರು. ಆವಾಗ ಅನ್ನದಾತರಿಗೆ ಆತ್ಮ ಸ್ಥೈರ್ಯ ತುಂಬುವ ಉದ್ಧೇಶದಿಂದಾಗಿ ರೈತರ ಪರವಾಗಿ ಕರ್ನಾಟಕ ಜನಶಕ್ತಿ ಜಾಥಾ ನಡೆಸಿತು. ನಂತರ ಸುಮಾರು 5 ಸಾವಿರ ರೈತರನ್ನು ಸೇರಿಸಿ ಜಿಲ್ಲಾಧಿಕಾರಿ ಕಚೇರಿ ಬಳಿ ಹೋರಾಟ ನಡೆಸಲಾಯಿತು.  ಅಲ್ಲದೆ ಅನ್ನದ ಋಣ ಅಭಿಯಾನವನ್ನು ನಡೆಸಲಾಯಿತು ಎಂದರು.

ಮತ್ತೊಮ್ಮೆ 1984ರಲ್ಲಿ ಇದ್ದಂತಹ ರೈತ ಪರವಾದ ಹೋರಾಟವನ್ನು ರೂಪಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ, ಇಂದು ಸರ್ಕಾರದ ಸಚಿವರಾಗಿ ಐಷಾರಾಮಿ ಬಂಗಲೆ ಹಾಗೂ ಕಾರುಗಳನ್ನು ಹೊಂದಿರುವ ರಾಜಕಾರಣಿಗಳು ರೈತ ಬೆವರು ಸುರಿದು ಬೆಳೆದ ಬೆಳೆಯನ್ನು ತಿಂದು ಬದುಕುತ್ತಿದ್ದಾರೆ, ಆದ್ದರಿಂದ ರೈತರ ಪರವಾಗಿ ಹಲವು ತೀರ್ಮಾನಗಳನ್ನು ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.

ಕರ್ನಾಟಕ ಜನಶಕ್ತಿಯ ಸಂಚಾಲಕರಾದ ಪೂರ್ಣಿಮರವರು ಮಾತನಾಡುತ್ತಾ, ರೈತರು ತಾವು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಬೇಕು, ಬೆಳೆಗಳಿಗೆ ಸರಿಯಾದ ದರವನ್ನು ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು. ರೈತರು ಬೀದಿಗಿಳಿದು ಹೋರಾಟ ಮಾಡುತ್ತಿರುವುದು ಹೊಸದೇನಲ್ಲ. ಎಲ್ಲಾ ಕಾಲದಲ್ಲಿಯೂ ಆಳ್ವಿಕೆಯಲ್ಲಿದ್ದ ಪಕ್ಷಗಳು ಒಂದಲ್ಲ ಒಂದು ರೀತಿಯ ನಿರ್ಲಕ್ಷ್ಯ ಧೋರಣೆಯಿಂದಾಗಿ ದೇಶಕ್ಕೆ ಅನ್ನ ಕೊಡುವ ರೈತ ಪ್ರತಿ ಸಂಧರ್ಭದಲ್ಲಿಯೂ ಸಂಕಷ್ಟ ಗಳನ್ನು ಎದುರಿಸುತ್ತಾ ಬಂದಿದ್ದಾನೆ ಎಂದು ಕಿಡಿಕಾರಿದರು.

ಆದರೆ ಬಿಜೆಪಿ ಪಕ್ಷವು ಅಧಿಕಾರಕ್ಕೆ ಬಂದಮೇಲೆ ಇದು  ಇನ್ನೂ ಹೆಚ್ಚಾಗಿದು. ಪ್ರತಿಯೊಂದು ವರ್ಗವು ಒಂದಲ್ಲ ಒಂದು ಕಾರಣಕ್ಕೆ ಬೀದಿಗಿಳಿದು ಹೋರಾಟ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ಬಂದೊದಗಿದೆ. ಅದರಲ್ಲಿ ರೈತರ ಸಮಸ್ಯೆಗಳು ವಿಪರೀತವಾಗಿವೆ. ಇದಕ್ಕೆ ದೆಹಲಿಯಲ್ಲಿ ನಡೆದ ಐತಿಹಾಸಿಕ ರೈತ ಹೋರಾಟ ನಮ್ಮ ಕಣ್ಣ ಮುಂದೆ ಸಾಕ್ಷಿಯಾಗಿ ನಿಲ್ಲುತ್ತದೆ. ಜನರು ಬಳಸುವ, ಕೊಂಡು ತಿನ್ನುವ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ,ಮಕ್ಕಳು ಬಳಸುವ ಪೆನ್ಸಿಲ್ ರಬ್ಬರ್ ಮೇಲೆಯೂ ತೆರಿಗೆ ವಿಧಿಸಲಾಗಿದೆ,ಆದರೆ ಆದಾಯದ ಪ್ರಮಾಣ ಮಾತ್ರ ಶೂನ್ಯ.

ಈ ದಿನ ವಿದ್ಯುತ್ ಖಾಸಗಿಕರಣವಾಗಿದೆ, ವಿರೋಧದ ನಡುವೆಯೂ ಗೋ ಹತ್ಯೆ ನಿಷೇಧ ಕಾಯ್ದೆ ಸದ್ದಿಲ್ಲದೆ ಜಾರಿಯಾಗಿದೆ. ಈಗ ದಿನ ನಿತ್ಯ ಬಳಸುವ ನೀರಿಗೂ ಮೀಟರ್ ಅಳವಡಿಸಲಾಗುತ್ತಿದೆ,ಅಷ್ಟು ಮಾತ್ರ ವಲ್ಲದೆ ಭಾಗ್ಯಜ್ಯೋತಿ ಯೋಜನೆಯಡಿ ರೈತರ ಪಂಪ್ ಸೆಟ್ ಗಳಿಗೆ ಉಚಿತವಾಗಿ ನೀಡುತ್ತಿದ್ದ ವಿದ್ಯುತ್ ಗೂ ಈ ದಿನ ಶುಲ್ಕ ಕಟ್ಟಬೇಕಾದ ಪರಿಸ್ಥಿತಿ ತಂದೊಡ್ಡುತ್ತಿದ್ದಾರೆ. ಆದರೆ ರೈತ ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ  ನೀಡುತ್ತಿಲ್ಲ.  ಬೆಳೆಗಳನ್ನು ಸಂರಕ್ಷಿಸಿಡಲು ಉತ್ತಮವಾದ ಮತ್ತು ವೈಜ್ಞಾನಿಕವಾದ ಗೋಡೋನ್ ಗಳಿಲ್ಲ. ಬೆಳದ ಬೆಳೆಗಳಿಗೆ ಸೂಕ್ತ ದರ ನೀಡಿ, ಸರ್ಕಾರವೆ ಕೊಂಡು ಕೊಳ್ಳುವ ಯಾವುದೇ ಭರವಸೆಗಳಿಲ್ಲದೆ ರೈತನ ಬದುಕು ಮೂರಾಬಟ್ಟೆಯಾಗುತ್ತಿದೆ.

ದೇಶಕ್ಕೆ ಅನ್ನ ನೀಡುವ ಅನ್ನದಾತನನ್ನು ರಸ್ತೆಗೆ ತಂದು ಕೂರಿಸಿವೆ. ಇವತ್ತಿನ ಆಳುತ್ತಿರುವ ಸರ್ಕಾರಗಳು ನಿರ್ಲಕ್ಷ್ಯ ದಿಂದ ಮುಂದಿನ ದಿನಗಳಲ್ಲಿ ರೈತ ಆತ್ಮಹತ್ಯೆ ಗಳು ಹೆಚ್ಚಾಗುವ ಸಾಧ್ಯತೆಯೂ ಇದೆ ಆದರೆ ಅದಕ್ಕೆ ಅವಕಾಶವನ್ನು ಕೊಡದೆ ನಮ್ಮ ಬೆವರಿನ ಪರಿಶ್ರಮವನ್ನು ಪಡೆದುಕೊಳ್ಳಬೇಕು. ಅದಕ್ಕೆ ಇರುವ ಒಂದೇ ಮಾರ್ಗ ಗಟ್ಟಿಯಾದ ಜನಹೋರಾಟ.

ಹಾಗಾಗಿ ರೈತ ಸಂಘದ ಎಲ್ಲಾ ಹೋರಾಟದಲ್ಲಿಯೂ ಕರ್ನಾಟಕ ಜನಶಕ್ತಿ ಎಲ್ಲಾಕಾಲದಲ್ಲಿಯೂ ಜೊತೆಯಾಗಿ ನಿಂತು ಹೋರಾಟ ಮಾಡುತ್ತಿದೆ,ಮುಂದೆಯೂ ಜೊತೆಗೆ ಇದ್ದೆ ಇರುತ್ತದೆ. ಮಂಡ್ಯದ ರೈತರು ಮುಂದಿಟ್ಟಿರುವ ಬೇಡಿಕೆಗಳಾದ ಭತ್ತ ಮತ್ತು ಕಬ್ಬಿಗೆ ಸೂಕ್ತ ಬೆಲೆಯನ್ನು ನಿಗದಿ ಮಾಡಬೇಕು. ಹಾಲಿನ ದರವನ್ನು ಹೆಚ್ಚಳ ಮಾಡಿ ರೈತನ ಬೆವರಿನ ಫಲ ಅವರಿಗೆ ಸಿಗುವಂತೆ ಕ್ರಮ ಕೈಗೊಳ್ಳಬೇಕು, ಇದಕ್ಕೆ ಸರ್ಕಾರಗಳು ಸೂಕ್ತ ಕ್ರಮ ಜರುಗಿಸಬೇಕು. ಇಲ್ಲವಾದರೆ ಹೋರಾಟವನ್ನು ಇನ್ನೂ ತೀವ್ರಗೊಳಿಸೋಣ ಈ ನಿಟ್ಟಿನಲ್ಲಿ ಕರ್ನಾಟಕ ಜನಶಕ್ತಿ ಮತ್ತು ಮಹಿಳಾ ಮುನ್ನಡೆ ಕೂಡಾ ನಿಮ್ಮ ಜೊತೆಗೆ ಹೋರಾಟಕ್ಕೆ ಯಾವಾಗಲೂ ಸಿದ್ದ ಎಂದು ತಿಳಿಸಿದರು. ಕರ್ನಾಟಕ ಜನಶಕ್ತಿಯ  ಶಿಲ್ಪ, ಜ್ಯೋತಿ, ಸೌಮ್ಯ,ಅಂಜಲಿ ಮತ್ತು ನಾಗರಾಜು. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!