ಬಿಜೆಪಿ ಸರ್ಕಾರ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ನ್ಯಾಷನಲ್ ಹೆರಾಲ್ಡ್ ಕೇಸಿನಲ್ಲಿ ಬಂಧಿಸಲು ತನಿಖಾ ಸಂಸ್ಥೆ ಇಡಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಪಕ್ಷದ ನೂರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಮಂಡ್ಯ ನಗರದ ಜಿಲ್ಲಾಧಿಕಾರಿ ಕಚೇರಿ ರಸ್ತೆಯಲ್ಲಿರುವ ಆದಾಯ ತೆರಿಗೆ ಇಲಾಖೆ ಮುಂದೆ ಜಮಾಯಿಸಿದ ಕಾಂಗ್ರೆಸ್ ಕಾರ್ಯ ಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಆದಾಯ ತೆರಿಗೆ ಇಲಾಖೆಗೆ ಮುತ್ತಿಗೆ ಹಾಕಲು ಮುಂದಾದ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರನ್ನು ಪೊಲೀಸರು ತಡೆದರು. ನಂತರ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ನರೇಂದ್ರಸ್ವಾಮಿ, ದೇಶದಲ್ಲಿ ಬಿಜೆಪಿ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ನ್ಯಾಷನಲ್ ಹೆರಾಲ್ಡ್ ಪ್ರಕರಣ ಮುಗಿದ ಅಧ್ಯಾಯವಾಗಿತ್ತು. ಅದನ್ನು ಮತ್ತೆ ಮರು ತನಿಖೆಗೆ ಆದೇಶ ಮಾಡಿ ರಾಷ್ಟ್ರದ ಜನರ ಮನಸ್ಸಿನಲ್ಲಿ ರಾಹುಲ್ ಗಾಂಧಿ ಹಾಗೂ ಸೋನಿಯಾಗಾಂಧಿಯವರ ವರ್ಚಸ್ಸಿಗೆ ಮಸಿ ಬಳಿಯಲು ಹೊರಟಿದೆ. ರಾಹುಲ್ ಗಾಂಧಿ ಮುಂದಿನ ಚುನಾವಣೆಯಲ್ಲಿ ಗೆದ್ದು ಪ್ರಧಾನಿಯಾಗುವ ಗುಪ್ತಚರ ಇಲಾಖೆಯ ಮಾಹಿತಿ ಇಂದ ಪ್ರಧಾನಿ ನರೇಂದ್ರ ಮೋದಿ ನ್ಯಾಷನಲ್ ಹೆರಾಲ್ಡ್ ಕೇಸಿಗೆ ಜೀವ ಕೊಟ್ಟು ಅವರನ್ನು ಬಂಧಿಸಲು ಹವಣಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಂದು ದೇಶದಲ್ಲಿ ದಬ್ಬಾಳಿಕೆಯ, ದುರಹಂಕಾರಿ ಆಡಳಿತ ನಡೆಯುತ್ತಿದೆ. ಗುಜರಾತ್ ನರಮೇಧದ ರೂವಾರಿಗಳಾದ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಈ ದೇಶದ ಸಂಪತ್ತನ್ನು ಅದಾನಿ, ಅಂಬಾನಿಯವರಿಗೆ ಮಾರಿ ಅವರು ನೀಡಿದ ಹಣದಲ್ಲಿ ಅಧಿಕಾರ ಹಿಡಿಯುತ್ತಿದೆ. ರೈಲ್ವೆ, ಏರ್ ಪೋರ್ಟ್ ಸೇರಿದಂತೆ ಕೇಂದ್ರ ಸರ್ಕಾರಕ್ಜೆ ಆದಾಯ ತರುತ್ತಿದ್ದ ಸಂಸ್ಥೆಗಳನ್ನು ಮಾರಾಟ ಮಾಡಿ ರಾಷ್ಟ್ರರಾಜಕಾರಣದ ಅಪಖ್ಯಾತಿಗೆ ಕಾರಣರಾಗಿದ್ದಾರೆ ಎಂದು ಕಿಡಿಕಾರಿದರು.
ದೇಶದ ರೈತರು ಚಳಿ, ಮಳೆ, ಗಾಳಿ ಎನ್ನದೆ,ಊಟ, ನಿದ್ದೆ ಬಿಟ್ಟು ಒಂದು ವರ್ಷ ಹೋರಾಟ ಮಾಡಿದರೂ ನರೇಂದ್ರ ಮೋದಿ ಅವರು ಮರುಗಲಿಲ್ಲ. ಯಾವಾಗ ಉತ್ತರಪ್ರದೇಶ ಚುನಾವಣೆ ಹತ್ತಿರ ಬಂತೋ ಆಗ ರೈತ ವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆದರು. ರೈತರ ಬೆಳೆಗೆ ಉತ್ತಮ ಬೆಲೆ ನೀಡುವ ಯೋಗ್ಯತೆ ಈ ಸರ್ಕಾರಕ್ಕಿಲ್ಲ.ದೇಶದ ಜನಸಾಮಾನ್ಯರ ಮೇಲೆ ಗಬ್ಬರ್ ಸಿಂಗ್ ಟ್ಯಾಕ್ಸ್ (ಜಿಎಸ್ಟಿ)ಹಾಕಿ ಅವರ ಜೀವನವನ್ನು ಕಷ್ಟಕ್ಕೆ ದೂಡಿದ ಬಿಜೆಪಿ ಸರ್ಕಾರ ಅತ್ಯಂತ ಕೆಟ್ಟ ಸರ್ಕಾರ ಎಂದು ದೂರಿದರು.
ಭ್ರಷ್ಟಾಚಾರದ ಹಿನ್ನಲೆಯಲ್ಲಿ ರಾಜೀನಾಮೆ ನೀಡಿದ ಈಶ್ವರಪ್ಪ ಹಾಗೂ ಚೆಕ್ ಮೂಲಕ ಹಣ ಪಡೆದ ಯಡಿಯೂರಪ್ಪ ಅವರ ಮೇಲೆ ಯಾಕೆ ಇಡಿ ತನಿಖೆ ಮಾಡಲಿಲ್ಲ.ಕಾಂಗ್ರೆಸ್ ನಾಯಕರಾದ ಡಿ.ಕೆ. ಶಿವಕುಮಾರ್, ಚಿದಂಬರಂ ಅವರ ಮೇಲೆ ಬೆದರಿಕೆ ಹಾಕಿ ಅವರನ್ನು ಸಿಲುಕಿಸುವ ಹುನ್ನಾರ ನಡೆಸುತ್ತಿದೆ ಎಂದು ಕೇಂದ್ರ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಸಚಿವರಾದ ಎನ್.ಚಲುವರಾ ಯಸ್ವಾಮಿ, ಮಾಜಿ ಶಾಸಕರಾದ ರಮೇಶ್ ಬಂಡಿಸಿದ್ದೇಗೌಡ, ಎಂ.ಎಸ್. ಆತ್ಮಾನಂದ, ವಿಧಾನ ಪರಿಷತ್ ಸದಸ್ಯ ದಿನೇಶ್‌ಗೂಳಿಗೌಡ, ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ಮುಖಂಡರಾದ ಡಾ.ಕೃಷ್ಣ, ರವಿಕುಮಾರ್‌ಗಣಿಗ, ನಟ ಸಚಿನ್, ಸಿ.ಆರ್.ರಮೇಶ್,ಮಹಿಳಾಧ್ಯಕ್ಷೆ ಅಂಜನಾ ಶ್ರೀಕಾಂತ್ ಸೇರಿದಂತೆ ನೂರಾರು ಮಂದಿ ಕಾರ್ಯ ಕರ್ತರಿದ್ದರು.