ಮಳವಳ್ಳಿ ತಾಲ್ಲೂಕಿನಲ್ಲಿ ಸರ್ಕಾರಿ ಭೂಮಿ ಅಕ್ರಮ ಪರಭಾರೆ ವಿರೋಧಿಸಿ ಜೆಡಿಎಸ್ ಹಾಗೂ ಬಿಜೆಪಿ ಪಕ್ಷದ ಕಾರ್ಯಕರ್ತರು ಜಂಟಿಯಾಗಿ ಮಳವಳ್ಳಿ ಪಟ್ಟಣದ ತಾಲ್ಲೂಕು ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಅನ್ನದಾನಿ ಮಾತನಾಡಿ, ಈ ಅಕ್ರಮದಲ್ಲಿ ರಾಜಕಾರಣಿಯಿಂದ ಹಿಡಿದು ಅಧಿಕಾರಿಯವರೆಗೂ ಕೈವಾಡವಿದ್ದು ಸಮಗ್ರ ತನಿಖೆಯಾಗಬೇಕು, ಕೂಡಲೇ ಸಿಬಿಐಗೆ ವಹಿಸಬೇಕು. ಮಳವಳ್ಳಿ ತಾಲ್ಲೂಕಿನಾದ್ಯಂತ ವಿವಿಧ ಹೋಬಳಿಗಳ ಸರ್ವೆ ನಂಬರುಗಳಲ್ಲಿ ಸರ್ಕಾರಿ ಖರಾಬು, ಗೋಮಾಳ, ಮುಂತಾದ ಸರ್ಕಾರಿ ಒಡೆತನದಲ್ಲಿರುವ ಆಸ್ತಿಯನ್ನು ಕರ್ನಾಟಕ ಸರ್ಕಾರದ ಭೂ ಕಂದಾಯ ನೀತಿ ನಿಯಮಗಳನ್ನು ಉಲ್ಲಂಘಿಸಿ ತಾಲ್ಲೂಕು ಆಡಳಿತ ಕೆಲವು ಪ್ರಭಾವಿ ವ್ಯಕ್ತಿಗಳಿಗೆ ಖಾತೆ ಮಾಡಿದ್ದಾರೆ. ಇವುಗಳ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.

ಮಳವಳ್ಳಿ ತಾಲ್ಲೂಕಿನಲ್ಲಿ ಭೂರಹಿತ ಕೃಷಿ ಕಾರ್ಮಿಕರು, ಅಲ್ಪ ಸ್ವಲ್ಪ ಜಮೀನು ಹೊಂದಿರುವ ಸಾವಿರಾರು ಬಡ ರೈತರು ಫಾರಂ ನಂ 53, 57ರಲ್ಲಿ ಅರ್ಜಿ ಸಲ್ಲಿಸಿ ಭೂಮಿಗಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದರೂ ತಾಲ್ಲೂಕು ಆಡಳಿತ ಕ್ಯಾರೆ ಎನ್ನುತಿಲ್ಲ, ಬಡ ರೈತರ ಹಿತವನ್ನು ಕಾಯುವ ಬದಲು ತಾಲ್ಲೂಕು ಆಡಳಿತ ಸ್ವ-ಹಿತಾಶಕ್ತಿ ಈಡೇರಿಕೆಗಾಗಿ ವಾಮಮಾರ್ಗ ಅನುಸರಿಸಿ ಅಕ್ರಮ ಖಾತೆಗಳನ್ನು ಪ್ರಭಾವಿಗಳಿಗೆ ಮಾಡಿಕೊಟ್ಟಿದೆ ಎಂದು ದೂರಿದರು. ನಂತರ ಪ್ರತಿಭಟನೆಕಾರರು ಮಂಡ್ಯ ಉಪ ವಿಭಾಗಾಧಿಕಾರಿ ಶಿವಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಬಿ ರವಿ, ಹನುಮಂತು, ಪುರಸಭೆ ಸದ್ಯಸರಾದ ಕೃಷ್ಣ, ನಂದ ಕುಮಾರ್, ಪ್ರಶಾಂತ್, ನಾಗೇಶ್, ನೂರುಲ್ಲ, ಕುಮಾರ್, ಸಿದ್ದರಾಜು, ಮುಖಂಡರಾದ ಬಿ ಎಂ ಕಾಂತರಾಜು, ನಾಗರಾಜು, ಉಮೇಶ್, ಅಶೋಕ್, ಮೋಹನ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.




