Monday, September 16, 2024

ಪ್ರಾಯೋಗಿಕ ಆವೃತ್ತಿ

ಬಿಜೆಪಿ ನಾಯಕರು ಹಗಲುಗನಸು ಕಾಣುತ್ತಿದ್ದಾರೆ : ಮಹಾಲಿಂಗೇಗೌಡ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕಂದಾಯ ಸಚಿವ ಆರ್.ಅಶೋಕ್‌ ಅಶೋಕ್ ಅವರು ಮಂಡ್ಯದಲ್ಲಿ ನಾಲ್ಕೈದು ಕ್ಷೇತ್ರಗಳನ್ನು ಬಿಜೆಪಿ ಗೆಲ್ಲುತ್ತದೆ ಎಂದು ಹಗಲುಗನಸು ಕಾಣುತ್ತಿದ್ದಾರೆ, ಜೆಡಿಎಸ್ ನ ಪಂಚರತ್ನ ಯಾತ್ರೆಯ ಚಂಡಮಾರುತಕ್ಕೆ ಸಿಲುಕಿ ಬಿಜೆಪಿ ಧೂಳೀಪಟವಾಗಲಿದೆ ಎಂದು ಮಂಡ್ಯ ಜಿಲ್ಲಾ ಜೆಡಿಎಸ್ ವಕ್ತಾರ ಮಹಾಲಿಂಗೇಗೌಡ ಮುದ್ದನಘಟ್ಟ ಹೇಳಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳೇ ನೀವು ಬದಲಾವಣೆ ಬಿರುಗಾಳಿ ಆರಂಭವಾಗಿದೆ ಎಂದು ಹೇಳಿದ್ದೀರಿ. ಆದರೆ ನಮ್ಮ ಕುಮಾರಣ್ಣ ಅವರ ಪಂಚರತ್ನ ಯೋಜನೆಗಳು, ಈಗಾಗಲೇ ಜನರ ಮನಸೂರೆಗೊಂಡಿದ್ದು, ನಿಮ್ಮ ಬಿರುಗಾಳಿಯನ್ನು ನಮ್ಮ ಪಂಚರತ್ನ ಯೋಜನೆಯ ಚಂಡಮಾರುತ ಕೊಚ್ಚಿ ಹಾಕುತ್ತದೆ ಎಂದು ತಿರುಗೇಟು ನೀಡಿದರು.

ನೀವು ನಾಲೈದು ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುತ್ತದೆ ಎಂದು ಹೇಳಿದ್ದೀರಿ. ಇದು ನಿಮ್ಮ ಹಗಲು ಕನಸು. ನಮ್ಮ ಜೆಡಿಎಸ್ ಪಕ್ಷವು 7ಕ್ಕೆ 7 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಇದರಲ್ಲಿ ಅನುಮಾನವೇ ಬೇಡ. ನಮ್ಮ ನಾಯಕ ಕುಮಾರಣ್ಣ ನಿಮ್ಮ ರೀತಿ ಬ್ರೋಕರ್ ಅಲ್ಲ, ನಮ್ಮ ನಾಯಕರ ಬಳಿ ನೀವು ಭಿಕ್ಷಾನ್ ದೇಯಿ ಎಂದು ಎಷ್ಟು ಬಾರಿ ಹೋಗಿದ್ದೀರಿ ಎಂದು ಪ್ರಶ್ನಿಸಿದರು.

ಡಿ.22 ಮಂಡ್ಯಕ್ಕೆ ಪಂಚರತ್ನ ಯಾತ್ರೆ 

ಹೆಚ್.ಡಿ.ಕುಮಾರಸ್ವಾಮಿ ಅವರು ನಡೆಸುತ್ತಿರುವ  ಪಂಚರತ್ನ ರಥಯಾತ್ರೆಯೂ ಡಿ.22 ರಂದು ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಸಂಚಾರ ಮಾಡಲಿದೆ. ಯಾತ್ರೆಯು ಶಾಸಕ ಎಂ.ಶ್ರೀನಿವಾಸ್‌ ನೇತೃತ್ವದಲ್ಲಿ ನಡೆಯಲಿದ್ದು, ಅಂದು ಪಂಚರತ್ನ ರಥಯಾತ್ರೆಯು ಬೆಳಗ್ಗೆ 9 ಗಂಟೆಗೆ ಕ್ಷೇತ್ರದ ಹನಕೆರೆ ಗ್ರಾಮದಲ್ಲಿ ಆರಂಭವಾಗಲಿದೆ. ಬೆಳಗ್ಗೆ 9.30ಕ್ಕೆ ಬದನೂರು, 10 ಗಂಟೆಗೆ ಶ್ರೀನಿವಾಸಮರ ಗೇಟ್, 10-30ಕ್ಕೆ ಶುಗರ್ ಫ್ಯಾಕ್ಟರ್ ಸರ್ಕಲ್ ತಲುಪಲಿದೆ ಎಂದರು.

ಮಧ್ಯಾಹ್ನ 1 ಗಂಟೆಗೆ ಸಿಲ್ವರ್ ಜ್ಯೂಬಿಲಿ ಪಾರ್ಕ್‌ನಲ್ಲಿ ಸಂಚಾರ ಮಾಡಲಿದೆ. ಯಾತ್ರೆಯ ಭಾಗವಾಗಿ ಸಿಲ್ವರ್ ಜ್ಯೂಬಿಲಿ ಪಾರ್ಕಿನಲ್ಲಿ ಬೃಹತ್‌ ಬಹಿರಂಗ ಸಭೆ ನಡೆಯಲಿದ್ದು, ಸಭೆಯನ್ನು ಉದ್ದೇಶಿಸಿ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಜೆಡಿಎಸ್‌ ಪಕ್ಷದ ಮುಖಂಡರು ಮಾತನಾಡಲಿದ್ದಾರೆ ಎಂದು ತಿಳಿಸಿದರು.

ಬಹಿರಂಗ ಸಭೆಯ ನಂತರ ನಗರದ ಕಾರೆಮನೆ ಗೇಟ್, ಚಿಕ್ಕಮಂಡ್ಯ, ಸಾತನೂರು ಗ್ರಾಮಗಳಲ್ಲಿ ಸಂಚಾರ ಮಾಡಲಿದೆ. ಸಾತನೂರಿನಲ್ಲಿ ಕುಮಾರಸ್ವಾಮಿ ಅವರು ಕಾರ್ಯಕರ್ತರೊಡನೆ ಮಧ್ಯಾಹ್ನದ ಊಟವನ್ನು ಗ್ರಾಮದ ಮುಖಂಡರ ಮನೆಯಲ್ಲಿ ಸವಿದು ಯಾತ್ರೆಯನ್ನು ಮುಂದುವರೆಸಲಿದ್ದಾರೆ ಎಂದರು.

ಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ವೆಂಕಟೇಶ್, ಶಶಿಕುಮಾರ್, ರಾಮಕೃ‍ಷ್ಣ, ಗೌತಮ್ ಮತ್ತಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!