ಮೋದಿ 3.0 ಸರ್ಕಾರದಲ್ಲಿ ರಾಜ್ಯ ಖಾತೆ ಸಚಿವರಾಗಿ ಭಾನುವಾರ (ಜೂ.9) ಪ್ರಮಾಣ ವಚನ ಸ್ವೀಕರಿಸಿದ್ದ ಕೇರಳ ರಾಜ್ಯದ ತ್ರಿಶೂರ್ ಸಂಸದ ಸುರೇಶ್ ಗೋಪಿ ನಾನು ಸಿನಿಮಾ ಮಾಡಬೇಕು. ಅದಕ್ಕಾಗಿ ನನಗೆ ಸಚಿವ ಸ್ಥಾನ ಬೇಡ ಎಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ಕೇರಳದ ತ್ರಿಶೂರ್ ಸಂಸದನಾಗಿ ಆಯ್ಕೆ ಆಗಿರುವ ಮಲಯಾಳಂ ಚಿತ್ರನಟ ಸುರೇಶ್ ಗೋಪಿ ಮೋದಿಜೀ ಅವರ ಸಂಪುಟದಲ್ಲಿ ಸಚಿವರಾಗಿ ನಿನ್ನೆಯಷ್ಟೇ ಪ್ರಮಾಣ ವಚನ ಸ್ವೀಕರಿಸಿದ್ದರು. ಆದರೆ ಇಂದು ರಾಜೀನಾಮೆ ನೀಡಲು ಮುಂದಾಗಿದ್ದಾರೆ.
ಇದುವರೆಗೆ ಬಿಜೆಪಿ ಪಕ್ಷ ಕೇರಳದಲ್ಲಿ ಖಾತೆಯನ್ನೇ ತೆರೆದಿರಲಿಲ್ಲ.2024 ರ ಚುನಾವಣೆಯಲ್ಲಿ ಕೇರಳದಲ್ಲಿ ಮೊದಲ ಬಾರಿಗೆ ತ್ರಿಶೂರ್ ಲೋಕಸಭಾ ಕ್ಷೇತ್ರದಿಂದ ಗೆಲ್ಲುವ ಮೂಲಕ ಸುರೇಶ್ ಗೋಪಿ ಬಿಜೆಪಿ ಖಾತೆ ತೆರೆದು ಇತಿಹಾಸ ನಿರ್ಮಿಸಿದ್ದರು.
ಕೇರಳದಲ್ಲಿ ಅಚ್ಚರಿ ಫಲಿತಾಂಶಕ್ಕೆ ಕಾರಣವಾಗಿದ್ದ ಇವರು, ಇಂದು ನನಗೆ ಸಿನಿಮಾ ಮುಖ್ಯ. ನಾನು ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದು,ಸಚಿವನಾಗಿ ಮುಂದುವರೆದರೆ ಸಿನಿಮಾಗಳಿಗೆ ತೊಂದರೆ ಆಗಲಿದೆ. ಈ ಹಿನ್ನಲೆಯಲ್ಲಿ ನನ್ನನ್ನು ಸಚಿವ ಸ್ಥಾನದಿಂದ ಬಿಡುಗಡೆ ಗೊಳಿಸಿ ಎಂದು ಸುರೇಶ್ ಗೋಪಿ ಬಿಜೆಪಿ ನಾಯಕರಿಗೆ ಒತ್ತಾಯಿಸಿದ್ದಾರೆ.
ನನಗೆ ಸಂಸದ ಸ್ಥಾನ ಮಾತ್ರ ಸಾಕು, ಸಚಿವ ಸ್ಥಾನ ಬೇಡ ಅನ್ನುವ ಮೂಲಕ ಸಿನಿಮಾ, ನಟನೆಯೇ ಮುಖ್ಯ ಎಂಬ ಹೇಳಿಕೆ ನೀಡಿದ್ದಾರೆ. ಸುರೇಶ್ ಗೋಪಿ ಅವರದು ಯಾವ ರೀತಿಯ ಹುಚ್ಚಾಟ ಎಂದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.




