Thursday, September 19, 2024

ಪ್ರಾಯೋಗಿಕ ಆವೃತ್ತಿ

ಲೋಕಸಭಾ ಚುನಾವಣೆ| 30 ದಿನಗಳಲ್ಲಿ ಗೂಗಲ್‌ ಜಾಹೀರಾತಿಗಾಗಿ ₹30 ಕೋಟಿ ವೆಚ್ಚ ಮಾಡಿದ ಬಿಜೆಪಿ !

ಬಿಜೆಪಿ 2024ರ ಸಾರ್ವತ್ರಿಕ ಲೋಕಸಭಾ ಚುನಾವಣೆಗಳಿಗೆ ಮುಂಚಿತವಾಗಿ ಗೂಗಲ್ ಸರ್ಚ್ ಮತ್ತು ಯೂಟ್ಯೂಬ್ ಸೇರಿದಂತೆ ಗೂಗಲ್‌ನ ಡಿಸ್‌ಪ್ಲೇ ನೆಟ್‌ವರ್ಕ್ ಮತ್ತು ಆಲ್ಫಾಬೆಟ್ ಪ್ಲಾಟ್‌ಫಾರ್ಮ್‌ಗಳಿಗೆ ಸಾವಿರಾರು ರಾಜಕೀಯ ಜಾಹೀರಾತುಗಳಿಗೆ 30 ದಿನಗಳಲ್ಲಿ 30 ಕೋಟಿ ರೂ. ವೆಚ್ಚವನ್ನು ಮಾಡಿದೆ ಎಂಬ ಸ್ಪೋಟಕ ಮಾಹಿತಿ ಬಯಲಾಗಿದೆ.

2019ರ ಚುನಾವಣೆಯ ವೇಳೆ ಫೆಬ್ರವರಿಯಿಂದ- ಮೇವರೆಗೆ ನಾಲ್ಕು ತಿಂಗಳುಗಳ ನಡುವೆ ಜಾಹೀರಾತಿಗಾಗಿ ಮಾಡಿದ ವೆಚ್ಚಕ್ಕಿಂತ ಇದು ದುಪ್ಪಟ್ಟಾಗಿದೆ. 2019ರ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ನಾಲ್ಕು ತಿಂಗಳ ಅವಧಿಯಲ್ಲಿ ಪಕ್ಷವು ಕೇವಲ 12.3 ಕೋಟಿ ರೂ.ವೆಚ್ಚವನ್ನು ಮಾಡಿತ್ತು. ಅದೇ ಅವಧಿಯಲ್ಲಿ ಪ್ರಮುಖ ವಿರೋಧ ಪಕ್ಷವಾದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) ವೆಚ್ಚ 2.99 ಕೋಟಿ ರೂ.ಆಗಿತ್ತು. ಫೆಬ್ರವರಿ 2024ರಲ್ಲಿ ಕಾಂಗ್ರೆಸ್‌ ಪಕ್ಷವು Google ಜಾಹೀರಾತುಗಳ ಮೂಲಕ ಯಾವುದೇ ಸಂದೇಶವನ್ನುಪ್ರಚಾರ ಮಾಡಿಲ್ಲ ಎನ್ನುವುದು ತಿಳಿಯುತ್ತದೆ.

30 ದಿನಗಳಲ್ಲಿ ಅಂದರೆ ಜನವರಿ 29ರಿಂದ ಫೆಬ್ರವರಿ 28ರ ನಡುವೆ ಜಾಹೀರಾತಿಗಾಗಿ ಬಿಜೆಪಿ 29.7 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ ಎಂದು ಗೂಗಲ್ ಜಾಹೀರಾತುಗಳ ಕುರಿತ ಡೇಟಾ ತೋರಿಸುತ್ತದೆ. ಗೂಗಲ್‌ 12,600ಕ್ಕೂ ಹೆಚ್ಚು ಜಾಹೀರಾತುಗಳನ್ನು ಸ್ಟ್ರೀಮ್ ಮಾಡಿದೆ. ಹೆಚ್ಚಾಗಿ ವೀಡಿಯೊಗಳನ್ನು ಅಂದರೆ 75%ದಷ್ಟು ವಿಡಿಯೋ ಜಾಹೀರಾತುಗಳನ್ನು ಪ್ರಸಾರ ಮಾಡಿದೆ. ಇದು ಬಹು ಭಾರತೀಯ ಭಾಷೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಪ್ರಚಾರವನ್ನು ಮಾಡುತ್ತದೆ. ಇವುಗಳಲ್ಲಿ ಹೆಚ್ಚಿನವು ವೀಡಿಯೊ ಜಾಹೀರಾತುಗಳಾಗಿದ್ದು, 50%ಕ್ಕಿಂತ ಹೆಚ್ಚು ಜಾಹೀರಾತುಗಳನ್ನು ಪ್ಲಾಟ್‌ಫಾರ್ಮ್ ನೀತಿಯ ಉಲ್ಲಂಘನೆಗಾಗಿ Googleನಿಂದ ತೆಗೆದುಹಾಕಲಾಗಿದೆ.

30 ದಿನಗಳಲ್ಲಿ ಸುಮಾರು 30 ಕೋಟಿ ರೂಪಾಯಿಗಳ ವೆಚ್ಚವು ಭಾರತದಲ್ಲಿ ಆನ್‌ಲೈನ್ ರಾಜಕೀಯ ಜಾಹೀರಾತುಗಳ ಹೆಚ್ಚಳದ ಗಮನಾರ್ಹ ಸೂಚಕವಾಗಿದೆ. 2019 ರಿಂದ 52,000ಕ್ಕೂ ಹೆಚ್ಚು ಜಾಹೀರಾತುಗಳ ಮೂಲಕ ತನ್ನ ಸಂದೇಶಗಳನ್ನು ಹರಡಲು ಬಿಜೆಪಿ ಇದುವರೆಗೆ 79.16 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿದೆ, ಇತ್ತೀಚಿನ ಬ್ಯುಸಿನೆಸ್ ಲೈನ್ ವರದಿಯು ಫೆಬ್ರವರಿ 2019 ಮತ್ತು ಫೆಬ್ರವರಿ 2023ರ ನಡುವೆ ಫೇಸ್‌ಬುಕ್ ಜಾಹೀರಾತುಗಳಿಗಾಗಿ ಬಿಜೆಪಿ 33 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ ಎಂದು ತಿಳಿಸುತ್ತದೆ.

ಕಳೆದ ತಿಂಗಳಲ್ಲಿ ಹೆಚ್ಚಿನ Google ಜಾಹೀರಾತುಗಳು ಬಿಜೆಪಿ ಅಥವಾ ಅದರ ಮೈತ್ರಿ ಪಾಲುದಾರ ಆಡಳಿತವಿರುವ ಉತ್ತರ ಭಾರತದ ರಾಜ್ಯಗಳ ಮತದಾರರನ್ನು ಗುರಿಯಾಗಿಸಿಕೊಂಡಿವೆ. ಕಳೆದ 30 ದಿನಗಳಲ್ಲಿ ಒಂದು ಕೋಟಿ ವೀಕ್ಷಣೆಯ ಒಂದು ವಿಡಿಯೋಗೆ 30 ಲಕ್ಷಕ್ಕೂ ಅಧಿಕ ವ್ಯಯಿಸಲಾಗಿದೆ. ಬಿಜೆಪಿ 10 ಲಕ್ಷದಿಂದ 30 ಲಕ್ಷದವರೆಗೆ 50 ವೀಡಿಯೋಗಳಿಗೆ ವ್ಯಯಿಸಿದೆ, 100 ವೀಡಿಯೋಗಳಿಗೆ 5 ಲಕ್ಷದಿಂದ 10 ಲಕ್ಷದವರೆಗೆ, 124 ವೀಡಿಯೊಗಳಿಗೆ 2.5 ಲಕ್ಷದಿಂದ 5 ಲಕ್ಷದವರೆಗೆ ಮತ್ತು 109 ವಿಡಿಯೋಗಳಿಗೆ 1 ಲಕ್ಷದಿಂದ 2.5 ಲಕ್ಷದವರೆಗೆ ವ್ಯಯಿಸಲಾಗಿದೆ ಎಂದು ವರದಿ ತಿಳಿಸಿದೆ.

2019ರಿಂದ ಕಳೆದ ಐದು ವರ್ಷಗಳ ದತ್ತಾಂಶವು, ಗೂಗಲ್ ಜಾಹೀರಾತುಗಳಿಗಾಗಿ ಬಿಜೆಪಿ ಹೆಚ್ಚು ಹಣವನ್ನು ಖರ್ಚು ಮಾಡಿದ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ  8.9 ಕೋಟಿ ವ್ಯಯಿಸಿ ಅಗ್ರಸ್ಥಾನದಲ್ಲಿದೆ ಎನ್ನುವುದನ್ನು ತೋರಿಸುತ್ತದೆ. ಕರ್ನಾಟಕದ ನಂತರ ಉತ್ತರಪ್ರದೇಶ 7.76 ಕೋಟಿ ರೂ. ವ್ಯಯಿಸಿದೆ, ದೆಹಲಿ 6.84 ಕೋಟಿ ವ್ಯಯಿಸಿದೆ, ಗುಜರಾತ್ 6.1 ಕೋಟಿ ರೂ. ವ್ಯಯಿಸಿದೆ, ಮಧ್ಯಪ್ರದೇಶ 5.9 ಕೋಟಿ ರೂ. ವ್ಯಯಿಸಿದೆ, ಬಿಹಾರ  4.38 ಕೋಟಿ ರೂ.ವ್ಯಯಿಸಿದೆ, ಪಶ್ಚಿಮ ಬಂಗಾಳ 3.46 ಕೋಟಿ ರೂ.ವ್ಯಯಿಸಿದೆ, ತೆಲಂಗಾಣ 3.18 ಕೋಟಿ ರೂ ವ್ಯಯಿಸಿದೆ, ಮಹಾರಾಷ್ಟ್ರ 3 ಕೋಟಿ ಮತ್ತು ಹರಿಯಾಣ 2.6 ಕೋಟಿ ರೂ.ವ್ಯಯಿಸಿದೆ ಎಂದು ವರದಿ ತಿಳಿಸಿದೆ.

50% ಕ್ಕಿಂತ ಹೆಚ್ಚು ಬಿಜೆಪಿ ವೀಡಿಯೊ ಜಾಹೀರಾತುಗಳನ್ನು ತೆಗೆದು ಹಾಕಿದ ಗೂಗಲ್‌

Googleನ ಜಾಹೀರಾತು ನೀತಿ ಉಲ್ಲಂಘನೆಗಾಗಿ ಬಿಜೆಪಿಯ 50%ಕ್ಕಿಂತ ಹೆಚ್ಚು ವೀಡಿಯೊಗಳನ್ನು Googleನಿಂದ ತೆಗೆದು ಹಾಕಲಾಗಿದೆ. Google ಜಾಹೀರಾತುದಾರರಿಗೆ ಮೂರು ಮುಖ್ಯ ಫ್ಲ್ಯಾಟ್‌ ಫಾರ್ಮ್‌ ನೀಡುತ್ತದೆ. Google ಹುಡುಕಾಟ, ವೆಬ್‌ಸೈಟ್‌ಗಳು ಮತ್ತು ಅಪ್ಲಿಕೇಶನ್‌ಗಳು ಮತ್ತು YouTube ಮೂಲಕ ಜಾಹೀರಾತು ಪ್ರಚಾರ ಮಾಡುತ್ತದೆ. ಅವುಗಳನ್ನು ವಯಸ್ಸು, ಲಿಂಗ ಮತ್ತು ಪೋಸ್ಟಲ್ ಕೋಡ್ ಸೇರಿ ನಿಯಮಗಳಂತೆ ಪ್ರೇಕ್ಷಕರನ್ನು ಸೀಮಿತಗೊಳಿಸುತ್ತದೆ. ಬಿಜೆಪಿಯ ವೀಡಿಯೊಗಳನ್ನು ಏಕೆ ತೆಗೆದುಹಾಕಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ. ಏಕೆಂದರೆ Google ಕಾರಣವನ್ನು ಬಹಿರಂಗಪಡಿಸುವುದಿಲ್ಲ ಮತ್ತು ಕೇವಲ ‘ನೀತಿ ಉಲ್ಲಂಘನೆಗಾಗಿ’ ಅವುಗಳನ್ನು ತೆಗೆದುಹಾಕಲಾಗಿದೆ ಎಂದು ಹೇಳುತ್ತದೆ. ಅಳಿಸಿದ ವೀಡಿಯೊಗಳನ್ನು ವೀಕ್ಷಿಸಲು ಇದು ಬಳಕೆದಾರರಿಗೆ ಅನುಮತಿಸುವುದಿಲ್ಲ.

ಭಾರತೀಯ ಚುನಾವಣಾ ಆಯೋಗ (ಇಸಿಐ) ನೀಡಿರುವ ಸೂಚನೆಗಳ ಪ್ರಕಾರ, ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳು ಸಾಮಾಜಿಕ ಮಾಧ್ಯಮ ವೆಬ್‌ಸೈಟ್‌ಗಳು ಸೇರಿದಂತೆ ಅಂತರ್ಜಾಲದಲ್ಲಿ ಪೋಸ್ಟ್ ಮಾಡಲಾದ ವಿಷಯಕ್ಕೆ ಮಾದರಿ ನೀತಿ ಸಂಹಿತೆ ಮತ್ತು ಸಂಬಂಧಿತ ಸೂಚನೆಗಳು ಅನ್ವಯಿಸುತ್ತವೆ. 2019ರಲ್ಲಿ ಏಪ್ರಿಲ್ 11ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆದವು. ಬಿಜೆಪಿಯು ಏಪ್ರಿಲ್ 6 ರಿಂದ ಮೇ 17 ರವರೆಗೆ ನಿರಂತರವಾಗಿ ರಾಜಕೀಯ ಜಾಹೀರಾತುಗಳೊಂದಿಗೆ ಅನೇಕ ರಾಜ್ಯಗಳಲ್ಲಿ ಮತದಾರರ ಮೇಲೆ ಪ್ರಭಾವ ಬೀರಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!