Saturday, October 26, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯದಲ್ಲಿ ಕೋಮುವಾದ ಬಿತ್ತುವ ಬಿಜೆಪಿ ಯತ್ನ ವಿಫಲವಾಗಲಿದೆ: ದಿನೇಶ್ ಗೂಳಿಗೌಡ

ಮಂಡ್ಯದಲ್ಲಿ ಕೋಮುವಾದದ ವಿಷ ಬೀಜ ಬಿತ್ತಿ, ರಾಜಕೀಯ ಪ್ರಯೋಜನ ಪಡೆಯಲು ಹೊರಟ ಬಿಜೆಪಿ ಹಾಗೂ ಮಿತ್ರ ಪಕ್ಷಗಳ ಪ್ರಯತ್ನ ವಿಫಲವಾಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಆಕ್ರೋಶ ವ್ಯಕ್ತಪಡಿಸಿದರು.

ಮದ್ದೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನ ಜನಪರ ಯೋಜನೆ, ಕಾಳಜಿ ಬಗ್ಗೆ ಜನರು ಈಗಾಗಲೇ ಅರ್ಥ ಮಾಡಿಕೊಂಡಿದ್ದಾರೆ. ಕೋಮುವಾದಕ್ಕೆ ನಮ್ಮ ಜನ ಸೊಪ್ಪು ಹಾಕುವುದಿಲ್ಲ. ಬಿಜೆಪಿ-ಜೆಡಿಎಸ್ ಪ್ರಯತ್ನ ಸಫಲವಾಗದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಂಡ್ಯದ ಕೆರಗೋಡು ಗ್ರಾಮದಲ್ಲಿ ರಾಷ್ಟ್ರಧ್ವಜ, ಕನ್ನಡಧ್ವಜ ಹಾರಿಸಲು ಗ್ರಾ.ಪಂ.ನಿಂದ ಅನುಮತಿ ಪಡೆದು, ಆ ಧ್ವಜದ ಕಟ್ಟೆಯ ಮೇಲೆ ಕೇಸರಿ ಬಾವುಟ ಹಾಗೂ ಹನುಮ ಧ್ವಜ ಹಾರಿಸಲಾಗಿತ್ತು. ಜಿಲ್ಲಾಡಳಿತ ಆ ಧ್ವಜ ಇಳಿಸಿ ರಾಷ್ಟ್ರ ಧ್ವಜ ಹಾರಿಸಿದೆ. ಜಿಲ್ಲಾಡಳಿತ ಸಂವಿಧಾನದ ಆಶಯದಂತೆ ಕಾನೂನಾತ್ಮಕವಾಗಿ ನಡೆದುಕೊಂಡಿದೆ. ಆದರೆ, ಬಿಜೆಪಿ ಹಾಗೂ ಅದರ ಮಿತ್ರ ಪಕ್ಷ ಜೆಡಿಎಸ್ ಅದನ್ನು ಕೋಮುವಾದೀಕರಣಗೊಳಿಸಿ ರಾಜಕೀಯ ಪ್ರಯೋಜನ ಪಡೆಯಲು ಹೊರಟಿವೆ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಪ್ರಯತ್ನ ಫಲಿಸಲ್ಲ

ಮಂಡ್ಯ ಎಂಬುದು ಸ್ವಾತಂತ್ರ್ಯ ಹೋರಾಟದ ನೆಲೆಯಾಗಿದೆ. ಇಲ್ಲಿ ಅನೇಕ ಮಹನೀಯರು ಆಳಿದ್ದಾರೆ. ಹೋರಾಟದ ನಾಡು ನಮ್ಮದು ಎಂಬುದನ್ನು ಯಾರೂ ಸಹ ಮರೆಯಬಾರದು. ಎಚ್.ಕೆ.ವೀರಣ್ಣ ಗೌಡ್ರು, ಎಸ್.ಎಂ.ಕೃಷ್ಣಾ ಅವರು, ಕೆ.ವಿ.ಶಂಕರೇಗೌಡ್ರು, ಅಂಬರೀಶ್, ಚೌಡಯ್ಯ, ಎಸ್.ಡಿ.ಜಯರಾಂ ಅವರು‌, ಜಿ.ಮಾದೇಗೌಡರು ಸೇರಿದಂತೆ ಅನೇಕ ನಾಯಕರು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಈ ನೆಲೆದಲ್ಲಿ ಮಾಡಿದ ಘಟಾನುಘಟಿ ನಾಯಕರ ತವರು ಜಿಲ್ಲೆ ಇದಾಗಿದೆ. ಈಗ ಇಂತಹ ನಾಡಿನಲ್ಲಿ ಬಿಜೆಪಿ ಮತ್ತು ಅವರ ಮಿತ್ರ ಪಕ್ಷ ಜೆಡಿಎಸ್ ಕೋಮುವಾದದ ವಿಷ ಬೀಜ ಬಿತ್ತಲು ಯತ್ನಿಸುತ್ತಿದೆ. ಅದು ಖಂಡಿತಾ ಯಶಸ್ವಿಯಾಗದು ಎಂದು ಹೇಳಿದ್ದಾರೆ.

ಜನರಿಗೆ ನೆರವಾಗುತ್ತಿರುವ ಗ್ಯಾರಂಟಿ ಯೋಜನೆಗಳು

ಮಂಡ್ಯದ ಜನ ಬಹಳ ಪ್ರಜ್ಞಾವಂತರಿದ್ದಾರೆ. ಇಲ್ಲಿ ಶೇ. 100ರಲ್ಲಿ 90 ರಷ್ಟು ರೈತರಿದ್ದಾರೆ. ಕಾಂಗ್ರೆಸ್ ಜನರ ಬದುಕನ್ನು ಕಟ್ಟಲು ಹೊರಟಿದೆ. ಅದಕ್ಕಾಗಿಯೇ ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮಿ, ಯುವನಿಧಿಯಂಥ ಯೋಜನೆಯಿಂದ ಲಕ್ಷಾಂತರ ಬಡವರ ಬದುಕಿಗೆ ನೆರವಾಗುತ್ತಿದೆ. ಬರ ಇದ್ದರೂ ಜನ ನೆಮ್ಮದಿ ಬದುಕು ನಡೆಸುವಂತೆ ಮಾಡಿದೆ ಎಂದಿದ್ದಾರೆ.

ಪ್ರತಿ ಮನೆಗೂ ಗ್ಯಾರಂಟಿ ಫಲ

ಶಕ್ತಿ ಯೋಜನೆಯಲ್ಲಿ ಮಂಡ್ಯ ಜಿಲ್ಲೆಯ ವ್ಯಾಪ್ತಿಯೊಂದರಲ್ಲಿಯೇ ಕಳೆದ ಜೂನ್ ನಿಂದ ಡಿಸೆಂಬರ್ ವರೆಗೆ 3 ಕೋಟಿ 57 ಲಕ್ಷ ಮಹಿಳಾ ಪ್ರಯಾಣಿಕರಿಗೆ ಉಚಿತ ಟಿಕೆಟ್ ನೀಡಲಾಗಿದೆ. ಅದರ ವೆಚ್ಚ 89 ಕೋಟಿ 17 ಲಕ್ಷ ರೂ.ಗಳಾಗಿವೆ. ಪ್ರತಿ ದಿನ ಸರಾಸರಿ 2.04 ಲಕ್ಷ ಮಹಿಳಾ ಪ್ರಯಾಣಿಕರು ಹಣ ನೀಡದೇ ಬಸ್ ಗಳಲ್ಲಿ ಸಂಚರಿಸುತ್ತಿದ್ದು, ಅವರಿಗೆ ಸರಾಸರಿ 45.57 ಲಕ್ಷ ರೂ.‌”ಉಚಿತ” ಟಿಕೆಟ್ ನೀಡಲಾಗುತ್ತಿದೆ. ಮಂಡ್ಯ ಜಿಲ್ಲೆಯಲ್ಲಿ 4 ಲಕ್ಷ 47 ಸಾವಿರ ಮನೆಗಳ ಯಜಮಾನಿಯರು ಗೃಹಲಕ್ಷ್ಮಿ ಯೋಜನೆಯಡಿ ನೋಂದಾಯಿಸಿಕೊಂಡು ಮಾಸಿಕ ತಲಾ 2 ಸಾವಿರ ರೂ. ಪ್ರಯೋಜನ ಪಡೆಯುತ್ತಿದ್ದಾರೆ. ಒಟ್ಟಾರೆ ಅರ್ಹ ಫಲಾನುಭವಿಗಳ ಶೇ.92.23 ರಷ್ಟು ಕುಟುಂಬಗಳು ಇದುವರೆಗೆ ಪ್ರಯೋಜನ ಪಡೆದಿವೆ. ಗೃಹ ಜ್ಯೋತಿ ಯೋಜನೆಯಲ್ಲಿ 4 ಲಕ್ಷ 64 ಸಾವಿರ ಕುಟುಂಬಗಳು (ಶೇ.92.30) ಮಾಸಿಕ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಬಿಲ್ ಪಡೆಯುತ್ತಿವೆ ಎಂದು ತಿಳಿಸಿದರು.

ಅನ್ನಭಾಗ್ಯ ಯೋಜನೆಯಲ್ಲಿ ಮಾಸಿಕ 5 ಕೆಜಿ ಅಕ್ಕಿಯ ಮೊತ್ತವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ ಮಾಡಲಾಗುತ್ತಿದೆ. ಮಂಡ್ಯ ಜಿಲ್ಲೆಯಲ್ಲಿ ಡಿಸೆಂಬರ್ ತಿಂಗಳಲ್ಲಿ 4,36,510 ಕುಟುಂಬಗಳ ಬ್ಯಾಂಕ್ ಖಾತೆಗೆ ಒಟ್ಟು 23.79 ಕೋಟಿ ರೂ. ಜಮಾ ಮಾಡಲಾಗಿದೆ. ಯುವ ನಿಧಿ ಯೋಜನೆಯಲ್ಲಿ ನಿರುದ್ಯೋಗ ಭತ್ಯೆ ಪಡೆಯಲು 4014 ಅರ್ಹ ಫಲಾನುಭವಿಗಳಿದ್ದು, ಇದುವರೆಗೆ ಶೇ.65 ರಷ್ಟು ಎಂದರೆ 2587 ಜನ ಹೆಸರು ನೋಂದಾಯಿಸಿಕೊಂಡಿದ್ದಾರೆ. ಶೀಘ್ರದಲ್ಲಿ ಅವರೆಲ್ಲರಿಗೂ ಮಾಸಾಶನ ದೊರೆಯಲಿದೆ ಎಂದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!