Monday, May 20, 2024

ಪ್ರಾಯೋಗಿಕ ಆವೃತ್ತಿ

ಕೆರಗೋಡಿನಲ್ಲಿ ಕೋಮುಗಲಭೆ ಸೃಷ್ಠಿಸಲು ಯತ್ನ: ಕರ್ನಾಟಕ ಜನಶಕ್ತಿ ಸಂಘಟನೆ ಖಂಡನೆ

ಮಂಡ್ಯದ ಕೆರಗೋಡು ಗ್ರಾಮದಲ್ಲಿ ರಾಷ್ಟ್ರಧ್ವಜ ಹಾರಿಸಲು ಅನುಮತಿ ಪಡೆದು ಭಗವಾದ್ವಜ ಹಾರಿಸಿರುವ ಮೂಲಕ ಕೆಲವು ಪಟ್ಟಭದ್ರ ಶಕ್ತಿಗಳು ಕೋಮುಗಲಭೆ ಸೃಷ್ಟಿಸಲು ಯತ್ನಿಸಿರುವುದನ್ನು ಕರ್ನಾಟಕ ಜನಶಕ್ತಿ ಸಂಘಟನೆ ಖಂಡಿಸಿದೆ.

ಯಾವುದೇ ಗ್ರಾಮಗಳಲ್ಲೂ ಧ್ವಜಸ್ಥಂಭ ರೂಪಿಸಿದರೆ ಅದರಲ್ಲಿ ರಾಷ್ಟ್ರಧ್ವಜ ಅಥವಾ ಕನ್ನಡಧ್ವಜವನ್ನು ಹಾರಿಸಲು ಸ್ಥಾಪಿಸುತ್ತಾರೆ. ಅಂತೆಯೇ ಕೆರಗೋಡು ಗ್ರಾಮದಲ್ಲಿ ಸ್ಥಾಪನೆಯಾದ ಧ್ವಜ ಸ್ಥಂಭದಲ್ಲಿ ರಾಷ್ಟ್ರಧ್ವಜದ ಬದಲಿಗೆ ಉದ್ದೇಶ ಪೂರ್ವಕವಾಗಿ ಗಲಾಟೆ ಸೃಷ್ಟಿಸುವ ಕಾರಣದಿಂದಲೇ ಕೇಸರಿ ಧ್ವಜವನ್ನು ಹಾರಿಸಿ ಗ್ರಾಮದಲ್ಲಿ ಗಲಭೆ ಉಂಟು ಮಾಡಿ, ಕೋಮು ಸಾಮರಸ್ಯವನ್ನು ಕದಡಿ ಅಶಾಂತಿಯನ್ಮು ಸೃಷ್ಟಿಸಿ, ದೇವರು ಮತ್ತು ಧರ್ಮದ ಹೆಸರಿನಲ್ಲಿ ಅಮಾಯಕ ಜನರನ್ನು ಗಲಭೆಗೆ ಪ್ರಚೋದನೆಗೆ ಒಳಪಡಿಸುತ್ತಿರುವುದು ಖಂಡನೀಯ ಎಂದು ಸಂಘಟನೆಯ ರಾಜ್ಯ ಕಾರ್ಯದರ್ಶಿ ಪೂರ್ಣಿಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಂಡ್ಯದ ರೈತಾಪಿ ಜನರಿಗೆ, ಉತ್ತು ಬಿತ್ತು, ಕಳೆಕಿತ್ತು. ಬೆಳೆ ತೆಗೆದು ಹಸಿದ ಹೊಟ್ಟೆಗೆ ಅನ್ನವನ್ನಿಕ್ಕಿ ಅಣ್ಣ ತಮ್ಮಂದಿರಂಗೆ ಬದುಕಿ ಗೊತ್ತಿತ್ತೆ ವಿನಹಃ ಜಾತಿ ಧರ್ಮದ ಹೆಸರಿನಲ್ಲಿ ಹೊಡೆದಾಟ ಮಾಡಿಕೊಂಡು ಶಾಂತಿ ಹಾಳು ಮಾಡುತ್ತಿರಲಿಲ್ಲ. ಇಂತಹ ಮಂಡ್ಯದ ನೆಲದಲ್ಲಿ ಕೋಮುವಾದಿ ಪಟ್ಟಭದ್ರ ಹಿತಾಸಕ್ತಿಗಳು ಸಂಘರ್ಷ ಸೃಷ್ಟಿಸಲು ಸಜ್ಜಾಗಿರುವ ಕಾಲದಲ್ಲಿ, ಜ್ಯಾತ್ಯಾತೀತ ಜನತಾದಳ, ನಾವು ಜ್ಯಾತ್ಯಾತೀತವಾಗಿ ದುಡಿಯುವ, ರೈತರ ಕಾರ್ಮಿಕರ ಮಹಿಳೆಯರ ಪರ ಎಂದು ಬೊಬ್ಬೆಯೊಡೆತ್ತಿದ್ದ ಕುಮಾರ ಸ್ವಾಮಿ ರವರು ಕೂಡಾ ರಾಷ್ಟ್ರಧ್ವಜದ ಬದಲಿಗೆ ಕೇಸರಿ ಧ್ವಜ ಹಾರಿಸಿದ್ದೆ ಸರಿ ಎಂಬ ಧೊರಣೆಯಲ್ಲಿ ಕೆರಗೋಡು ಗ್ರಾಮದ ಧ್ವಜದ ಗಲಾಟೆಯಲ್ಲಿ ಭಾಗಿಯಾಗಿ ಯುವ ಜನತೆಯ ದಿಕ್ಕು ತಪ್ಪಿಸಿ ಹಸಿರನ್ನು ಹೊದ್ದು ದುಡಿಮೆ ಮಾಡಿ ದೇಶಕ್ಕೆ ಅನ್ನ ಹಾಕಬೇಕಾದ ರೈತರ ಮಕ್ಕಳನ್ನು ದಿಕ್ಕು ತಪ್ಪುವಂತೆ ಮಾಡಿ ಜೈಲಿಗೆ ಕಳಿಸಲು ಸಜ್ಜಾಗಿರುವುದು ಖಂಡನೀಯ ಎಂದಿದ್ದಾರೆ.

ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿಯೂ ಟಿಪು ಸುಲ್ತಾನ್ ವಿಚಾರ ಮಧ್ಯ ತಂದು ಉರಿಗೌಡ ಮತ್ತು ನಂಜೆಗೌಡ ಪಾತ್ರಗಳನ್ನು ಸೃಷ್ಟಿಸಿ ಧರ್ಮ ಧರ್ಮ ಗಳ ನಡುವೆ ವಿಷ ಬೀಜ ಬಿತ್ತುವ ಹುನ್ನಾರ  ನಡೆಸಿದ್ದರು. ಒಕ್ಕಲಿಗರು ಮತ್ತು ಮುಸಲ್ಮಾನರ ನಡುವೆ ಗಲಭೆ ಹಚ್ಚಲು ಸಂಚು ರೂಪಿಸಲಾಗಿತ್ತು. ಅದಕ್ಕೆ ಸೊಪ್ಪಾಕದ ಮಂಡ್ಯದ ಜನತೆ ಅದನ್ನು ಹಿಮ್ಮೆಟ್ಟಿಸಿದರು. ಈಗ ಮತ್ತೊಮೆ ಧ್ವಜದ ರಾಜಕಾರಣ ಮಾಡುತ್ತಾ ದಲಿತರು ಮತ್ತು ಒಕ್ಕಲಿಗರು ಎಂದು ವಿಂಗಡನೆ ಮಾಡಿ, ಸಮೂದಾಯದ ನಡುವೆ ಬೆಂಕಿ ಹಚ್ಚಿ ಬೇಳೆ ಬೇಯಿಸಲು ಹೊರಟ್ಟಿದ್ದಾರೆ. ಈ ಬಾರಿಯೂ ಮಂಡ್ಯದ ಪ್ರಜ್ಞಾವಂತ ನಾಗರೀಕರು ಈ ಬಣ್ಣ ಬದಲಿಸುವ ಊಸರವಳ್ಳಿಗಳಿಗೆ ತಕ್ಕ ಪಾಠ ಕಲಿಸುವುದರಲ್ಲಿ ಅನುಮಾನವಿಲ್ಲ ಎಂದು ಹೇಳಿದರು.

ಮಂಡ್ಯದ ನೆಲವು ಹಲವು ಐತಿಹಾಸಿಕ ಹೋರಾಟಕ್ಕೆ ಸಾಕ್ಷಿಯಾಗಿದ್ದಲ್ಲದೆ ಹಲವು ದಿಟ್ಟ ಹೋರಾಟಗಾರರನ್ನು ಸಮಾಜಕ್ಕೆ ಬಳುವಳಿಯಾಗಿ ಕೊಟ್ಟ ಇತಿಹಾಸವಿದೆ. ಇಲ್ಲಿ ಶಾಂತಿ ಸಾಮರಸ್ಯ ಸಹಬಾಳ್ವೆಗೆ ಒತ್ತು ಕೊಡುವ ಜನರ, ನೆಮ್ಮದಿಯನ್ನು ಹಾಳು ಮಾಡುತ್ತಿರುವುದು ಸರಿಯಲ್ಲ. ಇದು ನಿಲ್ಲಬೇಕು, ಯಾವುದೇ ಕಾರಣಕ್ಕೂ ಈ ಗಲಭೆಯಲ್ಲಿ ಯಾವುದೇ ಅಮಾಯಕರ ಮೇಲೆ ಕೇಸುಗಳು ದಾಖಲಾಗದಂತೆ ಪ್ರಾಣ ಹಾನಿಗಳಾಗದಂತೆ ಜಿಲ್ಲಾಡಳಿತವು ಕ್ರಮ ಕೈಗೊಳ್ಳಬೇಕು. ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಯಾರೇ ಆದರೂ ಅವರಿಗೆ ಮತ್ತು ಅವರ ಬೆಂಬಲಕ್ಕೆ ನಿಂತು ಗಲಭೆಗೆ ಪ್ರಚೋದಿಸುತ್ತಿರುವ ಪ್ರತಿಯೊಬ್ಬರ ಮೇಲೂ ಕಾನೂನು ಬದ್ಧ ಕ್ರಮವಾಗಬೇಕೆಂದು ಕರ್ನಾಟಕ ಜನಶಕ್ತಿ ಸಂಘಟನೆ ಆಗ್ರಹಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!