ಸರ್ಕಾರಿ ಶಾಲೆಗಳ ವಿಲೀನ ವಿರೋಧಿಸಿ ಹಸಿರು ಸೇನೆ ಜತೆಗೂಡಿ ಜ.೨೬ರ ಗಣರಾಜ್ಯೋತ್ಸವದಂದು ರಾಜ್ಯದ ಎಲ್ಲ ೩೧ ಜಿಲ್ಲಾ ಕೇಂದ್ರಗಳಲ್ಲಿ ಕಪ್ಪುಬಾವುಟ ಪ್ರದರ್ಶನ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿನ ೪೦ ಸಾವಿರಕ್ಕೂ ಹೆಚ್ಚು ಶಾಲೆಗಳನ್ನು ಮ್ಯಾಗ್ನೆಟ್ ಮತ್ತು ಕೆಪಿಎಸ್ ಹೆಸರಿನಲ್ಲಿ ವಿಲೀನ ಮಾಡಲಾಗುತ್ತಿದೆ. ಇದರಿಂದ ಬಡ ಮಕ್ಕಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗಲಿದ್ದಾರೆ ಎಂದರು.
ಸಂವಿಧಾನದ ಆರ್ಟಿಕಲ್ ೨೧ಎ ನಂತೆ ಜನಸಾಮಾನ್ಯರಿಗೆ ಗುಣಮಟ್ಟದ ಉಚಿತ ಶಿಕ್ಷಣದ ಹಕ್ಕು ಸರಕಾರಗಳು ನೀಡುವಲ್ಲಿ ವಿಫಲವಾಗಿವೆ. ರಾಜ್ಯದ ಬಹುತೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ರಾಜಕಾರಣಿಗಳ ಕಪಿಮುಷ್ಠಿಯಲ್ಲಿವೆ. ಸರಕಾರಿ ಶಾಲೆಗಳಿಗೆ ಬೀಗ ಹಾಕಿ ಖಾಸಗಿ ಸಂಸ್ಥೆಗಳಿಗೆ ನೆರವಾಗಲು ಸರಕಾರವು ಸಂವಿಧಾನ, ಸಮಾಜ ವಿರೋಧಿ ಕೆಲಸಕ್ಕೆ ಮುಂದಾಗಿದೆ ಎಂದು ಹೇಳಿದರು.
ದೇಶದ ಪ್ರಜಾಪ್ರಭುತ್ವ ಉಳಿಸಲು ಸರಕಾರಿ ಶಾಲೆಗಳನ್ನು ಮುಚ್ಚಬಾರದು, ಏಕ ರೂಪ ಶಿಕ್ಷಣ ನೀತಿ ಜಾರಿಗೆ ತರಬೇಕು. ರಾಜ್ಯದ ೪೧,೯೦೫ ಸರಕಾರಿ ಶಾಲೆಗಳಲ್ಲಿ ಎಲ್‌ಕೆಜಿಯಿಂದ ೫ನೇ ತರಗತಿ ವರೆಗೆ ದ್ವಿಭಾಷೆಯ ಸಿಬಿಎಸ್ಸಿ ಮಾದರಿ ಶಿಕ್ಷಣ, ೬-೧೨ನೇ ತರಗತಿ ವರೆಗೆ ನವೋದಯ ಮಾದರಿ ಸಿಬಿಎಸ್ಸಿ ವಸತಿ ಶಾಲಾ ಶಿಕ್ಷಣ, ಅನುದಾನವನ್ನು ಶಿಕ್ಷಣ ಇಲಾಖೆಗೆ ನೀಡದೇ ನೇರವಾಗಿ ಎಸ್‌ಡಿಎಂಸಿ ಖಾತೆಗೆ ನೀಡುವಂತೆ ಒತ್ತಾಯಿಸಿದರು.
ಗೋಷ್ಠಿಯಲ್ಲಿ ತಾಲೂಕು ಗೌರವಾಧ್ಯಕ್ಷ ಶಿವಳ್ಳಿ ಚಂದ್ರಶೇಖರ್, ತಾಲೂಕು ಅಧ್ಯಕ್ಷ ಬೂದನೂರು ಪುಟ್ಟಸ್ವಾಮಿ, ಹಸಿರು ಸೇನೆ ಅಧ್ಯಕ್ಷ ಸಂತೋಷ್ ಮಂಡ್ಯಗೌಡ, ಎಸ್‌ಡಿಎಂಸಿ ಅಧ್ಯಕ್ಷ ತಗ್ಗಹಳ್ಳಿ ಅನಿಲ್‌ಕುಮಾರ್, ಮಂಜು ಇದ್ದರು.




