Friday, September 20, 2024

ಪ್ರಾಯೋಗಿಕ ಆವೃತ್ತಿ

ಬ್ರಾಂಡ್ ಬೆಂಗಳೂರು……ಏನ್ರೀ ಹಾಗಂದ್ರೇ…..

ಬೆಂಗಳೂರು ಅತ್ಯಂತ ಸುಂದರ ನಗರ ಎಂದೇ, ಬೆಂಗಳೂರು ಅತ್ಯಂತ ಶುದ್ಧ ಸ್ವಚ್ಛ ನಗರ ಎಂದೇ, ಬೆಂಗಳೂರಿನಲ್ಲಿ ಅತ್ಯುತ್ತಮ ಗುಣಮಟ್ಟದ ಗಾಳಿ ಇದೆ ಎಂದೇ, ಅತ್ಯುತ್ತಮ ಗುಣಮಟ್ಟದ ದಿನದ 24 ಗಂಟೆಯೂ ನಿರಂತರವಾಗಿ ಹರಿಯುವ ನೀರಿನ ಸೌಕರ್ಯವಿದೆ ಎಂದೇ, ಬೆಂಗಳೂರು ಅತ್ಯಂತ ವಿಶಾಲವಾದ ಪ್ರದೇಶ ಹೊಂದಿದೆ ಎಂದೇ, ಬೆಂಗಳೂರು ಸಂಪೂರ್ಣ ಹಸಿರುಮಯವಾಗಿದೆ ಎಂದೇ, ಬೆಂಗಳೂರಿನಲ್ಲಿ ಹವಾನಿಯಂತ್ರಿತ ವಾತಾವರಣ ಇದೆ ಎಂದೇ, ಬೆಂಗಳೂರು ಅತ್ಯಂತ ಸುರಕ್ಷಿತವಾಗಿದೆ ಎಂದೇ, ಬೆಂಗಳೂರಿನ ಆಡಳಿತದಲ್ಲಿ ಶುದ್ಧ, ಪ್ರಾಮಾಣಿಕ, ಭ್ರಷ್ಟಾಚಾರ ಮುಕ್ತ ವ್ಯವಸ್ಥೆ ಇದೆ ಎಂದೇ, ಬೆಂಗಳೂರು ನಗರ ಅತ್ಯಂತ ಸುಸಜ್ಜಿತವಾಗಿ, ಆಧುನಿಕವಾಗಿ ಅಭಿವೃದ್ಧಿ ಹೊಂದಿದೆ ಎಂದೇ, ಬೆಂಗಳೂರಿನ ಟ್ರಾಫಿಕ್ ವ್ಯವಸ್ಥೆ ಅತ್ಯಂತ ಶಿಸ್ತು ಬದ್ಧವಾಗಿದೆ ಎಂದೇ, ಬೆಂಗಳೂರಿನಲ್ಲಿ ವಾಸಿಸುವವರು ಅತ್ಯುತ್ತಮ ಗುಣಮಟ್ಟದ ಮಾನವ ಸಂಪನ್ಮೂಲಗಳನ್ನು, ತಾಂತ್ರಿಕತೆಯನ್ನು ಹೊಂದಿರುವವರು ಎಂದೇ, ಬೆಂಗಳೂರಿನಲ್ಲಿ ಯಾವುದೇ ಮೋಸ, ವಂಚನೆ, ಕಳ್ಳತನ, ದರೋಡೆ, ಸೈಬರ್ ಕ್ರೈಂ, ಅತ್ಯಾಚಾರ, ಅಪಘಾತ, ಕೊಲೆಗಳು ನಡೆಯುವುದಿಲ್ಲವೆಂದೇ, ಇಲ್ಲಿನ ಮನೆ ಕಚೇರಿಗಳ ಬಾಡಿಗೆ ಅತ್ಯಂತ ಸೂಕ್ತ ಮತ್ತು ಕಡಿಮೆ ಬೆಲೆಗೆ ಸಿಗುತ್ತದೆ ಎಂದೇ,…..

ಒಟ್ಟಿನಲ್ಲಿ ಬೆಂಗಳೂರು ಆಧುನಿಕ ತಂತ್ರಜ್ಞಾನದ ಮಾನವೀಯ ಮೌಲ್ಯಗಳ ಅತ್ಯುತ್ತಮ ಉದ್ಯಮ ಸ್ನೇಹಿ ವಾತಾವರಣದ ಆರೋಗ್ಯ ಪೂರ್ಣ ವ್ಯವಸ್ಥೆ ಹೊಂದಿದ್ದು ಬೆಂಗಳೂರು ಎನ್ನುವ ಹೆಸರಿನ ಬ್ರ್ಯಾಂಡ್ ಎಲ್ಲಾ ರೀತಿಯಲ್ಲಿ ಅತ್ಯುತ್ತಮ ಗುಣಮಟ್ಟ ಹೊಂದಿದೆ ಇದನ್ನು ಕೇವಲ ಭಾರತ ದೇಶದಲ್ಲಿ ಮಾತ್ರವಲ್ಲ ವಿಶ್ವದಲ್ಲೇ ಒಂದು ಮಾದರಿಯಾಗಿ ಬೆಂಗಳೂರೆಂದರೆ ಹೆಮ್ಮೆಯ ನಗರ ಅದೇ ಬ್ರಾಂಡ್ ಬೆಂಗಳೂರಿನ ಅರ್ಥ ಎಂದು ಭಾವಿಸಬಹುದೇ…

ಸುಮಾರು 40 ವರ್ಷಗಳಿಂದ ಬೆಂಗಳೂರಿನ ಕೇಂದ್ರ ಭಾಗದಲ್ಲಿ ವಾಸಿಸುತ್ತಿರುವ, ಬೆಂಗಳೂರಿನ ಬೆಳವಣಿಗೆಯನ್ನು ಹತ್ತಿರದಿಂದ ಗಮನಿಸಿರುವ ನನಗೆ ವೈಯಕ್ತಿಕವಾಗಿ ಬೆಂಗಳೂರು ಅಭಿವೃದ್ಧಿಯಾಗುತ್ತಿಲ್ಲ ಹಾಳಾಗುತ್ತಿರುವ ಅನುಭವವಾಗುತ್ತಿದೆ. ಬೆಂಗಳೂರು ವಾಸಿಸಲು ಯೋಗ್ಯವಲ್ಲದ ನಗರವಾಗಿಯೂ ಬೆಳೆಯುತ್ತಿದೆ. ದೇಶದ ಇತರ ಬೃಹತ್ ನಗರಗಳಿಗೆ ಹೋಲಿಸಿದಾಗ ಬೆಂಗಳೂರು ಸ್ವಲ್ಪ ಉತ್ತಮ ಗುಣಮಟ್ಟ ಹೊಂದಿರಬಹುದು. ಆದರೆ ಬೆಂಗಳೂರನ್ನೇ 40 ವರ್ಷಗಳ ಹಿಂದಿನ ಬೆಂಗಳೂರಿಗೆ ಹೋಲಿಸಿದಾಗ ಎಲ್ಲ ರೀತಿಯಲ್ಲಿಯೂ ಬೆಂಗಳೂರು ವಿನಾಶದತ್ತ ಸಾಗುತ್ತಿದೆ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ…..

ಕಟ್ಟಡಗಳು, ರಸ್ತೆಗಳು, ಜನಸಂಖ್ಯೆ, ಶಿಕ್ಷಣ ಮತ್ತು ಆರೋಗ್ಯ ಸೌಕರ್ಯಗಳು, ಸಾಫ್ಟ್ವೇರ್ ತಂತ್ರಜ್ಞಾನದ ಕಂಪನಿಗಳು, ಶ್ರೀಮಂತರು, ರಾಜಕಾರಣಿಗಳು, ದೊಡ್ಡ ದೊಡ್ಡ ಅಧಿಕಾರಿಗಳು ಈ ಎಲ್ಲವನ್ನು ಗಮನಿಸಿದಾಗ ವಸ್ತು ಸಂಸ್ಕೃತಿಯಲ್ಲಿ ಖಂಡಿತವಾಗಿಯೂ ಅಭಿವೃದ್ಧಿಯನ್ನು, ಬೆಳವಣಿಗೆಯನ್ನು ನೇರವಾಗಿ ಗಮನಿಸಬಹುದು. ಅದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಒಟ್ಟು ಜನರ ಜೀವನ ಮಟ್ಟವನ್ನು, ಅವರ ದೇಹ – ಮನಸ್ಸುಗಳ ಆರೋಗ್ಯದ ಗುಣಮಟ್ಟವನ್ನು ಗಮನಿಸಿದಾಗ, ಜೊತೆಗೆ ಇಲ್ಲಿನ ಪ್ರಾಕೃತಿಕ ಪರಿಸರವನ್ನು ಅವಲೋಕಿಸಿದಾಗ, ಖಂಡಿತವಾಗಿಯೂ ತುಂಬಾ ಕೆಟ್ಟ ಅಭಿಪ್ರಾಯ ಮೂಡುವುದು ಸಹಜ…..

ಭೂಮಿಯ ಬೆಲೆ ಇರಬಹುದು, ವಾತಾವರಣದ ಧೂಳಿನ ಕಣಗಳು ಇರಬಹುದು, ನೀರಿನ ಸೌಕರ್ಯಗಳಿರಬಹುದು, ಜನರ ರಕ್ಷಣೆ ಇರಬಹುದು ನಿಜಕ್ಕೂ ತುಂಬಾ ಅದೋಗತಿಯಲ್ಲಿದೆ. ಬೆಂಗಳೂರಿನಲ್ಲಿ ಒಂದು ದಿನಕ್ಕೆ ನಡೆಯುವ ಮೊಬೈಲ್ ಅಥವಾ ಚಿನ್ನದ ಸರ ಅಥವಾ ಮನೆಗಳ ಕಳ್ಳತನಗಳ ಸಂಖ್ಯೆ ಎಷ್ಟಿರಬಹುದು, ಅಪಘಾತಗಳ ಸಂಖ್ಯೆ ಎಷ್ಟಿರಬಹುದು, ಅನಾರೋಗ್ಯದ ಸಾವುಗಳು ಸಂಖ್ಯೆ ಎಷ್ಟಿರಬಹುದು, ಆತ್ಮಹತ್ಯೆಗಳು ಎಷ್ಟಿರಬಹುದು, ಕೊಲೆಗಳು ಎಷ್ಟಿರಬಹುದು, ಹೊಸದಾಗಿ ಗುರುತಿಸಲ್ಪಟ್ಟ ರೋಗಗಳು ಎಷ್ಟಿರಬಹುದು, ಭ್ರಷ್ಟಾಚಾರದ ಪ್ರಮಾಣ ಎಷ್ಟಿರಬಹುದು, ವೇಶ್ಯಾವಾಟಿಕೆ ಎಷ್ಟು ಇರಬಹುದು, ನಿಷೇಧಿತ ಡ್ರಗ್ಸ್ ಗಳ ವ್ಯಾಪಾರ ವಹಿವಾಟು ಮತ್ತು ಸೇವನೆ ಎಷ್ಟಿರಬಹುದು, ಇವೆಲ್ಲವನ್ನೂ ಅಂಕಿ ಸಂಖ್ಯೆಗಳ ಸಮೇತ ಅಥವಾ ಅನುಭವದ ಆಧಾರದ ಮೇಲೆ ಅಥವಾ ಜನಸಂಖ್ಯೆಯ ಹೆಚ್ಚಳದ ಆಧಾರದ ಮೇಲೆ ಅಥವಾ ಆಡಳಿತದ ಯಶಸ್ಸು ಅಥವಾ ವೈಫಲ್ಯದ ಆಧಾರದ ಮೇಲೆ ಅಥವಾ ಜನರ ನಾಗರಿಕ ಪ್ರಜ್ಞೆಯ ಆಧಾರದ ಮೇಲೆ ಒಂದು ಸಣ್ಣ ಚಿಂತನೆ ನಡೆಸಿದರೆ ಬ್ರಾಂಡ್ ಬೆಂಗಳೂರು ಎಷ್ಟು ಹಾಸ್ಯಾಸ್ಪದ ಎಂದು ಅರ್ಥವಾಗುತ್ತದೆ……

ಇದು ಕೇವಲ ಬೆಂಗಳೂರಿಗೆ ಮಾತ್ರ ಸೀಮಿತವಲ್ಲ ನಗರೀಕರಣದ ಬಹುತೇಕ ನಗರಗಳ ಪರಿಸ್ಥಿತಿ ಇದೇ ಆಗಿದೆ. ನಿಜಕ್ಕೂ ಬ್ರಾಂಡ್ ಬೆಂಗಳೂರು ಮಾಡಬೇಕಾಗಿರುವುದು ಪ್ರಾಕೃತಿಕ ಸಂಪನ್ಮೂಲಗಳನ್ನು, ಮಾನವೀಯ ಮೌಲ್ಯಗಳನ್ನು, ಆಡಳಿತ ದಕ್ಷತೆಯನ್ನು ಹೆಚ್ಚಿಸುವ ಮುಖಾಂತರವೇ ಹೊರತು ಕೇವಲ ಕೆಲವು ಭಾಗಗಳ ಹಣಕಾಸು ಕೇಂದ್ರೀಕೃತ ಅಭಿವೃದ್ಧಿಯನ್ನು ಬ್ರಾಂಡ್ ಬೆಂಗಳೂರು ಎನ್ನುವುದು ವಿನಾಶದ ಮುನ್ಸೂಚನೆಯ ಲಕ್ಷಣಗಳು ಮತ್ತು ಒಂದು ಚಿನ್ನ ಲೇಪಿತ ಮುಖವಾಡ ಎಂದಷ್ಟೇ ಕರೆಯಬಹುದು…..

ಇದೊಂದು ನಿರಾಶಾವಾದ, ಕಳೆದ 40 ವರ್ಷಗಳಿಗೆ ಹೋಲಿಸಿದರೆ ಬೆಂಗಳೂರು ಅತ್ಯುತ್ತಮ ನಗರವಾಗಿ ಬೆಳವಣಿಗೆ ಹೊಂದಿದೆ. ವಿಶ್ವದಲ್ಲೇ ಸಾಫ್ಟ್ವೇರ್ ತಂತ್ರಜ್ಞಾನದಲ್ಲಿ ಹೆಸರು ಮಾಡಿದೆ. ಆರ್ಥಿಕವಾಗಿ ಬಲಿಷ್ಠವಾಗುತ್ತಿದೆ. ಉದ್ಯೋಗಗಳು ಸೃಷ್ಟಿಯಾಗುತ್ತಿದೆ. ಪಂಚತಾರಾ ಹೋಟೆಲ್ ಗಳು ಒಳ್ಳೆಯ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಹವಾ ನಿಯಂತ್ರಿತ ವಾಹನಗಳು, ದೊಡ್ಡ ದೊಡ್ಡ ಶಾಪಿಂಗ್ ಮಾಲ್ಗಳು, ಸಿನಿಮಾ ಮಂದಿರಗಳು, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಲ್ಲವೂ ಇಲ್ಲಿದೆ. ಆದ್ದರಿಂದ ಅಭಿವೃದ್ಧಿ ಎಂದರೆ ಇದೇ ಎನ್ನುವವರಿಗೆ ನಾವು ಹೆಚ್ಚೇನು ಹೇಳುವುದಿಲ್ಲ. ಆದರೆ ನಾಗರಿಕತೆಯನ್ನುವುದು ಮನುಷ್ಯ ಸಂಬಂಧಗಳ, ಮನುಷ್ಯ ಜೀವನದ ಆರೋಗ್ಯವಂತ ಸುಖಮಯ ಕ್ಷಣಗಳ, ತನ್ನ ಸಾಧನೆಯ, ತನ್ನ ಅರಿವಿನ, ತನ್ನ ಆರೋಗ್ಯದ, ತನ್ನ ಪ್ರಾಮಾಣಿಕತೆ ಮತ್ತು ದಕ್ಷತೆಯ ಕ್ಷಣಗಳು ಹೆಚ್ಚಾಗುವುದು ಮಾತ್ರ ಜೀವನದ ಸಾರ್ಥಕತೆಯ ಲಕ್ಷಣಗಳು.

ವಸ್ತುಗಳು ಎಷ್ಟೇ ದುಬಾರಿಯಾಗಿರಲಿ, ಎಷ್ಟೇ ಆಧುನಿಕವಾಗಿರಲಿ, ಎಷ್ಟೇ ಆಕರ್ಷಕವಾಗಿರಲಿ, ಚಪ್ಪಲಿಯನ್ನು ತಲೆಯ ಮೇಲೆ ಹಾಕಿಕೊಳ್ಳಲು ಆಗುವುದಿಲ್ಲ, ಚಿನ್ನವನ್ನು ದೇಹವಿಡಿ ಹಾಕಿಕೊಳ್ಳಲಾಗುವುದಿಲ್ಲ, ಹಣದಿಂದ ಎಲ್ಲವನ್ನೂ ಕೊಳ್ಳಲಾಗುವುದಿಲ್ಲ, ಮನುಷ್ಯ ಭಾವನೆಗಳು ಹೆಚ್ಚು ಆಪ್ತವಾಗಿ, ಹೆಚ್ಚು ನೆಮ್ಮದಿಯಿಂದ ನಿಯಂತ್ರಣದಲ್ಲಿದ್ದರೆ ಅದೇ ನಿಜವಾದ ಜೀವನ ಎಂದು ಭಾವಿಸುವವರಿಗೆ ಬ್ರಾಂಡ್ ಬೆಂಗಳೂರು ಒಂದು ವಿಷಾದ ನಗುವಿನ ಅಲೆ ಮಾತ್ರ. ಅದಕ್ಕಿಂತ ಹೆಚ್ಚು ಹೆಮ್ಮೆಪಡುವುದು ಏನೇನೋ ಇಲ್ಲ….

ಸುಮಾರು 12,000 ಕೋಟಿಯ ಬಜೆಟ್ ಅನ್ನು ಬೆಂಗಳೂರು ಮಹಾನಗರ ಪಾಲಿಕೆ ಮಂಡಿಸಿದೆ. ಅದರಲ್ಲಿ ಸುಮಾರು 1,500 ಕೋಟಿ ಬ್ರಾಂಡ್ ಬೆಂಗಳೂರು ನಿರ್ಮಿಸಲು ಖರ್ಚು ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಈ ಬ್ರಾಂಡ್ ಎನ್ನುವುದು ಕೇವಲ ವಸ್ತುಗಳಿಗೆ ಮಾತ್ರ ಸೀಮಿತವಾಗಿಲ್ಲ. ಅದು ನಗರಗಳಿಗೂ ವ್ಯಾಪಿಸುತ್ತಿರುವುದು ಒಂದು ರೀತಿಯ ವಿಚಿತ್ರ ವಿಷಯವೆನಿಸಿ ಇಲ್ಲಿ ಪ್ರಸ್ತಾಪ ಮಾಡಲಾಗಿದೆ…..
ಧನ್ಯವಾದಗಳು…

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!