Thursday, September 19, 2024

ಪ್ರಾಯೋಗಿಕ ಆವೃತ್ತಿ

ಲಂಚ ಕೊಟ್ಟು ಅನುದಾನ ತರೋದಕ್ಕೆ ಶಾಸಕ ಏಕಾಗಬೇಕು : ಶಿವರಾಮೇಗೌಡ

ಶಾಸಕ ಸುರೇಶ್ ಗೌಡ ಲಂಚ ಕೊಟ್ಟು ಅನುದಾನ ತರೋದಿಕ್ಕೆ ಶಾಸಕ ಏಕಾಗಬೇಕು ಎಂದು ಮಾಜಿ ಸಂಸದ ಎಲ್‌.ಆರ್.ಶಿವರಾಮೇಗೌಡ ಶಾಸಕ ಸುರೇಶ್ ಗೌಡ ವಿರುದ್ಧ ವಾಗ್ದಾಳಿ ನಡೆಸಿದರು.

ನಾಗಮಂಗಲ ತಾಲ್ಲೂಕಿನ ಹೊಣಕೆರೆ ಗ್ರಾ.ಪಂ.ವ್ಯಾಪ್ತಿಯ ಗ್ರಾಮಗಳಲ್ಲಿ ಇಂದು ಪ್ರವಾಸ ಕೈಗೊಂಡಿದ್ದ ಅವರು ಅಲ್ಪಹಳ್ಳಿ ಗ್ರಾಮದಲ್ಲಿ ಮಾತನಾಡಿದರು.

ನಮ್ಮ ಕ್ಷೇತ್ರದ ಜನರು ಸುರೇಶ್ ಗೌಡರನ್ನು ಶಾಸಕರನ್ನಾಗಿ ಮಾಡಿದ್ದು, ಅಧಿಕಾರ ಉಪಯೋಗಿಸಿ ಅನುದಾನ ತಂದು ಕ್ಷೇತ್ರದ ಕೆಲಸ ಮಾಡಿ ಎಂದು.ಆದರೆ ಅವರು ಲಂಚ ಕೊಟ್ಟು ಅನುದಾನ ತರುತ್ತಿದ್ದೇನೆ ಎಂದು ಇಲ್ಲಿ ಹಣ ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು.

ಗುತ್ತಿಗೆದಾರರ ಪಟಾಲಂ

ಶಾಸಕ ಸುರೇಶ್ ಗೌಡ ಮತ್ತು ಮಾಜಿ ಶಾಸಕ ಚಲುವರಾಯಸ್ವಾಮಿ ಸುತ್ತ ಗುತ್ತಿಗೆದಾರರ ಪಟಾಲಂ ಇದೆ.ಅವರಿಬ್ಬರ ಸುತ್ತ ಗುತ್ತಿಗೆದಾರರೇ ತುಂಬಿಹೋಗಿದ್ದಾರೆ. ಇವರಿಂದ ತಾಲ್ಲೂಕಿನ ಅಭಿವೃದ್ಧಿ ಸಾಧ್ಯವೇ ಎಂದು ಟೀಕಿಸಿದರು.

9% ಕಮೀಷನ್

ರಾಜ್ಯದಲ್ಲಿ 40% ಸರ್ಕಾರವಿದ್ದು ತಾಲ್ಲೂಕಿನಲ್ಲಿ 9% ಆಡಳಿತವಿದೆ. ಯಾವ ಕಚೇರಿಗಳಿಗೂ ಜನಸಾಮಾನ್ಯರು ಹಣವಿಲ್ಲದೆ ಹೋಗಲಾಗುತ್ತಿಲ್ಲ. ನಾಗಮಂಗಲ ಜನರು ಜಿಎಸ್ಟಿ ಕಟ್ತಿಲ್ವಾ,ಲಂಚ ಕೊಟ್ಟು ಕೆಲಸ ತಂದಿದ್ದೇನೆ ಎಂದು ಸುರೇಶ್ ಗೌಡ ಹೇಳಿರುವ ವೀಡಿಯೋ ಕೇಳಿ,ಇಂತಹ ಶಾಸಕ ಬೇಕಾ ನೀವೇ ತೀರ್ಮಾನ ಮಾಡಿ ಎಂದರು.

ತಾಲ್ಲೂಕಿನಲ್ಲಿ ಶುದ್ದನೀರಿನ ಘಟಕಗಳು ಸಂಪೂರ್ಣವಾಗಿ ಕೆಟ್ಟು ನಿಂತಿವೆ.ಭ್ರಷ್ಟಾಚಾರಕ್ಕೆ ಕೈಜೋಡಿಸಿದ್ದರಿಂದಲೇ ಹೀಗಾಗಿದೆ ಎಂದರು.

ನಾನು ನನ್ನ ಶಾಸಕತ್ವದ ಅವಧಿಯಲ್ಲಿ 28ಸಾವಿರ ಎಕರೆ ಬಗರ್ ಹುಕುಂ ಸಾಗುವಳಿ ನೀಡಿದ್ದೆ. ಅದಾಗಿ 23 ವರ್ಷಗಳಾದರೂ ಒಂದೇ ಒಂದು ಕುಂಟೆ ಜಮೀನನ್ನು ರೈತರಿಗೆ ನೀಡಲಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮತವಾಗಲ್ಲ

ನಿಖಿಲ್ ರಾಜ್ಯ ನಾಯಕರು, ಅವರನ್ನು ಪದೇ ಪದೇ ಕ್ಷೇತ್ರಕ್ಕೆ ಕರೆಸಲಾಗುತ್ತಿದೆ. ಹಾಗಿದ್ದರೆ ಸುರೇಶ್ ಗೌಡರ ಶಕ್ತಿ ಕುಂಠಿತವಾಯಿತೇ ಎಂದು ಪ್ರಶ್ನಿಸಿದ ಅವರು ನಿಖಿಲ್ ನೋಡಲು ಬರುವ ಜನರು ಮತಗಳಾಗಿ ಪರಿವರ್ತನೆಯಾಗುವುದಿಲ್ಲ ಎಂದರು.

ಸುರೇಶ್ ಗೌಡರ ಟ್ಯಾಂಕ್ ತುಂಬ ತೂತುಗಳಾಗಿದ್ದು, ನೀರೆಲ್ಲ ಆಚೆ ಹೋಗುತ್ತಿದೆ. ನನಗೆ ನಿಖಿಲ್ ಬರುವುದರಿಂದ ಭಯವೇನು ಇಲ್ಲ. ನಾನು ಪಕ್ಷೇತರನಾಗಿ ಸ್ಪರ್ಧಿಸುತ್ತೇನೆ, ಶಾಸಕ ಸುರೇಶ್ ಗೌಡ ಮತ್ತು ಮಾಜಿ ಶಾಸಕ ಎನ್.ಚಲುವರಾಯಸ್ವಾಮಿ ಅವರು ಪಕ್ಷೇತರರಾಗಿ ಸ್ಪರ್ಧಿಸಿ ತೋರಿಸಲಿ ಎಂದು ಸವಾಲು ಹಾಕಿದರು.

ಯುವ ಮುಖಂಡ ಎಲ್.ಎಸ್.ಚೇತನ್ ಗೌಡ, ಮುಖಂಡರಾದ ಕರಿಯಣ್ಣ, ಗೋಪಿ, ಮಂಜೇಗೌಡ, ಲೋಕೇಶ್ ಬಾಬು, ಹರೀಶ್ ಸೇರಿದಂತೆ ಹಲವರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!