ಸರ್ಕಾರಿ ಶಾಲೆ ಶಾಲೆಗಳಲ್ಲಿನ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಕ್ಷೀಣಿಸುತ್ತಿದೆ ಅಧಿಕಾರಿಗಳು ಇದರ ಕುರಿತಾಗಿ ಮುತುವರ್ಜಿ ವಹಿಸಿ ಸರ್ಕಾರಿ ಶಾಲೆಗಳಿಗೆ ಹೆಚ್ಚಿನ ಮಕ್ಕಳನ್ನು ಕರೆತನ್ನಿ ಎಂದು ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.
ಮಂಡ್ಯ (ಜೂನ್.11) ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಇಂದು ಆಯೋಜಿಸಿದ್ದ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಪ್ರಗತಿ ಪರಿಶೀಲನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮೇಲುಕೋಟೆ ಕ್ಷೇತ್ರದಲ್ಲಿ ಒಟ್ಟು 75 ಶಾಲೆಗಳಿದ್ದು ಅದರಲ್ಲಿ ಬಹಳಷ್ಟು ಶಾಲೆಗಳಲ್ಲಿ ಫಲಿತಾಂಶ ಉತ್ತಮವಾಗಿದ್ದರು, ಜನರು ಸರ್ಕಾರಿ ಶಾಲೆಗಳತ್ತ ಮುಖ ಮಾಡುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಬಸ್ ವ್ಯವಸ್ಥೆ ಕಲ್ಪಿಸಿ
ಶಾಲೆಗಳು ಪ್ರಾರಂಭವಾಗಿರುವುದರಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಾಲೆಗಳ ಮುಖ್ಯ ಶಿಕ್ಷಕರು ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳು ಸಭೆ ನಡೆಸಿ ಮಕ್ಕಳಿಗೆ ಯಾವುದೇ ರೀತಿ ತೊಂದರೆಯಾಗದಂತೆ ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸಿ. ಗ್ರಾಮ ಪಂಚಾಯಿತಿಯ ಪಿ.ಡಿ.ಒ ಗಳು ಯಾವ ಯಾವ ಹಳ್ಳಿಯಲ್ಲಿ ವಿದ್ಯಾರ್ಥಿಗಳು ಬಸ್ ಸಮಸ್ಯೆ ಎದುರಿಸುತ್ತಾರೆ, ಎಂಬುದರ ಕುರಿತು ಅಧಿಕಾರಿಗಳ ಗಮನಕ್ಕೆ ತನ್ನಿ ಎಂದರು.
ಅಧಿಕಾರಿಗಳು ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸುವಂತೆ ಹೆಚ್ಚಿನ ಜಾಗೃತಿ ಮೂಡಿಸಿ. ಸರ್ಕಾರಿ ಶಾಲೆಗಳಲ್ಲಿ ಸುಸಾರ್ಜಿತ ಕೊಠಡಿಗಳು ಹಾಗೂ ಶೌಚಾಲಯವನ್ನು ಕಲ್ಪಿಸಲಾಗಿದೆಯೇ ಎಂದು ಪರಿಶೀಲನೆ ನಡೆಸಿ. ಬಿಸಿ ಊಟ ನೀಡುವಾಗ ಶುಚಿತ್ವ ಕಾಪಾಡಿ ಹಾಗೂ ಉತ್ತಮ ಗುಣಮಟ್ಟದ ಆಹಾರ ಧಾನ್ಯಗಳು ತರಕಾರಿಗಳನ್ನು ಮಕ್ಕಳಿಗೆ ಒದಗಿಸಿ ಎಂದು ಹೇಳಿದರು.
ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಿಕೊಳ್ಳಿ
ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಆರು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಎಲ್ಲಾ ಆಸ್ಪತ್ರೆಗಳನ್ನು ವೈದ್ಯರ ಲಭ್ಯತೆ ಇರುವುದನ್ನು ಜಿಲ್ಲಾ ಆರೋಗ್ಯ ಇಲಾಖೆ ಅವರು ಖಚಿತಪಡಿಸಿಕೊಳ್ಳಿ,
ಡೆಂಗ್ಯೂ, ಮಲೇರಿಯಾ, ಕೋವಿಡ್-19 ನಂತಹ ಮಾರಕ ರೋಗಗಳು ಕಂಡು ಬಂದಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಿಕೊಳ್ಳಿ ಎಂದರು.
ಮೇಲುಕೋಟೆ ಕ್ಷೇತ್ರದ ವ್ಯಾಪ್ತಿಯ ಆಯುಷ್ ಆಸ್ಪತ್ರೆಗಳಲ್ಲಿ ತಿಂಗಳಿಗೆ 350 ರಿಂದ 250 ಜನರು ಹೊರ ರೋಗಿಗಳ ವಿಭಾಗದಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ, ಆಯುಷ್ ಅಧಿಕಾರಿಗಳು ಹೆಲ್ತ್ ಕಾರ್ಡ್ ಗಳನ್ನು ನೀಡಿ ಆಯುಷ್ ಆಸ್ಪತ್ರೆಗಳ ಸೌಲಭ್ಯಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಿ ಎಂದರು.
ಉತ್ತಮ ಗುಣಮಟ್ಟದ ಬೀಜ ವಿತರಿಸಿ
ರೈತ ಸಂಪರ್ಕ ಕೇಂದ್ರಗಳಲ್ಲಿ ಉತ್ತಮ ಗುಣಮಟ್ಟದ ಬೀಜಗಳನ್ನು ವಿತರಿಸುವಂತೆ ಸೂಚನೆ ನೀಡಲಾಗಿದೆ. ಮಣ್ಣಿನ ಗುಣಮಟ್ಟವನ್ನು ಪರೀಕ್ಷೆ ಒಳಪಡಿಸಿ ರೈತರಿಗೆ ಭೂಮಿಯಲ್ಲಿ ಬೆಳೆಯಬಹುದಾದ ಸೂಕ್ತ ಬೆಳೆಗಳ ಕುರಿತು ಮಾಹಿತಿ ನೀಡಿ ಎಂದು ಸೂಚಿಸಿದರು.
ಹನಿ ನೀರಾವರಿಯ ಪ್ರಾಮುಖ್ಯತೆ ನೀಡಿ
ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ 1260 ಎಕರೆ ತೋಟಗಾರಿಕಾ ಬೆಳೆಗಳನ್ನು ಬೆಳೆಯಲಾಗಿದೆ, 120 ಜನರಿಗೆ ನರೇಗಾ ಯೋಜನೆ ಅಡಿ ತೋಟಗಾರಿಕೆ ಇಲಾಖೆಯ ಸೌಲಭ್ಯಗಳನ್ನು ತಲುಪಿಸುವ ಗುರಿಯನ್ನು ಹೊಂದಲಾಗಿದೆ. ಹನಿ ನೀರಾವರಿಯ ಪ್ರಾಮುಖ್ಯತೆ ಕುರಿತು ರೈತರಿಗೆ ಜಾಗೃತಿ ಮೂಡಿಸಿ. ಸಾಂಪ್ರದಾಯಿಕ ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ಬದಲು ಮಣ್ಣಿಗೆ ಸೂಕ್ತವಾಗುವ ಡ್ರ್ಯಾಗನ್ ಫ್ರೂಟ್, ಬಟರ್ ಫ್ರೂಟ್ ನಂತಹ ಬೆಳೆಗಳನ್ನು ರೈತರು ಬೆಳೆಯುವಂತೆ ಉತ್ತೇಜಿಸಿ ಎಂದರು.
ದುದ್ದ ವ್ಯಾಪ್ತಿಯಲ್ಲಿ 4 ಹಿಪ್ಪು ನೇರಳೆ ಬೆಳೆಯನ್ನು ಬೆಳೆಯಲಾಗಿದೆ ಹಾಗೂ ಈ ವ್ಯಾಪ್ತಿಯಲ್ಲಿ 620 ರೇಷ್ಮೆ ಬೆಳೆಗಾರರಿದ್ದಾರೆ. ರೇಷ್ಮೆಗೆ ಸಂಬಂಧಿಸಿ ಕಾರ್ಯಕ್ರಮಗಳನ್ನು ಮಾಡಿ ಉಚಿತವಾಗಿ ಸೋಂಕು ನಿವಾರಕ ಔಷಧಿಗಳನ್ನು ನೀಡಿ, ಉತ್ತಮ ಗುಣಮಟ್ಟದ ರೇಷ್ಮೆ ಗೂಡುಗಳನ್ನು ಬೆಳೆಯಲು ಪ್ರೋತ್ಸಾಹಿಸಿ ಎಂದರು.
ಮೇಲುಕೋಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಎಂಟು ಪಶು ವೈದ್ಯಕೀಯ ಕೇಂದ್ರಳಾಗಿವೆ ಈ ವ್ಯಾಪ್ತಿಯಲ್ಲಿ 15 ಸಾವಿರಕ್ಕೂ ಹೆಚ್ಚು ಜಾನುವಾರುಗಳು, 41,000ಕ್ಕೂ ಹೆಚ್ಚು ಕುರಿ ಮೇಕೆಗಳಿವೆ. ಈಗಾಗಲೇ ಶೇಕಡ 85 ರಷ್ಟು ಪ್ರಾಣಿಗಳಿಗೆ ವ್ಯಾಕ್ಸಿನೇಷನ್ ನೀಡಲಾಗಿದೆ ಹಾಗೂ ತುರ್ತು ಸಂದರ್ಭಗಳಲ್ಲಿ ಕಾರ್ಯ ನಿರ್ವಹಿಸಲು 1 ಜಾನುವಾರು ಆಂಬುಲೆನ್ಸ್ ಕಾರ್ಯನಿರ್ವಹಿಸುತ್ತಿದೆ ಎಂದರು.
ಮೇಲುಕೋಟೆ ವ್ಯಾಪ್ತಿಯಲ್ಲಿ ಬರುವ ವಾಟರ್ ಟ್ಯಾಂಕ್ ಗಳ ಕಾಮಗಾರಿಗಳನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರವಾಗಿ ಪ್ರಾರಂಭಿಸಿ. ಮೇಲುಕೋಟೆ ವ್ಯಾಪ್ತಿಯಲ್ಲಿ 41 ಆರ್ ಓ ಪ್ಲಾಂಟ್ ಗಳಿದ್ದು ಎಲ್ಲಾ ಗ್ರಾಮ ಪಂಚಾಯಿತಿಯ ಪಿಡಿಒಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಆರ್ ಓ ಪ್ಲಾಂಟ್ ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಖಚಿತಪಡಿಸಿಕೊಳ್ಳಿ. ಒಂದು ವೇಳೆ ಆರ್ ಓ ಪ್ಲಾಂಟ್ ಗಳು ಕೆಟ್ಟಿದ್ದರೆ ಪಿ.ಡಿ.ಓ ಗಳು ಮುಂದೆ ನಿಂತು ಸರಿಪಡಿಸಬೇಕು ಎಂದು ತಾಕಿತ್ತು ಮಾಡಿದರು.
ಎಲ್ಲೆಲ್ಲಿ ಹಳೆಯ ವಿದ್ಯುತ್ ವೈರ್ ಗಳು ಇವೆಯೋ ಅವೆಲ್ಲವನ್ನು ಅದಷ್ಟು ಶೀಘ್ರವಾಗಿ ತೆರವುಗೊಳಿಸಿ ರೀ ವೈರಿಂಗ್ ಮಾಡಬೇಕು. ಪಿ.ಡಿ.ಓ. ಗಳು ಎಲ್ಲೆಲ್ಲಿ ಹಳೆಯ ವಿದ್ಯುತ್ ಕಂಬಗಳು ಹಾಗೂ ಅವನತಿ ಹಂತದಲ್ಲಿರುವ ವಿದ್ಯುತ್ ಕಂಬಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿ ದುರಸ್ತಿಗೊಳಿಸುವ ಜವಾಬ್ದಾರಿ ತೆಗೆದುಕೊಳ್ಳಿ ಎಂದು ಕಿವಿ ಮಾತು ಹೇಳಿದರು.
ದುದ್ದ ಹೋಬಳಿಯಲ್ಲಿ 54 ಗ್ರಾಮಗಳಿದ್ದು ಈಗಾಗಲೇ 21 ಗ್ರಾಮಗಳನ್ನು ಕೊಡಿ ಮುಕ್ತ ಗ್ರಾಮಗಳನ್ನಾಗಿ ಮಾಡಲಾಗಿದೆ ಇನ್ನು ಎರಡು ತಿಂಗಳ ಕಾಲಾವಧಿಯಲ್ಲಿ ಎಲ್ಲ ಗ್ರಾಮಗಳನ್ನು ಕೊಡಿ ಮುಕ್ತವಾಗಿಸುತ್ತೇವೆ. ಎಲ್ಲಾ ಗ್ರಾಮಗಳಲ್ಲೂ ಸ್ಮಶಾಣಗಳ ಲಭ್ಯತೆ ಕುರಿತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಖಚಿತಪಡಿಸಿಕೊಂಡು ತಮ್ಮ ವಶಕ್ಕೆ ಪಡೆದುಕೊಳ್ಳಿ ಸ್ಮಶಾನದ ಜಾಗವನ್ನು ಒತ್ತುವರಿಯಾಗಿದ್ದರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳಿ ಎಂದರು.




