ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಸ್ವಾಧೀನ ಪಡಿಸಿಕೊಂಡಿದೆ ಎನ್ನಲಾದ ಜಾಗಕ್ಕೆ ಸ್ವತಃ ಬೂದನೂರು ಗ್ರಾ.ಪಂ.ಅಧ್ಯಕ್ಷರು ಹಾಗೂ ಪಿಡಿಓ ಅವರು ನಕಲಿ ದಾಖಲೆ ಸೃಷ್ಠಿಸಿ ಸುಮಾರು ₹ 41, 41,467 ರೂ. ಗಳ ಪರಿಹಾರ ಪಡೆದು, ಸರ್ಕಾರವನ್ನು ವಂಚಿಸಿದ್ದಾರೆಂದು ಸ್ವಂತ ಮನೆ ನಮ್ಮ ಹಕ್ಕು ಹೋರಾಟ ಸಮಿತಿಯ ಸಂಚಾಲಕ ಬೂದನೂರು ಸತೀಶ್ ದೂರಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯ ತಾಲೂಕಿನ ಬೂದನೂರು ಗ್ರಾ.ಪಂ ವ್ಯಾಪ್ತಿಯಲಿ ಮಂಡ್ಯ ನಗರ ಬ್ಯಾಂಕ್ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಬಡಾವಣೆಗೆ ದಿನಾಂಕ. 18-9-1998 ರಂದು ಆಗಿನ ಗ್ರಾಪಂ ಅಧ್ಯಕ್ಷರಾಗಿದ್ದ ಸ್ವಾಮಿ ಎಂಬುವವರು ಕೃಷಿ ಭೂಮಿ ಖರೀದಿ ಮೇಲೆ ಅನ್ಯಕಾಂತ ಹಾಗೂ ಮುಡಾ ಅನುಮೋದನೆ ಇಲ್ಲದೆ 225 ನಿವೇಶನಗಳ ಬಡಾವಣೆ ನಿರ್ಮಾಣಕ್ಕೆ ಅನುಮೋದನೆ ನೀಡಿ ಅಕ್ರಮವೆಸಗಿದ್ದಾರೆ. ಇಲ್ಲಿ ನಿವೇಶನಕೊಂಡವರು ಬಿ ಖಾತಾ ಹೊಂದಿದ್ದ ನಿವೇಶನ ಪಡೆದು ಮನೆ ಕಟ್ಟಲಾಗದೆ ನಿವೇಶನ ಮಾರಾಟ ಮಾಡಿದ್ದಾರೆ. ಈ ಬಡಾವಣೆಯ ರಸ್ತೆ, ಪಾರ್ಕ್, ಆಟದ ಮೈದಾನ ಸೇರಿದಂತೆ ಸಮುದಾಯಿಕ ಆಸ್ತಿಗಳನ್ನು ವಿನ್ಯಾಸ ನಕ್ಷೆ ( ಅದು ಅನುಮೋದಿತವಲ್ಲ) ಅನ್ವಯ ವಶಕ್ಕೆ ಪಡೆಯಲು ಗ್ರಾಪಂ ಆಡಳಿತ ವಿಫಲವಾಗಿದೆ ಎಂದು ದೂರಿದರು.
ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಭೂ ಸ್ವಾಧೀನ ಮಾಡುವ ವೇಳೆ ಬ್ಯಾಂಕ್ ನೌಕರರ ಗೃಹ ನಿರ್ಮಾಣ ಸಹಕಾರ ಸಂಘವು ಕಾಲೋನಿಯ ರಸ್ತೆ, ಕಟ್ಟಡ ಹಾಗೂ ಇನ್ನಿತರ ಆಸ್ತಿಗಳಿಗೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸಹಾಯದಿಂದ ಸುಳ್ಳು ದಾಖಲೆ, ಅಕ್ರಮ ಖಾತೆ ನೀಡಿ ಪರಿಹಾರ ಪಡೆದಿದೆ, ಇದರಿಂದಾಗಿ ಸರ್ಕಾರದ ಬೊಕ್ಕಸಕ್ಕೆ ₹ 41,41,467 ರೂ. ನಷ್ಟವುಂಟಾಗಿದೆ. ಈ ಪರಿಹಾರದ ಹಣವು ಮಂಡ್ಯ ನಗರ ಬ್ಯಾಂಕ್ ನೌಕರರ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಜಮೆಯಾಗಿದ್ದು, ಇದನ್ನು ಅಕ್ರಮದಲ್ಲಿ ಭಾಗಿಯಾಗಿದ್ದಾರೆನ್ನಲಾದ ಗ್ರಾ.ಪಂ.ಅಧ್ಯಕ್ಷರು ಹಾಗೂ ಪಿಡಿಓ ಸೇರಿದಂತೆ ಇನ್ನಿತರರು ಹಂಚಿಕೆ ಮಾಡಿಕೊಂಡಿದ್ದಾರೆಂದು ಆರೋಪಿಸಿದರು.
ಅಕ್ರಮ ಹಣ ಹಂಚಿಕೆ ಸಂಬಂಧ ಸಂಘದ ಪದಾಧಿಕಾರಿಗಳು ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷೆ(ಸದಸ್ಯರಿಬ್ಬರು) ನಡುವೆ ಜಟಾಪಟಿ ನಡೆದಿದೆ. ಗ್ರಾಮ ಪಂಚಾಯತಿ ಅಧ್ಯಕ್ಷೆ ಮಾನಸ ಎಂಬುವವರು ತಮ್ಮ ಜವಾಬ್ದಾರಿಯನ್ನು ಮರೆತು ಮಂಡ್ಯ ನಗರ ಬ್ಯಾಂಕ್ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷರು, ಕಾರ್ಯದರ್ಶಿಗಳಿಗೆ ಬೆದರಿಕೆಯ ನೋಟೀಸ್ ನೀಡಿ ಭ್ರಷ್ಟಾಚಾರಕ್ಕೆ ಎಡೆ ಮಾಡಿದ್ದಾರೆ. ಗ್ರಾಪಂ ಅಧ್ಯಕ್ಷೆ ತಾವು ಬರೆದಿರುವ ಪತ್ರ, ನೋಟೀಸ್ ನಲ್ಲಿ ಕಚೇರಿಯಿಂದ ಟಪಾಲು ಸಂಖ್ಯೆ (outward) ನಮೂದಿಸದಿರುವುದು ಗಮನಾರ್ಹ. ಅಲ್ಲದೆ ಪತ್ರ ಬರೆಯುವ ಕುರಿತು ಯಾವುದೇ ಸಾಮಾನ್ಯ ಸಭೆಯಲ್ಲಿ ಚರ್ಚಿಸದೆ ಮತ್ತು ನಿರ್ಣಯವಾಗದೆ ಕ್ರಮ ವಹಿಸಿರುವುದು ಗ್ರಾ.ಪಂ. ಅಧ್ಯಕ್ಷೆ ಮಾನಸ ಸ್ವತಃ ಅಕ್ರಮದಲ್ಲಿ ಭಾಗಿಯಾಗಿದ್ದಾರೆಂಬುವುದಕ್ಕೆ ಪುಷ್ಟಿ ನೀಡುತ್ತದೆ ಎಂದರು.
ಅನಧಿಕೃತವಾಗಿ ಬ್ಯಾಂಕ್ ನೌಕರರ ಸಂಘವು ಪರಿಹಾರ ಪಡೆದಿರುವ ಪ್ರಕರಣವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಥವಾಗ ಮಂಡ್ಯ ಜಿಲ್ಲಾಧಿಕಾರಿಗಳಿಗೆ ನೀಡಬೇಕಿತ್ತು. ಅದು ಬಿಟ್ಟು ಲೋಕಾಯುಕ್ತರು, ಹೈಕೋರ್ಟ್ ಮೊರೆ ಹೋಗುವುದಾಗಿ ಗ್ರಾ.ಪಂ.ಅಧ್ಯಕ್ಷರು ನೀಡಿರುವ ನೋಟೀಸ್ ನಲ್ಲಿ ಬೆದರಿಸಲಾಗಿದೆ. ಈ ವಿಚಾರದಲ್ಲಿ ₹ 20 ಲಕ್ಷದಷ್ಟು ಹಣಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ಅನುಮಾನಗಳಿವೆ. ಅಲ್ಲದೆ ಈ ಬಡಾವಣೆಯಲ್ಲಿನ 20 ಗುಂಟೆ ಪಾರ್ಕ್’ಗೆ ಮೀಸಲಿರಿಸಿರುವ ಭೂಮಿಯನ್ನು ನಿವೇಶನವಾಗಿ ಪರಿವರ್ತಿಸಿ, ಒಂದೆರಡು ನಿವೇಶನವನ್ನು ಆಕ್ರಮವಾಗಿ ಗ್ರಾ.ಪಂ. ಅಧ್ಯಕ್ಷರು ಹಾಗೂ ಇಬ್ಬರು ಸದಸ್ಯರು ಪಡೆಯಲು ಮುಂದಾಗಿರುವ ಎಂಬ ಮಾಹಿತಿ ತಿಳಿದು ಬಂದಿದೆ ಎಂದು ವಿವರಿಸಿದರು.
ಮಂಡ್ಯ ನಗರ ಬ್ಯಾಂಕ್ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಬ್ಯಾಂಕ್ ಕಾಲೋನಿ ಕುರಿತಂತೆ ಈವರೆಗೆ ನಡೆದಿರುವ ಅಕ್ರಮ ವಹಿವಾಟುಗಳ ಕುರಿತು ಹಾಗೂ ಪರಿಹಾರ ಪಡೆಯಲು ಅಕ್ರಮ ದಾಖಲೆ ಸೃಷ್ಟಿಸಿರುವ ಗ್ರಾ.ಪಂ. ಅಧ್ಯಕ್ಷೆ ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹಾಗೂ ಇನ್ನಿತರ ಸದಸ್ಯರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು.
ಇಷ್ಟೇ ಅಲ್ಲದೇ ಹೆದ್ದಾರಿ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಹಲವು ಅಕ್ರಮ ದಾಖಲೆಗಳನ್ನು ಬೂದನೂರು ಗ್ರಾಮ ಪಂಚಾಯತಿ ಆಡಳಿತ ಮಂಡಳಿ ಸದಸ್ಯರು ಹಾಗೂ ಅಧಿಕಾರಿಗಳು ಸೃಷ್ಟಿಸಿರುವ ಶಂಕೆಯಿರುವ ಹಿನ್ನೆಲೆಯಲ್ಲಿ ಹೆಚ್ಚಿನ ತನಿಖೆಗೆ ಆದೇಶ ನೀಡಬೇಕೆಂದು ಜಿಲ್ಲಾಡಳಿತವನ್ನು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಸವಿತ, ಯಲ್ಲಮ್ಮ, ಮಹದೇವಮ್ಮ, ಶಿಲ್ಪ ಸರೋಜಮ್ಮ ಇದ್ದರು.




