Sunday, September 22, 2024

ಪ್ರಾಯೋಗಿಕ ಆವೃತ್ತಿ

ಹಳ್ಳಿಯ ಆ ವ್ಯಕ್ತಿಯೂ, ಸುಳಿದುಹೋದ ಬುದ್ದ-ಬಸವ-ಗಾಂಧಿಗಳೂ

ಗಿರೀಶ್ ತಾಳಿಕಟ್ಟೆ

‘ಅಲ್ಲಾ ಯಜಮಾನ್ರೆ… ನೀವೂ ನಿಮ್ಮಣ್ಣನಂಗೆ ಚೆನ್ನಾಗಿ ಓದಿ ವಿದ್ಯಾವಂತ ಆಗಿದ್ದಿದ್ದ್ರೆ, ಅವುರಂಗೆ ಇವತ್ತು ನೀವೂ ದೊಡ್ಡ ಮನುಷ್ಯ ಆಗಬವುದಿತ್ತಲುವ್ರಾ?” ಹೀಗೆ ನಾನು ಕೇಳಿದಾಗ, ಎದುರಿದ್ದ ಮುಖದಲ್ಲಿ ಅರಳಿದ ಮುಗುಳುನಗೆಯ ಗೂಢತೆಯನ್ನು ನನಗೆ ಗ್ರಹಿಸಲಾಗಲಿಲ್ಲ.

ಅರೆಕ್ಷಣವೂ ಯೋಚಿಸದೆ, “ಏನ್ ಮಾಡ್ತೀರಿ, ವಿದ್ಯೆ ನಮ್ ತಲಿಗೆ ಹತ್ಲಿಲ್ಲ. ಹೊಲಮನೆ ಕೆಲ್ಸ ಸಾಕು ಅನುಸ್ತು. ಹಿಂಗ್ ಉಳ್ಕಂಬುಟ್ವಿ” ಎಂದು ಆ ವ್ಯಕ್ತಿ ಸಮಜಾಯಿಷಿ ಕೊಟ್ಟಾಗ ನನಗೆ ಅಚ್ಚರಿಯಾಗಲಿಲ್ಲ.

ಆದರೆ ಮೊದಲಿನಷ್ಟೇ ಸಹಜವಾಗಿ ತನ್ನ ಮಾತು ಮುಂದುವರೆಸಿ, “ಬರೀ ವಿದ್ಯೆ ಇದ್ದ್ರೆ ಏನ್ ಬಂತು. ಜತೀಗೆ ನಮಿಗೆ ಬುದ್ದಿನೂ ಇರ‍್ಬೇಕು. ಯಾವ್ದು ಸರಿ, ಯಾವ್ದ್ ತಪ್ಪು. ಈ ರೂಟಗೆ ಹೋದ್ರೆ ಏನಾಯ್ತದೆ ಅನ್ನೋ ನ್ಯಾಕ್ ಇದ್ರೆನೆ ವಿದ್ಯಗೆ ಬೆಲೆ ಅಲ್ಲುವ್ರಾ?” ಎಂದು ಪೂರ್ಣವಿರಾಮ ಇಟ್ಟರು.

ಈಗ ನನ್ನಿಂದ ಅಚ್ಚರಿ ತಡೆದುಕೊಳ್ಳಲಾಗಲಿಲ್ಲ. ಯಾಕೆಂದರೆ ಆ ವ್ಯಕ್ತಿಯನ್ನು ಭೇಟಿ ಮಾಡಲು ತೆರಳುವಾಗ, ಬಹಳಷ್ಟು ಪೂರ್ವಗ್ರಹಗಳು ನನ್ನಲ್ಲಿ ತುಂಬಿದ್ದವು. ಹಳ್ಳಿ ಹಿನ್ನೆಲೆಯ ಕೃಷಿಕ ಕಸುಬಿನ ಅವರಿಗೆ ಲೋಕಜ್ಞಾನದ ತಿಳುವಳಿಕೆ ಕಮ್ಮಿ ಅಂದುಕೊಂಡಿದ್ದೆನಲ್ಲದೆ, ಆರ್ಗನೈಸ್ಡ್ ಆಗಿ ಯೋಚಿಸಿ ಮಾತಾಡುವಷ್ಟು ಕುಶಲತೆಯೂ ಇಲ್ಲದ ಮುಜುಗರ ಸ್ವಭಾವದ ವ್ಯಕ್ತಿ ಎಂದು ಭಾವಿಸಿದ್ದೆ. ಆದರೆ ವಿದ್ಯೆ ಮತ್ತು ಬುದ್ದಿ ನಡುವಿನ ತೆಳುವಾದ ಪೊರೆಯನ್ನು ಸೂಕ್ಷ್ಮವಾಗಿ ಮತ್ತು ಸ್ಪಷ್ಟವಾಗಿ ಗ್ರಹಿಸಿ, ಅದನ್ನು ಅಷ್ಟೇ ಸರಳವಾಗಿ ವಿವರಿಸಿದ ಪರಿಯನ್ನು ಕಂಡು ಅವರ ಬಗೆಗಿದ್ದ ನನ್ನ ಪೂರ್ವಗ್ರಹಗಳೆಲ್ಲ ಜೊರ್ರನೆ ಕಳಚಿಬಿದ್ದವು.

ಬುದ್ದ ‘ಆಸೆಯೇ ದುಃಖಕ್ಕೆ ಮೂಲ’ ಎಂದಾಗ, ಬಸವಣ್ಣ ’ಕಾಯಕವೇ ಕೈಲಾಸ’ ಎಂದಾಗ, ಗಾಂಧಿ ’ಅಹಿಂಸೆಯೇ ಪರಮ ಕರ್ತವ್ಯ ಎಂದಾಗ, ಬಾಬಾ ಸಾಹೇಬರು ’ಸ್ವಾಭಿಮಾನವೇ ನಮ್ಮ ಅಸ್ಮಿತೆ’ ಎಂದಾಗ ಅವರ ಮಾತುಗಳು ಸರಳವಾಗಿಯೇ ಗೋಚರಿಸುತ್ತವೆ. ಆದರೆ ಆಂತರ್ಯದಲ್ಲಿ ಇಣುಕಿನೋಡಿದಾಗ, ಬದುಕಿನ ಅತಿ ಎತ್ತರದ ಸತ್ಯಗಳನ್ನು ಆ ಮಾತುಗಳು ದರ್ಶನ ಮಾಡಿಸುತ್ತವೆ.

ಸತ್ಯದರ್ಶನ ಎನ್ನುವಂತದ್ದೇ ಹಾಗೆ. ಯಾವುದೋ ನಿಗೂಢ ವಿಚಾರವನ್ನು ಶೋಧಿಸಿ, ತಾಳೆಗರಿಗಳ ನಡುವೆ ಹುದುಗಿರುವ, ಶಿಲಾ ಕೆತ್ತನೆಗಳಲ್ಲಿ ಅಡಗಿರುವ ಸಂಕೇತಗಳನ್ನು ಡಿಕೋಡ್ ಮಾಡಿ ಹೇಳುವ ಸರ್ಕಸ್ಸಿನಂತೆ ಇರುವುದಿಲ್ಲ. ಜನರ ಬದುಕಿನ ನಡುವೆಯೇ ಇರುವ ನಿರ್ಲಕ್ಷಿತ ವಿಚಾರವೊಂದರ ಮಹತ್ವವನ್ನು ಸರಳವಾಗಿ ವಿವರಿಸಿ ಮನದಟ್ಟು ಮಾಡಿಸುವುದಾಗಿರುತ್ತೆ. ನನ್ನೊಟ್ಟಿಗೆ ಮಾತಾಡುತ್ತಿದ್ದ ಆ ಹಳ್ಳಿ ವ್ಯಕ್ತಿ ಕೂಡಾ, ಅಷ್ಟೇ ಸರಳವಾಗಿ ನನಗೊಂದು ಸಂಕೀರ್ಣ ಸಂಗತಿಯನ್ನು ಮನದಟ್ಟು ಮಾಡಿಸಿದ್ದರು.

ಇವತ್ತು ನಾವೆಲ್ಲ ವಿದ್ಯೆಯನ್ನೇ ಬುದ್ದಿಯೆಂದು ಭ್ರಮಿಸಿದ್ದೇವೆ. ಇನ್ನೂ ಮುಂದುವರೆದು, ಅಂಕಪಟ್ಟಿಯಲ್ಲಿ ಗಳಿಸುವ ಮಾರ್ಕ್ಸುಗಳೆ ವಿದ್ಯೆಯೆಂಬ ಭ್ರಮೆಯಲ್ಲಿದ್ದೇವೆ. ಹೆಚ್ಚು ಅಂಕ ಪಡೆಯುವುದೊಂದೆ ಬುದ್ದಿವಂತರಾಗುವ ಮಾರ್ಗ ಎನ್ನುವ ತೀರ್ಮಾನಕ್ಕೆ ತಲುಪಿದ್ದೇವೆ. ಇದರಿಂದ ಆಗುತ್ತಿರುವ ಪರಿಣಾಮವೇನು? ಶಿಕ್ಷಣ ಕ್ಷೇತ್ರವನ್ನು ವ್ಯಾಪಾರದ ಸರಕಾಗಿಸಿದ್ದೇವೆ. ಸ್ವಾವಲಂಬನೆ, ಸ್ವಾಭಿಮಾನಗಳನ್ನು ಬಿತ್ತಿ ಮನುಷ್ಯನನ್ನು ವಿಶಾಲಗೊಳಿಸಬೇಕಿದ್ದ ವಿದ್ಯೆ, ಆತನನ್ನು ಮಾರ್ಕ್ಸುಗಳಿಗೆ ಸೀಮಿತಗೊಳಿಸಿ ಸಂಕುಚಿತಗೊಳಿಸುತ್ತಿದೆ. ಆತ್ಮಹತ್ಯೆಗಳು ಹೆಚ್ಚಾಗುತ್ತಿವೆ. ಅಪರಾಧಗಳು ದುಪ್ಪಟ್ಟಾಗುತ್ತಿವೆ. ಶಾಲಾ-ಕಾಲೇಜುಗಳ ಆವರಣದಲ್ಲಿ ಮಾದಕ ದ್ರವ್ಯಗಳು ಬಿಕರಿಯಾಗುತ್ತಿವೆ. ಯಾಕೆ ಹೀಗಾಗುತ್ತಿದೆ? ಮಕ್ಕಳಿಗೆ ವಿದ್ಯೆ ಕಲಿಸುವ ಧಾವಂತ ಮತ್ತು ಹಠದಲ್ಲಿ ಅವರಿಂದ ಸರಿ-ತಪ್ಪುಗಳ ವಿವೇಚನೆಯ ಬುದ್ದಿವಂತಿಕೆಯನ್ನೆ ಕಿತ್ತುಕೊಳ್ಳುತ್ತಿದ್ದೇವೆ. ’ಈ ರೂಟಗೆ ಹೋದ್ರೆ ಏನಾಯ್ತದೆ ಅನ್ನೋ ನ್ಯಾಕ್ ಇದ್ರೆನೆ ವಿದ್ಯೆಗೆ ಬೆಲೆ ಅಲ್ಲುವ್ರಾ ಎಂದ ಆ ವ್ಯಕ್ತಿಯ ಸರಳ, ಗ್ರಾಮೀಣ ಸೊಗಡಿನ ಆ ಮಾತು ಎಂಥಾ ವಿಚಾರವಂತಿಕೆಯಂತೆ ಕಾಣುತ್ತದಲ್ಲವೇ!

ಇದು ಕೇವಲ ಆ ಒಬ್ಬ ವ್ಯಕ್ತಿಯ ಸಂಗತಿಯಲ್ಲ. ತಮ್ಮೆಲ್ಲ ಸಾಮಾಜಿಕ ಅಂಕುಡೊಂಕುಗಳ ನಡುವೆ ನಮ್ಮ ಹಳ್ಳಿಯ ಜನ ಬದುಕುವುದೇ ಸರಳ ರೇಖೆಯಂತಹ ಇಂತಹ ಸತ್ಯಗಳ ನಡುವೆ. ಆ ವ್ಯಕ್ತಿಯ ಮೇಲೆ ನನಗೆ ಅಭಿಮಾನ ಹೆಚ್ಚಾಯಿತು. ಜೊತೆಗೆ, ಇಂತಹ ತಿಳುವಳಿಕೆಯ ನಂಟು ಇರುವ ಕಾರಣಕ್ಕೇ ಈ ವ್ಯಕ್ತಿಯ ಆ ಅಣ್ಣ ಅಷ್ಟು ಮೇರು ಎತ್ತರಕ್ಕೆ ತಲುಪಲು ಸಾಧ್ಯವಾಗಿದೆ ಅಂತಲೂ ಅರ್ಥವಾಯಿತು. ತಾನು ಬದುಕುತ್ತಿರುವ ಗ್ರಾಮೀಣ ವಾತಾವರಣ ಮತ್ತು ವಯೋಸಹಜ ಕಾರಣಕ್ಕೆ ಆ ವ್ಯಕ್ತಿಯ ಮಾತುಗಳು ತುಸು ಅಸ್ಖಲಿತವಾಗಿ ಧ್ವನಿಸುತ್ತಿದ್ದವಾದರೂ, ಅರ್ಥಪೂರ್ಣವಾಗಿದ್ದವು. ವಿವೇಕಪೂರ್ಣವಾಗಿದ್ದವು. ಎಲ್ಲಕ್ಕಿಂತ ಮುಖ್ಯವಾಗಿ ಪ್ರಾಮಾಣಿಕವಾಗಿದ್ದವು. ಅಲ್ಲಿ ಬೂಟಾಟಿಕೆ ಇರಲಿಲ್ಲ.

ಅಂದಹಾಗೆ, ಆ ಗ್ರಾಮೀಣ ವ್ಯಕ್ತಿಯ ಹೆಸರು ಸಿದ್ದೇಗೌಡ! ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸ್ವಂತ ತಮ್ಮ!! ಕೆಲಸದ ನಿಮಿತ್ತ ಸಿದ್ದರಾಮನಹುಂಡಿಯ ಕಡೆಗೆ ಹೋಗಬೇಕಾಗಿ ಬಂದಾಗ, ಭೇಟಿಯಾಗಿ ಬಂದೆ. ತನ್ನಣ್ಣ ಈ ನಾಡಿನ ಮುಖ್ಯಮಂತ್ರಿ ಎಂಬ ಹಮ್ಮುಬಿಮ್ಮಿನ ಮುಖವಾಡ ಧರಿಸದೆ, ಇವತ್ತಿಗೂ ಕೊಟ್ಟಿಗೆಯಲ್ಲಿ ಸಗಣಿ ಗುಡಿಸಿಕೊಂಡು, ಜಾನುವಾರುಗಳಿಗೆ ಮುಸುರೆ ಮೇವು ಹಾಕಿಕೊಂಡು, ಹೊಲಗದ್ದೆಯಲ್ಲಿ ಕೆಲಸ ಮಾಡಿಕೊಂಡು, ಪರಿಶುದ್ಧ ಹಳ್ಳಿ ವ್ಯಕ್ತಿಯಂತೆ, ಇಂತಹ ಸರಳ ಸತ್ಯಗಳೊಟ್ಟಿಗೆ ಬದುಕುತ್ತಿದ್ದಾರೆ; ಮುಗ್ಧವಾಗಿ…..

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!