Thursday, September 19, 2024

ಪ್ರಾಯೋಗಿಕ ಆವೃತ್ತಿ

ಗುಲಾಮಗಿರಿ ಸಂಕೋಲೆಯಿಂದ ಬಿಡಿಸಿಕೊಳ್ಳಲು ಬೌದ್ಧಧರ್ಮ ಅಗತ್ಯ- ಪಿ.ಎಂ.ನರೇಂದ್ರಸ್ವಾಮಿ

ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬೌದ್ಧಧರ್ಮಕ್ಕೆ ಮರಳಲು, ಅಲ್ಲಿರುವ ವೈಜ್ಞಾನಿಕತೆಯೇ ಕಾರಣವಾಗಿತ್ತು, ದಲಿತ, ಶೋಷಿತರು ಗುಲಾಮಗಿರಿಯ ಸಂಕೋಲೆಯಿಂದ ಹೊರಬರಲು ಬೌದ್ಧಧರ್ಮವನ್ನು ಸೇರುವುದು ಅಗತ್ಯವೆಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.

ಮಳವಳ್ಳಿ ತಾಲ್ಲೂಕಿನ ಮಲಿಯೂರು ಗ್ರಾಮದಲ್ಲಿ ಸೋಮವಾರ ಭಗವಾನ್ ಬುದ್ಧರ ಧ್ಯಾನ ಮಂದಿರ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಗ್ರಂಥಾಲಯದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ  ಮಾತನಾಡಿದ ಅವರು, ಗುಲಾಮಗಿರಿ ತೊಲಗಿಸುವುದು ಬೌದ್ಧಧರ್ಮದಿಂದ ಮಾತ್ರ ಸಾಧ್ಯವೆಂದು ಡಾ.ಬಿ.ಆರ್.ಅಂಬೇಡ್ಕರ್ ಸ್ಪಷ್ಟವಾಗಿ ತಿಳಿದಿದ್ದರು, ಹಾಗಾಗಿ ಅವರು ಲಕ್ಷಾಂತರ ಅನುಯಾಯಿಗಳೊಂದಿಗೆ ಬೌದ್ಧ ಧರ್ಮ ಸೇರಿದರು. ಎಲ್ಲಗೂ ಬಾಬ ಸಾಹೇಬರ ದಾರಿಯಲ್ಲಿ ನಡೆಯಬೇಕಿದೆ, ಆದರೆ ಇಂದಿಗೂ ನನ್ನನ್ನೂ ಸೇರಿ ಇಂದಿಗೂ ಬಹಳಷ್ಟು ಜನ ಆ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಡಲು ಸಾಧ್ಯವಾಗಿಲ್ಲ ಎಂದರು.

ನಮ್ಮ ದೇಶದಲ್ಲಿ ದಲಿತರು ಸೇರಿದಂತೆ ಎಲ್ಲಾ ವರ್ಗದ ಜನರು ಒಗ್ಗಟ್ಟಾಗಿ ಹಲವಾರು ಜಾತಿ, ಭಾಷೆ ಮತ್ತು ಧರ್ಮಗಳ ನಡುವೆ ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣುತ್ತಿದ್ದೇವೆ ಎಂದರೆ ಅದು ಡಾ.ಅಂಬೇಡ್ಕರ್ ರವರು ನೀಡಿರುವ ಸಂವಿಧಾನದಿಂದ ಎಂಬುದನ್ನು ಮರೆಯಬಾರದು ಎಂದರು.

ಗ್ರಂಥಾಲಯ ಮತ್ತು ಬೌದ್ಧಧ್ಯಾನ ಮಂದಿರಗಳು ನಿರ್ಮಾಣವಾಗುತ್ತಿರುವುದು ಸ್ವಾಗತಾರ್ಹ

ಕೆಲವು ಸಂದರ್ಭಗಳಲ್ಲಿ ಸಂವಿಧಾನ ವಿರೋಧಿ ಮಾತುಗಳು ಕಂಡು ಬಂದಾಗ ಭಾರತೀಯರಾಗಿ ನಾವು ಸಂವಿಧಾನದ ಪರವಾಗಿ ನಿಲ್ಲಬೇಕು, ಇತ್ತೀಚಿನ ದಿನಗಳಲ್ಲಿ ತಾಲ್ಲೂಕಿನ ಗ್ರಾಮಗಳಲ್ಲಿ ಡಾ.ಅಂಬೇಡ್ಕರ್ ಪ್ರತಿಮೆ, ಗ್ರಂಥಾಲಯ ಮತ್ತು ಬೌದ್ಧಧ್ಯಾನ ಮಂದಿರಗಳು ನಿರ್ಮಾಣವಾಗುತ್ತಿರುವುದು ಸ್ವಾಗತಾರ್ಹವಾಗಿದೆ. ನಾನು ಸಹ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಅನುಯಾಯಿಯಾಗಿದ್ದು ನಾನು ಸಚಿವನಾಗಿ ಶಾಸಕನಾಗಿ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ಡಾ.ಅಂಬೇಡ್ಕರ್ ರವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದೇನೆ ಎಂದರು.

ಆಧುನಿಕತೆಯ ಬುದ್ಧ ಧರ್ಮದೆಡೆಗೆ‌ ಸಾಗಬೇಕಿದೆ

ಚಿತ್ರನಟ ಹಾಗೂ ಸಾಮಾಜಿಕ ಚಿಂತಕ ಚೇತನ್ ಕುಮಾರ್ ಅಹಿಂಸಾ ಮಾತನಾಡಿ, ಈ ಭಾಗ ಪ್ರತಿರೋಧದ ಹಿನ್ನೆಲೆಯನ್ನು ಹೊಂದಿದ್ದು, ಪ್ರತಿರೋಧವನ್ನು ಯಾವುದರ ಬಗ್ಗೆ ಮಾಡಬೇಕು ಎಂದರೆ ಯಾವಾಗಿನಿಂದ ಅಸಮಾನತೆ ಎಂಬುದು ಬಂದಿದಿಯೋ ಅಂದಿನಿಂದ ಪ್ರತಿರೋಧ ಅದುವೆ ಅಂಬೇಡ್ಕರ್ ವಾದ, ನಾವೆಲ್ಲರೂ ಅಂಬೇಡ್ಕರ್ ರವರ ದೃಷ್ಟಿಯಲ್ಲಿನ ಆಧುನಿಕತೆಯ ಬುದ್ಧ ಧರ್ಮದೆಡೆಗೆ‌ ಸಾಗಬೇಕಿದೆ ಎಂದರು.

ಕಾವೇರಿ ನೀರಿನ ಸಮಸ್ಯೆ1892 ರಲ್ಲಿ ಮದ್ರಾಸ್ ಮತ್ತು ಮೈಸೂರು ಪ್ರೆಸಿಡೆನ್ಸಿ ನಡುವೆ ಸೃಷ್ಟಿಯಾದ ಸಮಸ್ಯೆ ಅಲ್ಲ, ಸಾವಿರಾರು ವರ್ಷಗಳಿಂದ ನೀರಿನ ಹಂಚಿಕೆ ವಿಚಾರದಲ್ಲಿ ಸಮಸ್ಯೆ ತಲೆದೂರಿದೆ, ನೀರಿನ ಸಮಸ್ಯೆಯನ್ನು ಭಾವನಾತ್ಮಕವಾಗಿ ತೆಗೆದುಕೊಂಡು ನಮ್ಮದು ನಮಗೆ ಬೇಕು ಎಂದು ಸ್ವಾರ್ಥದಲ್ಲಿ ನೋಡದೇ ಎಲ್ಲರಿಗೂ ನ್ಯಾಯ ಸಿಗಬೇಕು ಎಂದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪೂಜ್ಯ ಮನೋರಖ್ಖಿತ ಬಂತೇಜಿ ವಹಿಸಿದ್ದರು, ಈ ಸಂದರ್ಭದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಎಸ್.ಮರಿಸ್ವಾಮಿ, ಕಾರ್ಯಕ್ರಮ ಉದ್ಘಾಟಿಸಿದರು, ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಾ.ಕವಿತಾ ಶ್ರೀನಾಥ್, ವೇದಾವತಿ ಮರಿಸ್ವಾಮಿ, ನಿವೃತ್ತ ಅಸಿಸ್ಟೆಂಟ್ ಕಮಿಷನರ್ ಪುಟ್ಟಮಾದಯ್ಯ, ಎಸ್ಸಿ ಎಸ್ಟಿ ನೌಕರರ ಸಂಘ ರಾಮನಗರ ಜಿಲ್ಲಾಧ್ಯಕ್ಷ ಮಹದೇವಸ್ವಾಮಿ, ಶಂಕರಮ್ಮ, ಎಂ.ಎಸ್.ರಾಜು, ಗ್ರಾ.ಪಂ.ಅಧ್ಯಕ್ಷ ನಾಗೇಂದ್ರ, ತಾ.ಪಂ. ಮಾಜಿ ಅಧ್ಯಕ್ಷ ವಿಶ್ವಾಸ್, ಉಪಾಧ್ಯಕ್ಷ ಮಾಧು, ಸದಸ್ಯ ನಾಗರಾಜು, ಗ್ರಾ.ಪಂ.ಮಾಜಿ ಸದಸ್ಯ ನಿರಂಜನ್ ಕುಮಾರ್, ಯಜಮಾನರಾದ ನಾಗರಾಜು, ಪುಟ್ಟ ಮಲ್ಲಯ್ಯ, ಮಹದೇವಯ್ಯ ಸೇರಿದಂತೆ ಇತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!