ಮಂಡ್ಯ ತಾಲ್ಲೂಕು ದುದ್ದ ಹೋಬಳಿಯ ಕಿರಗಂದೂರು ಗ್ರಾಮದ ಹೆಚ್.ಟಿ.ಆಶಾ ಮತ್ತು ಡಾ.ಲಕ್ಷ್ಮಣ್ ಅವರ ಪುತ್ರಿ ಕೆ.ಎಲ್.ಪೂಜಾ ಹಾಗೂ ಚನ್ನಪಟ್ಟಣ ತಾಲ್ಲೂಕು ಬಲ್ಲಾಪಟ್ಟಣ ಗ್ರಾಮದ ಸುನಂದಮ್ಮ ಮತ್ತು ಈರಾಜು ಇವರ ಪುತ್ರ ಡಾ.ಶಿವರಾಜು ಅವರ ವಿವಾಹವು ಬೌದ್ದ ಧಮ್ಮದ ಸಂಪ್ರದಾಯದಂತೆ ಮಂಡ್ಯನಗರದ ಕಾವೇರಿ ಕಲ್ಯಾಣ ಮಂಟಪದಲ್ಲಿ ಗುರುವಾರ ನೆರವೇರಿತು.

ಚಾಮರಾಜನಗರ ನಳಂದ ಬೌದ್ಧವಿಹಾರದ ಬಂತೆ ಬೋಧಿದತ್ತ ಮಹತೇರ ಅವರು ಬುದ್ದ ಹಾಗೂ ಅಂಬೇಡ್ಕರ್ ಅವರು ನಮನ ಸಲ್ಲಿಸಿ, ನೂತನ ದಂಪತಿಗಳು ಹಾಗೂ ಅವರ ಕುಟುಂಬ ವರ್ಗದವರಿಗೆ ಬೌದ್ದ ಧಮ್ಮದ ಪಂಚಶೀಲ ತತ್ವಗಳನ್ನು ಬೋಧನೆ ಮಾಡಿದರು. ಜಗತ್ತಿನಲ್ಲಿ ಹೆಚ್ಚಾಗಿ ಬೌದ್ದ ಧಮ್ಮ ಅನುಸರಣೆ ಮಾಡುತ್ತಿರುವ ಚೀನಾ, ಜಪಾನ್, ಥೈಲ್ಯಾಂಡ್ ದೇಶಗಳಲ್ಲಿ ಇದೇ ಪ್ರಕಾರವಾಗಿ ಮದುವೆಗಳು ನಡೆಯುತ್ತವೆ, ಬಾಬಾ ಸಾಹೇಬ ಅಂಬೇಡ್ಕರ್ ಅವರು ಕೂಡ ಇದೇ ಮಾರ್ಗದಲ್ಲಿ ನಡೆಯಿರಿ ಎಂದು ದಾರಿ ತೋರಿದ್ದಾರೆ ಎಂದು ತಿಳಿಸಿದರು.

ಮೈಸೂರು ಉರಿಲಿಂಗಿಪೆದ್ದಿ ಮಠ ಪೀಠಾಧ್ಯಕ್ಷ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ಕಾಲದಲ್ಲಿ ಒಳ್ಳೆಯದು, ಕೆಟ್ಟದ್ದು ಎಂಬುದಿಲ್ಲ, ಎಲ್ಲ ಸಮಯವು ಒಳ್ಳೆಯದೇ ಆಗಿದೆ. ಎಲ್ಲರೂ ಭಗವಾನ್ ಬುದ್ದರ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಂಡು ಇದೇ ರೀತಿ ಬುದ್ದ ಮಾರ್ಗದಲ್ಲಿಯೇ ವಿವಾಹವನ್ನು ಮಾಡಿಕೊಳ್ಳಬೇಕು ಎಂದರು.
ಕಾಲದಲ್ಲಿ ರಾಹು, ಕೇತು, ಯಮಗಂಟ ಎಂಬುದಿಲ್ಲ, ಅವೆಲ್ಲ ನಮ್ಮನ್ನು ಹೆದರಿಸುವುದಕ್ಕಾಗಿ ವೈದಿಕರು ಸೃಷ್ಟಿಸಿದ ಕಟ್ಟುಕಥೆಗಳು ಹಾಗಾಗಿ ಇವುಗಳಿಗೆ ಭಯಪಡುವುದು ಸರಿಯಲ್ಲ ಎಂದರು.

ಬೌದ್ದ ಧಮ್ಮ ಅತ್ಯಂತ ವೈಚಾರಿಕ ಮತ್ತು ವೈಜ್ಞಾನಿಕವಾಗಿದೆ, ಇಲ್ಲಿ ಮೂಢ ನಂಬಿಕೆ ಮತ್ತು ಕಂದಾಚಾರಗಳಿಗೆ ಜಾಗವಿಲ್ಲ, ಬುದ್ದನ ಪಂಚಶೀಲತತ್ವಗಳು ಪ್ರತಿಯೊಬ್ಬ ವ್ಯಕ್ತಿಯ ಜೀವನಕ್ಕೆ ಬೇಕಾದ ಅಂಶಗಳಾದ್ದು, ಅವುಗಳನ್ನು ಅಳಡಿಸಿಕೊಳ್ಳಬೇಕೆಂದು ತಿಳಿಸಿದರು.




